ನಮ್ಮ ಮೆಟ್ರೋ ಪಿಂಕ್ ಲೈನ್ನಲ್ಲಿ 36 ಸುರಕ್ಷತಾ, ತಾಂತ್ರಿಕ ನ್ಯೂನತೆ: ವರದಿ ಕೇಳಿದ ಸುರಕ್ಷತಾ ಆಯುಕ್ತರು
ನಮ್ಮ ಮೆಟ್ರೋದ ಪಿಂಕ್ ಲೈನ್ನ ಕಾಳೇನ ಅಗ್ರಹಾರ–ತಾವರೆಕೆರೆ ಮಾರ್ಗದಲ್ಲಿ ಸುರಕ್ಷತಾ ಪರಿಶೀಲನೆ ವೇಳೆ 36 ಸುರಕ್ಷತಾ ಮತ್ತು ತಾಂತ್ರಿಕ ನ್ಯೂನತೆಗಳು ಪತ್ತೆಯಾಗಿವೆ. ಅಗ್ನಿ ಸುರಕ್ಷತೆ, ವಿದ್ಯುತ್ ಅರ್ಥಿಂಗ್, ರೈಲು ಪರೀಕ್ಷೆ ಹಾಗೂ ತುರ್ತು ನಿರ್ಗಮನ ವ್ಯವಸ್ಥೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸರಿಪಡಿಸಿ ವರದಿ ಸಲ್ಲಿಸುವಂತೆ ಬಿಎಂಆರ್ಸಿಎಲ್ಗೆ ಸೂಚಿಸಲಾಗಿದೆ.

ಮುಖ್ಯಾಂಶಗಳು
- ಪಿಂಕ್ ಲೈನ್ನಲ್ಲಿ ಒಟ್ಟು 36 ನ್ಯೂನತೆ ಪತ್ತೆ
- ಅಗ್ನಿ ಸುರಕ್ಷತೆ ಮತ್ತು ವಿದ್ಯುತ್ ವ್ಯವಸ್ಥೆಯಲ್ಲಿ ದೋಷ
- ಅನುಮತಿಗೂ ಮುನ್ನ ಸಿಎಂಆರ್ಎಸ್ಗೆ ವರದಿ ಸಲ್ಲಿಕೆ ಅಗತ್ಯ
ಬೆಂಗಳೂರು, ಅಕ್ಟೋಬರ್ 15: ನಮ್ಮ ಮೆಟ್ರೋದ ಬಹುನಿರೀಕ್ಷಿತ ಪಿಂಕ್ ಲೈನ್ನ ಕಾಳೇನ ಅಗ್ರಹಾರದಿಂದ ತಾವರೆಕೆರೆ ನಡುವಿನ ಮಾರ್ಗದಲ್ಲಿ 36 ಸುರಕ್ಷತಾ ಮತ್ತು ತಾಂತ್ರಿಕ ನ್ಯೂನತೆಗಳು ಪತ್ತೆಯಾಗಿವೆ. ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ (CMRS) ಪರಿಶೀಲನೆಯಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆಯ ಕೊರತೆ, ಲಿಫ್ಟ್ಗಳ ಕಾರ್ಯನಿರ್ವಹಣೆಯಲ್ಲಿನ ದೋಷ, ವಿದ್ಯುತ್ ಅರ್ಥಿಂಗ್ ಸಂಪರ್ಕಗಳ ಹಾನಿ ಸೇರಿದಂತೆ ಹಲವು ಸಮಸ್ಯೆಗಳನ್ನು ಗುರುತಿಸಲಾಗಿದೆ. ಈ ನ್ಯೂನತೆಗಳನ್ನು ಒಂದು ಅಥವಾ ಎರಡು ದಿನಗಳಲ್ಲಿ ಸರಿಪಡಿಸಿ, ಪರಿಶೀಲನಾ ವರದಿಗೆ ಉತ್ತರ ನೀಡುವುದಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ವಿಶ್ವಾಸ ವ್ಯಕ್ತಪಡಿಸಿದೆ.
ಅಕ್ಟೋಬರ್ 6ರಿಂದ 8ರವರೆಗೆ ಪಿಂಕ್ ಲೈನ್ನ ಈ ಮಾರ್ಗದಲ್ಲಿ ಸುರಕ್ಷತಾ ಪರಿಶೀಲನೆ ನಡೆಸಲಾಗಿತ್ತು. ಅಕ್ಟೋಬರ್ 9ರಂದು ಹೊರಡಿಸಿದ ಪತ್ರದಲ್ಲಿ ದಕ್ಷಿಣ ವೃತ್ತದ ಸಿಎಂಆರ್ಎಸ್, ಪ್ರಯಾಣಿಕರ ಸಂಚಾರಕ್ಕೆ ಮಾರ್ಗವನ್ನು ತೆರೆಯಲು ಅನುಮತಿ ನೀಡುವ ಮೊದಲು ನ್ಯೂನತೆಗಳ ಬಗ್ಗೆ ಕೈಗೊಂಡ ಕ್ರಮಗಳ ವರದಿ ಹಾಗೂ ಹೆಚ್ಚುವರಿ ತಾಂತ್ರಿಕ ದಾಖಲೆಗಳನ್ನು ಸಲ್ಲಿಸುವಂತೆ ಬಿಎಂಆರ್ಸಿಎಲ್ಗೆ ಸೂಚಿಸಿದೆ.
ಐದು ಪುಟಗಳ ಪರಿಶೀಲನಾ ವರದಿಯಲ್ಲಿ ಸಿವಿಲ್ ಕಾಮಗಾರಿ, ವಿದ್ಯುತ್ ಮತ್ತು ಟ್ರಾಕ್ಷನ್ ವ್ಯವಸ್ಥೆ, ಸಿಗ್ನಲಿಂಗ್ ಮತ್ತು ದೂರಸಂಪರ್ಕ, ರೈಲು ಬೋಗಿಗಳು ಹಾಗೂ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಒಟ್ಟು 36 ಅಂಶಗಳನ್ನು ಉಲ್ಲೇಖಿಸಲಾಗಿದೆ.
ಅಗ್ನಿ ಸುರಕ್ಷತೆ, ವಿದ್ಯುತ್ ವ್ಯವಸ್ಥೆಯಲ್ಲಿ ದೋಷ
ಮೆಟ್ರೋ ನಿಲ್ದಾಣಗಳಲ್ಲಿ ತುರ್ತು ಸಂದರ್ಭದಲ್ಲಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರಗೆ ಕರೆದೊಯ್ಯುವ ವ್ಯವಸ್ಥೆ ಹಾಗೂ ಅಗತ್ಯ ಸೂಚನಾ ಫಲಕಗಳು ಪೂರ್ಣಗೊಂಡಿಲ್ಲ ಎಂದು ಪರಿಶೀಲನೆಯಲ್ಲಿ ಗಮನಿಸಲಾಗಿದೆ. ರೈಲುಗಳ ಪರೀಕ್ಷೆಗೆ ಸಂಬಂಧಿಸಿದ ಕೆಲವು ಅಂಶಗಳ ಕುರಿತು ಮೂಲ ಉಪಕರಣ ತಯಾರಕರು ಮತ್ತು ಬಿಎಂಆರ್ಸಿಎಲ್ ಜಂಟಿಯಾಗಿ ವಿವರವಾದ ವರದಿ ಸಲ್ಲಿಸಬೇಕಿದೆ.
ವಯಡಕ್ಟ್ನಲ್ಲಿರುವ ವಿದ್ಯುತ್ ಅರ್ಥಿಂಗ್ ಸಂಪರ್ಕಗಳಲ್ಲಿ ದೋಷಗಳು, ಹಾನಿಗೊಳಗಾದ ಅರ್ಥ್ ಕಂಡಕ್ಟರ್ಗಳು, ಹಳಿಗಳ ಮೇಲ್ಭಾಗದಲ್ಲಿ ಸವೆತದ ಗುರುತುಗಳು ಮತ್ತು ತುಕ್ಕು ಕಾಣಿಸಿಕೊಂಡಿರುವುದನ್ನೂ ವರದಿ ಗುರುತಿಸಿದೆ. ವಾಣಿಜ್ಯ ಸಂಚಾರ ಆರಂಭಿಸಲು ರೈಲುಗಳು ಸೂಕ್ತವಾಗಿವೆ ಎಂಬುದನ್ನು ದೃಢಪಡಿಸುವ ದಾಖಲೆಗಳಲ್ಲಿಯೂ ಕೆಲವು ಕೊರತೆಗಳಿವೆ ಎಂದು ತಿಳಿಸಿದೆ.
ಒಂದೆರಡು ದಿನಗಳಲ್ಲಿ ಉತ್ತರ ನೀಡಲು ಬಿಎಂಆರ್ಸಿಎಲ್ ಸಿದ್ಧತೆ
ಸಿಎಂಆರ್ಎಸ್ ಎತ್ತಿರುವ ಪ್ರಶ್ನೆಗಳಿಗೆ ಒಂದು ಅಥವಾ ಎರಡು ದಿನಗಳಲ್ಲಿ ಉತ್ತರ ನೀಡುವುದಾಗಿ ಬಿಎಂಆರ್ಸಿಎಲ್ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ನ್ಯೂನತೆಗಳನ್ನು ಸರಿಪಡಿಸುವ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಎಲಿವೇಟೆಡ್ ಪಿಂಕ್ ಲೈನ್ನಲ್ಲಿ ವಾಣಿಜ್ಯ ಸಂಚಾರ ಆರಂಭಿಸುವ ಉದ್ಘಾಟನಾ ದಿನಾಂಕವನ್ನು ನಿಗದಿಪಡಿಸುವಂತೆ ರಾಜ್ಯ ಸರ್ಕಾರವನ್ನು ಮೆಟ್ರೋ ನಿಗಮ ಕೋರಿದೆ.
ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಮತ್ತೊಂದು ಜೀವಂತ ಹೃದಯ ಸಾಗಣೆ: ಜೀವ ಉಳಿಸಲು ನೆರವಾಯ್ತು ಬಿಎಂಆರ್ಸಿಎಲ್
ಮೂಲಗಳ ಪ್ರಕಾರ, ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯ ಸರ್ಕಾರ ಆಹ್ವಾನ ನೀಡಿದೆ. ಆದರೆ, ಸಿಎಂಎಸ್ಆರ್ನಿಂದ ಅಗತ್ಯ ಅನುಮತಿ ದೊರೆಯುವ ಮೊದಲು ಈ ಮಾರ್ಗದಲ್ಲಿ ಪ್ರಯಾಣಿಕರ ಸಂಚಾರ ಆರಂಭಿಸುವಂತಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




