ಬಿಎಂಟಿಸಿ ಬಸ್ ಚಾಲಕ ಮತ್ತು ನಿರ್ವಾಹಕರಿಗಿಲ್ಲ ರಕ್ಷಣೆ: 2 ತಿಂಗಳಲ್ಲಿ 4 ಹಲ್ಲೆ ಪ್ರಕರಣ ಬೆಳಕಿಗೆ
ಬೆಂಗಳೂರು ಮೆಟ್ರೋಪಾಲಿಟನ್ ಸಾರಿಗೆ ಸಂಸ್ಥೆ (BMTC) ಬೆಂಗಳೂರಿಗೆ ಸಾರ್ವಜನಿಕ ಬಸ್ ಸಾರಿಗೆ ಪೂರೈಕೆದಾರರಾಗಿದ್ದು, ನಗರ, ಉಪನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸೇವೆ ಸಲ್ಲಿಸುತ್ತಿದೆ. ಆದ್ರೆ, ಬಿಎಂಟಿಸಿ ಬಸ್ ಚಾಲಕರು ಹಾಗೂ ಕಂಡಕ್ಟರಿಗೆ ರಕ್ಷಣೆ ಇಲ್ಲದಂತಾಗಿದೆ. ರಸ್ತೆಗಳಲ್ಲಿ ನಿರ್ವಹಕ ಮತ್ತು ಚಾಲಕರ ಮೇಲೆ ದಿನದಿಂದ ದಿನಕ್ಕೆ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಎರಡೇ ತಿಂಗಳಲ್ಲಿ ನಾಲ್ಕು ಪ್ರಕರಣಗಳು ಸಂಭವಿಸಿವೆ.
ಬೆಂಗಳೂರು, ಅಕ್ಟೋಬರ್ 27: ಬೆಂಗಳೂರು ಮಹಾನಗರ ಸಾರಿಗೆ (BMTC) ರಾಜಧಾನಿ ಜನರ ಜೀವನಾಡಿಯಾಗಿದೆ. ಬಿಎಂಟಿಸಿ ಬಸ್ಗಳಲ್ಲಿ ನಿತ್ಯ ಲಕ್ಷಾಂತರ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಈ ಬಿಎಂಟಿಸಿ ಬಸ್ನ ಚಾಲಕ ಮತ್ತು ನಿರ್ವಾಹಕರ ಜೀವಕ್ಕೆ ರಕ್ಷಣೆ ನೀಡುವವರು ಯಾರು ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಹೌದು, ಬಿಎಂಟಿಸಿ ಬಸ್ನ ಚಾಲಕ ಮತ್ತು ನಿರ್ವಾಹಕರ ಮೇಲೆ ಹಲ್ಲೆ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ.
ಎರಡೇ ತಿಂಗಳಲ್ಲಿ ನಾಲ್ಕು ಘಟನೆಗಳು ನಡೆದಿದ್ದು, ಆಕ್ಟೋಬರ್ ತಿಂಗಳಲ್ಲೇ ಮೂರು ಘಟನೆಗಳು ನಡೆದಿವೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ ಎರಡೂ ತಿಂಗಳಲ್ಲಿ ಚಾಲಕ ಮತ್ತು ನಿರ್ವಾಹಕರ ಮೇಲೆ ಹಲ್ಲೆ ನಡೆದಿದೆ. ಸೆಪ್ಟೆಂಬರ್ 8 ರಂದು ಬಿಎಂಟಿಸಿ ವೋಲ್ವೋ ಬಸ್ವೊಂದು ಅತ್ತಿಬೆಲೆಯಿಂದ ಮೆಜೆಸ್ಟಿಕ್ ಬರುತ್ತಿತ್ತು. ಬಸ್ ಹೊಸ ರೋಡ್ ನಿಲ್ದಾಣಕ್ಕೆ ಬರುತ್ತಿದ್ದಂತೆ, ಓರ್ವ ನಿರ್ವಾಹಕನಿಗೆ ಸ್ಕ್ರೂ ಡ್ರೈವರ್ನಿಂದ ಚುಚ್ಚಲು ಮುಂದಾಗಿದ್ದನು.
ಇದಾದ ಬಳಿಕ, ಆಕ್ಟೋಬರ್ 1 ವೈಟ್ಫೀಲ್ಡ್ ಬಳಿಯ ಐಟಿಪಿಎಲ್ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ವೋಲ್ವೋ ಬಸ್ ನಿರ್ವಾಹಕ ಯೋಗೇಶ್ ಎಂಬುವರಿಗೆ ಹರ್ಷ ಸಿನ್ಹಾ ಎಂಬ ಯುವಕ ಎರಡ್ಮೂರು ಬಾರಿ ಚಾಕುವಿನಿಂದ ಚುಚ್ಚಿ ಕೊಲ್ಲಲು ಯತ್ನಿಸಿದ್ದನು.
ಇದನ್ನೂ ಓದಿ: ಕಂಡಕ್ಟರ್, ಡ್ರೈವರ್ಗಳ ರಕ್ಷಣೆಗಾಗಿ ಗನ್ ಇಟ್ಟುಕೊಳ್ಳಲು ಅನುಮತಿ ನೀಡುವಂತೆ ಬಿಎಂಟಿಸಿ ಎಂಡಿಗೆ ಪತ್ರ
ಈಗ, ಕಳೆದ 18ರ ಶುಕ್ರವಾರ ಮಧ್ಯಾಹ್ನ 2:30ರ ಸುಮಾರಿಗೆ ಟಿನ್ ಫ್ಯಾಕ್ಟರಿ ಬಸ್ ನಿಲ್ದಾಣದಲ್ಲಿ ನಿರ್ವಾಹಕ ಸಂಗಪ್ಪ ಊಟ ಮಾಡುತ್ತಿರುವ ವೇಳೆ, ಆರೋಪಿ ಹೇಮಂತ್ ದೊಡ್ಡದಾದ ಕಲ್ಲಿನಿಂದ ಅವರ ತಲೆಗೆ ಹೊಡೆದು ಪರಾರಿಯಾಗಿದ್ದನು. ನಂತರ ಪ್ರಯಾಣಿಕರು ಆರೋಪಿಯನ್ನು ಹಿಡಿದು ಪೋಲಿಸರಿಗೆ ಒಪ್ಪಿಸಿದ್ದಾರೆ. ವಶಕ್ಕೆ ನೀಡಿದ್ದಾರೆ.
ಇನ್ನು, ಶನಿವಾರ (ಅ.26) ರಂದು ಸಂಜೆ 5:25ಕ್ಕೆ ಯಲಹಂಕದಿಂದ ಶಿವಾಜಿನಗರ ಹೋಗುತ್ತಿದ್ದ ಬಸ್ ಚಾಲಕ ಟ್ಯಾನರಿ ರೋಡಿನ ಕೆನರಾ ಬ್ಯಾಂಕ್ ಬಳಿ ಹಾರನ್ ಮಾಡಿ ಸೈಡಿಗೆ ಹೋಗುವಂತೆ ಹೇಳಿದ್ದಾನೆ. ಇದರಿಂದ ಆಕ್ರೋಶಗೊಂಡ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಬಸ್ ಹತ್ತಿ ಚಾಲಕನಿಗೆ ತಳಿಸಿದ್ದಾರೆ. ಈ ವೇಳೆ ಜಗಳ ಬಿಡಿಸಲು ಹೋಗಿದ್ದಕ್ಕೆ ನಿರ್ವಾಹಕನಿಗೂ ಮನಸ್ಸೋ ಇಚ್ಚೆ ತಳಿಸಿದ್ದಾರೆ. ಕಿಡಿಗೇಡಿಗಳು ಕುಡಿದ ಮತ್ತಿನಲ್ಲಿ ಫಿಲ್ಮಿ ಸ್ಟೈಲ್ನಲ್ಲಿ ಮುಖಕ್ಕೆ ಗುದ್ದಿದ್ದಾರೆ. ಸದ್ಯ ಕೆಜಿ ಹಳ್ಳಿ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:17 am, Sun, 27 October 24