ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣಕ್ಕೆ ತಿರುವು: ಪತಿ ಸಾವಿನ ಬಗ್ಗೆ ಮತ್ತೊಬ್ಬ ಮಹಿಳೆಯ ಜೊತೆ ಹೆಂಡತಿ ಮಾತುಕತೆ ವೈರಲ್
ಮತ್ತೊಬ್ಬ ಮಹಿಳೆಯೊಂದಿಗೆ ಅನಂತರಾಜು ಹೆಂಡತಿ ಫೋನ್ನಲ್ಲಿ ಆಡಿದ್ದಾರೆ ಎನ್ನಲಾದ ಮಾತುಕತೆಯ ಆಡಿಯೊ ವೈರಲ್ ಆಗಿದೆ.
ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ (BJP Leader Ananth Raju Suicide Case) ಪ್ರಕರಣಕ್ಕೆ ಮತ್ತೊಂದು ತಿರುವು ಪಡೆದುಕೊಂಡಿದೆ. ಮತ್ತೊಬ್ಬ ಮಹಿಳೆಯೊಂದಿಗೆ ಅನಂತರಾಜು ಹೆಂಡತಿ ಫೋನ್ನಲ್ಲಿ ಆಡಿದ್ದಾರೆ ಎನ್ನಲಾದ ಮಾತುಕತೆಯ ಆಡಿಯೊ ವೈರಲ್ ಆಗಿದೆ. ಅನಂತರಾಜು ಸಾಯುವ 20 ದಿನಗಳ ಮೊದಲೇ ಅವರ ಪತ್ನಿ ಸಾವಿನ ಭವಿಷ್ಯ ನುಡಿದಿದ್ದರು ಎಂದು ಶಂಕಿಸಲಾಗಿದೆ. ಹನಿಟ್ರ್ಯಾಪ್ ಪ್ರಕರಣದಲ್ಲಿ ನೊಂದು ಅನಂತರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೊದಲು ದಾಖಲಾಗಿದ್ದ ಎಫ್ಐಆರ್ ಬಗ್ಗೆಯೂ ಹಲವು ಅನುಮಾನಗಳು ಹುಟ್ಟಿಕೊಂಡಿವೆ.
ಅನಂತರಾಜು ಸಾಯುವ 20 ದಿನಗಳ ಮೊದಲೇ ಪತ್ನಿ ಸುಮಾ ಭವಿಷ್ಯ ನುಡಿದಿದ್ದರು ಎಂದು ಹೇಳಲಾಗಿದೆ. ‘ನಿನ್ನ ಅನಂತ ಸಾಯ್ತಾನೆ, ಫೇಸ್ಬುಕ್ನಲ್ಲಿ ನೋಡ್ತೀಯಾ’ ಎಂದೆಲ್ಲಾ ರೇಖಾ ಎಂಬಾಕೆಗೆ ಸುಮಾ ಬೆದರಿಕೆ ಹಾಕಿದ್ದರು. ಕಳೆದ ಆರು ವರ್ಷಗಳಿಂದ ಅನಂತರಾಜು ಮತ್ತು ರೇಖಾ ಸಂಬಂಧ ಇರಿಸಿಕೊಂಡಿದ್ದರು. ತನ್ನ ಗಂಡ ಪರಸ್ತ್ರೀ ಸಂಬಂಧ ಬೆಳೆಸಿರುವುದು ತಿಳಿದು ಸುಮಾ ಕೆಂಡಾಮಂಡಲವಾಗಿದ್ದರು. ಇದೇ ಸಿಟ್ಟಿನಲ್ಲಿ ರೇಖಾಗೆ ಫೋನ್ ಮಾಡಿ, ‘ಅನಂತರಾಜುನ ಸಾಯಿಸ್ತೀನಿ, ನಾನು ಕೊಡುವ ಟಾರ್ಚರ್ಗೆ ಹಾರ್ಟ್ ಅಟ್ಯಾಕ್ ಆಗಿ ಸಾಯ್ತಾನೆ ನೋಡು’ ಎಂದು ಸುಮಾ ಬೆದರಿಕೆ ಹಾಕಿದ್ದರು.
ಸುಮಾ ಮಾತು ಕೇಳಿ ರೇಖಾ ಕಣ್ಣೀರು ಹಾಕಿ ಬೇಡಿಕೊಂಡಿದ್ದರು. ‘ಅವನನ್ನೂ ಬಿಡಲ್ಲ, ನಿನ್ನನ್ನೂ ಬಿಡಲ್ಲ’ ಎಂದು ಧಮಕಿ ಹಾಕಿದ್ದ ಸುಮಾ, ‘ಅವನು ಸತ್ತಮೇಲೆ, ನೀನೇ ಮುಂದೆ ನಿಂತು ಎಲ್ಲವನ್ನೂ ಮಾಡಬೇಕು. ಹೆಂಡತಿ ಸ್ಥಾನ ಕೊಡುತ್ತೇನೆ’ ಎಂದು ವ್ಯಂಗ್ಯವಾಡಿದ್ದರು. ‘ನನ್ನ ಕ್ಯಾರೆಕ್ಟರ್ ಹಾಳಾದ್ರು ಪರವಾಗಿಲ್ಲ, ನಿನ್ನ ಸಹವಾಸಕ್ಕೆ ಬರಲ್ಲ. ಅನಂತುಗೆ ಏನೂ ಮಾಡ್ಬೇಡ, ಚೆನ್ನಾಗಿ ನೋಡ್ಕೊ’ ಎಂದೆಲ್ಲಾ ಬೇಡಿಕೊಂಡಿದ್ದರು. ಇದೇ ಫೋನ್ ಕಾಲ್ನಲ್ಲಿ ಅನಂತು ಮೇಲೆ ಹಲ್ಲೆ ನಡೆಸಿರುವ ಬಗ್ಗೆಯೂ ಮಾತುಕತೆ ನಡೆದಿದೆ. ಈ ಸಂಭಾಷಣೆ ನಡೆದ ದಿನಾಂಕದ ಬಗ್ಗೆ ನಿಖರ ವಿವರ ಲಭ್ಯವಾಗಿಲ್ಲ. ಅನಂತರಾಜು ಸಾಯುವ 20 ದಿನಗಳ ಮೊದಲು ನಡೆದಿದೆ ಎನ್ನಲಾದ ಮಾತುಕತೆಯ ಆಡಿಯೊ 6 ನಿಮಿಷ 49 ಸೆಕೆಂಡ್ಇದೆ. ಆಡಿಯೊದಲ್ಲಿ ಅನಂತರಾಜು ಅವರು ಹಾರ್ಟ್ ಅಟ್ಯಾಕ್ ಆಗಿ ಸಾಯುತ್ತಾರೆಂದು ಪತ್ನಿ ಸುಮಾ ಹೇಳಿರುವುದು ರೆಕಾರ್ಡ್ ಆಗಿದೆ.
ಈವರೆಗೆ ಅನಂತರಾಜು ಅವರು ಹನಿಟ್ರ್ಯಾಪ್ನಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಇದು ಪತ್ನಿಯ ಕಿರುಕುಳ ತಡೆಯಲಾಗದೆ ಪತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ರೇಖಾ ಬಂಧನ
ಅನಂತರಾಜು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಹನಿಟ್ರ್ಯಾಪ್ ಆರೋಪ ಕೇಳಿ ಬಂದಿರುವ ರೇಖಾ ಅವರನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಮೃತ ಅನಂತರಾಜು ಪತ್ನಿ ಸುಮಾ ನೀಡಿದ್ದ ದೂರು ಆಧರಿಸಿ ರೇಖಾ, ವಿನೋದ್, ಸ್ಪಂದನ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಹೇರೋಹಳ್ಳಿ ವಾರ್ಡ್ನಲ್ಲಿ ಬಿಜೆಪಿ ಮುಖಂಡರಾಗಿದ್ದ ಅನಂತರಾಜ್ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೂ ಆಪ್ತರಾಗಿದ್ದರು.
ತಾಜಾ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:07 am, Thu, 19 May 22