ಮೆಟ್ರೋ ಟಿಕೆಟ್ ದರ ಜಟಾಪಟಿ: ಕೇಂದ್ರದತ್ತ ಬೊಟ್ಟು ಮಾಡಿದ ಸಿಎಂಗೆ ದಾಖಲೆ ಸಮೇತ ಟಾಂಗ್ ಕೊಟ್ಟ ಸಂಸದ
ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಮತ್ತೆ ಬೆಂಗಳೂರಿಗರಿಗೆ ಹೊರೆಯಾಗಿದೆ. ಒಂದು ಕಾಲದಲ್ಲಿ ವರದಾನವಾಗಿದ್ದ ಮೆಟ್ರೋ ಈಗ ಆಟೋಗಿಂತಲೂ ದುಬಾರಿಯಾಗಿದೆ. ಬಿಎಂಆರ್‌ಸಿಎಲ್ ದರ ಹೆಚ್ಚಳದಿಂದ ರಾಜಕೀಯ ಜಟಾಪಟಿ ಶುರುವಾಗಿದ್ದು, ಸಿಎಂ ಸಿದ್ದರಾಮಯ್ಯ ಕೇಂದ್ರದ ಮೇಲೆ ಬೊಟ್ಟು ಮಾಡಿದ್ದಾರೆ. ಇದಕ್ಕೆ ಸಂಸದ ತೇಜಸ್ವಿ ಸೂರ್ಯ ದಾಖಲೆ ಸಮೇತ ತಿರುಗೇಟು ನೀಡಿದ್ದಾರೆ.

ಬೆಂಗಳೂರು, ಫೆಬ್ರವರಿ 06: ಬೆಂಗಳೂರಿಗರಿಗೆ ಒಂದು ಕಾಲದಲ್ಲಿ ವರದಾನವಾಗಿದ್ದ ನಮ್ಮ ಮೆಟ್ರೋ (Namma Metro) ಇಂದು ದೇಶದಲ್ಲಿ ಅತೀ ದುಬಾರಿ ಸಾರಿಗೆ ಆಗಿದೆ. ಒಂದು ಲೆಕ್ಕದಲ್ಲಿ ಆಟೋ ಪ್ರಯಾಣಿಕ್ಕಿಂತಲೂ ದುಬಾರಿ ಆಗಿದೆ. ಕಳೆದ ವರ್ಷವಷ್ಟೇ ಟಿಕೆಟ್ ದರ ಹೆಚ್ಚಿಸಿದ್ದ ಬಿಎಂಆರ್‌ಸಿಎಲ್ (BMRCL) ಇದೀಗ ಮತ್ತೆ ಟಿಕೆಟ್ ದರ ಹೆಚ್ಚಿಸಿದೆ. ಸದ್ಯ ಇದು ರಾಜಕೀಯ ಜಟಾಪಟಿಗೂ ಕಾರಣವಾಗಿದೆ. ಮೆಟ್ರೋ ದರಗಳನ್ನು ರಾಜ್ಯ ಸರ್ಕಾರ ನಿರ್ಧರಿಸುವುದಿಲ್ಲ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಕೇಂದ್ರದ ಕಡೆ ಬೊಟ್ಟು ಮಾಡಿದ್ದಾರೆ. ಈ ವಿಚಾರವಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ದಾಖಲೆಯೊಂದಿಗೆ ತಿರುಗೇಟು ನೀಡಿದ್ದಾರೆ.
ಮೆಟ್ರೋ ಟಿಕೆಟ್ ದರ ಏರಿಕೆ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ಜೊತೆ ಚರ್ಚಿಸುವುದಾಗಿ ಹೇಳಿದ್ದಾರೆ. ಜೊತೆಗೆ ಮೆಟ್ರೋ ದರಗಳನ್ನು ರಾಜ್ಯ ಸರ್ಕಾರ ನಿರ್ಧರಿಸುವುದಿಲ್ಲ. ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ರಚಿಸಿರುವ ಸ್ವತಂತ್ರ ದರ ನಿಗದಿ ಕಮಿಟಿ ನಿರ್ಧರಿಸುತ್ತದೆ ಎಂದಿದ್ದಾರೆ. ಸದ್ಯ ಇದೇ ವಿಚಾರವಾಗಿ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಟ್ವೀಟ್
Public is tired of listening to your excuses, Mr CM. While you waited to “formally” take this up, Bengalureans were made to suffer a steep hike for nearly a year. You finally seem to have woken up after persistent public opposition, after a year of our consistent efforts to draw… https://t.co/YhJPivREpM pic.twitter.com/3GwGEpTrQ9
— Tejasvi Surya (@Tejasvi_Surya) February 6, 2026
ಈ ಬಗ್ಗೆ ಟ್ವೀಟ್ ಮಾಡಿರುವ ಸಂಸದ ತೇಜಸ್ವಿ ಸೂರ್ಯ, ನಿಮ್ಮ ಕಾರಣಗಳು ಕೇಳಿ ಜನತೆ ಬೇಸತ್ತು ಹೋಗಿದ್ದಾರೆ. ಈ ವಿಷಯವನ್ನು ಔಪಚಾರಿಕವಾಗಿ ಕೈಗೆತ್ತಿಕೊಳ್ಳಲು ನೀವು ಕಾಯುತ್ತಿರುವ ವೇಳೆಯಲ್ಲೇ, ಬೆಂಗಳೂರು ಜನತೆ ಸುಮಾರು ಒಂದು ವರ್ಷ ಕಾಲ ಭಾರೀ ದರ ಏರಿಕೆಯ ಹೊರೆ ಹೊತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಕೇಂದ್ರವೇ ಮೆಟ್ರೋ ದರ ಏರಿಸಿದ್ದಾದ್ರೆ ರಾಜ್ಯ ಇವತ್ತೇ ಪತ್ರ ಬರೆಯಲಿ, ತೇಜಸ್ವಿ ಸೂರ್ಯ ಸವಾಲ್
ನಿರಂತರ ಸಾರ್ವಜನಿಕ ವಿರೋಧ ಮತ್ತು ಕಳೆದ ಒಂದು ವರ್ಷದಿಂದ ಈ ವಿಚಾರಕ್ಕೆ ಗಮನ ಸೆಳೆಯಲು ನಡೆದ ಪ್ರಯತ್ನಗಳ ಬಳಿಕ ಇದೀಗ ಸರ್ಕಾರ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ. ರಾಜ್ಯ ಸರ್ಕಾರದ ನಗರಾಭಿವೃದ್ಧಿ ಹಾಗೂ ಹಣಕಾಸು ಇಲಾಖೆಗಳಿಂದ ಬಿಎಂಆರ್‌ಸಿಎಲ್‌ಗೆ ಕಳುಹಿಸಿರುವ ಪತ್ರಗಳಲ್ಲಿ, ದರ ಪರಿಷ್ಕರಣೆಯನ್ನು ರಾಜ್ಯ ಸರ್ಕಾರದ ಹಣಕಾಸು ಹೊರೆ ಕಡಿಮೆ ಮಾಡಲು ‘ಅನಿವಾರ್ಯ’ ಎಂದು ಪರಿಗಣಿಸಲಾಗಿತ್ತು. ಅಂದರೆ ಹಣಕಾಸು ಒತ್ತಡ ತಗ್ಗಿಸುವ ನಿಟ್ಟಿನಲ್ಲಿ ದರ ಏರಿಕೆಗೆ ಒತ್ತಾಯ ಆರಂಭವಾದದ್ದು ರಾಜ್ಯ ಸರ್ಕಾರದಿಂದಲೇ ಎಂಬುವುದು ಸ್ಪಷ್ಟ. ಹೀಗಾಗಿ, ರಾಜ್ಯ ಸರ್ಕಾರ ಈ ವಿಷಯದಲ್ಲಿ ತಾನು ಅಸಹಾಯಕ ಪ್ರೇಕ್ಷಕ ಎಂಬಂತೆ ವರ್ತಿಸುವುದು ಸರಿಯಲ್ಲ ಎಂದಿದ್ದಾರೆ.
ದರ ನಿಗದಿ ಸಮಿತಿ ಕಾನೂನುಬದ್ಧ ಸಂಸ್ಥೆಯಾಗಿರಬಹುದು. ಆದರೆ ಅದರ ಮುಂದೆ ಸಲ್ಲಿಸಲಾಗುವ ಮಾಹಿತಿಗಳು ಮತ್ತು ದರ ಭರಿಸುವ ಸಾಮರ್ಥ್ಯದ ದೃಷ್ಟಿಕೋನ ಎಲ್ಲವೂ ರಾಜ್ಯ ಸರ್ಕಾರದಿಂದಲೇ ಬರುತ್ತವೆ. ಇದನ್ನು ಯಾವುದೇ ಸುಳ್ಳುಗಳಿಂದ ಮರೆಮಾಡಲು ಸಾಧ್ಯವಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಮೆಟ್ರೊ ಟಿಕೆಟ್ ದರ ಏರಿಕೆ ಬಗ್ಗೆ ಕೊನೆಗೂ ಮೌನಮುರಿದ ಸಿದ್ದರಾಮಯ್ಯ ಹೇಳಿದ್ದಿಷ್ಟು
ಇನ್ನಾದರೂ ಕಾಯ್ದೆಯ ಹಿಂದೆ ಅಡಗಿಕೊಳ್ಳುವುದನ್ನು ನಿಲ್ಲಿಸಿ, ದರ ಏರಿಕೆಯನ್ನು ಶೀಘ್ರವಾಗಿ ಹಿಂಪಡೆಯಲು ಕ್ರಮಕೈಗೊಳ್ಳಬೇಕು. ಹೊಸ ದರ ನಿಗದಿ ಸಮಿತಿಯನ್ನು ರಚಿಸಿ, ಸಮಯಬದ್ಧವಾಗಿ ದರ ಸಮೀಕರಣಕ್ಕೆ ಸೂಚನೆ ನೀಡಬೇಕು. ಬೆಂಗಳೂರಿಗೆ ಬೇಕಿರುವುದು ಹೊಣೆಗಾರಿಕೆ ಮತ್ತು ಕ್ರಮಕೈಗೊಳ್ಳುವ ಮನೋಭಾವ ಹೊರತು ನಾಟಕೀಯ ಆಕ್ರೋಶವಲ್ಲ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:24 pm, Fri, 6 February 26
