ಟಿವಿ9 ಕನ್ನಡ ವರದಿ ಇಂಪ್ಯಾಕ್ಟ್: ಸೂಪರ್ಸ್ಪೆಷಾಲಿಟಿ ಆಸ್ಪತ್ರೆಯ ವಿದ್ಯುತ್ ಸಮಸ್ಯೆ 1-2ದಿನದಲ್ಲಿ ಬಗೆಹರಿಸಲು ಕ್ರಮ
TV9 Kannada report impact: ಬೆಂಗಳೂರು ಮೆಡಿಕಲ್ ಕಾಲೇಜ್ ಮತ್ತು ರಿಸರ್ವ್ ಇನ್ಸ್ಟಿಟ್ಯೂಟ್ನ ಪಿಎಂಎಸ್ಎಸ್ವೈ ಸೂಪರ್ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿದ್ಯುತ್ ಸಮಸ್ಯೆಯಿಂದ ಸರ್ಜರಿಗಳು ನಿಂತಿವೆ ಎನ್ನುವ ಸುದ್ದಿಯನ್ನು ಟಿವಿ9 ಕನ್ನಡ ಬಿತ್ತರಿಸಿತ್ತು. ಇದಕ್ಕೆ ಸ್ಪಂದಿಸಿರುವ ಬಿಎಂಸಿಆರ್ಐ, 1-2 ದಿನದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಸ್ಪಷ್ಟಪಡಿಸಿದೆ. ವೋಲ್ಟೇಜ್ ಏರುಪೇರಿನಿಂದಾಗಿ ಎಸಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದನ್ನು ಸರಿಪಡಿಸಲಾಗುವುದು ಎಂದು ಪತ್ರಿಕಾಹೇಳಿಕೆಯಲ್ಲಿ ತಿಳಿಸಿದೆ.
ಬೆಂಗಳೂರು, ನವೆಂಬರ್ 27: ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಾದ ಬಿಎಂಸಿಆರ್ಐನ ಪಿಎಂಎಸ್ಎಸ್ವೈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿದ್ಯುತ್ ಸಮಸ್ಯೆ ಇರುವ ಬಗ್ಗೆ ಟಿವಿ9 ಕನ್ನಡ ವರದಿ ಮಾಡಿತ್ತು. ಇದಕ್ಕೆ ಸ್ಪಂದಿಸಿರುವ ಬಿಎಂಸಿಆರ್ಐ, ಈ ಸಮಸ್ಯೆಯನ್ನು ಬಗೆಹರಿಸಲು ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದೆ. ಮುಂದಿನ ಒಂದೆರಡು ದಿನದಲ್ಲಿ ಸಮಸ್ಯೆ ಬಗೆಹರಿಸಲಾಗುವುದು. ಸೆಂಟ್ರಲ್ ಏರ್ ಕಂಡೀಶನಿಂಗ್ ಸಿಸ್ಟಂ ಪೂರ್ಣ ಕಾರ್ಯಾಚರಣೆಗೆ ಸಿದ್ಧವಾಗಲಿದೆ. ನಿಗದಿತ ವೇಳಾಪಟ್ಟಿ ಪ್ರಕಾರ ಎಲ್ಲಾ ಸರ್ಜರಿಗಳೂ ನಡೆಯಲು ಆರಂಭವಾಗುತ್ತವೆ ಎಂದು ಅದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಬಿಎಂಆರ್ಸಿಐ ಅಡಿಯಲ್ಲಿ ಆರು ಆಸ್ಪತ್ರೆಗಳು ಬರುತ್ತವೆ. ವಿಕ್ಟೋರಿಯಾ, ವಾಣಿ ವಿಲಾಸ್, ಮಿಂಟೋ, ಪಿಎಂಎಸ್ಎಸ್ವೈ ಸೂಪರ್ ಸ್ಪೆಷಾಲಿಟಿ, ಟ್ರೌಮಾ ಅಂಡ್ ಎಮರ್ಜೆನ್ಸಿ ಕೇರ್ ಸೆಂಟರ್ ಆಸ್ಪತ್ರೆಗಳನ್ನು ಇದು ನಿರ್ವಹಿಸುತ್ತದೆ. ಇದರಲ್ಲಿ 200 ಬೆಡ್ಗಳಿರುವ ಸೂಪರ್ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿದ್ಯುತ್ ಸಮಸ್ಯೆ ಇರುವುದು ಬೆಳಕಿಗೆ ಬಂದಿತ್ತು. ವೋಲ್ಟೇಜ್ ಫ್ಲಕ್ಚುಯೇಶನ್ನಿಂದ ಎಸಿ ಕಾರ್ಯನಿರ್ವಹಣೆಯಲ್ಲಿ ವೈಫಲ್ಯವಾಗಿತ್ತು. ಇದರಿಂದ ಶಸ್ತ್ರಚಿಕಿತ್ಸೆಗಳು ನಡೆಯುತ್ತಿರಲಿಲ್ಲ.
ಏರ್ ಕಂಡೀಶನ್ ಇಲ್ಲದಿದ್ದರೆ ಸರ್ಜರಿ ಮಾಡಲಾದ ದೇಹದ ಭಾಗಕ್ಕೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕೆ ತುರ್ತು ಶಸ್ತ್ರಚಿಕಿತ್ಸೆ ಬಿಟ್ಟು ಉಳಿದ ಸರ್ಜರಿಗಳನ್ನು ಮುಂದೂಡಲಾಗುತ್ತಿತ್ತು. ಎಮರ್ಜೆನ್ಸಿಯ ಸರ್ಜರಿಗಳನ್ನು ಫ್ಯಾನ್, ಕೂಲರ್ ಬಳಸಿ ಮಾಡಲಾಗುತ್ತಿತ್ತು. ಸರ್ಜರಿ ಅಗತ್ಯ ಇರುವ ಸಾಕಷ್ಟು ರೋಗಿಗಳು ಆತಂಕಗೊಂಡಿದ್ದರು. ಈ ಬಗ್ಗೆ ಟಿವಿ9 ಕನ್ನಡ ವರದಿ ಮಾಡಿತ್ತು.
ಇದನ್ನೂ ಓದಿ: ಬಿಎಂಸಿಆರ್‌ಐನಲ್ಲಿ ಕರೆಂಟ್ ಕಣ್ಣಾಮುಚ್ಚಾಲೆ, ಶಸ್ತ್ರಚಿಕಿತ್ಸೆ ಮುಂದಕ್ಕೆ!
ವರದಿಗೆ ಸ್ಪಂದಿಸಿದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವಿಶೇಷ ಅಧಿಕಾರಿ ಡಾ. ದಿವ್ಯಾ ಪ್ರಕಾಶ್ ಅವರು, ಈ ತಾಂತ್ರಿಕ ಸಮಸ್ಯೆಯನ್ನು ಒಂದೆರಡು ದಿನದಲ್ಲಿ ಬಗೆಹರಿಸಲಾಗುವುದು ಎಂದು ತಿಳಿಸಿದ್ದಾರೆ. ಬಿಎಂಸಿಆರ್ಐನ ಅಡಿಯಲ್ಲಿ ಬರುವ ಇತರ ಐದು ಆಸ್ಪತ್ರೆಗಳಲ್ಲಿ ಈ ಸಮಸ್ಯೆ ಇಲ್ಲ ಎನ್ನಲಾಗಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ