ಬಿಕ್ಲು ಶಿವ ಕೊಲೆ ಕೇಸ್​​: ಶಾಸಕ ಬೈರತಿ ಬಸವರಾಜ್​​ ಫೆ.21ರವರೆಗೆ ಸಿಐಡಿ ಕಸ್ಟಡಿಗೆ

ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ್ ಅವರನ್ನು ಫೆಬ್ರವರಿ 21ರವರೆಗೆ ಸಿಐಡಿ ಕಸ್ಟಡಿಗೆ ನೀಡಲಾಗಿದೆ. 42ನೇ ಎಸಿಜೆಎಂ ಕೋರ್ಟ್​ ಜಡ್ಜ್ ಈ ಬಗ್ಗೆ ಆದೇಶಿಸಿದ್ದು, ಸದ್ಯ ಬೈರತಿ ಬಸವರಾಜ್​ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಎಸ್​ಪಿಪಿ ಅಶೋಕ್ ನಾಯ್ಕ್ ತಿಳಿಸಿದ್ದಾರೆ, ಮತ್ತೊಂದೆಡೆ ಶಾಸಕ ಬೈರತಿ ಬಸವರಾಜ್ ಅವರ ನಿವಾಸಕ್ಕೆ ಬಿಜೆಪಿ ನಾಯಕರ ತಂಡ ಭೇಟಿ ನೀಡಿ, ಕುಟುಂಬಸ್ಥರಿಗೆ ಧೈರ್ಯ ತುಂಬುವ ಕೆಲಸ ಮಾಡಿದೆ.

ಬಿಕ್ಲು ಶಿವ ಕೊಲೆ ಕೇಸ್​​: ಶಾಸಕ ಬೈರತಿ ಬಸವರಾಜ್​​ ಫೆ.21ರವರೆಗೆ ಸಿಐಡಿ ಕಸ್ಟಡಿಗೆ
ಬೈರತಿ ಬಸವರಾಜ್​​
Image Credit source: Google

Updated on: Feb 15, 2026 | 2:20 PM

ಬೆಂಗಳೂರು, ಫೆಬ್ರವರಿ 15: ರೌಡಿಶೀಟರ್ ಶಿವಪ್ರಕಾಶ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ಶಾಸಕ ಬೈರತಿ ಬಸವರಾಜ್​​ರನ್ನು ಫೆ.21ರವರೆಗೆ ಸಿಐಡಿ ಕಸ್ಟಡಿಗೆ ನೀಡಿ 42ನೇ ಎಸಿಜೆಎಂ ಕೋರ್ಟ್​ ಜಡ್ಜ್ ಆದೇಶಿಸಿದ್ದಾರೆ. ಜಯದೇವ ಆಸ್ಪತ್ರೆಯಲ್ಲಿ ವಿವಿಧ ಪರೀಕ್ಷೆಗಳ ಬಳಿಕ ಕೋರಮಂಗಲದಲ್ಲಿರುವ 42ನೇ ಎಸಿಜೆಎಂ ಕೋರ್ಟ್​ ಜಡ್ಜ್ ನಿವಾಸಕ್ಕೆ ಶಾಸಕರನ್ನು ಹಾಜರುಪಡಿಸಲಾಗಿತ್ತು. ಸಿಐಡಿ ಪೊಲೀಸರ ಪರ ಎಸ್​ಪಿಪಿ ಅಶೋಕ್ ನಾಯ್ಕ್ ಈ ವೇಳೆ ಹಾಜರಿದ್ದರು. ಶಾಸಕರು ಹೃದಯ ಸಂಬಂಧಿ ಸಮಸ್ಯೆ ಬಗ್ಗೆ ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ಅವರನ್ನು ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸುವಂತೆ ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯ ಸಿಐಡಿಗೆ ಈ ಹಿಂದೆ ಸೂಚಿಸಿತ್ತು.

ಜಡ್ಜ್ ನಿವಾಸದ ಬಳಿ ಎಸ್​ಪಿಪಿ ಅಶೋಕ್ ನಾಯ್ಕ್ ಪ್ರತಿಕ್ರಿಯೆ ನೀಡಿದ್ದು, ಬೈರತಿ ಬಸವರಾಜ್​​ ಅವರ ಬಂಧನದ ಬಳಿಕ ಮೆಡಿಕಲ್ ಟೆಸ್ಟ್​ಗೆ ಹಾಜರುಪಡಿಸಲಾಗಿತ್ತು. ಟೆಸ್ಟ್ ವೇಳೆ ಹೃದಯ ಸಂಬಂಧಿ ಕಾಯಿಲೆ ಇರುವುದು ಗೊತ್ತಾಗಿದ್ದ ಹಿನ್ನೆಲೆ ಜಯದೇವ ಆಸ್ಪತ್ರೆಗೆ ದಾಖಲಿಸಲು ಬೌರಿಂಗ್ ವೈದ್ಯರು ತಿಳಿಸಿದ್ದರು. ವೈದ್ಯರ ವರದಿ ಆಧರಿಸಿ ಚಿಕಿತ್ಸೆಗೆ ನ್ಯಾಯಾಧೀಶರು ಕೂಡ ಸೂಚನೆ ನೀಡಿದ್ದರು. ಸದ್ಯ ಬೈರತಿ ಬಸವರಾಜ್​ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ, ಬಹುತೇಕ ಎಲ್ಲವೂ ನಾರ್ಮಲ್ ಎಂದು ವೈದ್ಯಕೀಯ ವರದಿ ಬಂದಿದೆ. ಹಾಗಾಗಿ ನ್ಯಾ.ಶಿವಕುಮಾರ್ ಅವರ ಮುಂದೆ ಶಾಸಕರನ್ನು ಹಾಜರುಪಡಿಸಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಕೇಸ್​ನಲ್ಲಿ ಶಾಸಕ ಭೈರತಿ ಬಸವರಾಜ್​​ ಪೊಲೀಸರ ವಶಕ್ಕೆ

ಬೈರತಿ ಬಸವರಾಜ್ ನಿವಾಸಕ್ಕೆ ಬಿಜೆಪಿ ನಾಯಕರ ತಂಡ ಭೇಟಿ

ಕೊಲೆ ಕೇಸ್​ನಲ್ಲಿ ಬಂಧನಕ್ಕೊಳಗಾಗಿರುವ ಶಾಸಕ ಬೈರತಿ ಬಸವರಾಜ್ ನಿವಾಸಕ್ಕೆ ಬಿಜೆಪಿ ನಾಯಕರ ತಂಡ ಭೇಟಿ ನೀಡಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಸಂಸದ ಗೋವಿಂದ ಕಾರಜೋಳ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ, ವರ್ತೂರು ಪ್ರಕಾಶ್​, ಬೆಂಗಳೂರು ಉತ್ತರ ಜಿಲ್ಲಾ ಘಟಕದ ಬಿಜೆಪಿ ಅಧ್ಯಕ್ಷ ಎಸ್.ಹರೀಶ್ ಒಳಗೊಂಡ ತಂಡ ಬೈರತಿ ಕುಟುಂಬ ಸದಸ್ಯರಿಗೆ ಧೈರ್ಯ ಹೇಳಿದೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿರುವ ವಿಜಯೇಂದ್ರ, ಬಿಎಸ್​ವೈ ಬಗ್ಗೆ ಭೈರತಿ ಇಟ್ಟ ವಿಶ್ವಾಸಕ್ಕೆ ನಾವು ಬೆಲೆ ಕಟ್ಟಲು ಆಗಲ್ಲ. ಎಲ್ಲವೂ ಕೂಡ ನಮ್ಮ ಪರೀಕ್ಷೆಯ ಸಮಯ. ತಂದೆ, ಕುಟುಂಬದ ಮೇಲೆ ಹಾಕಿದ್ದ 25-30 ಕೇಸ್ ಎದುರಿಸಿದ್ದೇನೆ. ರಾಜಕೀಯ ಷಡ್ಯಂತ್ರಗಳು ಹೇಗೆ ನಡೆಯುತ್ತವೆ ಎಂಬುದು ಗೊತ್ತಿದೆ. ಯಾರೂ ಕೂಡ ತಾಳ್ಮೆ ಕಳೆದುಕೊಳ್ಳಬಾರದು. ನಾನು, ಯಡಿಯೂರಪ್ಪ, ಪಕ್ಷ ಅವರ ಜೊತೆ ಇದ್ದೇ ಇರುತ್ತೇವೆ. ರಾಜಕೀಯವಾಗಿಯೂ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.

ವರದಿ: ಪ್ರದೀಪ್​​ ಚಿಕ್ಕಾಟೆ, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.