ರೇಷನ್ ಕಾರ್ಡ್ ಇ-ಕೆವೈಸಿ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಸಚಿವ ರಿಜ್ವಾನ್ ಆರ್ಷದ್, ಬರಲಿದೆ ಮೊಬೈಲ್ ಆ್ಯಪ್
ಕರ್ನಾಟಕದಲ್ಲಿ ಪಡಿತರ ಚೀಟಿಯ ಇ-ಕೆವೈಸಿ ಟೆನ್ಷನ್ ಶುರುವಾಗಿದೆ. ಬಿಪಿಎಲ್-ಎಪಿಎಲ್ ಕಾರ್ಡ್ದಾರರು ಇ-ಕೆವೈಸಿ ಮಾಡಿಸಲು ಮುಗಿಬಿದ್ದಿದ್ದಾರೆ. ಸೆಪ್ಟೆಂಬರ್ 30 ರಂದು ಕೊನೆಯ ದಿನಾಂಕ ಹಿನ್ನೆಲೆ ನ್ಯಾಯಬೆಲೆ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ಆದ್ರೆ, ಕೆಲವು ಕಡೆ ಸರ್ವರ್ ಡೌನ್ ಸಮಸ್ಯೆ ಹೆಚ್ಚಾಗಿದ್ದು, ಜನರು ಹೈರಾಣಾಗಿ ಹೋಗಿದ್ದಾರೆ. ಈ ಹಿನ್ನೆಲೆ ರೇಷನ್ ಕಾರ್ಡ್ ಇ-ಕೆವೈಸಿ ಡೆಡ್ಲೈನ್ ಬದಲಾಗುತ್ತಾ? ತಾಂತ್ರಿಕ ಸಮಸ್ಯೆ ಹೆಚ್ಚಿದ ಹಿನ್ನೆಲೆ ಕೆವೈಸಿ ದಿನಾಂಕ ಮುಂದೂಡಿಕೆ ಆಗುತ್ತಾ? ಅನ್ನೋ ಪ್ರಶ್ನೆ ಉದ್ಭವಿಸಿದೆ. ಈ ಸಂಬಂಧ ರಾಜ್ಯ ಆಹಾರ ಸಚಿವ ರಿಜ್ವಾನ್ ಅರ್ಷದ್ ಅಧಿಕಾರಿಗಳ ಜತೆ ಸಭೆ ನಡೆಸಿ ಮಹತ್ವದ ಸೂಚನೆ ನೀಡಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 15): ರೇಷನ್ ಕಾರ್ಡ್ ಇ ಕೆವೈಸಿ ಮುಕ್ತಾಯಕ್ಕೆ ಕೇವಲ 15 ದಿನ ಅಷ್ಟೇ ಬಾಕಿ ಇದೆ. ಇ-ಕೆವೈಸಿ ಆಗದಿದ್ರೆ ರೇಷನ್ ಕಾರ್ಡ್ ರದ್ದಾಗಲಿದೆ. ಆದರೆ ಸರ್ವರ್ ಸಮಸ್ಯೆಯಿಂದಾಗಿ ಇ ಕೆವೈಸಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಇದುವರೆಗೂ ಕೇವಲ 36.44% ಅಷ್ಟೇ ಇ ಕೆವೈಸಿ ಆಗಿದೆ. ಒಂದು ಕಡೆ ಸರ್ವರ್ ಕಾಟ ಮತ್ತೊಂದು ಕಡೆ ಡೆಡ್ ಲೈನ್ ಆತಂಕ ನಡುವೆ ಇದುವರೆಗೂ 36.44% ಅಷ್ಟೇ ಇ ಕೈವೈಸಿ ಆಗಿದೆ. ಈ ಸಂಬಂಧ ಆಹಾರ ಸಚಿವ ರಿಜ್ವಾನ್ ಅರ್ಷದ್ ಇಂದು(ಸೆ,15) ವಿಕಾಸಸೌಧದಲ್ಲಿ ಹಿರಿಯ ಅಧಿಕಾರಿಗಳು, ಏನ್ ಐ ಸಿ ಹಾಗೂ ಕೆ ಹೆಚ್ ಡಿ ಸಿ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಆಹಾರ ಇಲಾಖೆಯ ಸರ್ವರ್ ನಲ್ಲಿ ಉಂಟಾಗುತ್ತಿರುವ ತಾಂತ್ರಿಕ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸೂಚಿಸಿದ್ದಾರೆ. ಅಲ್ಲದೇ ತಮ್ಮದೇ ಮೊಬೈಲ್ನಲ್ಲಿ ಇಕೆವೈಸಿ ಮಾಡಿಕೊಳ್ಳಲು ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಸಭೆ ಬಳಿಕ ಮಾತನಾಡಿದ ಸಚಿವರು, ಪ್ರಸ್ತುತ ಸೆಪ್ಟೆಂಬರ್ ತಿಂಗಳಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ನ್ಯಾಯಬೆಲೆ ಅಂಗಡಿಗಳಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಕೆಲವೆಡೆ ಸರ್ವರ್ ಹಾಗೂ ತಾಂತ್ರಿಕ ಸಮಸ್ಯೆಗಳು ಉಂಟಾಗುತ್ತಿರುವುದು ಗಮನಕ್ಕೆ ಬಂದಿದೆ. ಯಾವುದೇ ಸ್ಥಳದಲ್ಲಿ ಸಮಸ್ಯೆ ಗಮನಕ್ಕೆ ಬಂದ ತಕ್ಷಣವೇ NIC, KSDC ಹಾಗೂ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ತುರ್ತು ಕ್ರಮ ಕೈಗೊಂಡು ಸಮಸ್ಯೆಗಳನ್ನು ಕೂಡಲೇ ಬಗೆಹರಿಸಲು ಸೂಚಿಸಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: KSRTC ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ: ಇದ್ದಲ್ಲೇ ನಿಮ್ಮ ವಾಟ್ಸಾಪ್ ಮೂಲಕ ಟಿಕೆಟ್ ಬುಕ್ ಮಾಡ್ಬಹುದು
ಮೊಬೈಲ್ ಅಪ್ಲಿಕೇಶನ್ ಬಿಡುಗಡೆ
ಸಾರ್ವಜನಿಕರು ನ್ಯಾಯಬೆಲೆ ಅಂಗಡಿಗಳಿಗೆ ತೆರಳುವ ಅಗತ್ಯ ಕಡಿಮೆ ಮಾಡುವ ಉದ್ದೇಶದಿಂದ, ಮೊಬೈಲ್ ಮೂಲಕವೇ Face Authentication ಬಳಸಿ ಇ-ಕೆವೈಸಿ ಮಾಡಿಕೊಳ್ಳುವ ಸೌಲಭ್ಯವನ್ನು Directorate of Electronic Delivery of Citizen Services ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ನೊಂದು ವಾರದೊಳಗೆ ಸಾರ್ವಜನಿಕರ ಬಳಕೆಗೆ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಫಲಾನುಭವಿಗಳು ತಮ್ಮ ಮೊಬೈಲ್‌ನಲ್ಲಿಯೇ ಸ್ವತಃ ಇ-ಕೆವೈಸಿ ಪೂರ್ಣಗೊಳಿಸಬಹುದಾಗಿದೆ. ಇ-ಕೆವೈಸಿ ಪ್ರಕ್ರಿಯೆ ಸುಗಮವಾಗಿ ನಡೆಯಲು ಆಹಾರ ಅಪ್ಲಿಕೇಶನ್‌ನಲ್ಲಿ ಪ್ರತ್ಯೇಕ URLಗಳನ್ನೂ ಒದಗಿಸಲಾಗಿದೆ. ಅಲ್ಲದೆ, ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಆಹಾರ ಇಲಾಖೆಯ ಸರ್ವರ್‌ನ ಸಾಮರ್ಥ್ಯ ಮತ್ತು ಕಾರ್ಯಕ್ಷಮತೆಯನ್ನು ಪರಿಶೀಲಿಸಲು Load Testing ನಡೆಸಲಾಗುತ್ತಿದೆ.
ಇದುವರೆಗೂ 9754197 ಪಲಾನುಭವಿಗಳ ಇ -ಕೆವೈಸಿ ಪೂರ್ಣ
ಇ -ಕೆ ವೈ ಸಿ ಮಾಡಿಸಬೇಕಿರುವ 2,67,64,276 ಪಲಾನುಭವಿಗಳಲ್ಲಿ ಇದುವರೆಗೂ 9754197 ಪಲಾನುಭವಿಗಳು ಇ -ಕೆ ವೈ ಸಿ ಮಾಡಿಸಿದ್ದು ಶೇ 37 ರಷ್ಟು ಪೂರ್ಣಗೊಂಡಿದೆ. ಪ್ರತಿನಿತ್ಯ ಸರಾಸರಿ 5.40 ಲಕ್ಷ ಪಲಾನುಭವಿಗಳು ಇ -ಕೆ ವೈ ಸಿ ಮಾಡುತ್ತಿದ್ದಾರೆ. ಆಹಾರ ಇಲಾಖೆಯ ಸರ್ವರ್‌ಗೆ ಸಂಬಂಧಿಸಿದ ಸಮಸ್ಯೆಗಳು ಹಿಂದಿನಿಂದಲೂ ಇದ್ದು, ನಾನು ಆಹಾರ ಇಲಾಖೆಯ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ 3rd Party Agencyಯನ್ನು ನೇಮಕ ಮಾಡಿದ್ದೇನೆ ಎಂದರು
ಶಾಶ್ವತ ಪರಿಹಾರ ಕಲ್ಪಿಸಲು ಸೂಚನೆ
ಮುಂದಿನ ಒಂದು ತಿಂಗಳೊಳಗಾಗಿ ಆಹಾರ ಇಲಾಖೆಯ ಸರ್ವರ್ ಹಾಗೂ ತಾಂತ್ರಿಕ ವ್ಯವಸ್ಥೆಯಲ್ಲಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಾರ್ವಜನಿಕರಿಗೆ ಯಾವುದೇ ಅನಗತ್ಯ ತೊಂದರೆ ಆಗದಂತೆ, ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಮತ್ತಷ್ಟು ಸರಳ, ವೇಗದ ಮತ್ತು ಪರಿಣಾಮಕಾರಿಯಾಗಿ ಒದಗಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದ್ದು ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
Conducted a high-level review meeting on the E-KYC progress and the server-related issues affecting its implementation.
Discussed the challenges with all stakeholders involved in managing the process and reviewed the steps required to ensure seamless and timely completion of… pic.twitter.com/2ibDe22zjJ
— Rizwan Arshad (@ArshadRizwan) September 15, 2026
ಐದು ವರ್ಷಕ್ಕೊಮ್ಮೆ ಕಡ್ಡಾಯವಾಗಿ ಇ-ಕೆವೈಸಿ
ಕೇಂದ್ರ ಸರ್ಕಾರವು ದಿನಾಂಕ 22.07.2025ರಂದು ಹೊರಡಿಸಿರುವ Targeted Public Distribution System (Control) Amendment Order ಅನ್ವಯ, ಅರ್ಹ ಪಡಿತರ ಚೀಟಿದಾರರ ಪಟ್ಟಿಯನ್ನು ನಿಯಮಿತವಾಗಿ ಪರಿಶೀಲಿಸುವುದು ಹಾಗೂ ಪ್ರತಿ ಐದು ವರ್ಷಕ್ಕೊಮ್ಮೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಅದರಂತೆ, ಐದು ವರ್ಷ ಪೂರ್ಣಗೊಂಡಿರುವ ರಾಜ್ಯದ ಒಟ್ಟು 2,67,64,276 ಫಲಾನುಭವಿಗಳ ಮಾಹಿತಿಯನ್ನು NICಯಿಂದ ಪಡೆದು, ಮರು ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಎಲ್ಲಾ ಜಿಲ್ಲೆಗಳ ಜಂಟಿ/ಉಪ ನಿರ್ದೇಶಕರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಈ ಪ್ರಕ್ರಿಯೆಗೆ 30.09.2026 ಅಂತಿಮ ದಿನಾಂಕ ನಿಗದಿಪಡಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:09 pm, Tue, 15 September 26




