
ಬೆಂಗಳೂರು, ಮೇ 29: ನೌಕರರ ವೇತನ ಪರಿಷ್ಕರಣೆ ಹಾಗೂ ಬಾಕಿ ಪಾವತಿಸಲು ಹಣವಿಲ್ಲದೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬಿಎಂಟಿಸಿ (BMTC), ಸಾಲದ ಸುಳಿಯಿಂದ ಹೊರಬರಲು ಇದೀಗ ಹೊಸ ಆದಾಯದ ಮೂಲ ಹುಡುಕಿದೆ. ಈಗಾಗಲೇ ಬಸ್‌ಗಳ ಮೇಲೆ ಜಾಹೀರಾತು ಪ್ರದರ್ಶಿಸುತ್ತಿರುವ ನಿಗಮ, ಈಗ ಪ್ರಯಾಣಿಕರಿಗೆ ನೀಡುವ ಟಿಕೆಟ್‌ಗಳ ಮೇಲೂ ಜಾಹೀರಾತು ಮುದ್ರಿಸಲು ಟೆಂಡರ್ ಆಹ್ವಾನಿಸಿದೆ.
ಪ್ರತಿದಿನ ಸುಮಾರು 6,275 ಬಸ್‌ಗಳಲ್ಲಿ 45 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಿದ್ದು, ಈ ಬೃಹತ್ ನೆಟ್‌ವರ್ಕ್ ಬಳಸಿಕೊಂಡು ಒಂದು ವರ್ಷದ ಅವಧಿಗೆ ಟಿಕೆಟ್ ಜಾಹೀರಾತು ನೀಡಲು ಅವಕಾಶ ಕಲ್ಪಿಸಲಾಗಿದೆ. ಬಿಎಂಟಿಸಿ ಸದ್ಯ ವಾರ್ಷಿಕವಾಗಿ ಜಾಹೀರಾತುಗಳಿಂದ 57.48 ಕೋಟಿ ರೂ. ಆದಾಯ ಗಳಿಸುತ್ತಿದ್ದು, ಈ ಹೊಸ ಯೋಜನೆಯಿಂದ ಆದಾಯ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ಆದಾಯ ಕ್ರೋಡೀಕರಣಕ್ಕೆ ಇದು ಒಳ್ಳೆಯ ನಿರ್ಧಾರ. ಆದರೆ ಟಿಕೆಟ್‌ಗಳ ಮೇಲೆ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಜಾಹೀರಾತುಗಳಿರಲಿ. ಗುಟ್ಕಾ, ಪಾನ್ ಮಸಾಲಾ, ಮದ್ಯ ಅಥವಾ ಯಾವುದೇ ಅಶ್ಲೀಲ ಜಾಹೀರಾತುಗಳನ್ನು ಹಾಕಬೇಡಿ ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
ಸಾರ್ವಜನಿಕರ ಈ ಬೇಡಿಕೆಗೆ ಪೂರಕವಾಗಿ ತಂಬಾಕು, ಮಾದಕ ದ್ರವ್ಯ ಹಾಗೂ ಅಶ್ಲೀಲ ವಸ್ತುಗಳ ಜಾಹೀರಾತುಗಳಿಗೆ ನಿಗಮ ಕಡ್ಡಾಯ ನಿಷೇಧ ಹೇರಿದೆ. ಒಟ್ಟಿನಲ್ಲಿ, ನೌಕರರ ಬೇಡಿಕೆ ಈಡೇರಿಸಲು ಪರದಾಡುತ್ತಿರುವ ಬಿಎಂಟಿಸಿಗೆ ಈ ಟಿಕೆಟ್ ಜಾಹೀರಾತು ತಂತ್ರ ಕೈಹಿಡಿಯಲಿದೆಯೇ ಎಂದು ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:06 am, Fri, 29 May 26