AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯ ಕೈಗಾರಿಕೆ ಜಟಾಪಟಿ: ಜನವರಿ 10ರೊಳಗೆ ರೆಕ್ಟ್ ಆ್ಯಂಗಲ್ 100 ಎಕರೆ ಭೂಮಿ ಕೊಡಿ ಎಂದು ಸರ್ಕಾರಕ್ಕೆ ಹೆಚ್.ಡಿ. ಕುಮಾರಸ್ವಾಮಿ ಡೆಡ್‌ಲೈನ್

ಮಂಡ್ಯದಲ್ಲಿ ಎಆರ್‌ಎಐ ಕೈಗಾರಿಕಾ ಘಟಕ ಸ್ಥಾಪನೆಗೆ ಭೂಮಿ ಹಸ್ತಾಂತರ ವಿಚಾರದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತು ಶಾಸಕ ಗಣಿಗ ಪಿ. ರವಿಕುಮಾರ್ ನಡುವೆ ತೀವ್ರ ವಾಕ್ಸಮರ ನಡೆದಿದೆ. ಜನವರಿ 10ರೊಳಗೆ ಸೂಕ್ತ ಭೂಮಿ ನೀಡುವಂತೆ ಕುಮಾರಸ್ವಾಮಿ ಡೆಡ್‌ಲೈನ್ ನೀಡಿದ್ದು, ರವಿಕುಮಾರ್ ಇದು ರಾಜಕೀಯ ಗಿಮಿಕ್ ಎಂದು ಆರೋಪಿಸಿದ್ದಾರೆ. ಘಟಕ ಕೈತಪ್ಪುವ ಆತಂಕದ ನಡುವೆ ಭೂಮಿ ವಿವಾದ ತಾರಕಕ್ಕೇರಿದೆ.

ಮಂಡ್ಯ ಕೈಗಾರಿಕೆ ಜಟಾಪಟಿ: ಜನವರಿ 10ರೊಳಗೆ ರೆಕ್ಟ್ ಆ್ಯಂಗಲ್ 100 ಎಕರೆ ಭೂಮಿ ಕೊಡಿ ಎಂದು ಸರ್ಕಾರಕ್ಕೆ ಹೆಚ್.ಡಿ. ಕುಮಾರಸ್ವಾಮಿ ಡೆಡ್‌ಲೈನ್
ಹೆಚ್​​ಡಿಕೆ ಮತ್ತು ರವಿಕುಮಾರ್ Image Credit source: Google
TV9 Web
| Edited By: |

Updated on: Nov 29, 2026 | 2:29 PM

Share

ಮಂಡ್ಯ, ನ.29: ಜಿಲ್ಲೆಯಲ್ಲಿ ARAI (Automotive Research Association of India) ಕೈಗಾರಿಕಾ ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ ಭೂಮಿ ಹಸ್ತಾಂತರ ವಿಚಾರ ಇದೀಗ ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ಪಿ. ರವಿಕುಮಾರ್ ನಡುವಿನ ತೀವ್ರ ವಾಕ್ಸಮರಕ್ಕೆ ವೇದಿಕೆಯಾಗಿದೆ. ಜನವರಿ 10ರ ಒಳಗೆ ಸೂಕ್ತ ಭೂಮಿ ನೀಡುವಂತೆ ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಡೆಡ್‌ಲೈನ್ ನೀಡಿದ ಬೆನ್ನಲ್ಲೇ, ಶಾಸಕ ರವಿಕುಮಾರ್ ಸುದ್ದಿಗೋಷ್ಠಿ ನಡೆಸಿ ಹೆಚ್‌ಡಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯ ಜಿಲ್ಲೆಯ ಕೈತಪ್ಪಿ ಹೋಗುವ ಆತಂಕ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ರಾಜ್ಯ ಸರ್ಕಾರದ ಅಂಗಳಕ್ಕೆ ಚೆಂಡೆಸೆದಿದ್ದಾರೆ. ಜನವರಿ 10ರ ಒಳಗೆ ARAI ಸಂಸ್ಥೆ ಕೇಳಿದಂತಹ ಜಾಗವನ್ನು ರಾಜ್ಯ ಸರ್ಕಾರ ನೀಡಲಿ, ಮುಂದಿನ ತೀರ್ಮಾನವನ್ನು ನಾವು ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಕಳೆದ ಜನವರಿ ತಿಂಗಳಿಂದ ARAI ಮತ್ತು ಕುಮಾರಸ್ವಾಮಿ ನಡುವೆ ಈ ಬಗ್ಗೆ ಪತ್ರ ವ್ಯವಹಾರ ನಡೆದಿದೆ. ARAI ಸಂಸ್ಥೆಯು ರೆಕ್ಟ್ ಆ್ಯಂಗಲ್ (ಆಯತಾಕಾರದ) 100 ಎಕರೆ ಭೂಮಿಯನ್ನು ಕೇಳಿದ್ದು, ಈಗ ಗುರುತಿಸಿರುವ ಜಾಗದಲ್ಲಿ ARAI ಘಟಕದ ಬಳಕೆಗೆ ಯೋಗ್ಯವಿರುವುದು ಕೇವಲ 70 ಎಕರೆ ಜಮೀನು ಮಾತ್ರ ಎಂದು ಹೆಚ್‌ಡಿಕೆ ತಿಳಿಸಿದ್ದಾರೆ.

ಸರ್ಕಾರ ಒಪ್ಪಿಕೊಂಡಂತೆ ಇನ್ನೂ 35 ಎಕರೆ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ARAIಗೆ ನೀಡಬೇಕು. ಮಾರ್ಚ್ ಒಳಗೆ 150 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಯ ಪ್ರಗತಿ ತೋರಿಸಬೇಕಿದೆ. ಇಲ್ಲದಿದ್ದರೆ ARAI ಘಟಕ ಮಂಡ್ಯ ಜಿಲ್ಲೆಯ ಕೈತಪ್ಪಲಿದೆ ಎಂದು ಎಚ್ಚರಿಸಿರುವ ಅವರು, ಸರ್ಕಾರಕ್ಕೆ ಈ ಕೆಲಸ ಮಾಡಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ.

“ಪಿಎ ಇಟ್ಟುಕೊಂಡು ಅಧಿಕಾರ ಮಾಡ್ತಿದ್ದೀರಾ ಕುಮಾರಣ್ಣ?”: ಶಾಸಕ ಗಣಿಗ ರವಿಕುಮಾರ್ ವಾಗ್ದಾಳಿ

ಕುಮಾರಸ್ವಾಮಿ ಅವರ ಗಡುವು ಮತ್ತು ಹೇಳಿಕೆಗಳಿಗೆ ಮಂಡ್ಯದಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಶಾಸಕ ಗಣಿಗ ಪಿ. ರವಿಕುಮಾರ್, ಹೆಚ್‌ಡಿಕೆ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ. “ಕುಮಾರಸ್ವಾಮಿ ಕಾರ್ಖಾನೆ ತರೋದಕ್ಕೆ ಸಭೆ ಮಾಡಿಲ್ಲ, ಆರೋಪ ಮಾಡಕ್ಕಾಗಿಯೇ ಸಭೆ ಮಾಡಿದ್ದಾರೆ. ಮಾಜಿ ಶಾಸಕರು, ಜನರನ್ನು ಕೂರಿಸಿ ಪಿಚ್ಚರ್ ಸ್ಟೈಲ್‌ನಲ್ಲಿ ಸಭೆ ನಡೆಸಿದ್ದಾರೆ. 100 ಎಕರೆ ಜಾಗ ಕೇಳಿದ್ರು, ನಾವು ಕೊಟ್ಟಿದ್ದೇವೆ. ಕಳೆದ 8 ತಿಂಗಳ ಹಿಂದೆ ಡಿಸಿ, ಎಸಿ, ತಹಶೀಲ್ದಾರ್, ವಿಎ, ಆರ್‌ಐ ನೇತೃತ್ವದಲ್ಲಿ 15 ದಿನ ARAI ಅಧಿಕಾರಿಗಳ ಜೊತೆ ಸರ್ವೇ ಮಾಡಿದ್ದೇವೆ. ಆಗ ಸ್ಕೆಚ್ ಇಟ್ಟುಕೊಂಡು ಕೂತಿದ್ದ ಅಧಿಕಾರಿಗಳು ಅವತ್ತೇ ರೆಕ್ಟ್ ಆ್ಯಂಗಲ್ ಬಗ್ಗೆ ಹೇಳಬೇಕಿತ್ತು. ನೆನ್ನೆ ಬಂದು ರೆಕ್ಟ್ ಆ್ಯಂಗಲ್ ಅನ್ನೋ ಡ್ರಾಮಾ ಶುರು ಮಾಡಿದ್ದಾರೆ” ಎಂದು ಕಿಡಿಕಾರಿದರು.

ಇದನ್ನೂ ಓದಿ: ಆಶಾ ಕಾರ್ಯಕರ್ತೆಯರಿಗೆ 2 ಸಾವಿರ ರೂ. ಹೆಚ್ಚುವರಿ ನೀಡುವ ಬಗ್ಗೆ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

“ದೊಡ್ಡ ಐಎಎಸ್ ಅಧಿಕಾರಿಗಳು ಇರುವ ಸಭೆಯಲ್ಲಿ ಒಬ್ಬ OSD, ಪಿಎ ಬಾಯಿಗೆ ಬಂದಾಗೆ ಪ್ರಶ್ನೆ ಕೇಳಿದ್ದಾರೆ. ನನ್ನ ಪಿಎಗಳು ಡಿಸಿ, ಎಸಿ ಅಥವಾ ಕುಮಾರಣ್ಣಗೆ ಪ್ರಶ್ನೆ ಕೇಳೋಕಾಗುತ್ತಾ? ಮಂಡ್ಯನ ಏನು ಅನ್ಕೊಂಡಿದ್ದೀರಾ? ಪಿಎ ಇಟ್ಟುಕೊಂಡು ಕೇಂದ್ರ ಮಂತ್ರಿ ಸ್ಥಾನ ರನ್ ಮಾಡ್ತಿದ್ದೀರಾ ಕುಮಾರಸ್ವಾಮಿ ಅವರೇ?” ಎಂದು ರವಿಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. “ಮಂಡ್ಯದಲ್ಲಿ ಉತ್ತರ ಕರ್ನಾಟಕದವರ ರೀತಿ ಯಾರ ಬಳಿಯೂ 100 ಎಕರೆ ಇಲ್ಲ. ರೈತರದ್ದು 20-40 ಕುಂಟೆ ಮಾತ್ರ ಇರೋದು. ಕಷ್ಟಪಟ್ಟು 100 ಎಕರೆ ಹುಡುಕಿದ್ದೇವೆ. ಬಸರಾಳು ಬಳಿ ಕೈಗಾರಿಕೆ ತರಲು ಇಷ್ಟವಿಲ್ಲ, ಎಲೆಚಾಕನಹಳ್ಳಿ ಬಳಿ ಇಂಟ್ರೆಸ್ಟ್ ತೋರಿಸುತ್ತಿದ್ದಾರೆ. ಅಲ್ಲಿ ಜೆಡಿಎಸ್ ಅವರ ಜಾಗ ಇದೆ, 1:4 ಪರಿಹಾರ ಹಣ ತಗೊಳ್ಳಕ್ಕಾ? ಜೆಡಿಎಸ್ ವಕ್ತಾರರು ರೈತರನ್ನು ಎತ್ತಿಕಟ್ಟಿ ಹೋರಾಟ ಮಾಡಿಸುತ್ತಿದ್ದಾರೆ. ಇವಾಗ ರೆಕ್ಟ್ ಆ್ಯಂಗಲ್ ಕೇಳಿದ್ದೀರಿ, ಸ್ವಾಗತ, ನಾವು ಓಡಿಹೋಗಲ್ಲ, ಕ್ಯಾಬಿನೆಟ್‌ನಲ್ಲಿ ಇಟ್ಟು ಜಾಗ ಕೊಡ್ತೇವೆ. 1 ತಿಂಗಳು ಅಂತ ಎಸ್ಕೇಪ್ ಆಗಬೇಡಿ, ಸುಮ್ಮನೆ ಗೂಬೆ ಕೂರಿಸುವುದು ಬಿಟ್ಟು ಕ್ಲಾರಿಟಿ ಕೊಡಿ” ಎಂದು ಸವಾಲು ಹಾಕಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
TV9 Web
TV9 Web

TV9 Kannada

Read More