ಜಾತಿ ಸಮೀಕ್ಷೆ: ಸರ್ವೆ ಮಾಡದೆ ಮನೆಗಳಿಗೆ ಸ್ಟಿಕ್ಕರ್​ ಅಂಟಿಸಿದ ಅಧಿಕಾರಿಗಳು!

ಕರ್ನಾಟಕದಾದ್ಯಂತ ಪರಿಶಿಷ್ಟ ಜಾತಿಗಳ ಸಮಗ್ರ ಸರ್ವೆ ನಡೆಸಲಾಗುತ್ತಿದೆ. ಆದರೆ ಇತ್ತ ಬೆಂಗಳೂರಿನ ಕೆಲ ನಗರಗಳಲ್ಲಿ ಅಧಿಕಾರಿಗಳು ಸರಿಯಾಗಿ ಸರ್ವೇ ನಡೆಸದೇ, ಸಮೀಕ್ಷೆ ಪೂರ್ಣಗೊಳಿಸಿರುವುದಾಗಿ ಮನೆ ಮನೆಗಳಿಗೆ ಸ್ಟಿಕ್ಕರ್​ ಅಂಟಿಸಿಕೊಂಡು ಬರುತ್ತಿರುವುದಾಗಿ ದೂರುಗಳು ಕೇಳಿಬಂದಿವೆ. ಈ ಬಗ್ಗೆ ಟಿವಿ9 ಡಿಜಿಟಲ್​ಗೆ ಸ್ವತಃ ಜನರೇ ಮಾಹಿತಿ ನೀಡಿದ್ದಾರೆ.

ಜಾತಿ ಸಮೀಕ್ಷೆ: ಸರ್ವೆ ಮಾಡದೆ ಮನೆಗಳಿಗೆ ಸ್ಟಿಕ್ಕರ್​ ಅಂಟಿಸಿದ ಅಧಿಕಾರಿಗಳು!
ಮನೆ ಅಂಟಿಸಿರುವ ಸ್ಟಿಕ್ಕರ್

Updated on: Jun 28, 2025 | 2:27 PM

ಬೆಂಗಳೂರು, ಜೂನ್​ 28: ರಾಜ್ಯ ಕಾಂಗ್ರೆಸ್ (congress)​ ಸರ್ಕಾರ ಕೈಗೊಂಡ ಜಾತಿ ಸಮೀಕ್ಷೆಗೆ (caste survey) ಭಾರೀ ವಿರೋಧ ವ್ಯಕ್ತವಾಗಿತ್ತು. ಇದು ಅವೈಜ್ಞಾನಿಕ ಸಮೀಕ್ಷೆ ಎಂದು ಆಡಳಿತ ಸರ್ಕಾರದ ವಿರುದ್ಧ ಬಿಜೆಪಿ ಮುಗಿಬಿದಿತ್ತು. ಇದೀಗ ಮತ್ತೆ ಇಂತಹದ್ದೇ ಸ್ಥಿತಿಗೆ ಸರ್ಕಾರ ಮುಂದಾಗುತ್ತಿದೆಯಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಏಕೆಂದರೆ, ನಗರದ ಹಲವೆಡೆ ಸಮೀಕ್ಷೆ ಮಾಡದೆಯೇ ಸಮೀಕ್ಷೆ ಮಾಡಿರುವುದಾಗಿ ಮನೆ ಮನೆಗಳಿಗೆ ಸ್ಟಿಕ್ಕರ್​ ಅಂಟಿಸಲಾಗುತ್ತಿರುವ ದೂರುಗಳು ಕೇಳಿಬಂದಿವೆ. ಈ ಬಗ್ಗೆ ಟಿವಿ9 ಡಿಜಿಟಲ್​ಗೆ ಜನರೇ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಕೆಲ ನಗರಗಳಲ್ಲಿ ಪರಿಶಿಷ್ಟ ಜಾತಿಗಳ ಸಮಗ್ರ ಸರ್ವೆ ಮಾಡಲಾಗುತ್ತಿದೆ. ಮನೆಯಲ್ಲಿ ಜನರು ಇದ್ದರೂ ಯಾವುದೇ ಮಾಹಿತಿ ಪಡೆಯದೇ ಅಧಿಕಾರಿಗಳು ಕೇವಲ ಸ್ಟಿಕ್ಕರ್‌ ಅಂಟಿಸಿ ತೆರಳುತ್ತಿದ್ದಾರೆ ಎಂದು ಜನರು ದೂರಿದ್ದಾರೆ.

ಇದನ್ನೂ ಓದಿ: ಜಾತಿ ಸಮೀಕ್ಷೆ ಮಾಡದೇ ಕಳ್ಳಾಟವಾಡಿದ ಐವರು ಅಧಿಕಾರಿಗಳ ಅಮಾನತು

ಗುರುವಾರ ಮತ್ತು ಶುಕ್ರವಾರದಂದು ಶ್ರೀನಗರದ ಬಿಎಸ್‌ಕೆ ಮೊದಲ ಹಂತದ ಮನೆಗಳಿಗೆ ಭೇಟಿ ನೀಡಿದ್ದ ಅಧಿಕಾರಿಗಳು ಸರ್ವೆ ಕುರಿತ ಯಾವುದೇ ಮಾಹಿತಿ ಪಡೆದಿಲ್ಲ. ಬದಲಿಗೆ ‘ಈ ಮನೆಯ ಸಮೀಕ್ಷೆ ಪೂರ್ಣಗೊಳಿಸಲಾಗಿದೆ’ ಎಂದು ಸ್ಟಿಕ್ಕರ್‌ ಅಂಟಿಸಿದ್ದಾರೆ. ಇದು ಕೇವಲ ಒಂದು ಮನೆಗೆ ಅಲ್ಲಾ ಇಡೀ ನಗರದ ಮನೆಗಳಿಗೆಲ್ಲಾ ಅಧಿಕಾರಿಗಳು ಸ್ಟಿಕ್ಕರ್‌ ಮಾತ್ರ ಅಂಟಿಸಿರುವುದಾಗಿ ಗೊತ್ತಾಗಿದೆ.

ಸ್ಥಳೀಯರು ಹೇಳಿದ್ದಿಷ್ಟು

ಈ ಬಗ್ಗೆ ಟಿವಿ9 ಡಿಜಿಟಲ್​ಗೆ ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದು, ‘ನಾನು ತರಕಾರಿ ತೆಗೆದುಕೊಳ್ಳುವುದಕ್ಕೆ ಹೊರಗಡೆ ಹೋಗಿದೆ. ಆದರೆ ಮನೆಯಲ್ಲಿ ನನ್ನ ತಾಯಿ ಇದ್ದರು. ಅವರ ಬಳಿ ಯಾವುದೇ ಮಾಹಿತಿ ಪಡೆದಿಲ್ಲ. ನಾನು ವಾಪಸ್​​​ ಮನೆಗೆ ಬಂದಾಗ ಮನೆಯ ಗೋಡೆಗೆ ಸ್ಟಿಕ್ಕರ್​ ಅಂಟಿಸಲಾಗಿತ್ತು’ ಎಂದು ಹೇಳಿದ್ದಾರೆ.

‘ಅದೇ ನಗರದಲ್ಲಿದ್ದ ಅಧಿಕಾರಿಗಳನ್ನು ಕೇಳಿದಾಗ ಮತ್ತೊಮ್ಮೆ ಬರುವುದಾಗಿ ಹೇಳಿದ್ದಾರೆ. ಇನ್ನು ಈ ಕುರಿತಾಗಿ ಅಕ್ಕ ಪಕ್ಕದ ಮನೆಗಳಲ್ಲಿ ವಿಚಾರಿಸಿದಾಗ ಯಾವುದೇ ಸಮೀಕ್ಷೆ ನಡೆದಿಲ್ಲ. ಬದಲಿಗೆ ಇಡೀ ನಗರದಲ್ಲಿ ಮನೆ ಮನೆಗಳಿಗೆ ಸ್ಟಿಕ್ಕರ್ ಮಾತ್ರ ಅಂಟಿಸಿರುವುದು ಗೊತ್ತಾಗಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಯಾವ ಜಾತಿಯ ಜನಸಂಖ್ಯೆ ಎಷ್ಟು? ಜಾತಿಗಣತಿಯ ಅಂಕಿ-ಅಂಶ ಬಹಿರಂಗ

ಇದೇ ರೀತಿಯಾಗಿ ಕುಮಾರಸ್ವಾಮಿ ಲೇಔಟ್‌, ಬನಶಂಕರಿಯ ಇಸ್ರೋ ಲೇಔಟ್‌, ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರ ಮತ್ತು ವಿಠಲ್‌ ನಗರ ಸೇರಿದಂತೆ ಹಲವೆಡೆ ಅಧಿಕಾರಿಗಳು ಮನೆ ಮನೆಗೆ ಸ್ಟಿಕ್ಕರ್‌ ಅಂಟಿಸುತ್ತಿದ್ದಾರೆ ಹೊರತು ಸರಿಯಾದ ಮಾಹಿತಿ ಪಡೆಯುತ್ತಿಲ್ಲವೆಂದು ದೂರುಗಳು ಕೇಳಿಬರುತ್ತಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Follow Us