AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ರಸ್ತೆಗುಂಡಿ ಮುಚ್ಚಲು ಅಧಿಕಾರಿಗಳಿಗೆ ಸಿಎಂ 40 ದಿನ ಗಡುವು ನೀಡಿದ್ದಾರೆ: ಡಿಕೆ ಶಿವಕುಮಾರ್​

ಶನಿವಾರ ಸಿಎಂ ನಿವಾಸ ಕಾವೇರಿಯಲ್ಲಿ ಬೆಂಗಳೂರಿನ ರಸ್ತೆಗುಂಡಿ ಸಮಸ್ಯೆ ವಿಚಾರವಾಗಿ ಅಧಿಕಾರಿಗಳೊಂದಿಗೆ ಸಭೆ ಮಾಡಿದರು. ಬಳಿಕ ಈ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್​ ಮಾತನಾಡಿ, ಅಕ್ಟೋಬರ್‌ 31ರ ಒಳಗೆ ಎಲ್ಲಾ ಗುಂಡಿ ಮುಚ್ಚುವಂತೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಗಡುವು ನೀಡಿದ್ದಾರೆ ಎಂದು ಹೇಳಿದರು.

ಬೆಂಗಳೂರಿನ ರಸ್ತೆಗುಂಡಿ ಮುಚ್ಚಲು ಅಧಿಕಾರಿಗಳಿಗೆ ಸಿಎಂ 40 ದಿನ ಗಡುವು ನೀಡಿದ್ದಾರೆ: ಡಿಕೆ ಶಿವಕುಮಾರ್​
ಡಿಕೆ ಶಿವಕುಮಾರ್​
ಗಂಗಾಧರ​ ಬ. ಸಾಬೋಜಿ
|

Updated on: Sep 21, 2025 | 9:10 AM

Share

ಬೆಂಗಳೂರು, ಸೆಪ್ಟೆಂಬರ್​ 21: ಅಕ್ಟೋಬರ್‌ 31ರ ಒಳಗೆ ಬೆಂಗಳೂರಿನ ಎಲ್ಲಾ ಗುಂಡಿ (Potholes) ಮುಚ್ಚಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಗಡುವು ನೀಡಿದ್ದಾರೆ. ಜೊತೆಗೆ ರಸ್ತೆಗುಂಡಿ ಮುಚ್ಚಲು ಹೆಚ್ಚುವರಿ 750 ಕೋಟಿ ರೂ. ಅನುದಾನ ಕೊಡುವ ಭರವಸೆ ನೀಡಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar)​ ಹೇಳಿದ್ದಾರೆ.

ಬೆಂಗಳೂರು ರಸ್ತೆಗಳ ಸುಧಾರಣೆ ಹಾಗೂ ಸುಗಮ ಸಂಚಾರ ವ್ಯವಸ್ಥೆ ಕುರಿತು ಶನಿವಾರ ಸಿಎಂ ನಿವಾಸ ಕಾವೇರಿಯಲ್ಲಿ ನಡೆದ ಉನ್ನತ ಮಟ್ಟದ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಬೆಂಗಳೂರಿನ ರಸ್ತೆಗುಂಡಿ ಸಮಸ್ಯೆ ವಿಚಾರವಾಗಿ ಮುಖ್ಯಮಂತ್ರಿಗಳು ಹಾಗೂ ತಾವು ಜಿಬಿಎ ಅಧಿಕಾರಿಗಳ ಸಭೆ ಮಾಡಿದ್ದೇವೆ ಎಂದರು.

ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ 

ನಮ್ಮ ಅಧಿಕಾರಿಗಳು, ಪೊಲೀಸರು ಹಾಗೂ ಸಾರ್ವಜನಿಕರ ಸಹಕಾರದಿಂದ ನಾವು ನಗರದಲ್ಲಿ 10 ಸಾವಿರ ರಸ್ತೆ ಗುಂಡಿ ಪತ್ತೆ ಮಾಡಿದ್ದೇವೆ. ಇವುಗಳನ್ನು ಸರಿಪಡಿಸದಿದ್ದರೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: ರಸ್ತೆ ಗುಂಡಿಗಳ ಮುಚ್ಚಿಸಲು ನಿಮಗೇನು ಕಷ್ಟ, ನಾಚಿಕೆ ಆಗಲ್ವೇ: ಜಿಬಿಎ ಅಧಿಕಾರಿಗಳ ಸಭೆಯಲ್ಲಿ ಸಿಎಂ ಕೆಂಡಾಮಂಡಲ, ಖಡಕ್ ಎಚ್ಚರಿಕೆ

ರಸ್ತೆ ಗುಂಡಿಗಳ ಪಟ್ಟಿ ಮಾಡಿ ಮಾಹಿತಿ ನೀಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದು, ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತಂದರೆ ಆದಷ್ಟು ಬೇಗ ಅದನ್ನು ಮುಚ್ಚಲಾಗುವುದು. ಈಗಿನ ಮಳೆಗಾಲ ಮುಕ್ತಾಯದ ನಂತರ ಪ್ರತ್ಯೇಕ ಯೋಜನೆ ರೂಪಿಸಲು ಸಿಎಂ ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದರು.

ಮಳೆ ಹೆಚ್ಚಾಗಿರುವುದರಿಂದ ರಸ್ತೆ ಗುಂಡಿ ಸಮಸ್ಯೆ ಹೆಚ್ಚಾಗಿದೆ. ದೇಶದ ಎಲ್ಲಾ ನಗರಗಳಲ್ಲಿ ರಸ್ತೆ ಗುಂಡಿ ಇವೆ. ಆದರೆ ಬೆಂಗಳೂರು ಮಾತ್ರ ಸುದ್ದಿಯಾಗುತ್ತಿದೆ. ಬೇರೆ ಕಡೆಗಳಲ್ಲಿ ಮಾಧ್ಯಮಗಳನ್ನು ನಿಯಂತ್ರಿಸಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಮಾಧ್ಯಮಗಳಿಗೆ ಹೆಚ್ಚು ಸ್ವಾತಂತ್ರ್ಯ ನೀಡಿದ್ದು, ಈ ಸಮಸ್ಯೆ ಬಗ್ಗೆ ಹೆಚ್ಚು ಪ್ರಚಾರವಾಗುತ್ತಿದೆ ಎಂದಿದ್ದಾರೆ.

ರಾಜಕೀಯ ಮಾಡುವವರು ಮಾಡಲಿ ಎಂದ ಡಿಕೆ ಶಿವಕುಮಾರ್​

ಬೆಂಗಳೂರಿನಲ್ಲಿರುವ ರಸ್ತೆಗುಂಡಿಗಳನ್ನು ಮುಚ್ಚುವ ಕೆಲಸ ಸಮರೋಪಾದಿಯಲ್ಲಿ ನಡೆಯುತ್ತಿದೆ. ಈ ಬಗ್ಗೆ ರಾಜಕೀಯ ಮಾಡುವವರು ಮಾಡಲಿ, ನಾವು ಸಂಚಾರವನ್ನು ಸುಗಮಗೊಳಿಸುವ ಕೆಲಸ ಮಾಡುತ್ತೇವೆ. ಇಲ್ಲಿವರೆಗೆ 7 ಸಾವಿರಕ್ಕೂ ಹೆಚ್ಚು ರಸ್ತೆಗುಂಡಿಗಳನ್ನು ಮುಚ್ಚಲಾಗಿದ್ದು, ಇನ್ನೂ 5 ಸಾವಿರದಷ್ಟು ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದೆ ಎಂದು ಡಿಕೆ ಶಿವಕುಮಾರ್​ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.