ಗೌರವಧನ ಹೆಚ್ಚಳಕ್ಕೆ ಸರ್ಕಾರದ ಲಿಖಿತ ಒಪ್ಪಿಗೆ: ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರ ಧರಣಿ ಅಂತ್ಯ
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಅಂತ್ಯಗೊಂಡಿದೆ. ಸರ್ಕಾರದ ಒಪ್ಪಿಗೆಯಂತೆ ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನವನ್ನು 2000 ರೂ. ಹೆಚ್ಚಳ ಮಾಡಲಾಗಿದೆ. ಇದರೊಂದಿಗೆ ಗ್ರೂಪ್ ಬೇಸ್ಡ್ ಇನ್ಸೆಂಟಿವ್ ಸಹ ನೀಡಲು ಆದೇಶಿಸಲಾಗಿದೆ. ಈ ನಿರ್ಧಾರವನ್ನು ಆಶಾ ಕಾರ್ಯಕರ್ತೆಯರ ಸಂಘ ಸ್ವಾಗತಿಸಿದ್ದು, ತಮ್ಮ ಹೋರಾಟಕ್ಕೆ ಸಂದ ಮೊದಲ ಜಯವೆಂದು ಪರಿಗಣಿಸಿದೆ.

ಬೆಂಗಳೂರು, ನವೆಂಬರ್ 29: ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಕೊನೆಗೂ ಅಂತ್ಯಗೊಂಡಿದೆ. ಆಶಾ ಕಾರ್ಯಕರ್ತೆಯರ ಬೇಡಿಕೆಯಂತೆ ಮಾಸಿಕ ಗೌರವಧನವನ್ನು 2 ಸಾವಿರ ರೂಪಾಯಿ ಹೆಚ್ಚಿಸಲು ಸರ್ಕಾರ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಪ್ರತಿಭಟನೆಯನ್ನು ಹಿಂಪಡೆಯುವ ನಿರ್ಧಾರ ಕೈಗೊಂಡಿದೆ ಎಂದು ಸಂಘದ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ಘೋಷಿಸಿದ್ದಾರೆ. ಈ ಬೆಳವಣಿಗೆಯನ್ನು ಆಶಾ ಕಾರ್ಯಕರ್ತೆಯರು ತಮ್ಮ ಹೋರಾಟಕ್ಕೆ ಸಂದ ಮೊದಲ ಜಯ ಎಂದು ಪರಿಗಣಿಸಿದ್ದಾರೆ.
2 ಸಾವಿರ ರೂಪಾಯಿ ಗೌರವಧನ ಹೆಚ್ಚಳಕ್ಕೆ ಆದೇಶ ಆಶಾ ಕಾರ್ಯಕರ್ತೆಯರು ತಮ್ಮ ಮಾಸಿಕ ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸುತ್ತಿದ್ದರು. ಇದೀಗ ಅವರ ಪ್ರಮುಖ ಬೇಡಿಕೆಯಾದ 2 ಸಾವಿರ ರೂಪಾಯಿ ಗೌರವಧನ ಹೆಚ್ಚಳಕ್ಕೆ ಸರ್ಕಾರ ಲಿಖಿತ ರೂಪದಲ್ಲಿ ಭರವಸೆ ನೀಡಿದೆ. ಈ ಕುರಿತು ಮಾತನಾಡಿದ ಸಂಘದ ಕಾರ್ಯದರ್ಶಿ ನಾಗಲಕ್ಷ್ಮೀ, ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಿದೆ. ಇದು ಹೋರಾಟಕ್ಕೆ ಸಂದ ಮೊದಲ ಜಯ ಎಂದು ತಿಳಿಸಿದ್ದಾರೆ.
ಗ್ರೂಪ್ ಬೇಸ್ಡ್ ಇನ್ಸೆಂಟಿವ್‌ಗೂ ಆದೇಶ ಇದರ ಜತೆಗೆ ಆಶಾ ಕಾರ್ಯಕರ್ತೆಯರಿಗೆ ಗ್ರೂಪ್ ಬೇಸ್ಡ್ ಇನ್ಸೆಂಟಿವ್ ರೂಪದಲ್ಲಿ 1 ಸಾವಿರ ರೂಪಾಯಿ ನೀಡುವ ಬಗ್ಗೆಯೂ ಆರೋಗ್ಯ ಇಲಾಖೆ ಈಗಾಗಲೇ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ. ಈ ಮೊತ್ತದ ಜೊತೆಗೆ ಮುಂಬರುವ ಬಜೆಟ್‌ನಲ್ಲಿ ಮತ್ತೊಂದು 1 ಸಾವಿರ ರೂಪಾಯಿ ಹೆಚ್ಚಳ ಘೋಷಣೆಯಾದರೆ, ಆಶಾ ಕಾರ್ಯಕರ್ತೆಯರ ಉಳಿದ ಪ್ರಮುಖ ಬೇಡಿಕೆಗಳೂ ಈಡೇರಿದಂತಾಗಲಿದೆ ಎಂಬ ನಿರೀಕ್ಷೆಯಿದೆ.
ಇದನ್ನೂ ಓದಿ: ಆಶಾ ಕಾರ್ಯಕರ್ತೆಯರ ಪ್ರತಿಭಟನೆ: ಆರೋಗ್ಯ ಸಚಿವರ ಸಭೆ ವಿಫಲ, ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಕೆ
ಸಭೆ ಬಳಿಕ ಪ್ರತಿಭಟನೆ ಹಿಂಪಡೆಯುವ ನಿರ್ಧಾರ ಸರ್ಕಾರದ ಭರವಸೆಯ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಸಭೆ ನಡೆಯಿತು. ಸಭೆಯಲ್ಲಿ ಪ್ರತಿಭಟನೆ ಮುಂದುವರಿಸಬೇಕೇ ಅಥವಾ ಹಿಂಪಡೆಯಬೇಕೇ ಎಂಬ ಬಗ್ಗೆ ಚರ್ಚಿಸಲಾಯಿತು. ಸಭೆ ಮುಕ್ತಾಯವಾದ ಬಳಿಕ ಸಂಘದ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ವೇದಿಕೆಯಿಂದ ಪ್ರತಿಭಟನೆ ಅಂತ್ಯದ ನಿರ್ಧಾರವನ್ನು ಪ್ರಕಟಿಸಿದರು.
ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಮೊದಲ ಜಯ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ತಾಯಿ-ಮಗುವಿನ ಆರೋಗ್ಯ, ಲಸಿಕೆ, ಆರೋಗ್ಯ ಜಾಗೃತಿ ಸೇರಿದಂತೆ ಹಲವು ಕಾರ್ಯಗಳಲ್ಲಿ ಆಶಾ ಕಾರ್ಯಕರ್ತೆಯರು ಪ್ರಮುಖ ಪಾತ್ರ ವಹಿಸುತ್ತಾರೆ. ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿಯನ್ನೂ ನಿರ್ವಹಿಸುತ್ತಾರೆ. ಆದರೆ ತಮ್ಮ ಕೆಲಸಕ್ಕೆ ತಕ್ಕ ಗೌರವಧನ ಹಾಗೂ ಆರ್ಥಿಕ ಭದ್ರತೆ ಸಿಗುತ್ತಿಲ್ಲ ಎಂಬುದು ಅವರ ಪ್ರಮುಖ ಅಳಲು. ಹೀಗಾಗಿ ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:38 pm, Sun, 29 November 26




