ಹಬ್ಬದ ಮರುದಿನ ಬೆಂಗಳೂರಿನಲ್ಲಿ ಕಸದರಾಶಿ: ಗಬ್ಬೆದ್ದು ನಾರುತ್ತಿದೆ ಮಾರ್ಕೆಟ್, ರಸ್ತೆ ಉದ್ದಕ್ಕೂ ಕಸದ ದರ್ಬಾರ್
ಬೆಂಗಳೂರಿನಲ್ಲಿ ನಿನ್ನೆಯಷ್ಟೇ ಸಂಭ್ರಮದ ಆಯುಧಪೂಜೆ ನೆರವೇರಿದೆ. ಕೆಆರ್ ಮಾರ್ಕೆಟ್ ಇದೀಗ ಕಸದತೊಟ್ಟಿಯಾಗಿ ಮಾರ್ಪಾಡಾಗಿದೆ. ಗಾರ್ಡನ್ ಸಿಟಿಯ ಗಲ್ಲಿ ಗಲ್ಲಿಯಲ್ಲಿ ಕಸದರಾಶಿ ರಾರಾಜಿಸುತ್ತಿದ್ದರೂ ಪಾಲಿಕೆ ಮಾತ್ರ ಮೌನವಾಗಿದೆ. ಮೊನ್ನೆ ಮೊನ್ನೆಯಷ್ಟೇ ಘನತ್ಯಾಜ್ಯ ನಿರ್ವಹಣೆಗೆ ಗೈಡ್ ಲೈನ್ ಹೊರಡಿಸಿದ್ದ ಪಾಲಿಕೆ, ಇದೀಗ ಮಾರ್ಕೆಟ್ ಗಬ್ಬೆದ್ದು ನಾರುತ್ತಿದ್ದರೂ ಅರಿವು ಮೂಡಿಸಿ ಸ್ವಚ್ಛತೆ ಕಾಪಾಡುವಲ್ಲಿ ಮೌನವಾಗಿದೆ.
ಬೆಂಗಳೂರು, ಅಕ್ಟೋಬರ್ 12: ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರವಷ್ಟೇ ಅದ್ಧೂರಿಯಾಗಿ ಆಯುಧಪೂಜೆ ಆಚರಣೆಯಾಯಿತು. ಮಾರ್ಕೆಟ್ಗಳಿಗೆ ಮುಗಿಬಿದ್ದ ಜನರು ಹಬ್ಬಕ್ಕೆ ಎಂದು ಬಾಳೇಕಂದು, ಕುಂಬಳಕಾಯಿ, ಹೂ ಹಣ್ಣು ಖರೀದಿಸಿದರು. ಹಬ್ಬದ ಹಿಂದಿನ ದಿನ ಲಕ ಲಕ ಅಂತಿದ್ದ ಮಾರ್ಕೆಟ್, ಹಬ್ಬವಾದ ಮರುದಿನವೇ ಕಸದ ತೊಟ್ಟಿಯಂತಾಗಿಬಿಟ್ಟಿದೆ. ಕೆಆರ್ ಮಾರ್ಕೆಟ್ ಜಂಕ್ಷನ್, ಚಿಕ್ಕಪೇಟೆ, ಮೈಸೂರು ರೋಡ್ ಸೇರಿದಂತೆ ಹಲವೆಡೆ ಹಬ್ಬಕ್ಕೆ ಅಂತಾ ತಂದಿದ್ದ ಬಾಳೇಕಂದು, ಹಣ್ಣುಗಳು, ಮಾವಿನಸೊಪ್ಪು ರಸ್ತೆಗಳಲ್ಲಿ ರಾಶಿ ರಾಶಿ ತ್ಯಾಜ್ಯ ಸೃಷ್ಟಿಸಿದ್ದು, ಗಾರ್ಡನ್ ಸಿಟಿಯ ರಸ್ತೆಗಳಲ್ಲಿ ಗಾರ್ಬೇಜ್ ರಾರಾಜಿಸುತ್ತಿದೆ.
ಇನ್ನು ಪ್ರತಿಬಾರಿ ಹಬ್ಬ ಬಂದಾಗಲೂ ಮಾರ್ಕೆಟ್ನಲ್ಲಿ ವ್ಯಾಪಾರಿಗಳಿಗೆ ಬಿಬಿಎಂಪಿ ಸ್ವಚ್ಛತೆಯ ಪಾಠ ಹೇಳುತ್ತಿದ್ದರೂ ಕೂಡ ವ್ಯಾಪಾರಿಗಳ ನಡೆಯಿಂದ ರಾಶಿ ರಾಶಿ ಕಸ ರಸ್ತೆಯ ಬದಿಯಲ್ಲೇ ರಾರಾಜಿಸುವಂತಾಗಿದೆ.
5 ಸಾವಿರ ಟನ್ ಹೆಚ್ಚುವರಿ ಕಸ
ಪ್ರತಿದಿನಕ್ಕಿಂತ ಸರಿಸುಮಾರು 5 ಸಾವಿರ ಟನ್ ಹೆಚ್ಚುವರಿ ಕಸ ಉತ್ಪತಿಯಾಗಿದ್ದು, ಇತ್ತ ಪ್ರಮುಖ ರಸ್ತೆಗಳು, ಜಂಕ್ಷನ್ ಬಳಿ ಕೊಳೆತ ಹಣ್ಣುಗಳು, ಉಳಿದ ಬಾಳೇಕಂದುಗಳು ಬೇಕಾಬಿಟ್ಟಿಯಾಗಿ ಬಿದ್ದಿರೋದು ಜನರಿಗೆ ಕಿರಿಕಿರಿ ಉಂಟು ಮಾಡಿದೆ. ಇತ್ತ ಹಬ್ಬದ ವೇಳೆ ಘನತ್ಯಾಜ್ಯ ನಿರ್ವಹಣೆ ಮಾಡಿ ಎಂದ ಮಾರ್ಗಸೂಚಿ ಹೊರಡಿಸಿದ್ದ ಪಾಲಿಕೆ ರಾಶಿ ರಾಶಿ ಕಸ ಬಿದ್ದಿದ್ದರೂ ಕಸ ತೆರವು ಮಾಡದೇ ಇರೋದಕ್ಕೆ ಜನರು ಕಿಡಿಕಾರುತ್ತಿದ್ದಾರೆ.
ಇದನ್ನೂ ಓದಿ: ಮೈಸೂರು ದಸರಾ: ಜಂಬೂಸವಾರಿ ಪ್ರಮುಖ ಆಕರ್ಷಣೆಯಾದ 31 ಜಿಲ್ಲೆಗಳ 51 ಸ್ಥಬ್ಧಚಿತ್ರಗಳು
ಸದ್ಯ ರಾಜಧಾನಿಯಲ್ಲಿ ಈಗಾಗಲೇ ಕಸದ ಸಮಸ್ಯೆ ಹಲವೆಡೆ ಸದ್ದುಮಾಡುತ್ತಿದೆ. ಇಂತಹ ಹೊತ್ತಲ್ಲೇ ಹಬ್ಬದ ಹಿನ್ನೆಲೆ ಮತ್ತಷ್ಟು ಕಸದ ರಾಶಿ ಹೆಚ್ಚಾಗಿದ್ದು, ಇತ್ತ ಹಬ್ಬದ ಸಂದರ್ಭ ಕಸವನ್ನು ಸೂಕ್ತವಾಗಿ ನಿರ್ವಹಣೆ ಮಾಡಿ ಎಂದು ಮಾರ್ಗಸೂಚಿ ಹೊರಡಿಸಿದ್ದ ಪಾಲಿಕೆ ಅಲರ್ಟ್ ಆಗಬೇಕಿದೆ. ಸದ್ಯ ಹಬ್ಬದ ಹಿನ್ನೆಲೆ ಬಹುತೇಕ ಪೌರಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಿರುವುದು ಕೂಡ ಕಸದ ಸಮಸ್ಯೆ ಮತ್ತಷ್ಟು ಹೆಚ್ಚಲು ಕಾರಣವಾಗಿದೆ. ಸದ್ಯ ಹಬ್ಬ ಈ ಸಂದರ್ಭದಲ್ಲಿ ಉತ್ಪತಿಯಾದ ಹೆಚ್ಚುವರಿ ಕಸವನ್ನು ಪಾಲಿಕೆ ಹೇಗೆ ನಿರ್ವಹಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ