ಬೀದಿ ನಾಯಿಗಳ ಹಿಡಿಯುವುದು ಕ್ರೌರ್ಯ ಎಂದ ಸಿದ್ದರಾಮಯ್ಯ, ರಾಹುಲ್ ಗಾಂಧಿ: ಇತ್ತ ಬೆಂಗಳೂರು ವಿವಿ ಆವರಣದಲ್ಲಿ ಬೀದಿ ನಾಯಿಗಳ ಅಟ್ಟಹಾಸ

ಒಂದೆಡೆ ಕರ್ನಾಟಕದಲ್ಲಿ ನಾಯಿ ಕಡಿತ ಪ್ರಕರಣಗಳು ಹೆಚ್ಚುತ್ತಿರುವ ಅಂಕಿಅಂಶ ಬಯಲಾದ ಸಂದರ್ಭದಲ್ಲೇ ಬೆಂಗಳೂರಿನಲ್ಲಿ ಬೀದಿನಾಯಿಗಳು ಎಂದರೆ ಜನ ಬೆದರುವಂತಾಗಿದೆ. ಮಂಗಳವಾರ ಬೆಂಗಳೂರು ವಿವಿ ಆವರಣದಲ್ಲಿ ಇಬ್ಬರು ವಿದ್ಯಾರ್ಥಿನಿಯರ ಮೇಲೆ ನಾಯಿಗಳು ದಾಳಿ ಮಾಡಿವೆ. ಮತ್ತೊಂದೆಡೆ, ಬೀದಿ ನಾಯಿಗಳ ಸೆರೆ ಹಿಡಿಯುವುದು ಪರಿಹಾರವಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅದನ್ನು ಬೆಂಬಲಿಸಿದ್ದಾರೆ. ಬೀದಿ ನಾಯಿಗಳ ಹಿಡಿಯುವುದು ಆಡಳಿತವಲ್ಲ ಕ್ರೌರ್ಯ ಎಂದು ಸಿಎಂ ಹೇಳಿದ್ದಾರೆ.

ಬೀದಿ ನಾಯಿಗಳ ಹಿಡಿಯುವುದು ಕ್ರೌರ್ಯ ಎಂದ ಸಿದ್ದರಾಮಯ್ಯ, ರಾಹುಲ್ ಗಾಂಧಿ: ಇತ್ತ ಬೆಂಗಳೂರು ವಿವಿ ಆವರಣದಲ್ಲಿ ಬೀದಿ ನಾಯಿಗಳ ಅಟ್ಟಹಾಸ
ಬೀದಿ ನಾಯಿಗಳು (ಸಾಂದರ್ಭಿಕ ಚಿತ್ರ)

Updated on: Aug 13, 2025 | 6:55 AM

ಬೆಂಗಳೂರು, ಆಗಸ್ಟ್ 13: ಬೆಂಗಳೂರಿನಲ್ಲಿ (Bengaluru) ಬೀದಿನಾಯಿಗಳ (Stray Dogs) ಅಟ್ಟಹಾಸ ಮಿತಿಮೀರಿದೆ. ನಾಯಿ ಹಾವಳಿ ನಿಯಂತ್ರಣ ಮಾಡಬೇಕಿರುವ ಪಾಲಿಕೆ, ಅವುಗಳಿಗೆ ಬಿರಿಯಾನಿ ನೀಡುವ ಚರ್ಚೆಯಲ್ಲೇ ಮಗ್ನವಾಗಿದೆ. ಈ ಮಧ್ಯೆ ಮಂಗಳವಾರ ಬೆಂಗಳೂರು ವಿವಿ ಆವರಣದಲ್ಲೇ ವಿದ್ಯಾರ್ಥಿನಿಯರ ಮೇಲೆ ಬೀದಿನಾಯಿಗಳು ದಾಳಿ ಮಾಡಿವೆ. ಬೆಂಗಳೂರು ವಿವಿ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಯೂನಿವರ್ಸಿಟಿಯ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿನಿ ಸೌಜನ್ಯ ಬೆಳಗ್ಗೆ ಎಂದಿನಂತೆ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ 8 ರಿಂದ 10 ನಾಯಿಗಳು ಆಕೆ ಮೇಲೆ ಏಕಾಏಕಿ ದಾಳಿ ಮಾಡಿವೆ. ಸೌಜನ್ಯ ಜೋರಾಗಿ ಕಿರುಚಿಕೊಳ್ಳುತ್ತಿದ್ದಂತೆಯೇ ಸಹಪಾಠಿಗಳು ಹಾಗೂ ಸೆಕ್ಯೂರಿಟಿಗಳು ನಾಯಿಗಳನ್ನ ಓಡಿಸಿದ್ದಾರೆ.

ಮತ್ತೊಬ್ಬ ವಿದ್ಯಾರ್ಥಿನಿ ಮೇಲೆ ಬೀದಿ ನಾಯಿಗಳ ದಾಳಿ

ಸೌಜನ್ಯ ಮೇಲೆ ದಾಳಿ ಮಾಡಿದ್ದ ನಾಯಿಗಳ ಹಿಂಡನ್ನು ಓಡಿಸಲಾಗಿತ್ತು. ಹೀಗೆ ಅಲ್ಲಿಂದ ಓಡಿ ಹೋದ ನಾಯಿಗಳು, ಯೂನಿವರ್ಸಿಟಿ ಕ್ಯಾಂಪಸ್ ಪ್ರವೇಶದ್ವಾರದಲ್ಲಿ ತಿಂಡಿ ತೆಗೆದುಕೊಳ್ಳಲು ನಿಂತಿದ್ದ ನಿಶ್ಚಿತಾ ಎಂಬ ಮತ್ತೊಬ್ಬ ವಿದ್ಯಾರ್ಥಿನಿ ಮೇಲೂ ದಾಳಿ ಮಾಡಿವೆ.

ಇದನ್ನೂ ಓದಿ
ಕರ್ನಾಟಕದಲ್ಲೂ ನಾಯಿ ಕಡಿತ ಪ್ರಕರಣ ಭಾರಿ ಹೆಚ್ಚಳ: ಈ ವರ್ಷ 26 ಜನ ಸಾವು
8 ವಾರದೊಳಗೆ ದೆಹಲಿಯ ಬೀದಿ ನಾಯಿಗಳನ್ನು ಹಿಡಿಯಲು ಸುಪ್ರೀಂ ಕೋರ್ಟ್ ಆದೇಶ
ಚಿಕ್ಕಮಗಳೂರು: 3 ದಿನದಲ್ಲಿ 35ಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿಗಳ ದಾಳಿ
ಬೀದಿ ನಾಯಿಗಳಿಗೆ ಬಿಬಿಎಂಪಿ ಬಾಡೂಟ: ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶ

ಬೀದಿನಾಯಿಗಳು ಸಮಸ್ಯೆಯಲ್ಲ: ರಾಹುಲ್ ಗಾಂಧಿ

ದೆಹಲಿ ಎನ್​​ಸಿಆರ್​ನಿಂದ ಬೀದಿ ನಾಯಿಗಳನ್ನು ಸೆರೆಹಿಡಿದು ತೆರವು ಮಾಡಬೇಕೆಂಬ ಸುಪ್ರೀಂ ಕೋರ್ಟ್ ನಿರ್ದೇಶನಕ್ಕೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ನಿರ್ದೇಶನವು ದಶಕಗಳ ಮಾನವೀಯ, ವಿಜ್ಞಾನ ಬೆಂಬಲಿತ ನೀತಿಯಿಂದ ಹಿಂದಕ್ಕೆ ಸರಿದಿದೆ. ಬೀದಿ ನಾಯಿಗಳು ಧ್ವನಿ ಇಲ್ಲದ ಆತ್ಮಗಳು. ಆಶ್ರಯ, ಲಸಿಕೆ, ಕ್ರಿಮಿನಾಶಕ ಚಿಕಿತ್ಸೆ, ಸಮುದಾಯ ಆರೈಕೆ ಮೂಲಕವೂ ಬೀದಿಗಳನ್ನು ಕ್ರೌರ್ಯವಿಲ್ಲದೆಯೂ ಸುರಕ್ಷಿತವಾಗಿಡಬಹುದು ಎಂದು ಅವರು ಟ್ವೀಟ್ ಮಾಡಿದ್ದಾರೆ.

ರಾಹುಲ್ ಗಾಂಧಿ ಬೆನ್ನಿಗೆ ನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ


ಬೀದಿ ನಾಯಿಗಳ ವಿಚಾರದಲ್ಲಿ ರಾಹುಲ್ ಗಾಂಧಿ ನಿಲುವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಸಿದ್ದಾರೆ. ಬೀದಿ ನಾಯಿಗಳನ್ನು ಹಿಡಿಯುವುದು ಆಡಳಿತವಲ್ಲ, ಅದು ಕ್ರೂರತನ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲೂ ನಾಯಿ ಕಡಿತ ಪ್ರಕರಣ ಗಣನೀಯ ಹೆಚ್ಚಳ: ಈ ವರ್ಷ 26 ಮಂದಿ ಸಾವು

ಮಾನವ ಸಮಾಜವು ತನ್ನ ಮತ್ತು ಪ್ರಾಣಿಗಳ ಭದ್ರತೆಯನ್ನು ಎತ್ತಿಹಿಡಿಯುವ ಪರಿಹಾರ ಕಂಡುಕೊಳ್ಳುತ್ತದೆ. ಬೀದಿನಾಯಿಗಳನ್ನು ಉಪದ್ರವ ಎಂದು ಪರಿಗಣಿಸಿ, ಹೊರಹಾಕುವುದು ಆಡಳಿತವಲ್ಲ, ಬದಲಿಗೆ ಕ್ರೌರ್ಯ ಎನಿಸಿಕೊಳ್ಳುತ್ತದೆ. ನಮ್ಮೆದುರು ಸಂತಾನಶಕ್ತಿ ಹರಣ ಚಿಕಿತ್ಸೆ, ಲಸಿಕೆ, ಆರೈಕೆ ಕೇಂದ್ರಗಳಂತಹ ಪರಿಹಾರ ಕ್ರಮಗಳಿವೆ. ಭಯಗ್ರಸ್ತ ಮನಸ್ಥಿತಿಯಿಂದ ಕೈಗೊಂಡ ಕ್ರಮಗಳು ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ ಎಂದು ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.

ಐದಾರು ಜನ್ರಿಗೆ ಕಚ್ಚಿದ ನಾಯಿಯನ್ನ ಕೊಂದೇ ಬಿಟ್ಟ ಜನ

ಅತ್ತ ಬೀದರ್‌ ತಾಲೂಕಿನ ಮನ್ನಾಖೇಳಿ ಗ್ರಾಮದಲ್ಲಿಯೂ ಬೀದಿನಾಯಿ ಹಾವಳಿ ಹೆಚ್ಚಾಗಿದೆ. ಅದರಲ್ಲೂ ವಾರದ ಹಿಂದೆ ಐದಾರು ಜನರನ್ನು ನಾಯಿಯೊಂದು ಕಚ್ಚಿತ್ತು. ಮತ್ತೆ ಮತ್ತೆ ಕಚ್ಚುತ್ತದೆ ಎಂಬ ಕಾರಣಕ್ಕೆ ಹೆದರಿದ ಜನ ಆ ನಾಯಿಯನ್ನು ಕೊಂದೇ ಬಿಟ್ಟಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:52 am, Wed, 13 August 25