ಫುಟ್ಪಾತ್ಗೂ ಬಂತು ಟಿಂಡರ್ ಮಾದರಿಯ ಆ್ಯಪ್: ಹದಿಹರೆಯದ ಬಾಲಕನ ಐಡಿಯಾಗೆ ನೆಟ್ಟಿಗರು ಫಿದಾ!
ಬೆಂಗಳೂರಿನ 14 ವರ್ಷದ ಸೂರ್ಯ ಉತ್ಕರ್ಷ, ನಗರದ ಹಾಳಾದ ಫುಟ್‌ಪಾತ್‌ಗಳ ಸಮಸ್ಯೆ ನಿವಾರಿಸಲು ‘ರಸ್ತೆ’ ಎಂಬ ವಿಶಿಷ್ಟ ಆಪ್ ಅಭಿವೃದ್ಧಿಪಡಿಸಿದ್ದಾನೆ. ಪ್ರಸಿದ್ಧ ಡೇಟಿಂಗ್ ಆ್ಯಪ್ ‘ಟಿಂಡರ್’ ಮಾದರಿಯಲ್ಲಿ ಕೆಲಸ ಮಾಡುವ ಈ ಆಪ್ ಮೂಲಕ ನಾಗರಿಕರು ರಸ್ತೆಗಳನ್ನು ಸ್ವೈಪ್, ರೇಟ್ ಹಾಗೂ ಜಿಯೋ-ಟ್ಯಾಗ್ ಮೂಲಕ ನೇರವಾಗಿ ಬಿಬಿಎಂಪಿಗೆ ವರದಿ ಮಾಡಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಈ ಐಡಿಯಾ ಈಗ ಭಾರಿ ವೈರಲ್ ಆಗಿದೆ.

ಬೆಂಗಳೂರು, ಮೇ 20: ನಗರದಲ್ಲಿ ಟ್ರಾಫಿಕ್ (Traffic) ಸಮಸ್ಯೆ, ರಸ್ತೆ ಗುಂಡಿಗಳು, ಹಾಳಾದ ಫುಟ್ಪಾತ್ಗಳಿಂದ ಜನ ರೋಸಿ ಹೋಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಎಷ್ಟೇ ಧ್ವನಿ ಎತ್ತಿದರೂ ಪಾಲಿಕೆ ಮಾತ್ರ ಕ್ಯಾ ರೇ ಎನ್ನುತ್ತಿಲ್ಲ. ಇದೇ ಸಮಸ್ಯೆಯನ್ನು ತಲೆಯಲ್ಲಿಟ್ಟುಕೊಂಡು 14 ವರ್ಷದ ಬಾಲಕನೊಬ್ಬ ತಂತ್ರಜ್ಞಾನದ ಮೂಲಕ ಅದ್ಭುತ ಪರಿಹಾರ ಕಂಡುಹಿಡಿದಿದ್ದಾನೆ. ಡೇಟಿಂಗ್ ಆ್ಯಪ್ ರೀತಿಯಲ್ಲೇ ಕಾರ್ಯ ನಿರ್ವಹಿಸುವ ಈ ಆ್ಯಪ್ಗೆ ಆತ ‘ರಸ್ತೆ’(RASTHE) ಎಂದು ಹೆಸರಿಟ್ಟಿದ್ದಾನೆ.
ಮುಖ್ಯಾಂಶಗಳು
- ಬೆಂಗಳೂರಿನ 14ರ ಬಾಲಕನಿಂದ ‘ರಸ್ತೆ’ ಎಂಬ ವಿಶಿಷ್ಟ ಆ್ಯಪ್ ಅಭಿವೃದ್ಧಿ.
- ಟಿಂಡರ್ ಮಾದರಿಯಲ್ಲಿ ಫುಟ್‌ಪಾತ್‌ಗಳನ್ನು ಸ್ವೈಪ್ ಹಾಗೂ ರೇಟಿಂಗ್ ಮಾಡುವ ಸೌಲಭ್ಯ.
- ಹಾಳಾದ ರಸ್ತೆಗಳ ಫೋಟೋ ಅಪ್‌ಲೋಡ್ ಮಾಡಿ ಬಿಬಿಎಂಪಿಗೆ ನೇರ ದೂರು.
ರಸ್ತೆ ಸರಿ ಇಲ್ಲದಿದ್ದರೆ ಜಸ್ಟ್ ರೈಟ್ ಸ್ವೈಪ್ ಮಾಡಿ
ಬೆಂಗಳೂರು ನಿವಾಸಿ, 14 ವರ್ಷದ ಸೂರ್ಯ ಉತ್ಕರ್ಷ ತನ್ನ X ಖಾತೆಯಲ್ಲಿ ಈ ಆ್ಯಪ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾನೆ. ಈ ಆಪ್‌ನ ವಿಶೇಷತೆಯೆಂದರೆ, ಇದು ಯುವಜನತೆ ಬಳಸುವ ಪ್ರಸಿದ್ಧ ಡೇಟಿಂಗ್ ಆಪ್ ‘ಟಿಂಡರ್’ (Tinder) ಮಾದರಿಯಲ್ಲೇ ಕೆಲಸ ಮಾಡುತ್ತದೆ. ಇದರ ಮೂಲಕ ನೀವು ಹಾಳಾದ ರಸ್ತೆಗಳ, ಫುಟ್‌ಪಾತ್‌ಗಳ ಫೋಟೋ ತೆಗೆದು ಅಪ್ಲೋಡ್ ಮಾಡಬಹುದು. ಅಪ್ಲೋಡ್ ಆದ ಫೋಟೋಗಳಲ್ಲಿ ರಸ್ತೆಗಳ ಸ್ಥಿತಿ ಚನ್ನಾಗಿದ್ದರೆ ರೈಟ್ ಸ್ವೈಪ್ ಮಾಡಬಹುದು. ಇಲ್ಲವಾದರೆ ಲೆಫ್ಟ್ ಸ್ವೈಪ್ ಮಾಡಬಹುದು. ಹೀಗಾಗಿಯೇ ನೆಟ್ಟಿಗರು ಇದನ್ನು ಫುಟ್‌ಪಾತ್‌ಗಳ ಟಿಂಡರ್ ಎಂದು ಕರೆಯುತ್ತಿದ್ದಾರೆ.
ಕೇವಲ 30 ನಿಮಿಷಗಳಲ್ಲಿ ಆಪ್ ಸಿದ್ಧ!
ಸೂರ್ಯ ಉತ್ಕರ್ಷ ತಾನು ಕೇವಲ 30 ನಿಮಿಷಗಳಲ್ಲಿ ’10x Apps’ ಎಂಬ ಪ್ಲಾಟ್‌ಫಾರ್ಮ್ ಬಳಸಿ ಈ ಆಪ್ ಅನ್ನು ಸಿದ್ಧಪಡಿಸಿರುವುದಾಗಿ ಸೋಶಿಯಲ್ ಮೀಡಿಯಾ ಎಕ್ಸ್ (ಟ್ವಿಟರ್) ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾನೆ. ನಾನು ಬೆಂಗಳೂರಿನ ಟ್ರಾಫಿಕ್ ಮತ್ತು ರಸ್ತೆ ಸಮಸ್ಯೆಯನ್ನು 30 ನಿಮಿಷಗಳಲ್ಲಿ ಫಿಕ್ಸ್ ಮಾಡಿದ್ದೇನೆ ಎಂದು ಆತ ಬರೆದುಕೊಂಡಿರುವ ಪೋಸ್ಟ್ ಈಗ ಭಾರಿ ವೈರಲ್ ಆಗಿದೆ.
ಆ್ಯಪ್ ಹೇಗೆ ಕೆಲಸ ಮಾಡುತ್ತದೆ?
ನಾಗರಿಕರು ತಾವು ಸಂಚರಿಸುವ ದಾರಿಯಲ್ಲಿ ಎಲ್ಲಾದರೂ ಫುಟ್‌ಪಾತ್ ಹಾಳಾಗಿದ್ದರೆ, ಕಲ್ಲುಗಳು ಕಿತ್ತುಹೋಗಿದ್ದರೆ ಅಥವಾ ಫುಟ್‌ಪಾತ್ ಇಲ್ಲದೇ ಇದ್ದರೆ, ಅದರ ಫೋಟೋ ತೆಗೆದು ಆಪ್‌ನಲ್ಲಿ ಅಪ್‌ಲೋಡ್ ಮಾಡಬಹುದು. ಅಪ್‌ಲೋಡ್ ಮಾಡಿದ ತಕ್ಷಣ ಆ ಫೋಟೋ ಜಿಯೋ-ಟ್ಯಾಗ್ ಮೂಲಕ ಆಯಾ ವಾರ್ಡ್‌ಗೆ ಮ್ಯಾಪ್ ಆಗುತ್ತದೆ. ಇದರಿಂದ ಬಿಬಿಎಂಪಿ ಅಧಿಕಾರಿಗಳಿಗೆ ಆ ಸಮಸ್ಯೆಯನ್ನು ಸುಲಭವಾಗಿ ಪತ್ತೆಹಚ್ಚಿ ಸರಿಪಡಿಸಲು ಸಾಧ್ಯವಾಗುತ್ತದೆ. ನಾಗರಿಕರು ನಗರದ ವಿವಿಧ ಫುಟ್‌ಪಾತ್‌ಗಳ ಸ್ಥಿತಿಯನ್ನು ಟಿಂಡರ್ ಆಪ್‌ನಲ್ಲಿ ಮಾಡುವಂತೆ ಎಡಕ್ಕೆ ಅಥವಾ ಬಲಕ್ಕೆ ಸ್ವೈಪ್ ಮಾಡುವ ಮೂಲಕ ರೇಟಿಂಗ್ ನೀಡಬಹುದು. ನಗರದ ಅತ್ಯಂತ ಕೆಟ್ಟದಾದ ಮತ್ತು ಅತ್ಯುತ್ತಮವಾದ ಫುಟ್‌ಪಾತ್‌ಗಳನ್ನು ಗುರುತಿಸಲು ಇದರಲ್ಲಿ ವೋಟಿಂಗ್ ಸೌಲಭ್ಯವಿದೆ. ಜನರು ಅತಿ ಹೆಚ್ಚು ವೋಟ್ ಮಾಡುವ ಮೂಲಕ ಯಾವ ರಸ್ತೆ ತಕ್ಷಣ ದುರಸ್ತಿಯಾಗಬೇಕು ಎಂಬುದನ್ನು ಅಧಿಕಾರಿಗಳ ಗಮನಕ್ಕೆ ತರಬಹುದು.
ನಾಗರಿಕರೇ ನಗರದ ಕಣ್ಣುಗಳು
ತನ್ನ ಪೋಸ್ಟ್ ಮೂಲಕ ಗಮನ ಸೆಳೆದಿರುವ ಸೂರ್ಯ, ರಸ್ತೆಗಳನ್ನು ಕಾರುಗಳಿಗಾಗಿ ನಿರ್ಮಿಸಿದರೆ, ಈ ಆ್ಯಪ್ ಅನ್ನು ಜನರಿಗಾಗಿ ಮಾಡಲಾಗಿದೆ ಎಂದು ಹೇಳಿದ್ದಾನೆ. ಫುಟ್‌ಪಾತ್‌ಗಳು ಚೆನ್ನಾಗಿದ್ದರೆ ಜನರು ರಸ್ತೆಯ ಮೇಲೆ ನಡೆಯುವುದು ತಪ್ಪುತ್ತದೆ. ಇದರಿಂದ ಟ್ರಾಫಿಕ್ ಕೂಡ ಗಣನೀಯವಾಗಿ ಕಡಿಮೆಯಾಗುತ್ತದೆ ಎಂಬುದು ಆತನ ಯೋಚನೆ. ನಗರದ ಪ್ರತಿಯೊಬ್ಬ ಪ್ರಜೆಯನ್ನೂ ನಗರದ ಸಮಸ್ಯೆಗಳನ್ನು ಪತ್ತೆಹಚ್ಚುವ ‘ಸೆನ್ಸರ್’ ಆಗಿ ಪರಿವರ್ತಿಸುವುದು ಈ ಆ್ಯಪ್ನ ಮುಖ್ಯ ಉದ್ದೇಶವಾಗಿದೆ.
ಸದ್ಯ ಈ ಆ್ಯಪ್ ಅನ್ನು ಆ್ಯಪ್ ಸ್ಟೋರ್‌ಗಳಿಗೆ ಬಿಡುಗಡೆ ಮಾಡಲು ಸೂರ್ಯ ಸಜ್ಜಾಗಿದ್ದು, ನೆಟ್ಟಿಗರು ಈ ಬಾಲಕನ ಜಾಣ್ಮೆ ಹಾಗೂ ಸಾಮಾಜಿಕ ಕಳಕಳಿಗೆ ವ್ಯಾಪಕ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಬಿಬಿಎಂಪಿಯ ‘ಸಹಾಯ’ ಆ್ಯಪ್ಗಿಂತ ಇದು ಹೆಚ್ಚು ಜನಸ್ನೇಹಿಯಾಗಿದೆ ಎಂದು ಬೆಂಗಳೂರಿಗರು ಕೊಂಡಾಡುತ್ತಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

