
ಬೆಂಗಳೂರು, ಸೆಪ್ಟೆಂಬರ್ 28: ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕೆಪಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ನೀಡಿರುವ ಹೇಳಿಕೆಯೊಂದು ಈಗ ವಿವಾದಕ್ಕೆ ಕಾರಣವಾಗಿದೆ. RSS, ಬಿಜೆಪಿಯವರನ್ನು ಬೆಂಗಳೂರಿನಿಂದ ಓಡಿಸಬೇಕು ಎಂದು ಅವರು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿರೋದು ಭಾರಿ ಚರ್ಚೆಗೆ ಗ್ರಾಸವಾಗಿದೆ. ವಂದೇ ಮಾತರಂ ನಮ್ಮ ಪಕ್ಷದವರು ಚೆನ್ನಾಗಿ ಹಾಡುತ್ತಾರೆ. ವಂದೇ ಮಾತರಂ ಏನಿದ್ರು ನಮ್ಮದು ಎಂದಿರುವ ಅವರು, ನೀವು ಖಾಕಿ ಚಡ್ಡಿ, ದೊಣ್ಣೆ ಹಿಡಿದು ಸಂಜೆ ಹೋಗಿ ಎಂದು ವ್ಯಂಗ್ಯವಾಡಿದ್ದಾರೆ.
ಸಿಇಸಿ ಜ್ಞಾನೇಶ್ ಕುಮಾರ್ ಒಬ್ಬ ಅಜ್ಞಾನಿ. ಜ್ಞಾನೇಶ್ ಕುಮಾರ್ ಹೋಗುವ ತನಕ ಹೋರಾಟ ಮಾಡಿ. ಅವನ ಬಗ್ಗೆ ನಿರ್ಲಕ್ಷ್ಯವಹಿಸಿದ್ರೆ, ಅರ್ಹ ಮತದಾರನ್ನು ಕೈಬಿಡ್ತಾನೆ. ಅವನಂತಹ ನೀಚ ಈ ದೇಶದಲ್ಲಿ ಬೇರೆ ಯಾರೂ ಸಹ ಇಲ್ಲ. ಸಂವಿಧಾನ ದುರುಪಯೋಗ ಮಾಡಿಕೊಂಡ ನೀಚ ಅವನು. ನೀವೆಲ್ಲ ಮತದಾರರ ಪಟ್ಟಿಯ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಹೇಳುವ ಮೂಲಕ ಜ್ಞಾನೇಶ್ ವಿರುದ್ಧ ಬಿ.ಕೆ.ಹರಿಪ್ರಸಾದ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಗಣೇಶೋತ್ಸವದ ವೇಳೆ ಅವಾಚ್ಯ ಪದ ಬಳಕೆ ಆರೋಪ: ಶಾಸಕ ಮುನಿರತ್ನ ಮನೆ ಬಳಿ ಹೈಡ್ರಾಮಾ
RSS, ಬಿಜೆಪಿಗರನ್ನು ಬೆಂಗಳೂರಿನಿಂದ ಓಡಿಸಬೇಕೆಂಬ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿರುಗೇಟು ನೀಡಿದ್ದಾರೆ. ಯಾರನ್ನೂ ಬೆಂಗಳೂರು ಬಿಟ್ಟು ಓಡಿಸಲು ಸಾಧ್ಯವಿಲ್ಲ. ಬಿ.ಕೆ.ಹರಿಪ್ರಸಾದ್ ತಲ್ವಾರ್ ಹಿಡಿದು ಓಡಾಡುವ ಕಾಲ ಇತ್ತು. RSSನದು ಗಣವೇಶ ಅಷ್ಟೇ, ಲಾಠಿಯಿಂದ ಯಾರನ್ನೂ ತಳಿಸಿಲ್ಲ. ಕರ್ನಾಟಕದಲ್ಲಿ RSS ವಿರುದ್ಧ ಯಾವುದೇ ಕೇಸ್ ಇಲ್ಲ. ಸಚಿವ ಪ್ರಿಯಾಂಕ್ ಖರ್ಗೆ ಅವರೇ ಸದನದಲ್ಲಿ ಅದನ್ನು ಸ್ಪಷ್ಟಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ವಂದೇಮಾತರಂನ ಬಹುಕಾಲದಿಂದ ಸದನದಲ್ಲಿ ಪೂರ್ಣ ಹಾಡ್ತಿದ್ರು. ಅದನ್ನ ನಿಲ್ಲಿಸಿ ಕಾಂಗ್ರೆಸ್ ಬಂಡತನ ಪ್ರದರ್ಶನ ಮಾಡಿದೆ. ಹರಿಪ್ರಸಾದ್ರದ್ದು ಹೊಡಿಬಡಿ ಸಂಸ್ಕೃತಿ, ಒಳ್ಳೇದು ನಿರೀಕ್ಷಿಸಲು ಆಗಲ್ಲ ಎಂದು ತಿವಿದಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:03 pm, Mon, 28 September 26