ಬೆಂಗಳೂರು, ಸೆಪ್ಟೆಂಬರ್ 9: ಬೆಂಗಳೂರಿನ ಬಹುನಿರೀಕ್ಷಿತ ಚಾಲಕ ರಹಿತ / ಡ್ರೈವರ್ ಲೆಸ್ ಮೆಟ್ರೋ ರೈಲುಗಳನ್ನು ಪಿಂಕ್ ಮತ್ತು ಬ್ಲೂ ಲೈನ್ನಲ್ಲಿ ಟ್ರ್ಯಾಕ್ಗಿಳಿಸಲು ಬಿಎಂಆರ್ಸಿಎಲ್ ಮುಂದಾಗಿದೆ. ಆದರೆ, ಈ ಬಾರಿ ವಿಶೇಷ ಅಂದರೆ ಈ ಎರಡು ಮಾರ್ಗಗಗಳಲ್ಲಿ ಸಂಚಾರ ಮಾಡಲಿರುವ ಮೆಟ್ರೋ ರೈಲುಗಳನ್ನು ಕೇಂದ್ರ ಸರ್ಕಾರ, ಬೆಂಗಳೂರಿನ ಬೆಮಲ್ನಲ್ಲಿ ತಯಾರು ಮಾಡಿಸುತ್ತಿದೆ. ಈಗಾಗಲೇ ಈ ಒಪ್ಪಂದಕ್ಕೆ ಬಿಎಂಆರ್ಸಿಎಲ್ ಮತ್ತು ಬೆಮಲ್ ಮುಖ್ಯಸ್ಥರು ಸಹಿ ಹಾಕಿದ್ದಾರೆ.
ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಡ್ರೈವರ್ ಲೆಸ್ ರೈಲು ಕೋಚ್ಗಳು ತಯಾರಾಗಲಿವೆ. 3177 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಡ್ರೈವರ್ ಲೆಸ್ ರೈಲುಗಳು ನಿರ್ಮಾಣವಾಗುತ್ತಿದ್ದು, 53 ಟ್ರೈನ್ ಸೆಟ್ಗಳು ಸೇರಿದಂತೆ 318 ಕೋಚ್ಗಳನ್ನು ಬೆಮಲ್ ತಯಾರು ಮಾಡಲಿದೆ. ಕಾಳೇನ ಅಗ್ರಹಾರದಿಂದ ನಾಗವಾರ ( ಪಿಂಕ್ ಲೈನ್ ) 21 ಕಿಮೀ ಹಾಗೂ ಸಿಲ್ಕ್ ಬೋರ್ಡ್ನಿಂದ ವಿಮಾನ ನಿಲ್ದಾಣ (ಬ್ಲೂ ಲೈನ್) 55 ಕಿ.ಮೀ ಎರಡು ಮಾರ್ಗದಲ್ಲೂ ಡ್ರೈವರ್ ಲೆಸ್ ಮೆಟ್ರೋ ರೈಲುಗಳು ಸಂಚಾರ ಮಾಡಲಿವೆ ಎಂದು ಬಿಎಂಆರ್ಸಿಎಲ್ ಎಂಡಿ ಮಹೇಶ್ವರ ರಾವ್ ತಿಳಿಸಿದ್ದಾರೆ.
ಈಗಾಗಲೇ ಆರ್ವಿ ರಸ್ತೆಯಿಂದ ಬೊಮ್ಮಸಂದ್ರ (ಹಳದಿ ಮಾರ್ಗಕ್ಕೆ) ಚೀನಾದಿಂದ ಡ್ರೈವರ್ ಲೆಸ್ ರೈಲುಗಳನ್ನು ತರಿಸಿಕೊಳ್ಳಲಾಗಿದೆ. ಚೀನಾದಿಂದ ಸರಿಯಾದ ಸಮಯಕ್ಕೆ ಆ ರೈಲುಗಳು ಬರಲಿಲ್ಲ, ಸಾಗಾಟ ತುಂಬಾ ವಿಳಂಬವಾಗಿತ್ತು. ಇನ್ನೂ ಆ ರೈಲುಗಳು ಟ್ರಯಲ್ ರನ್ ನಡೆಸುತ್ತಿವೆ. ಈ ವರ್ಷ ಅಥವಾ ಮುಂದಿನ ವರ್ಷ ಈ ಮಾರ್ಗಕ್ಕೆ ಚಾಲನೆ ಸಿಗಲಿದ್ದು, ಪಿಂಕ್ ಮತ್ತು ಬ್ಲೂ ಲೈನ್ ಮಾರ್ಗಕ್ಕೆ ಮೆಟ್ರೋ ಕೋಚ್ಗಳು ವಿಳಂಬವಾಗಬಾರದು ಎಂದು ಬೆಂಗಳೂರಿನ ಬೆಮಲ್ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ವಿಮಾನ ನಿಲ್ದಾಣಕ್ಕಾಗಿ ಬೆಂಗಳೂರು ಸುತ್ತ 5 ಸ್ಥಳಗಳನ್ನು ಗುರುತಿಸಿದ ರಾಜ್ಯ ಸರ್ಕಾರ
ಒಟ್ಟಿನಲ್ಲಿ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ನಮ್ಮ ಬೆಂಗಳೂರಿನ ಬೆಮಲ್ನಲ್ಲಿ ಡ್ರೈವರ್ಲೆಸ್ ರೈಲುಗಳು ತಯಾರಾಗುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವೇ ಸರಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ