ಬೆಂಗಳೂರು: ಬಯಸದೇ ಬಂದ ಭಾಗ್ಯ, ಹತ್ತೇ ಸೆಕೆಂಡ್​ನಲ್ಲಿ ಲಕ್ಷಾಧಿಪತಿಯಾದ ಯುವಕ ಈಗ ಪೊಲೀಸರ ಕೈಗೆ ಸಿಕ್ಕ

ದುಡ್ಡು ಅಂದ್ರೆ ಹೆಣ ಕೂಡ ಬಾಯ್ಬಿಡುತ್ತೆ ಎಂಬ ಮಾತಿದೆ. ಅದೇ ರೀತಿ ಕಂತೆ ಕಂತೆ ಹಣ ರಸ್ತೆಯಲ್ಲಿ ಸಿಕ್ಕರೆ ಏನು ಮಾಡ್ತೀರಿ? ಬೆಂಗಳೂರಿನ ರಸ್ತೆಯಲ್ಲಿ ಸಿಕ್ಕ ಹಣದಿಂದಾಗಿ ಯುವಕನೋರ್ವ ಆರೋಪಿಯಾಗಿದ್ದಾನೆ. ಬರಿಗೈಯಲ್ಲಿ ಬಂದವನಿಗೆ ಬರೋಬ್ಬರಿ 94 ಲಕ್ಷ ಹಣ ಸಿಕ್ಕಿದೆ. ಹಣ ಸಿಕ್ಕಿದ್ದೇ ತಡ, ಏನು ಮಾಡಬೇಕು ಅನ್ನೋ ಗೊಂದಲದಲ್ಲೇ ಯುವಕ 6 ದಿನ ಕಳೆದಿದ್ದ. ಆದರೆ 300ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಪರಿಶೀಲಿಸಿ ಪ್ರಕರಣ ಬೇಧಿಸಿದ ಚಂದ್ರ ಲೇಔಟ್ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.

ಬೆಂಗಳೂರು: ಬಯಸದೇ ಬಂದ ಭಾಗ್ಯ, ಹತ್ತೇ ಸೆಕೆಂಡ್​ನಲ್ಲಿ ಲಕ್ಷಾಧಿಪತಿಯಾದ ಯುವಕ ಈಗ ಪೊಲೀಸರ ಕೈಗೆ ಸಿಕ್ಕ
ಚಂದ್ರ ಲೇಔಟ್ ಪೊಲೀಸ್
Follow us
| Updated By: ಆಯೇಷಾ ಬಾನು

Updated on:Sep 14, 2023 | 8:37 AM

ಬೆಂಗಳೂರು, ಸೆ.14: ಅದೃಷ್ಟ ಅನ್ನೋದು ಯಾವಾಗ ಹೇಗೆ ಬರುತ್ತೆ ಹೇಳೋಕೆ ಆಗಲ್ಲ. ಅದೇ ರೀತಿ ದುರಾದೃಷ್ಟ ಅನ್ನೋದು ಕೂಡ ಮನೆಯ ಹೊಸ್ತಿಲಲ್ಲೇ ಇರುತ್ತೆ ಎಂಬ ಮಾತು ನಿಜ. ಬಯಸದೇ ಬಂದ ಭಾಗ್ಯ ಎಂಬಂತೆ ಇಲ್ಲೊಬ್ಬ ಯುವಕ ಕೇವಲ ಹತ್ತೇ ಹತ್ತು ಸೆಕೆಂಡ್​ನಲ್ಲಿ ಯಾವ ಪರಿಶ್ರಮವೂ ಇಲ್ಲದೆ ಲಕ್ಷಾಧಿಪತಿಯಾಗಿಬಿಟ್ಟಿದ್ದ. ಆದರೆ ಈಗ ಪೊಲೀಸರ (Chandra Layout Police)ಅತಿಥಿಯಾಗಿದ್ದಾನೆ. ಸ್ವಲ್ಪ ಯೋಜಿಸಿದ್ದರೆ ಬೆಂಗಳೂರು ಜನರ ಕಣ್ಣಿಗೆ ಹೀರೋ ಆಗಬಹುದಿತ್ತು. ಯುವಕನ ಒಂದು ತಪ್ಪು ಹೆಜ್ಜೆ ಕಂಬಿ ಹಿಂದೆ ಕೂರುವಂತೆ ಮಾಡಿದೆ. ಹೌದು ಬರಿಗೈಯಲ್ಲಿ ಬಂದವನಿಗೆ ಬರೋಬ್ಬರಿ 94 ಲಕ್ಷ ಹಣ ಸಿಕ್ಕಿದೆ. ಹಣ ಸಿಕ್ಕಿದ್ದೇ ತಡ, ಏನು ಮಾಡಬೇಕು ಅನ್ನೋ ಗೊಂದಲದಲ್ಲೇ ಯುವಕ 6 ದಿನ ಕಳೆದಿದ್ದ. ಆದರೆ 300ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಪರಿಶೀಲಿಸಿ ಪ್ರಕರಣ ಬೇಧಿಸಿದ ಚಂದ್ರ ಲೇಔಟ್ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.

ಏನಿದು 94 ಲಕ್ಷ ಹಣದ ಕಹಾನಿ?

ನಗರದ ಚಂದ್ರ ಲೇಔಟ್ ನಿವಾಸಿಯಾಗಿರುವ ಪ್ರಮೋದ್ ಎಂಬಾತ ಸೈಟ್ ಖರೀದಿಸಲು 94 ಲಕ್ಷ ರೂ. ಹಣ ಕೂಡಿಸಿಟ್ಟಿದ್ದ. ಅದನ್ನ ತನ್ನ ಸ್ನೇಹಿತನ ಅಂಗಡಿಯಲ್ಲಿ ಎಣಿಸಿ ನಂತರ ವಕೀಲರ ಕಚೇರಿಗೆ ಹೋಗಿ ಸೈಟ್ ಖರೀದಿಸಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳೋಣ ಎಂದು ಬ್ಯಾಗ್​ನಲ್ಲಿ ಡಾಕ್ಯುಮೆಂಟ್ಸ್ ಇಟ್ಟು, ಬಾಕ್ಸ್​ನಲ್ಲಿ ಎಲ್ಲಾ ಹಣವನ್ನು ತುಂಬಿಸಿ ಹಣದ ಬಾಕ್ಸ್ ಅನ್ನು ತಂದು ಕಾರಿನಲ್ಲಿ ಇಡಲು ಮುಂದಾಗಿದ್ದ. ಇನ್ನೇನು ಮನೆ ಕೆಳಗೆ ಬರ್ತಿದ್ದಂತೆ ಕಾರಿನ ಡೋರ್ ಓಪನ್ ಮಾಡಬೇಕಿತ್ತು. ಹಾಗಾಗಿ ಕೈನಲ್ಲಿದ್ದ ಹಣವನ್ನು ಅಪರಿಚಿತ ಆ್ಯಕ್ಟಿವಾ ಬೈಕ್ ಮೇಲಿಟ್ಟಿದ್ದಾರೆ. ಬಳಿಕ ಕಾರ್ ಡೋರ್ ಓಪನ್ ಮಾಡಿ ಸೈಟ್ ಖರೀದಿಗೆ ಬೇಕಿದ್ದ ದಾಖಲಾತಿ ಇದ್ದ ಬ್ಯಾಗನ್ನು ಕಾರಿನಲ್ಲಿ ಹಾಕಿಕೊಂಡು ಪ್ರಮೋದ್ ತಮ್ಮ ಸ್ನೇಹಿತನ ಅಂಗಡಿಗೆ ಹೊರಟಿದ್ದಾರೆ.

ರಸ್ತೆಯಲ್ಲಿ ಸಿಕ್ತು ಕಂತೆ ಕಂತೆ ಹಣ

ಮತ್ತೊಂದೆಡೆ ಪ್ರಮೋದ್ ಕಾರು ಹೊರಡುತ್ತಿದ್ದಂತೆ ಅದೇ ರಸ್ತೆಯಲ್ಲಿ ಬಂದ ವರುಣ್ ಎಂಬ ಯುವಕ ಪಾರ್ಕ್ ಮಾಡಿದ್ದ ತನ್ನ ಬೈಕ್​ ಎತ್ತಲು ಮುಂದಾಗಿದ್ದಾನೆ. ಈ ವೇಳೆ ಬೈಕ್ ಮೇಲೆ ಒಂದು ಬಾಕ್ಸ್ ಸಿಕಿದ್ದು ಅದನ್ನು ತೆರೆದು ನೋಡಿದಾಗ ಕಂತೆ ಕಂತೆ ಹಣ ಸಿಕ್ಕಿದೆ. ಹಣ ನೋಡುತ್ತಿದ್ದಂತೆ ವರುಣ್ ಹಣದ ಸಮೇತ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಖಾಸಗಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಡಿಪಾರ್ಟ್ ಮೆಂಟ್​ನಲ್ಲಿ ಕೆಲಸ ಮಾಡುವ ವರುಣ್ ತನ್ನ ಶ್ರೀನಗರ ಮನೆಯಲ್ಲಿ ಹಣವನ್ನ ಬಚ್ಚಿಟ್ಟಿದ್ದಾನೆ. 94 ಲಕ್ಷ ರೂ. ಹಣ ಏನು ಮಾಡಬೇಕು ಎನ್ನುವ ಗೊಂದಲದಲ್ಲೇ ಐದು ದಿನ ಕಳೆದಿದ್ದಾನೆ. ಜೊತೆಗೆ ಸೆಕೆಂಡ್ ಹ್ಯಾಂಡ್ ಇನ್ನೋವಾ ಕಾರು ಖರೀದಿಸಲು ಪ್ಲಾನ್ ಮಾಡ್ಕೊಂಡಿದ್ದಾನೆ. ಆದರೆ ಎಲ್ಲಿಯೂ ಹಣ ಖರ್ಚು ಮಾಡದೇ ಮನೆಯಲ್ಲಿ ಬಚ್ಚಿಟ್ಟಿದ್ದ.

ಇದನ್ನೂ ಓದಿ: ಭಾರ್ಗವಿ ಸಂಚಿಗೆ ಬಲಿಯಾದ ಸೀತಾ; ಬೇರೆ ಖಾತೆಗೆ ಹೋದ ಹಣ ಮತ್ತೆ ಸಿಗುತ್ತಾ?

ಹಣ ಕಳೆದು ಕೊಂಡ ಪ್ರಮೋದ್​ನಿಂದ ದೂರು ದಾಖಲು

ಇನ್ನು ಸ್ನೇಹಿತನ ಅಂಗಡಿಗೆ ಹೋಗಿ ಕಾರು ಪರಿಶೀಲಿಸಿದ ಪ್ರಮೋದ್​ಗೆ ಶಾಕ್ ಆಗಿದೆ. ಪ್ರಮೋದ್ ವಾಪಸ್ಸು ಬಂದು ನೋಡಿದಾಗ ಬೈಕ್ ಹಾಗೂ ಹಣ ಎರಡೂ ಇರಲಿಲ್ಲ. ತಕ್ಷಣ ಪ್ರಮೋದ್ ಚಂದ್ರ ಲೇಔಟ್ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಬೈಕ್ ಹೊರಟ ಮಾರ್ಗದ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಆರೋಪಿ ಬಲೆಗೆ ಬಿದ್ದಿದ್ದು 94 ಲಕ್ಷ ಹಣವನ್ನು ಜಪ್ತಿ ಮಾಡಲಾಗಿದೆ. ವರುಣ್ ಅದೇ ಹಣ ತಂದು ಪೊಲೀಸರಿಗೆ ಕೊಟ್ಟಿದ್ದಿದ್ರೆ ಹೀರೋ ಆಗ್ತಿದ್ದ. ಆದರೆ ಮನೆಯಲ್ಲಿ ಇಟ್ಟುಕೊಂಡು ಈಗ ಆರೋಪಿ ಆಗಿದ್ದಾನೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:13 am, Thu, 14 September 23