AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆ ಗುಂಡಿಗಳ ಮುಚ್ಚಿಸಲು ನಿಮಗೇನು ಕಷ್ಟ, ನಾಚಿಕೆ ಆಗಲ್ವೇ: ಜಿಬಿಎ ಅಧಿಕಾರಿಗಳ ಸಭೆಯಲ್ಲಿ ಸಿಎಂ ಕೆಂಡಾಮಂಡಲ, ಖಡಕ್ ಎಚ್ಚರಿಕೆ

ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಉದ್ಯಮಿಗಳ ಆಕ್ಷೇಪದ ಬೆನ್ನಲ್ಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಧಿಕಾರಿಗಳ ಜತೆ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ತಕ್ಷಣವೇ ಸಮಸ್ಯೆ ಬಗೆಹರಿಸಿ, ಇಲ್ಲವಾದಲ್ಲಿ ಅಧಿಕಾರಿಗಳ ತಲೆದಂಡವಾಗಲಿದೆ ಎಂದು ಖಡಕ್ ಎಚ್ಚರಿಕೆಯನ್ನೂ ನೀಡಿದ್ದಾರೆ.

ರಸ್ತೆ ಗುಂಡಿಗಳ ಮುಚ್ಚಿಸಲು ನಿಮಗೇನು ಕಷ್ಟ, ನಾಚಿಕೆ ಆಗಲ್ವೇ: ಜಿಬಿಎ ಅಧಿಕಾರಿಗಳ ಸಭೆಯಲ್ಲಿ ಸಿಎಂ ಕೆಂಡಾಮಂಡಲ, ಖಡಕ್ ಎಚ್ಚರಿಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
Pramod Shastri G
| Updated By: Ganapathi Sharma|

Updated on: Sep 20, 2025 | 8:47 PM

Share

ಬೆಂಗಳೂರು, ಸೆಪ್ಟೆಂಬರ್ 20: ಬೆಂಗಳೂರಿನ ರಸ್ತೆ ಗುಂಡಿ ವಿಚಾರ ಇದೀಗ ದೇಶ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಉದ್ಯಮಿಗಳ ಆಕ್ರೋಶದ ನಂತರ ಈ ವಿಚಾರವಾಗಿ ಸರ್ಕಾರ ಕೂಡ ಗಂಭೀರವಾಗಿ ಗಮನ ಹರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಶನಿವಾರ ಸಂಜೆ ಗೃಹ ಕಚೇರಿ ಕೃಷ್ಣಾದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಅಧಿಕಾರಿಗಳ ಸಭೆ ನಡೆಯಿತು. ಸಭೆಯಲ್ಲಿ, ರಸ್ತೆ ಗುಂಡಿಗಳ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಚೀಫ್ ಎಂಜಿನಿಯರ್​ಗಳನ್ನು ಅಮಾನತು ಮಾಡಬೇಕಾಗುತ್ತದೆ ಎಂದು ಗಂಭೀರ ಎಚ್ಚರಿಕೆಯನ್ನೂ ನೀಡಿದರು.

ರಸ್ತೆ ಗುಂಡಿಗಳನ್ನು ಮುಚ್ಚಲು ನಿಮಗೆ ಏನು ಕಷ್ಟ? ನಿಮ್ಮಿಂದಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ. ನಿಮಗೆ ನಾಚಿಕೆಯಾಗುವುದಿಲ್ಲವೇ? ಮುಚ್ಚಿರುವ ಗುಂಡಿಗಳು ಕೂಡ ನೆಟ್ಟಗಿಲ್ಲ. ಜನರ ಕಷ್ಟಗಳು ನಿಮಗೆ ಗೊತ್ತಾಗುವುದಿಲ್ಲವೇ? ನೀವು ಇಂಜಿನಿಯರಿಂಗ್ ಓದಿರುವುದು ಏಕೆ? ಗುಂಡಿಗಳನ್ನು ಮುಚ್ಚಿ ಎಂದು ನಿಮ್ಮನ್ನು ಕರೆದು ನಾವು ಹೇಳಬೇಕೇ? ಹೀಗೆ ಮಾಡಿದರೆ ಚೀಫ್ ಇಂಜಿನಿಯರ್​​ಗಳನ್ನು ಅಮಾನತು ಮಾಡಿ ಮನೆಗೆ ಕಳುಹಿಸಬೇಕಾಗುತ್ತದೆ ಎಂದು ಅಧಿಕಾರಿಗಳನ್ನು ಸಿದ್ದರಾಮಯ್ಯ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ಅಧಿಕಾರಿಗಳ ತಲೆದಂಡ ಖಚಿತ: ಸಿದ್ದರಾಮಯ್ಯ ಖಡಕ್ ಎಚ್ಚರಿಕೆ

ಪ್ರತಿ ಬಾರಿ ಮಳೆ ಬಂದಾಗಲೂ ಇದೇ ಸಮಸ್ಯೆ ಮರುಕಳಿಸುತ್ತಿದೆ. ಹಾಕಿರುವ ರಸ್ತೆ ಅಷ್ಟು ಬೇಗ ಯಾಕೆ ಕಿತ್ತು ಬರುತ್ತದೆ? ನೀವೆಲ್ಲ ಏನು ಮಾಡುತ್ತಿದ್ದೀರಿ? ಸ್ವಲ್ಪ ಮಳೆ ಆದರೆ ಈ ರಸ್ತೆಗಳು ಗುಂಡಿ ಬೀಳುವುದು ಹೇಗೆ? ಜನರು ಪದೇ ಪದೇ ಸರ್ಕಾರವನ್ನು ಪ್ರಶ್ನೆ ಮಾಡುತ್ತಿದ್ದಾರೆ. ಈ ಬಾರಿ ಜನ ಸಿಟ್ಟಾಗಿದ್ದಾರೆ. ಹೀಗೆ ಮಾಡಿದರೆ ನಾನು ಯಾರ ಮುಖವನ್ನು ನೋಡುವುದಿಲ್ಲ. ಅಧಿಕಾರಿಗಳ ತಲೆದಂಡ ಖಚಿತ. ಇದರಲ್ಲಿ ಯಾವ ಮುಲಾಜು ಕೂಡ ಇಲ್ಲ ಎಂದು ಸಿದ್ದರಾಮಯ್ಯ ಸಿಟ್ಟಿನಿಂದಲೇ ನುಡಿದರು.

ಬೆಂಗಳೂರಿನ ರಸ್ತೆ ಗುಂಡಿಗಳ ವಿಚಾರವಾಗಿ ಉದ್ಯಮಿ ಮೋಹನ್​ ದಾಸ್ ಪೈ, ಕಿರಣ್ ಮಜುಂದಾರ್, ಬ್ಲಾಕ್ ಬಕ್ ಕಂಪನಿ ಸಿಇಒ ರಾಜೇಶ್ ಯಾಬಾಜಿ ಆಕ್ಷೇಪ ವ್ಯಕ್ತಪಡಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದರು. ಇದರ ಬೆನ್ನಲ್ಲೇ ಆಂಧ್ರಪ್ರದೇಶ ಐಟಿಬಿಟಿ ಸಚಿವ ನಾ.ರಾ ಲೋಕೇಶ್, ಐಟಿ ಕಂಪನಿಗಳನ್ನು ಆಂಧ್ರ ಪ್ರದೇಶಕ್ಕೆ ಬರುವಂತೆ ಆಹ್ವಾನಿಸಿದ್ದರು. ತಕ್ಷಣವೇ ಎಚ್ಚೆತ್ತುಕೊಂಡ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್, ರಸ್ತೆ ಗುಂಡಿಗಳನ್ನು ಮುಚ್ಚಲು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಡೆಡ್‌ಲೈನ್ ನೀಡಿದ್ದರು.

ಇದನ್ನೂ ಓದಿ: ಬೆದರಿಕೆಗಳಿಗೆ ಜಗ್ಗಲ್ಲ: ಬೆಂಗಳೂರು ತೊರೆಯುತ್ತೇವೆ ಎಂದ ಕಂಪನಿಗಳಿಗೆ ಡಿಕೆಶಿ ಖಡಕ್ ಮಾತು

ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳ ಜೊತೆ ಶನಿವಾರ ಸಂಜೆ ಸಭೆ ನಡೆಸಿದ್ದಾರೆ. ಖಡಕ್ ಎಚ್ಚರಿಕೆಯನ್ನೂ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ