ವಂಚನೆ ಆರೋಪ ಪ್ರಕರಣ: ನಿರ್ಮಾಪಕ ರಾಕ್​ಲೈನ್ ಪುತ್ರನಿಗೆ 2ನೇ ಬಾರಿ ಸಿಸಿಬಿ ನೋಟಿಸ್

ವೃದ್ದೆಗೆ ಮನೆ ಮಾರಾಟ ಮಾಡಿಸಲು ಸಹಾಯ ಮಾಡುವ ನೆಪದಲ್ಲಿ ವಂಚನೆ ಮಾಡಲಾಗಿರುವ ಪ್ರಕರಣ ಸಂಬಂಧ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಪುತ್ರ ಅಭಿಲಾಷ್​ಗೆ ಸಿಸಿಬಿ 2ನೇ ಬಾರಿ ನೋಟಿಸ್ ನೀಡಿದೆ. ಮೊದಲ ಬಾರಿ ಸರಿಯಾಗಿ ಸಹಕರಿಸದ ಹಿನ್ನೆಲೆ ಈಗ ಮತ್ತೊಮ್ಮೆ ನೋಟಿಸ್ ನೀಡಲಾಗಿದೆ.

ವಂಚನೆ ಆರೋಪ ಪ್ರಕರಣ: ನಿರ್ಮಾಪಕ ರಾಕ್​ಲೈನ್ ಪುತ್ರನಿಗೆ 2ನೇ ಬಾರಿ ಸಿಸಿಬಿ ನೋಟಿಸ್
ಸಿಸಿಬಿ
Follow us
Prajwal Kumar NY
| Updated By: ಆಯೇಷಾ ಬಾನು

Updated on:Dec 29, 2023 | 8:23 AM

ಬೆಂಗಳೂರು, ಡಿ.29: ನಟ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ (Rockline Venkatesh) ಪುತ್ರ ಅಭಿಲಾಷ್​ಗೆ ಸಿಸಿಬಿ ನೋಟಿಸ್ (CCB Notice) ನೀಡಿದೆ. ಒಮ್ಮೆ ವಿಚಾರಣೆಗೆ ಹಾಜರಾಗಿ ತೆರಳಿದ್ದ ಅಭಿಲಾಷ್​ಗೆ (Abhilash) ಈಗ ಸಿಸಿಬಿ ಎರಡನೇ ನೋಟಿಸ್ ನೀಡಿದೆ. ತನಿಖೆ ವೇಳೆ ಸರಿಯಾದ ಮಾಹಿತಿ ನೀಡದೆ ತನಿಖೆಗೆ ಸಹಕರಿಸದ ಹಿನ್ನೆಲೆ ಎರಡನೇ ಬಾರಿ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಲಾಗಿದೆ.

ಪುಟ್ಟೇನಹಳ್ಳಿಯಲ್ಲಿ ವೃದ್ದೆಗೆ ಮನೆ ಮಾರಾಟ ಮಾಡಿಸಲು ಸಹಾಯ ಮಾಡುವ ನೆಪದಲ್ಲಿ ವಂಚನೆ ಮಾಡಲಾಗಿತ್ತು. ವೃದ್ದೆಯ ಮನೆಗೆ ದಾಖಲಾತಿಗಳನ್ನು ಬಳಸಿ ಮೂರು ಕೋಟಿ ಲೋನ್ ಪಡೆಯಲಾಗಿತ್ತು. ಮೂರು ಕೋಟಿ ಪೈಕಿ ಒಂದು ಕೋಟಿ ಮಿಥುನ್‌ ಎಂಬ ಓರ್ವ ಪಾಲುದಾರನ ಮೂಲಕ ಅಭಿಲಾಷ್ ಪಾಲುದಾರನಾಗಿರುವ ಕಂಪನಿಗೆ ಬಂದಿದೆ. ಬಳಿಕ ನಲವತ್ತು ಲಕ್ಷ ಹಣವನ್ನು ಮಿಥುನ್‌ ಪಡೆದಿದ್ದಾನೆ. ಉಳಿದ ಅರವತ್ತು ಲಕ್ಷ ಕಂಪನಿಯ ಅಕೌಂಟ್ ನಲ್ಲಿಯೇ ಇದೆ. ಇದು ಕಂಪನಿಯ ಪಾಲುದಾರನಾಗಿರುವ ಅಭಿಲಾಷ್​ಗೂ ಸೇರಿದೆ. ಸದ್ಯ ಈ ಬಗ್ಗೆ ಮಾಹಿತಿ ಪಡೆಯಲು ಸಿಸಿಬಿ ವಿಚಾರಣೆಗೆ ಕರೆದಿದೆ. ಆದರೆ ಅಭಿಲಾಷ್ ಮೊದಲ ವಿಚಾರಣೆ ವೇಳೆ ಸರಿಯಾದ ಮಾಹಿತಿ ನೀಡಿಲ್ಲ. ಹೀಗಾಗಿ ಮತ್ತೆ ವಿಚಾರಣೆಗೆ ಕರೆಯಲಾಗಿದೆ. ದಾಖಲಾತಿಗಳ ಪ್ರಕಾರ ಹಣ ಅಕೌಂಟ್​ಗೆ ಬಂದು ನಂತರ ಹಣ ಬಳಸಿರುವುದು ಪತ್ತೆಯಾಗಿದೆ. ಸದ್ಯ ಕೇಸ್​ನಲ್ಲಿ ಇದುವರೆಗೆ ಐವರನ್ನು ಅರೆಸ್ಟ್ ಮಾಡಲಾಗಿದೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ: ರಾಕ್ ಲೈನ್ ವೆಂಕಟೇಶ್ ಮನೆಯಲ್ಲಿ ಹುಲಿಯುಗುರಿನ ಪೆಂಡೆಂಟ್​ಗಾಗಿ ಶೋಧ ನಡೆಸಿದ ಅರಣ್ಯಾಧಿಕಾರಿಗಳು

ಅಂಬುಜಾಕ್ಷಿ ಎಂಬ ವೃದ್ಧೆಯ ಜಮೀನಿನ ದಾಖಲೆಗಳನ್ನ ನಕಲುಗೊಳಿಸಿ 3 ಬ್ಯಾಂಕ್‌ಗಳಿಂದ ಬರೋಬ್ಬರಿ 3.85 ಕೋಟಿ ರೂ.ಗೂ ಅಧಿಕ ಸಾಲ ಪಡೆದು ವಂಚಿಸಿದ್ದ ಆರೋಪದಡಿ ಭಾಸ್ಕರ್, ಮಹೇಶ, ಅಭಿಷೇಕ್ ಗೌಡ, ಡಿ.ಆರ್ ಅರುಣ್, ಟಿ.ಪಿ ಶಿವಕುಮಾರ್ ಎಂಬಾತನನ್ನು ಸಿಸಿಬಿಯ ಆರ್ಥಿಕ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದರು. ಜೆ.ಪಿ ನಗರದ ನಿವಾಸಿಯಾಗಿರುವ ಅಂಬುಜಾಕ್ಷಿ (75) 1,350 ಅಡಿ ವಿಸ್ತೀರ್ಣದ ಬಿಡಿಎ ನಿವೇಶನದಲ್ಲಿ ಎರಡು ಅಂತಸ್ತಿನ ಸ್ವಂತ ಡೂಪ್ಲೆಕ್ಸ್ ಮನೆ ಹೊಂದಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:19 am, Fri, 29 December 23