ದೀಪಾವಳಿ ಹಬ್ಬಕ್ಕೆ ಊರಿನತ್ತ ಹೋಗುವವರಿಗೆ ಶಾಕ್! ಖಾಸಗಿ ಬಸ್‌ಗಳ ಟಿಕೆಟ್ ದರ ದುಪ್ಪಟ್ಟು

ದೀಪಾವಳಿ ಹಬ್ಬಕ್ಕೆ ಊರಿಗೆ ತೆರಳುವ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲೀಕರು ದರ ದುಪ್ಪಟ್ಟು ಮಾಡಿ ಆಘಾತ ನೀಡಿದ್ದಾರೆ. ಸಾಮಾನ್ಯ ದಿನಗಳಿಗಿಂತ ನಾಲ್ಕು ಪಟ್ಟು ದರ ಹೆಚ್ಚಳ ಮಾಡಲಾಗಿದೆ. ಇದು ಪ್ರಯಾಣಿಕರು ಆಕ್ರೋಶಕ್ಕೆ ಕಾರಣವಾಗಿದೆ. ಹೀಗಿರುವಾಗ ಕೆಎಸ್ಆರ್ಟಿಸಿ ಬೆಂಗಳೂರಿನಿಂದ 2600 ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಿದೆ.

ದೀಪಾವಳಿ ಹಬ್ಬಕ್ಕೆ ಊರಿನತ್ತ ಹೋಗುವವರಿಗೆ ಶಾಕ್! ಖಾಸಗಿ ಬಸ್‌ಗಳ ಟಿಕೆಟ್ ದರ ದುಪ್ಪಟ್ಟು
ಖಾಸಗಿ ಬಸ್​ (ಪ್ರಾತಿನಿಧಿಕ ಚಿತ್ರ)
Image Credit source: Getty images
Edited By:

Updated on: Nov 03, 2026 | 9:50 PM

ಬೆಂಗಳೂರು, ನವೆಂಬರ್​​ 03: ದೀಪಾವಳಿ ಹಬ್ಬ ಹಿನ್ನೆಲೆ ಊರಿಗೆ ತೆರಳಲು ಸಿದ್ಧತೆ ನಡೆಸಿರುವ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲೀಕರು ಶಾಕ್ ನೀಡಿದ್ದಾರೆ. ಹಬ್ಬದ ರಜೆಯನ್ನು ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ ಮಾಲೀಕರು ಟಿಕೆಟ್ ದರವನ್ನು ದುಪ್ಪಟ್ಟು ಏರಿಕೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕೆಲವು ಮಾರ್ಗಗಳಲ್ಲಿ ಮೂರರಿಂದ ನಾಲ್ಕು ಪಟ್ಟು ಹೆಚ್ಚಿಸಿದ್ದಾರೆ. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಖಾಸಗಿ ಬಸ್​ಗಳಿಂದ ಒನ್ ಟು ಡಬಲ್ ದರ ಏರಿಕೆ

ಹಬ್ಬದ ರಜೆ ಬಂತು ಅಂದರೆ ಖಾಸಗಿ ಬಸ್​ಗಳಿಗೆ ಹಬ್ಬವೋ ಹಬ್ಬ. ಈ ಭಾನುವಾರದಿಂದ ಬೆಳಕಿನ ಹಬ್ಬ ದೀಪಾವಳಿ ಆರಂಭವಾಗಲಿದ್ದು, ಶುಕ್ರವಾರವೇ ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ಜನರು ತೆರಳುತ್ತಾರೆ. ಇದನ್ನು ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ ಮಾಲೀಕರು, ಒನ್ ಟು ಡಬಲ್ ದರ ಏರಿಕೆ ಮಾಡಿದ್ದಾರೆ.

ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಕೆಎಸ್​​​ಆರ್​​ಟಿಸಿ ಗುಡ್​​ ನ್ಯೂಸ್: ಬೆಂಗಳೂರಿನಿಂದ 2,600 ಹೆಚ್ಚುವರಿ ವಿಶೇಷ ಬಸ್

ಹೀಗೆ ಹಬ್ಬಗಳ ಸೀಜನ್ ಬಂತು ಅಂದರೆ ಖಾಸಗಿ ಬಸ್ ಮಾಲೀಕರಿಗೆ ಭರ್ಜರಿ‌ ಲಾಟರಿ. ಸಿಕ್ಕಿದ್ದೆ ಚಾನ್ಸ್ ಅಂತ ಜನರಿಂದ ವಸೂಲಿಗೆ ಇಳಿಯುತ್ತಾರೆ. ರಜೆ ಅಂತ ಮನೆ ಕಡೆ ತೆರಳುವವರ ಜೇಬಿಗೆ ಕತ್ತರಿ ಹಾಕುತ್ತಾರೆ. ಹೀಗೆ ಅವಕಾಶ ಸಿಕ್ಕಾಗೆಲ್ಲಾ ದರ ಏರಿಕೆ ಮಾಡುವ ಖಾಸಗಿ ಮಾಲೀಕರ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯ ದಿನ ಮತ್ತು ಹಬ್ಬದದಂದು ಇರುವ ಖಾಸಗಿ ಬಸ್​ ದರಗಳು  

  • ಬೆಂಗಳೂರು ಟು ಚಿಕ್ಕಮಗಳೂರು ಮಾರ್ಗದಲ್ಲಿ ಸಾಮಾನ್ಯ ದಿನಗಳಲ್ಲಿ 366 ರಿಂದ 618 ರೂ. ಇರುವ ದರ ಹಬ್ಬದ ಸಂದರ್ಭದಲ್ಲಿ 1000 ರಿಂದ 1836 ರೂ. ಏರಿಕೆ ಮಾಡಲಾಗಿದೆ.
  • ಬೆಂಗಳೂರು ಟು ಮಂಗಳೂರು ಮಾರ್ಗದಲ್ಲಿ ಸಾಮಾನ್ಯ ದಿನಗಳಲ್ಲಿ 496 ರಿಂದ 1157 ರೂ. ಇರುವ ದರ ಹಬ್ಬದ ಸಂದರ್ಭದಲ್ಲಿ 1785 ರಿಂದ 4999 ರೂ. ಏರಿಕೆ ಮಾಡಲಾಗಿದೆ.
  • ಬೆಂಗಳೂರು ಟು ಧಾರವಾಡ ಮಾರ್ಗದಲ್ಲಿ ಸಾಮಾನ್ಯ ದಿನಗಳಲ್ಲಿ 389 ರಿಂದ 1300 ರೂ. ಇರುವ ದರ ಹಬ್ಬದ ಸಂದರ್ಭದಲ್ಲಿ 1400 ರಿಂದ 7000 ರೂ. ಏರಿಕೆ ಮಾಡಲಾಗಿದೆ.
  • ಬೆಂಗಳೂರು ಟು ಹುಬ್ಬಳ್ಳಿ ಮಾರ್ಗದಲ್ಲಿ ಸಾಮಾನ್ಯ ದಿನಗಳಲ್ಲಿ 660 ರಿಂದ 1700 ರೂ. ಇರುವ ದರ ಹಬ್ಬದ ಸಂದರ್ಭದಲ್ಲಿ 1989 ರಿಂದ 8000 ರೂ. ಏರಿಕೆ ಮಾಡಲಾಗಿದೆ.
  • ಬೆಂಗಳೂರು ಟು ಕಾರವಾರ ಮಾರ್ಗದಲ್ಲಿ ಸಾಮಾನ್ಯ ದಿನಗಳಲ್ಲಿ 542 ರಿಂದ 900 ರೂ. ಇರುವ ದರ ಹಬ್ಬದ ಸಂದರ್ಭದಲ್ಲಿ 1690 ರಿಂದ 6999 ರೂ. ಏರಿಕೆ ಮಾಡಲಾಗಿದೆ.
  • ಬೆಂಗಳೂರು ಟು ಕಲಬುರಗಿ ಮಾರ್ಗದಲ್ಲಿ ಸಾಮಾನ್ಯ ದಿನಗಳಲ್ಲಿ 699 ರಿಂದ 1400 ರೂ. ಇರುವ ದರ ಹಬ್ಬದ ಸಂದರ್ಭದಲ್ಲಿ 1699 ರಿಂದ 4000 ರೂ. ಏರಿಕೆ ಮಾಡಲಾಗಿದೆ.
  • ಬೆಂಗಳೂರು ಟು ಶಿವಮೊಗ್ಗ ಮಾರ್ಗದಲ್ಲಿ ಸಾಮಾನ್ಯ ದಿನಗಳಲ್ಲಿ 450 ರಿಂದ 1100 ರೂ. ಇರುವ ದರ ಹಬ್ಬದ ಸಂದರ್ಭದಲ್ಲಿ 1199 ರಿಂದ 2297 ರೂ. ಏರಿಕೆ ಮಾಡಲಾಗಿದೆ.
  • ಬೆಂಗಳೂರು ಟು ಧರ್ಮಸ್ಥಳ ಮಾರ್ಗದಲ್ಲಿ ಸಾಮಾನ್ಯ ದಿನಗಳಲ್ಲಿ 530 ರಿಂದ 999 ರೂ. ಇರುವ ದರ ಹಬ್ಬದ ಸಂದರ್ಭದಲ್ಲಿ 1199 ರಿಂದ 1800 ರೂ. ಏರಿಕೆ ಮಾಡಲಾಗಿದೆ.
  • ಬೆಂಗಳೂರು ಟು ಮೈಸೂರು ಮಾರ್ಗದಲ್ಲಿ ಸಾಮಾನ್ಯ ದಿನಗಳಲ್ಲಿ 350 ರಿಂದ 1000 ರೂ. ಇರುವ ದರ ಹಬ್ಬದ ಸಂದರ್ಭದಲ್ಲಿ 450 ರಿಂದ 2200 ರೂ. ಏರಿಕೆ ಮಾಡಲಾಗಿದೆ.
  • ಬೆಂಗಳೂರು ಟು ಕೊಡಗು ಮಾರ್ಗದಲ್ಲಿ ಸಾಮಾನ್ಯ ದಿನಗಳಲ್ಲಿ 499 ರಿಂದ 900 ರೂ. ಇರುವ ದರ ಹಬ್ಬದ ಸಂದರ್ಭದಲ್ಲಿ 850 ರಿಂದ 2706 ರೂ. ಏರಿಕೆ ಮಾಡಲಾಗಿದೆ.

ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮ ಹೇಳಿದ್ದಿಷ್ಟು 

ಖಾಸಗಿ ಬಸ್ ದರ ಏರಿಕೆ ಆಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮ, ‘ಸರ್ಕಾರ ಖಾಸಗಿ ಬಸ್​​ಗಳಿಂದ ದುಪ್ಪಟ್ಟು ತೆರಿಗೆ ವಸೂಲಿ ಮಾಡುತ್ತಿದೆ. ಡೀಸೆಲ್, ಟೈರ್, ಬಿಡಿಭಾಗಗಳು ಸೇರಿದಂತೆ ಎಲ್ಲಾ ದರಗಳು ಏರಿಕೆ ಆಗಿವೆ. ಕೆಎಸ್ಆರ್ಟಿಸಿ ಕೂಡ ಈಗಾಗಲೇ ಟಿಕೆಟ್ ದರ ಏರಿಕೆ ಮಾಡಿದೆ, ಹಾಗಾಗಿ ನಾವು ಒಂದಷ್ಟು ಏರಿಕೆ ಮಾಡಿದ್ದೇವೆ’ ಎಂದಿದ್ದಾರೆ.

ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಹೊಸ ರೂಲ್ಸ್; ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ!

ಒಟ್ಟಿನಲ್ಲಿ ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಖಾಸಗಿ ಬಸ್ ಮಾಲೀಕರು ದರ ಏರಿಕೆ ಮಾಡಿ ಶಾಕ್ ನೀಡಿದ್ದಾರೆ. ಇತ್ತ ಕೆಎಸ್ಆರ್ಟಿಸಿ ಹೆಚ್ಚುವರಿ ಬಸ್​ಗಳ ವ್ಯವಸ್ಥೆ ಮಾಡಿರುವುದು ಪ್ರಯಾಣಿಕರಿಗೆ ಕೊಂಚ ನಿರಾಳ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Loading...
Unable to load recommendations.
Follow Us