
ಬೆಂಗಳೂರು, ನವೆಂಬರ್ 04: ಪಡಿತರ ಚೀಟಿದಾರರು ಮರು ಇ-ಕೆವೈಸಿ ಮಾಡಿಸಲು ನವೆಂಬರ್ 10 ಕೊನೆಯ ದಿನವಾಗಿದೆ. ಬಾಕಿ ಉಳಿದಿರುವ ಎಲ್ಲ ಪಡಿತರ ಚೀಟಿದಾರರು ನಿಗದಿತ ದಿನಾಂಕದೊಳಗೆ ಕಡ್ಡಾಯವಾಗಿ ತಪ್ಪದೇ ಇ-ಕೆವೈಸಿ ಮಾಡಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಸೂಚೆನ ನೀಡಿದೆ.
ರಾಜ್ಯದಲ್ಲಿ ಮರು ಇ-ಕೆವೈಸಿ ಮಾಡಿಸಬೇಕಿದ್ದ ಒಟ್ಟು 2,67,64,276 ಪಡಿತರ ಚೀಟಿ ಫಲಾನುಭವಿಗಳ ಪೈಕಿ, ನವೆಂಬರ್ 3 ರವರೆಗೆ 2,26,30,747 ಫಲಾನುಭವಿಗಳು ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಇನ್ನುಳಿದ 41,33,529 ಫಲಾನುಭವಿಗಳು ಇ-ಕೆವೈಸಿ ಮಾಡಿಸಬೇಕಿದೆ.
ಈಗಾಗಲೇ ಒಂದು ಬಾರಿ ಇ-ಕೆವೈಸಿ ಮಾಡಿಸಲು ನೀಡಲಾಗಿದ್ದ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದ್ದು, ನವೆಂಬರ್ 10ರ ನಂತರ ಯಾವುದೇ ಕಾರಣಕ್ಕೂ ಕೊನೆಯ ದಿನಾಂಕ ವಿಸ್ತರಣೆ ಮಾಡಲಾಗುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಸ್ಪಷ್ಟನೆ ನೀಡಿದೆ.
ಇನ್ನು ಬಾಕಿ ಉಳಿದಿರುವ ಎಲ್ಲಾ ಫಲಾನುಭವಿಗಳು ‘ಅನ್ನ ಸೇವೆ’ ಮೊಬೈಲ್ ಅಪ್ಲಿಕೇಶನ್ ಮೂಲಕ ಖುದ್ದಾಗಿ ಅಥವಾ ನ್ಯಾಯಬೆಲೆ ಅಂಗಡಿಗಳಲ್ಲಿ ‘AHARA’ ತಂತ್ರಾಂಶದ ಮೂಲಕ ನವೆಂಬರ್ 10 ರೊಳಗೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು. ನಿಗದಿತ ಗಡುವಿನೊಳಗೆ ಇ-ಕೆವೈಸಿ ಮಾಡಿಸದಿದ್ದಲ್ಲಿ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ರೇಷನ್ ಕಾರ್ಡ್ ಇ-ಕೆವೈಸಿ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಸಚಿವ ರಿಜ್ವಾನ್ ಆರ್ಷದ್, ಬರಲಿದೆ ಮೊಬೈಲ್ ಆ್ಯಪ್
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.