ರಾಜರಾಜೇಶ್ವರಿನಗರದಲ್ಲಿ ಕೈ ಮತ್ತು ಕಮಲ ನಾಯಕರ ಮಧ್ಯೆ ಪರಸ್ಪರ ಕೆಸರೆರಚಾಟ ಆರಂಭವಾಗಿದೆ
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ನೀತಿಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ಅರೋಪದಲ್ಲಿ ದಾಖಲಾಗಿರುವ ಎಫ್ ಐ ಆರ್, ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಜೆಪಿ ಪಕ್ಷಗಳ ನಡುವೆ ಹೊಸ ಕಿತ್ತಾಟಕ್ಕೆ ನಾಂದಿ ಹಾಡಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಂದು ಸುದ್ದಿಗೋಷ್ಠಿಯೊಂದನ್ನು ನಡೆಸಿ, ಬಿಜೆಪಿ ಸರ್ಕಾರ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದರು. ಕುಸುಮಾ ಅವರ ವಿರುದ್ಧ ಪೊಲೀಸರೇ ಸ್ವಯಂಪ್ರೇರಿತ ದೂರು ಗುಜರಾಯಿಸಿಕೊಂಡು ಎಫ್ ಐ ಆರ್ […]

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ನೀತಿಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ಅರೋಪದಲ್ಲಿ ದಾಖಲಾಗಿರುವ ಎಫ್ ಐ ಆರ್, ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಜೆಪಿ ಪಕ್ಷಗಳ ನಡುವೆ ಹೊಸ ಕಿತ್ತಾಟಕ್ಕೆ ನಾಂದಿ ಹಾಡಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಂದು ಸುದ್ದಿಗೋಷ್ಠಿಯೊಂದನ್ನು ನಡೆಸಿ, ಬಿಜೆಪಿ ಸರ್ಕಾರ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದರು.
ಕುಸುಮಾ ಅವರ ವಿರುದ್ಧ ಪೊಲೀಸರೇ ಸ್ವಯಂಪ್ರೇರಿತ ದೂರು ಗುಜರಾಯಿಸಿಕೊಂಡು ಎಫ್ ಐ ಆರ್ ದಾಖಲಿಸಿದ್ದಾರೆ. ನಾಮಪತ್ರ ಸಲ್ಲಿಸುವ ಸಮಯದಲ್ಲಿ ಬಿಬಿಎಂಪಿ ಕಚೇರಿಯಿಂದ ನೂರು ಮೀಟರ್ ವ್ಯಾಪ್ತಿಯ ನಿರ್ಬಂಧಿತ ಪ್ರದೇಶದಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ತಳ್ಳಿ ಸಿದ್ದರಾಮಯ್ಯ ಅವರ ಬೆಂಗಾವಲಿನ ವಾಹನ ಬಂದಿದೆಯೆಂದು ಎಫ್ ಐ ಆರ್ ನಲ್ಲಿ ಆರೋಪಿಸಲಾಗಿದೆ. ಸದರಿ ಉಲ್ಲಂಘನೆಗೆ ಸಂಬಂಧಿಸಿದಂತೆ ಕುಸುಮಾ, ಸಿದ್ದರಾಮಯ್ಯನವರ ಬೆಂಗಾವಲಿನ ವಾಹನ ಹಾಗೂ ಇನ್ನೊಂದು ಖಾಸಗಿ ಕಾರಿನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಎಫ್ ಐ ಆರ್ ದಾಖಲಾದ ವಿಷಯ ಕೇಳಿಸಿಕೊಂಡ ನಂತರ ನಖಶಿಖಾಂತ ಉರಿದುಹೋದ ಶಿವಕುಮಾರ್ ಪತ್ರಿಕಾ ಗೋಷ್ಟಿ ಕರೆದು, ಯಡಿಯೂರಪ್ಪನವರ ಸರ್ಕಾರದ ವಿರುದ್ಧ ಕೆಂಡ ಕಾರಿದರು.
‘‘ಈಗಷ್ಟೇ ರಾಜಕಾರಣಕ್ಕೆ ಕಾಲಿಟ್ಟರುವ ಒಬ್ಬ ಹೆಣ್ಣುಮಗಳ ಮೇಲೆ ಕೇಸ್ ಹಾಕಿಸಿ ಬಿಜೆಪಿ ಸರ್ಕಾರ ಹೇಡಿತನ ಪ್ರದರ್ಶಿಸಿದೆ, ಆ ಪಕ್ಷದ ನಾಯಕರು ಬಳೆ ತೊಟ್ಟುಕೊಳ್ಳಲಷ್ಟೇ ಯೋಗ್ಯರು, ಅವರ ಸಣ್ಣತನ ಇಡೀ ರಾಜ್ಯಕ್ಕೆ ಗೊತ್ತಾಗಿದೆ. ಕುಸುಮಾರೊಂದಿಗಿದ್ದ ಸಿದ್ದರಾಮಯ್ಯ ಮತ್ತು ನನ್ನ ವಿರುದ್ಧ ಯಾಕೆ ದೂರು ದಾಖಲಿಸಿಕೊಂಡಿಲ್ಲ,’’ ಎಂದು ಶಿವಕುಮಾರ್ ಗುಡುಗಿದರು.

ನಂತರ ಶಿವಕುಮಾರ ಅವರ ವಾಗ್ದಾಳಿಗೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್ ಅಶೋಕ, ‘‘ಬಿಜೆಪಿಯ ಯಾವುದೇ ನಾಯಕ ನೀತಿಸಂಹಿತೆಯನ್ನು ಉಲ್ಲಂಘಿಸಲಿಲ್ಲ, ಅಲ್ಲಿರುವ ಸಿಸಿಟಿವಿ ಫುಟೇಜ್ ನೋಡಿದರೆ ಎಲ್ಲವೂ ಗೊತ್ತಾಗುತ್ತದೆ. ನಾವು ಹೆಣ್ಣುಮಕ್ಕಳನ್ನು ಗೌರವಿಸುವಂಥವರು, ಖುದ್ದು ಶಿವಕುಮಾರ, ತಮ್ಮ ಅಭ್ಯರ್ಥಿಯ ಬಗ್ಗೆ ಮಾತಾಡುತ್ತಾ ಗಾಳಿ ಬೀಸಿದರೆ ಉರುಳಿ ಬೀಳುತ್ತಾಳೆ ಅಂತ ಉಡಾಫೆಯ ಧಾಟಿಯಲ್ಲಿ ಮಾತಾಡಿದ್ದಾರೆ,’’ ಎಂದರು.
ಎರಡು ಪಕ್ಷದ ನಾಯಕರೂ ಕೆಸರೆರಚಾಟಕ್ಕೆ ಇಳಿದಿರುವುದು ಸ್ಪಷ್ಡವಾಗುತ್ತಿದೆ. ಆದರೆ ರಾಜಾರಾಜೇಶ್ವರಿನಗರದ ಮತದಾರ ಈ ವಿಷಯವನ್ನು ಹೇಗೆ ತೆಗೆದುಕೊಳ್ಳುತ್ತಾನೆ ಎನ್ನವುದನ್ನು ಕಾದು ನೋಡಬೇಕು.




