
ಬೆಂಗಳೂರು, ಅಕ್ಟೋಬರ್ 30: ನಗರದ ನಾಗರಭಾವಿಯ ಕ್ಲೌಡ್ ನೈನ್ ಆಸ್ಪತ್ರೆಯ ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ. 1.5 ವರ್ಷದ ಮಗುವಿನ ಕಿವಿಗೆ ಗಾಯವಾಗಿದ್ದು, ಶಸ್ತ್ರಚಿಕಿತ್ಸೆ ವೇಳೆ ಗಂಭೀರ ಎಡವಟ್ಟು ಉಂಟಾಗಿರುವ ಘಟನೆ ನಡೆದಿದೆ. ಸದ್ಯ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ತಜ್ಞರ ವರದಿಯಲ್ಲಿ ಉಲ್ಲೇಖಿಸಲಾಗಿದೆ.
1.5 ವರ್ಷದ ಮಗು ಶಯನ್ ಸದ್ಯ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಕಿವಿಗೆ ಗಾಯವಾಗಿದ್ದ ಹಿನ್ನೆಲೆ ಮಗುವನ್ನು ಶಸ್ತ್ರಚಿಕಿತ್ಸೆಗಾಗಿ ನಾಗರಭಾವಿಯ ಕ್ಲೌಡ್ ನೈನ್ ಆಸ್ಪತ್ರೆಗೆ ಪೋಷಕರು ದಾಖಲಿಸಿದ್ದರು. ಸೆಪ್ಟೆಂಬರ್ 26ರಂದು ಕಿವಿಯ ಗಾಯಕ್ಕೆ ಶಸ್ತ್ರಚಿಕಿತ್ಸೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಶಸ್ತ್ರಚಿಕಿತ್ಸೆ ವೇಳೆ ಅರಿವಳಿಕೆ ನೀಡಿದ ಬಳಿಕ ಮಗುವಿನ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ.
ಇದನ್ನೂ ಓದಿ: ಕಣ್ಣು ಆಪರೇಷನ್ಗೆ ಕರೆದು ಎಡವಟ್ಟು: ಲೆನ್ಸ್ ಇಲ್ಲದಿದ್ರೂ ಅನಸ್ತೇಷಿಯಾ ಕೊಟ್ರು
ಲರಿಂಗೋಸ್ಪಸಂ ಉಂಟಾಗಿ ಮಗುವಿನ ಆಮ್ಲಜನಕ ಮಟ್ಟ ಕುಸಿತವಾಗಿದೆ. ಬಳಿಕ ಮಗುವಿಗೆ ಸುಮಾರು 7 ನಿಮಿಷಗಳ ಕಾಲ ಹೃದಯ ಸ್ತಂಭನ ಉಂಟಾಗಿದ್ದು, ಸಿಪಿಆರ್ ಮೂಲಕ ಪುನಶ್ಚೇತನ ನೀಡಲಾಗಿದೆ ಎಂದು ತಜ್ಞರ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಮಗುವಿಗೆ ವೆಂಟಿಲೇಟರ್ ಹಾಗೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಜಯನಗರದಲ್ಲಿರವ ಕ್ಲೌಡ್ ನೈನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಶಯನ್ ತಾಯಿ ಮೋನಿಕಾ ಪ್ರತಿಕ್ರಿಯಿಸಿದ್ದು, ‘ಮಗುವಿಗೆ ಚಿಕಿತ್ಸೆ ನಡೆದು 3 ತಿಂಗಳಾದರೂ ಚೇತರಿಕೆ ಕಂಡಿಲ್ಲ. ಈಗಲೂ ಕೂಡ ಮಗು ತುರ್ತು ನಿಗಾ ಘಟಕದಲ್ಲೇ ಇದೆ. ಮಗು ಮತ್ತೆ ಹುಷಾರಾಗಿ ನಮಗೆ ಸಿಗುತ್ತೆ ಅನ್ನೋ ವಿಶ್ವಾಸ ಕ್ಷೀಣಿಸುತ್ತಿದೆ. ಕೇವಲ ಕಿವಿಗೆ ಆದ ಗಾಯದಿಂದ ಹೀಗೆ ಮಗು ಆಗೋಕೆ ಹೇಗೆ ಸಾಧ್ಯ? ಮಗುವಿನ ಚಿಕಿತ್ಸೆಗೆ ಈವರೆಗೂ 3.5 ಲಕ್ಷ ರೂ ಖರ್ಚು ಮಾಡಿದ್ದೇವೆ. ಸದ್ಯ ಮಗು ಜಯನಗರ ಕ್ಲೌಡ್ 9 ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದೆ’ ಎಂದಿದ್ದಾರೆ.
ಇದನ್ನೂ ಓದಿ: ಕೈ ಶಾಸಕನ ಎಡವಟ್ಟು: ಆಸ್ಪತ್ರೆಯಲ್ಲಿಯೇ ಮಹಿಳಾ ಪಾತ್ರಧಾರಿಗಳ ಡ್ಯಾನ್ಸ್, ರೀಲ್ಸ್
‘ನಾವು ಸಾಮಾನ್ಯ ಅನಸ್ತೇಶಿಯಾ ಕೊಡಿ ಅಂತ ಹೇಳಿದ್ದೆವು. ಆದರೂ ಕೇಳದೆ ತೀವ್ರ ಅನಸ್ತೇಶಿಯಾ ಕೊಟ್ಟಿದ್ದಾರೆ. ಮಗು ಕುಡಿದ ಹಾಲು ಶ್ವಾಸಕೋಶಕ್ಕೆ ಹೋಗಿ, ಹೃದಯ ಸ್ತಂಭನ ಆಗಿದೆ ಅಂತ ಹೇಳುತ್ತಿದ್ದಾರೆ. ಬಳಿಕ ಅದರಿಂದ ಮೆದುಳಿಗೆ ಸಮಸ್ಯೆ ಆಗಿ ಈ ರೀತಿ ಮಗು ಚಿಂತಾಜನಕ ಸ್ಥಿತಿ ತಲುಪಿದೆ. ಮಗುವಿನ ಚಿಕಿತ್ಸೆಯಲ್ಲಿ ಭಾರೀ ಲೋಪ ಆಗಿದೆ ಅಂತ ತಜ್ಞರು ಅಭಿಪ್ರಾಯ ತಿಳಿಸಿದ್ದಾರೆ’ ಎಂದು ಅವರು ಹೇಳಿದರು.
ಕ್ಲೌಡ್ 9 ಆಸ್ಪತ್ರೆ ವಿರುದ್ಧ ಪೋಷಕರು ನ್ಯಾಯಕ್ಕಾಗಿ ಹೋರಾಟ ನಡೆಸಿದ್ದಾರೆ. ಆಸ್ಪತ್ರೆ ಮುಂಭಾಗ ಹಾಗೂ ಒಳಭಾಗ ಬ್ಯಾನರ್ ಪ್ರದರ್ಶಿಸಿ ‘ನನ್ನ ಮಗುವಿಗೆ ನ್ಯಾಯ ಬೇಕು’ ಎಂದು ಕ್ಲೌಡ್ 9 ವೈದ್ಯರ ವಿರುದ್ಧ ನಮ್ಮ ಹೋರಾಟ ಅಂತ ಭಿತ್ತಿಪತ್ರ ಪ್ರದರ್ಶನ ಮಾಡಿದ್ದಾರೆ. ಆಡಳಿತ ಮಂಡಳಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮಗುವಿನ ಪೋಷಕರು ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆಸ್ಪತ್ರೆಯಿಂದ ದೂರು ನೀಡಲಾಗಿದೆ. ಇನ್ನು ನಿಯಂತ್ರಣ ಮಾಡಲು ಬಂದ ಅನ್ನಪೂರ್ಣೇಶ್ವರಿ ನಗರ ಪೊಲೀಸರ ವಿರುದ್ಧವೂ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಮಗುವಿನ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ಆರೋಪ ಬೆನ್ನಲ್ಲೇ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಸ್ಪಷ್ಟನೆ ಕೇಳಿ ಕ್ಲೌಡ್ 9 ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಿದೆ. ಅರಿವಳಿಕೆ ಚಿಕಿತ್ಸೆ ಬಗ್ಗೆ ತಜ್ಞರ ವರದಿಯಲ್ಲಿ ಪ್ರಶ್ನಿಸಲಾಗಿದೆ. ಹೀಗಾಗಿ ಆರೋಗ್ಯ ಇಲಾಖೆ ತನಿಖೆಗೆ ಮುಂದಾಗಿದ್ದು, ಕ್ಲೌಡ್ 9 ಆಸ್ಪತ್ರೆ ಆಡಳಿತಕ್ಕೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.