ಬೆಂಗಳೂರಿನಲ್ಲಿ ಟೊಮ್ಯಾಟೋ ಎರಚಿಕೊಂಡು ತುಳಿದು ಕೆಚಪ್ ಮಾಡುವ ಕಾರ್ಯಕ್ರಮ: ಬಿಜೆಪಿ ವಿರೋಧ

Bengaluru Tomato Festival: ಸೆಪ್ಟೆಂಬರ್ 6ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ‘ಟೊಮ್ಯಾಟೋ ಫೆಸ್ಟಿವಲ್’ಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಬಿಜೆಪಿ ಸೇರಿದಂತೆ ಹಲವು ಸಂಘಟನೆಗಳು ಆಹಾರ ಪೋಲು ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಖಂಡಿಸಿವೆ. ಇಂತಹ ಕಾರ್ಯಕ್ರಮಕ್ಕೆ ಸರ್ಕಾರ ಅವಕಾಶ ನೀಡಬಾರದು ಎಂದು ಆಗ್ರಹಿಸಿವೆ.

ಬೆಂಗಳೂರಿನಲ್ಲಿ ಟೊಮ್ಯಾಟೋ ಎರಚಿಕೊಂಡು ತುಳಿದು ಕೆಚಪ್ ಮಾಡುವ ಕಾರ್ಯಕ್ರಮ: ಬಿಜೆಪಿ ವಿರೋಧ
ಟೊಮ್ಯಾಟೋ ಫೆಸ್ಟಿವಲ್
Image Credit source: tv9 kannada
Edited By:

Updated on: Aug 14, 2026 | 6:06 PM

ಮುಖ್ಯಾಂಶಗಳು

  • ಸೆ.6ರಂದು ಬೆಂಗಳೂರಿನಲ್ಲಿ ಟೊಮ್ಯಾಟೋ ಫೆಸ್ಟಿವಲ್ ಆಯೋಜನೆ
  • ಟೊಮ್ಯಾಟೋ ಫೆಸ್ಟಿವಲ್​​ಗೆ ಬಿಜೆಪಿ, ಇತರೆ ಸಂಘಟನೆಗಳ ಆಕ್ಷೇಪ
  • ತರಕಾರಿಗೆ ಸೂಕ್ತ ಬೆಲೆ ಕೊಟ್ಟು ನ್ಯಾಯ ಒದಗಿಸುವಂತೆ ಆಗ್ರಹ

ಬೆಂಗಳೂರು, ಆಗಸ್ಟ್​ 14: ‘ಜಿಂದಗಿ ನಾ ಮಿಲೇಗಿ ದುಬಾರ’ ಸಿನಿಮಾನಲ್ಲಿ ನೀವು ‘ಟೊಮ್ಯಾಟೋ ಫೆಸ್ಟಿವಲ್’ನ (tomato festival) ಹಾಡೊಂದನ್ನು ನೋಡಿರುತ್ತೀರಾ. ಸ್ಪೇನ್ ದೇಶದ ಪ್ರಸಿದ್ಧ ಫೆಸ್ಟಿವಲ್ ಆಗಿರುವ ‘ಲಾ ಟೊಮ್ಯಾಟಿನಾ’ ಅಂದರೆ ‘ಟೊಮ್ಯಾಟೋ ಫೆಸ್ಟಿವಲ್’ ಇದೀಗ ಮೊದಲ ಬಾರಿಗೆ ರಾಜಧಾನಿ ಬೆಂಗಳೂರಿನಲ್ಲಿ (bangaluru) ಆಯೋಜಿಸಲಾಗಿದೆ. ಸೆ.6ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಈ ಟೊಮ್ಯಾಟೋ ಫೆಸ್ಟಿವಲ್ ನಡೆಯಲಿದೆ. ಇದು ಸಿಲಿಕಾನ್​ ಸಿಟಿ ಜನರಿಗೆ ಖುಷಿ ತಂದಿದ್ದು, ಮತ್ತೊಂದೆಡೆ ಇದಕ್ಕೆ ಬಿಜೆಪಿ ಸೇರಿದಂತೆ ಇತರೆ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.

ಏನಿದು ‘ಟೊಮ್ಯಾಟೋ ಫೆಸ್ಟಿವಲ್’? 

‘ಟೊಮ್ಯಾಟೋ ಫೆಸ್ಟಿವಲ್’ ಸ್ಪೇನ್ ದೇಶದ ಪ್ರಸಿದ್ಧ ಹಬ್ಬಗಳಲ್ಲಿ ಒಂದು. ಈ ಹಬ್ಬದಂದು ಜನರು ಪರಸ್ಪರ ಟೊಮ್ಯಾಟೋವನ್ನು ಎರಚಿಕೊಳ್ಳುತ್ತಾ ಮೋಜು-ಮಸ್ತಿಯಿಂದ ಸಂಭ್ರಮಿಸುತ್ತಾರೆ. ಟೊಮ್ಯಾಟೋ ಎರಚಿಕೊಂಡು ತುಳಿದು ಕೆಚಪ್ ಮಾಡಲಾಗುತ್ತದೆ.

ಇದನ್ನೂ ಓದಿ: ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಕೈಗೊಂಡ ಕ್ರಮಗಳೇನು? ವಿವರ ನೀಡಲು ಜಿಬಿಎಗೆ ಹೈಕೋರ್ಟ್ ಸೂಚನೆ

ಬೆಂಗಳೂರಿನಲ್ಲಿ ಸೆ 6ರಂದು ಮಧ್ಯಾಹ್ನ 12 ಗಂಟೆಯಿಂದ ಆರಂಭಗೊಳ್ಳಲಿರುವ ಈ ಫೆಸ್ಟಿವಲ್​​ನಲ್ಲಿ ಡಿಜೆ, ವಿವಿಧ ಆಟೋಟಗಳು, ರುಚಿಕರವಾದ ಆಹಾರ ಮತ್ತು ಪಾನೀಯಗಳ ವ್ಯವಸ್ಥೆ ಇರಲಿದೆ. ಇನ್ನು ಉತ್ಸವದ ಪ್ರವೇಶ ದರ 499 ರೂ.ದಿಂದ ಆರಂಭವಾಗಲಿದೆ. ವಾಟ್ಸ್‌ಅರೌಂಡ್ ಬೆಂಗಳೂರು ಎಂಬ ಆ್ಯಪ್​​​ ಮೂಲಕ ಟಿಕೆಟ್‌ಗಳನ್ನು ಬುಕ್​ ಮಾಡಬಹುದಾಗಿದೆ.

ಟೊಮ್ಯಾಟೋ ಫೆಸ್ಟಿವಲ್​​ಗೆ ಬಿಜೆಪಿ ಸೇರಿ ವಿವಿಧ ಸಂಘಟನೆಗಳಿಂದ ವಿರೋಧ

ಇನ್ನು ಈ ಪಾಶ್ಚಿಮಾತ್ಯ ಶೈಲಿಯ ‘ಟೊಮ್ಯಾಟೋ ಫೆಸ್ಟಿವಲ್’ಗೆ ಬಿಜೆಪಿ ಸೇರಿದಂತೆ ವಿವಿಧ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಟೊಮ್ಯಾಟೋವನ್ನು ಪರಸ್ಪರ ಎರಚಿಕೊಂಡು, ಕಾಲಿನಲ್ಲಿ ತುಳಿದು ಕೆಚಪ್ ಮಾಡುವ ಈ ವಿಚಿತ್ರ ಹಾಗೂ ಅನಾಗರಿಕ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಸಂಘಟನೆಗಳು ಒತ್ತಾಯಿಸಿವೆ.

ತಿನ್ನುವ ಪದಾರ್ಥವನ್ನು ತುಳಿದು, ವಿಕೃತಿ ಮೆರೆವ ಸಂಪ್ರದಾಯ ಏಕೆ ಬೇಕು?

ಸುಮಾರು 10 ವರ್ಷಗಳ ಹಿಂದೆಯೂ ಈ ಸಂಸ್ಕೃತಿಯನ್ನು ಬೆಂಗಳೂರಿಗೆ ಪರಿಚಯಿಸಲು ಯತ್ನಿಸಿದಾಗ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿ ಕೊನೆಗೆ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು. ಇದೀಗ ಮತ್ತೆ ಅಂತಹದ್ದೇ ಆಚರಣೆಯನ್ನು ತರಲು ಮುಂದಾಗಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ತಿನ್ನುವ ಅನ್ನ ಹಾಗೂ ಆಹಾರ ಪದಾರ್ಥಗಳನ್ನು ಕಾಲಿನಡಿ ತುಳಿದು ವಿಕೃತಿ ಮೆರೆಯುವ ಇಂತಹ ಪಾಶ್ಚಿಮಾತ್ಯ ಸಂಪ್ರದಾಯ ನಮ್ಮ ಸಂಸ್ಕೃತಿಗೆ ವಿರುದ್ಧವಾದದ್ದು ಎಂದು ಸಾರ್ವಜನಿಕರು ಮತ್ತು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.

ಇದನ್ನೂ ಓದಿ: ಆರೋಗ್ಯ ಇಲಾಖೆ ಕಾರ್ಯದರ್ಶಿಗೆ ಸಿಎಂ ಕ್ಲಾಸ್: ಗುಟ್ಕಾ ನಿಷೇಧ ಆದೇಶ ಶೀಘ್ರದಲ್ಲೇ ಹಿಂಪಡೆಯಲು ಸೂಚನೆ

ರೈತರು ಬೆಳೆದ ಬೆಳೆಗಳಿಗೆ ಹಾಗೂ ತರಕಾರಿಗಳಿಗೆ ಸೂಕ್ತ ಬೆಲೆ ಕೊಟ್ಟು ನ್ಯಾಯ ಒದಗಿಸುವುದನ್ನು ಬಿಟ್ಟು, ಆಹಾರ ಪದಾರ್ಥಗಳನ್ನು ಈ ರೀತಿ ಕೇವಲವಾಗಿ ಪೋಲು ಮಾಡುವ ಕಾರ್ಯಕ್ರಮಗಳನ್ನು ಆಯೋಜಿಸುವುದು ಸರಿಯಲ್ಲ. ಇಂತಹ ಅಸಂಬದ್ಧ ಕಾರ್ಯಕ್ರಮಗಳಿಗೆ ಸರ್ಕಾರ ಯಾವುದೇ ರೀತಿಯಲ್ಲೂ ಅವಕಾಶ ಮಾಡಿಕೊಡಬಾರದು ಎಂದು ಬಿಜೆಪಿ ರಾಜ್ಯ ವಕ್ತಾರ ಪ್ರಕಾಶ್ ಸೇರಿದಂತೆ ಹಲವು ಮುಖಂಡರು ಸರ್ಕಾರಕ್ಕೆ ಕಟ್ಟುನಿಟ್ಟಾಗಿ ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us