ಗುಡ್​​ನ್ಯೂಸ್: ಕೇಂದ್ರದ ಒಂದೇ ಸೂಚನೆಗೆ ಮೆಟ್ರೋ ಟಿಕೆಟ್ ದರ ಏರಿಕೆ ಕೈಬಿಟ್ಟ BMRCL

ನಾಳೆಯಿಂದ (ಫೆ.09) ಬರೆ ಬೀಳುತ್ತಾ ಅಂತಾ ಗೊಂದಲದಲ್ಲಿದ್ದ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸದ್ಯ ರಿಲೀಫ್ ಸಿಕ್ಕಿದೆ. ಏಕೆಂದರೆ ನಾಳೆಯಿಂದ ಮೆಟ್ರೋ ಟಿಕೆಟ್ ದರ ಏರಿಕೆ ಆಗೋದಿಲ್ಲ. ಕೇಂದ್ರ ಸರ್ಕಾರದ ಒಂದೇ ಒಂದು ಸೂಚನೆ ಬೆನ್ನಲ್ಲೇ ದರ ಏರಿಕೆ ನಿರ್ಧಾರವನ್ನು ಬಿಎಂಆರ್​ಸಿಎಲ್ ಕೈಬಿಟ್ಟಿದೆ.

ಗುಡ್​​ನ್ಯೂಸ್: ಕೇಂದ್ರದ ಒಂದೇ ಸೂಚನೆಗೆ ಮೆಟ್ರೋ ಟಿಕೆಟ್ ದರ ಏರಿಕೆ ಕೈಬಿಟ್ಟ BMRCL
ಮೆಟ್ರೋ
Image Credit source: railanalysis.in
Edited By:

Updated on: Feb 08, 2026 | 8:24 PM

ಬೆಂಗಳೂರು, ಫೆಬ್ರವರಿ 08: ರಾಜ್ಯ ಸರ್ಕಾರ ಹಾಗೂ ಕೇಂದ್ರದ ನಡುವೆ ಮಾತಿನ ಸಮರಕ್ಕೆ ಕಾರಣವಾಗಿದ್ದ ಮೆಟ್ರೋ (Metro) ಟಿಕೆಟ್ ದರ ಏರಿಕೆ ಜಟಾಪಟಿ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ನಾಳೆಯಿಂದ ಅಂದರೆ ಫೆಬ್ರವರಿ 09ರಿಂದ ಮೆಟ್ರೋ ಟಿಕೆಟ್​​​​ ದರ ಏರಿಸಲು ಮುಂದಾಗಿದ್ದ ಬಿಎಂಆರ್​ಸಿಎಲ್​ (BMRCL) ಇದೀಗ ಆ ನಿರ್ಧಾರವನ್ನು ಕೈಬಿಟ್ಟಿದೆ. ದರ ಏರಿಕೆ ಮಾಡದಂತೆ ಬಿಎಂಆರ್​ಸಿಎಲ್​ ಎಂಡಿಗೆ ಕೇಂದ್ರದಿಂದ ಇ-ಮೇಲ್ ರವಾನೆ ಬೆನ್ನಲ್ಲೇ​ ದರ ಏರಿಕೆಗೆ ಬ್ರೇಕ್ ಬಿದ್ದಿದೆ. ಮುಂದಿನ ಆದೇಶದವರೆಗೆ ದರ ಏರಿಕೆ ತಾತ್ಕಾಲಿಕ ಸ್ಥಗಿತವಾಗಿದೆ. ಹಾಗಾಗಿ ನಾಳೆಯಿಂದ ಮೆಟ್ರೋ ಟಿಕೆಟ್ ದರ ಏರಿಕೆ ಆಗೋದಿಲ್ಲ. ಆ ಮೂಲಕ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ.

ನಾಳೆಯಿಂದ ದರ ಏರಿಕೆಯಾಗಲ್ಲ ಅಂತಾ ಸಂಸದ ತೇಜಸ್ವಿ ಸೂರ್ಯ ಹೇಳಿದ್ದರು. ಬಿಎಂಆರ್‌ಸಿಯಲ್ ಎಂಡಿ ನಮಗೆ ಆದೇಶ ಬಂದಿಲ್ಲ. ನಾವು ದರ ಏರಿಕೆ ನಿರ್ಧಾರದಿಂದ ಹಿಂದೆ ಸರಿಯಲ್ಲ ಎಂದಿದ್ದರು. ಇದರ ನಡುವೆ ಬಿಎಂಆರ್‌ಸಿಯಲ್‌ಗೆ ಕೇಂದ್ರ ಸರ್ಕಾರದಿಂದ ಇ-ಮೇಲ್ ಬಂದಿದೆ. ಹಾಗಾಗಿ ಬಿಎಂಆರ್‌ಸಿಯಲ್ ದರ ಏರಿಕೆ ನಿರ್ಧಾರದಿಂದ ಹಿಂದೆ ಸರಿದಿದೆ.

ನಮ್ಮ ಮೆಟ್ರೋ ಟ್ವೀಟ್​

ಮಾಧ್ಯಮ ಪ್ರಕಟಣೆಯಲ್ಲಿ ಏನಿದೆ?

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ತಿಳಿಸುವುದೇನೆಂದರೆ, ಫೆಬ್ರವರ 5ರಂದು ಪ್ರಕಟಿಸಿದ್ದ ಮಾಧ್ಯಮ ಪ್ರಕಟಣೆಯಲ್ಲಿ ಫೆಬ್ರವರಿ 9ರಿಂದ ವಾರ್ಷಿಕ ಸ್ವಯಂಚಾಲಿತ ದರ ಜಾರಿಗೆ ಬರಲಿದೆ ಎಂದು ತಿಳಿಸಲಾಗಿತ್ತು. ಆದರೆ ಈ ನಿರ್ಧಾರವನ್ನು ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಇದನ್ನೂ ಓದಿ: ಮೆಟ್ರೋ ಟಿಕೆಟ್ ದರ ಸಮರ: ಎಲ್ಲವೂ ನಿಮ್ಮ ಕೈಯಲ್ಲಿದೆ, ಡ್ರಾಮಾ ಮಾಡಬೇಡಿ; ಸಿಎಂ ವಿರುದ್ಧ ಸೂರ್ಯ ಕಿಡಿ

ಪರಿಷ್ಕೃತ ದರ ಕುರಿತು ಅಂತಿಮ ನಿರ್ಧಾರವನ್ನು ನಿರ್ದೇಶಕರ ಮಂಡಳಿಯ ಪರಿಶೀಲನೆಯ ನಂತರ ಪ್ರಕಟಿಸಲಾಗುವುದು. ಬಿಎಂಆರ್‌ಸಿಎಲ್ ಬೆಂಗಳೂರು ನಾಗರಿಕರಿಗೆ ಸುರಕ್ಷಿತ, ನಂಬಿಕಸ್ಥ ಮತ್ತು ಕೈಗೆಟುಕುವ ಮೆಟ್ರೋ ಸೇವೆಗಳನ್ನು ಒದಗಿಸಲು ಸದಾ ಬದ್ಧವಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ಮೆಟ್ರೋ ಟಿಕೆಟ್ ದರ ಜಟಾಪಟಿ: ಕೇಂದ್ರದತ್ತ ಬೊಟ್ಟು ಮಾಡಿದ ಸಿಎಂಗೆ ದಾಖಲೆ ಸಮೇತ ಟಾಂಗ್ ಕೊಟ್ಟ ಸಂಸದ

ಫೆಬ್ರವರಿ 9ರಿಂದ ಮೆಟ್ರೋ ಪ್ರಯಾಣ ದರ ಏರಿಕೆಗೆ ನಿರ್ಧಾರವಾಗುತ್ತಿದ್ದಂತೆ ಕೇಂದ್ರ ಸಚಿವ ಮನೋಹರ್‌ ಲಾಲ್ ಖಟ್ಟರ್‌ ಅವರನ್ನ ಭೇಟಿ ಮಾಡಿದ್ದ ಸಂಸದ ತೇಜಸ್ವಿ ಸೂರ್ಯ, ದರ ಏರಿಕೆಗೆ ತಡೆ ನೀಡುವಂತೆ ಮನವಿ ಮಾಡಿದ್ದರು. ಇದಾದ ಬಳಿಕ ನಿನ್ನೆ ಮಾತನಾಡಿದ್ದ ತೇಜಸ್ವಿ ಸೂರ್ಯ, ಸೋಮವಾರದಿಂದ ದರ ಏರಿಕೆಯಾಗಲ್ಲ ಅಂತಾ ಘೋಷಿಸಿದ್ದರು.

ಇದು ಬೆಂಗಳೂರು ಜನರಿಗೆ ಸಂದ ಜಯ: ತೇಜಸ್ವಿ ಸೂರ್ಯ

ದರ ಏರಿಕೆ ಕೈಬಿಟ್ಟಿದ್ದನ್ನ ಸಂಸದ ತೇಜಸ್ವಿ ಸೂರ್ಯ ಸ್ವಾಗತಿಸಿದ್ದಾರೆ. ಎಕ್ಸ್​ ಖಾತೆಯಲ್ಲಿ ಪೋಸ್ಟ್ ಮಾಡಿರುವ ತೇಜಸ್ವಿ ಸೂರ್ಯ, ಇದು ಬೆಂಗಳೂರು ಜನರಿಗೆ ಸಂದ ಜಯ. ರಾಜ್ಯ ಸರ್ಕಾರದ ಜನವಿರೋಧಿ ನೀತಿ ಕೇಂದ್ರ ತಡೆಹಿಡಿದಿದೆ. ಟಿಕೆಟ್ ದರ ಏರಿಕೆ ಸ್ಥಗಿತ ಕೇವಲ ತಾತ್ಕಾಲಿಕ ರಿಲೀಫ್​ ಅಷ್ಟೇ ಎಂದು ಹೇಳಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ಟ್ವೀಟ್​

ಒಟ್ಟಿನಲ್ಲಿ ದರ ಏರಿಕೆಯಾಗುತ್ತಾ ಇಲ್ವಾ? ನಾಳೆಯಿಂದ ಬರೆ ಬೀಳುತ್ತಾ ಅಂತಾ ಗೊಂದಲದಲ್ಲಿದ್ದ ಪ್ರಯಾಣಿಕರಿಗೆ ಸದ್ಯ ರಿಲೀಫ್ ಸಿಕ್ಕಿದೆ. ಗೊಂದಲಕ್ಕೆ ಕ್ಲ್ಯಾರಿಟಿ ಸಿಕ್ಕಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:42 pm, Sun, 8 February 26

Loading...
Unable to load recommendations.
Follow Us