ಬೊಮ್ಮಸಂದ್ರದಿಂದ ಅತ್ತಿಬೆಲೆಗೆ ಮೆಟ್ರೋ ವಿಸ್ತರಣೆ: ಡಿಪಿಆರ್​​ಗೆ ರಾಜ್ಯ ಸರ್ಕಾರ ಸೂಚನೆ

ಬೊಮ್ಮಸಂದ್ರದಿಂದ ಅತ್ತಿಬೆಲೆಯವರೆಗೆ ನಮ್ಮ ಮೆಟ್ರೋ ಹಳದಿ ಮಾರ್ಗ ವಿಸ್ತರಿಸಲು ಡಿಪಿಆರ್ ಸಿದ್ಧಪಡಿಸುವಂತೆ ರಾಜ್ಯ ಸರ್ಕಾರ ಬಿಎಂಆರ್​ಸಿಎಲ್​ಗೆ ಸೂಚನೆ ನೀಡಿದೆ. ಸುಮಾರು 10.5 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ಒಂಬತ್ತು ನಿಲ್ದಾಣಗಳ ನಿರ್ಮಾಣದ ಪ್ರಸ್ತಾಪವಿದೆ. ಮತ್ತೊಂದೆಡೆ, ಹೊಸೂರಿನಿಂದ ಬೊಮ್ಮಸಂದ್ರದವರೆಗೆ 23 ಕಿ.ಮೀ. ಉದ್ದದ ಅಂತಾರಾಜ್ಯ ಮೆಟ್ರೋ ಮಾರ್ಗಕ್ಕೆ ತಮಿಳುನಾಡು ಯತ್ನಿಸುತ್ತಿದೆ.

ಬೊಮ್ಮಸಂದ್ರದಿಂದ ಅತ್ತಿಬೆಲೆಗೆ ಮೆಟ್ರೋ ವಿಸ್ತರಣೆ: ಡಿಪಿಆರ್​​ಗೆ ರಾಜ್ಯ ಸರ್ಕಾರ ಸೂಚನೆ
ನಮ್ಮ ಮೆಟ್ರೋ ಹಳದಿ ಮಾರ್ಗದ ರೈಲು (ಸಾಂದರ್ಭಿಕ ಚಿತ್ರ)
Image Credit source: BMRCL
Edited By:

Updated on: Oct 16, 2026 | 7:47 AM

ಮುಖ್ಯಾಂಶಗಳು

  • ಬೊಮ್ಮಸಂದ್ರದಿಂದ ಅತ್ತಿಬೆಲೆಗೆ ಮೆಟ್ರೋ ವಿಸ್ತರಣೆ ಯೋಜನೆ
  • ಡಿಪಿಆರ್ ಸಿದ್ಧಪಡಿಸಲು ಬಿಎಂಆರ್​ಸಿಎಲ್​ಗೆ ರಾಜ್ಯ ಸರ್ಕಾರದ ಸೂಚನೆ
  • ಅತ್ತಿಬೆಲೆ ಮಾರ್ಗದಲ್ಲಿ ಒಂಬತ್ತು ನಿಲ್ದಾಣಗಳ ಪ್ರಸ್ತಾಪ

ಬೆಂಗಳೂರು, ಅಕ್ಟೋಬರ್ 16: ನಮ್ಮ ಮೆಟ್ರೋ ಹಳದಿ ಮಾರ್ಗವನ್ನು (ಯೆಲ್ಲೋ ಲೈನ್) ಬೊಮ್ಮಸಂದ್ರದಿಂದ ಅತ್ತಿಬೆಲೆಯವರೆಗೆ ವಿಸ್ತರಿಸುವ ಯೋಜನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಮಾರ್ಗದ ಫಿಸಿಬಿಲಿಟಿ ಸ್ಟಡಿ ಪೂರ್ಣಗೊಂಡಿದ್ದು, ವಿಸ್ತರಣಾ ಯೋಜನೆಗೆ ವಿವರವಾದ ಯೋಜನಾ ವರದಿ (DPR) ಸಿದ್ಧಪಡಿಸುವಂತೆ ರಾಜ್ಯ ಸರ್ಕಾರ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತಕ್ಕೆ (BMRCL) ಸೂಚನೆ ನೀಡಿದೆ. ಮತ್ತೊಂದೆಡೆ, ಹೊಸೂರಿನಿಂದ ಬೊಮ್ಮಸಂದ್ರದವರೆಗೆ ಮೆಟ್ರೋ ಮಾರ್ಗ ನಿರ್ಮಿಸುವ ಯೋಜನೆಗೆ ಅನುಮೋದನೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಇತ್ತೀಚೆಗೆ ಮನವಿ ಮಾಡಿದ್ದಾರೆ.

ಅತ್ತಿಬೆಲೆ ಮೆಟ್ರೋ ಮಾರ್ಗಕ್ಕೆ ಡಿಪಿಆರ್ ಸಿದ್ಧಪಡಿಸಲು ಸೂಚನೆ

ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋ ಹಳದಿ ಮಾರ್ಗದ ಮುಂದುವರಿದ ಭಾಗವಾಗಿ ಬೊಮ್ಮಸಂದ್ರದಿಂದ ಅತ್ತಿಬೆಲೆಯವರೆಗೆ ಮೆಟ್ರೋ ವಿಸ್ತರಿಸುವ ಯೋಜನೆ ರೂಪಿಸಲಾಗಿದೆ. ಈ ಸಂಬಂಧ ಬಿಎಂಆರ್​ಸಿಎಲ್ ಈಗಾಗಲೇ ಫಿಸಿಬಿಲಿಟಿ ಸ್ಟಡಿ ನಡೆಸಿತ್ತು. ಆರಂಭದಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾಗುವ ಸಾಧ್ಯತೆಯ ಬಗ್ಗೆ ನಿಗಮವು ರಾಜ್ಯ ಸರ್ಕಾರಕ್ಕೆ ವರದಿ ನೀಡಿತ್ತು. ಇದೀಗ ರಾಜ್ಯ ಸರ್ಕಾರವು ಯೋಜನೆಯ ಮುಂದಿನ ಹಂತವಾಗಿ ಡಿಪಿಆರ್ ಸಿದ್ಧಪಡಿಸಲು ಸೂಚನೆ ನೀಡಿದೆ.

ಬೊಮ್ಮಸಂದ್ರದಿಂದ ಅತ್ತಿಬೆಲೆಯವರೆಗೆ ಸುಮಾರು 10.5 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ನಿರ್ಮಿಸುವ ಯೋಜನೆಯಿದೆ. ಈ ಮಾರ್ಗದಲ್ಲಿ ಒಂಬತ್ತು ನಿಲ್ದಾಣಗಳನ್ನು ನಿರ್ಮಿಸಲು ಪ್ರಸ್ತಾಪಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 44ರ ಹೊಸೂರು ರಸ್ತೆಯ ಬಲಭಾಗದಲ್ಲಿ ಮೆಟ್ರೋ ಮಾರ್ಗವನ್ನು ವಿಸ್ತರಿಸುವ ಯೋಜನೆ ರೂಪಿಸಲಾಗಿದೆ.

ಹೊಸೂರು–ಬೊಮ್ಮಸಂದ್ರ ಮೆಟ್ರೋಗಾಗಿ ಪ್ರಧಾನಿ ಬಳಿ ವಿಜಯ್ ಮನವಿ

ಇತ್ತ, ಅಕ್ಟೋಬರ್ 11ರಂದು ಚೆನ್ನೈ ಮೆಟ್ರೋ ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಪ್ರಧಾನಿ ನರೇಂದ್ರ ಮೋದಿ ಬಳಿ ಹೊಸೂರು–ಬೊಮ್ಮಸಂದ್ರ ಅಂತಾರಾಜ್ಯ ಮೆಟ್ರೋ ಮಾರ್ಗಕ್ಕೆ ಅನುಮೋದನೆ ನೀಡುವಂತೆ ಮನವಿ ಮಾಡಿದ್ದಾರೆ. ಎರಡೂ ರಾಜ್ಯಗಳ ಹಿತದೃಷ್ಟಿಯಿಂದ ಈ ಯೋಜನೆಗೆ ಅನುಮತಿ ನೀಡಬೇಕು ಎಂದು ಅವರು ಕೋರಿದ್ದಾರೆ.

ತಮಿಳುನಾಡು ಬಜೆಟ್‌ನಲ್ಲಿ ಹೊಸೂರಿನಿಂದ ಬೊಮ್ಮಸಂದ್ರದವರೆಗೆ ಸುಮಾರು 23 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ನಿರ್ಮಿಸುವ ಯೋಜನೆಯನ್ನು ಘೋಷಿಸಲಾಗಿದೆ. ಈ ಮಾರ್ಗದಲ್ಲಿ 12 ನಿಲ್ದಾಣಗಳನ್ನು ನಿರ್ಮಿಸುವ ಪ್ರಸ್ತಾಪವಿದೆ. ಯೋಜನೆಗೆ ಅನುಮೋದನೆ ದೊರೆತು, ಕಾಮಗಾರಿ ಪೂರ್ಣಗೊಂಡು ಕಾರ್ಯಾಚರಣೆ ಆರಂಭವಾದರೆ ದಕ್ಷಿಣ ಭಾರತದಲ್ಲಿ ಮೊದಲ ಅಂತಾರಾಜ್ಯ ಮೆಟ್ರೋ ಸಂಪರ್ಕವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಅತ್ತಿಬೆಲೆ ಮಾರ್ಗದಲ್ಲಿ ಒಂಬತ್ತು ನಿಲ್ದಾಣಗಳ ಪ್ರಸ್ತಾಪ

ಬೊಮ್ಮಸಂದ್ರದಿಂದ ಅತ್ತಿಬೆಲೆಯವರೆಗೆ ವಿಸ್ತರಿಸಲಿರುವ ಮೆಟ್ರೋ ಮಾರ್ಗದ ಮೊದಲ ನಿಲ್ದಾಣವನ್ನು ನಾರಾಯಣ ಹೃದಯಾಲಯದ ಸಮೀಪ ನಿರ್ಮಿಸುವ ಪ್ರಸ್ತಾಪವಿದೆ. ನಂತರ ಚೀನಾಪುರ ಸರ್ಕಲ್, ಹಳೆ ಚಂದಾಪುರ, ತಿರುಮಗೊಂಡನಹಳ್ಳಿ, ಬಾಳಗಾನಹಳ್ಳಿ, ಅತ್ತಿಬೆಲೆ ಕೈಗಾರಿಕಾ ಪ್ರದೇಶ, ಯಾದವನಹಳ್ಳಿ, ಅತ್ತಿಬೆಲೆ ಮತ್ತು ಅತ್ತಿಬೆಲೆ ಟರ್ಮಿನಲ್‌ನಲ್ಲಿ ನಿಲ್ದಾಣಗಳನ್ನು ನಿರ್ಮಿಸುವ ಯೋಜನೆ ಇದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪಿಂಕ್ ಲೈನ್​ನಲ್ಲಿ 36 ಸುರಕ್ಷತಾ, ತಾಂತ್ರಿಕ ನ್ಯೂನತೆ: ವರದಿ ಕೇಳಿದ ಸುರಕ್ಷತಾ ಆಯುಕ್ತರು

ಒಂದೆಡೆ ಕರ್ನಾಟಕ ಸರ್ಕಾರ ಬೊಮ್ಮಸಂದ್ರ–ಅತ್ತಿಬೆಲೆ ಮೆಟ್ರೋ ವಿಸ್ತರಣೆಗೆ ಡಿಪಿಆರ್ ಸಿದ್ಧಪಡಿಸಲು ಸೂಚನೆ ನೀಡಿದ್ದರೆ, ಮತ್ತೊಂದೆಡೆ ತಮಿಳುನಾಡು ಸರ್ಕಾರ ಹೊಸೂರು–ಬೊಮ್ಮಸಂದ್ರ ಮೆಟ್ರೋ ಸಂಪರ್ಕಕ್ಕೆ ಕೇಂದ್ರದ ಅನುಮೋದನೆ ಪಡೆಯಲು ಪ್ರಯತ್ನಿಸುತ್ತಿದೆ. ಈ ಎರಡೂ ಯೋಜನೆಗಳು ಮುಂದುವರಿದರೆ ಕರ್ನಾಟಕ ಮತ್ತು ತಮಿಳುನಾಡಿನ ನಡುವಿನ ಮೆಟ್ರೋ ಸಂಪರ್ಕಕ್ಕೆ ಹೊಸ ಅವಕಾಶ ಸೃಷ್ಟಿಯಾಗಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Loading...
Unable to load recommendations.
Follow Us