
ಬೆಂಗಳೂರು, ಮೇ 26: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (bangluru) ಎಬೋಲಾ ವೈರಸ್ ರೋಗದ (EVD) ಶಂಕಿತ ಪ್ರಕರಣವೊಂದು ಪತ್ತೆಯಾಗಿದೆ ಎನ್ನಲಾಗುತ್ತಿದ್ದು, ರಾಜಧಾನಿ ಜನತೆಯಲ್ಲಿ ತೀವ್ರ ಆತಂಕ ಮೂಡಿಸಿದೆ. ಉಗಾಂಡಾ ದೇಶದಿಂದ ಬಂದ 28 ವರ್ಷದ ವಿದೇಶಿ ಮಹಿಳೆಯಲ್ಲಿ ಎಬೋಲಾ ರೋಗದ ಲಕ್ಷಣಗಳು ಕಾಣಿಸಿಕೊಂಡಿದ್ದು, ಸದ್ಯ ಅವರನ್ನು ತೀವ್ರ ನಿಗಾದಲ್ಲಿ ಇರಿಸಲಾಗಿದೆ.
ಉಗಾಂಡಾ ದೇಶದ ಕ್ಯಾಂಪಾಲಾ ಮೂಲದ ನಾಗಿರೆ ಲತಿಫಾ (28) ಎಂಬ ಮಹಿಳೆ, ಕಳೆದ ಮೇ 23ರಂದು ಬೆಂಗಳೂರಿಗೆ ಆಗಮಿಸಿದ್ದರು. ಇಲ್ಲಿನ ‘ರಾಯಲ್ ಏಸ್ ಬೂಟಿಕ್’ ಹೋಟೆಲ್‌ನ ರೂಮ್ ನಂಬರ್ 303ರಲ್ಲಿ ತಂಗಿದ್ದರು. ಮಹಿಳೆಗೆ ಎಬೋಲಾ ಮಾದರಿಯ ಆರೋಗ್ಯ ಸಮಸ್ಯೆಗಳು ಪತ್ತೆಯಾಗುತ್ತಿದ್ದಂತೆ ಎಚ್ಚೆತ್ತ ಆರೋಗ್ಯ ಇಲಾಖೆ, ತಕ್ಷಣವೇ ಆದೇಶ ಹೊರಡಿಸಿ ಇಂದು ಆಂಬುಲೆನ್ಸ್ ಮೂಲಕ ಅವರನ್ನು ಐಸೋಲೇಷನ್ಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಶಂಕಿತ ಮಹಿಳೆಯಿಂದ ಮೇ 25ರಂದೇ ರಕ್ತ ಹಾಗೂ ಇತರ ಅಗತ್ಯ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಈ ಸ್ಯಾಂಪಲ್‌ಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಪುಣೆಯ ಲ್ಯಾಬ್‌ಗೆ ಕಳುಹಿಸಲಾಗಿದ್ದು, ವೈದ್ಯಕೀಯ ವರದಿಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಕಾಯುತ್ತಿದ್ದಾರೆ. ವರದಿ ಬಂದ ಬಳಿಕವಷ್ಟೇ ಮಹಿಳೆಗೆ ಎಬೋಲಾ ಸೋಂಕು ತಗುಲಿದೆಯೇ ಇಲ್ಲವೇ ಎಂಬುದು ಅಧಿಕೃತವಾಗಿ ದೃಢವಾಗಲಿದೆ. ನಾಳೆಯೊಳಗೆ ವರದಿ ಕೈಸೇರಲಿದೆ ಎಂದು ಆರೋಗ್ಯ ಇಲಾಖೆಯಿಂದ ಟಿವಿ9ಗೆ ಮಾಹಿತಿ ನೀಡಲಾಗಿದೆ. ವರದಿ ಬಳಿಕ ಸೂಕ್ತ ಕ್ರಮಕ್ಕೆ ಆರೋಗ್ಯ ಇಲಾಖೆ ಮುಂದಾಗಲಿದೆ.
ಎಬೋಲಾ ಸೋಂಕಿತ ರಾಷ್ಟ್ರಗಳಿಂದ ಬಂದವರಿಗೆ ಕ್ವಾರಂಟೈನ್ನಲ್ಲಿಡಲು ಇತ್ತೀಚೆಗೆ ಮಾರ್ಗಸೂಚಿ ಹೊರಡಿಸಲಾಗಿತ್ತು. ಬೆಂಗಳೂರಿಗೆ ಬರುವ ಪ್ರಯಾಣಿಕರಿಗೆ 21 ದಿನ ಕ್ವಾರಂಟೈನ್ನಲ್ಲಿಡಲು ಸರ್ಕಾರ ನಿರ್ಧರಿಸಿತ್ತು. ರೋಗಲಕ್ಷಣ ಕಂಡು ಬಂದರೆ ಹತ್ತಿರದ ಆಸ್ಪತ್ರೆಗೆ ವರದಿ ನೀಡಲು ಸೂಚಿಸಲಾಗಿತ್ತು. ಜತೆಗೆ IDSP ಅಡಿಯಲ್ಲಿ ತೀವ್ರ ನಿಗಾ ವ್ಯವಸ್ಥೆ ಮತ್ತು ಅನುಮಾನಾಸ್ಪದ ಪ್ರಕರಣಗಳ ಮೇಲ್ವಿಚಾರಣೆ ಮಾಡುವಂತೆ ಸೂಚಿಸಲಾಗಿತ್ತು.
ಇದನ್ನೂ ಓದಿ: ಕರ್ನಾಟಕದಲ್ಲಿ ಎಬೋಲಾ ಭೀತಿ: ಮಾರ್ಗಸೂಚಿ ಬಿಡುಗಡೆ, ಬೆಂಗಳೂರಿಗೆ ಬರುವವರಿಗೆ 21 ದಿನ ಕ್ವಾರಂಟೈನ್
ವಿಮಾನ ನಿಲ್ದಾಣಗಳು ಮತ್ತು ಪ್ರವೇಶ ಕೇಂದ್ರಗಳ ಸಮನ್ವಯ ವ್ಯವಸ್ಥೆ ಕಲ್ಪಿಸುವುದು, ಪ್ರತ್ಯೇಕ ಕ್ವಾರಂಟೈನ್ ಮತ್ತು ಐಸೋಲೇಷನ್ ಸೌಲಭ್ಯಗಳು ಹಾಗೂ ರೆಫರಲ್ ಆಂಬುಲೆನ್ಸ್ ವ್ಯವಸ್ಥೆಗೂ ಸೂಚಿಸಲಾಗಿದೆ. ಆರೋಗ್ಯ ಸಿಬ್ಬಂದಿಗೆ ತರಬೇತಿ ಹಾಗೂ ಸೋಂಕು ನಿಯಂತ್ರಣ ಕ್ರಮಗಳ ಬಲಪಡಿಸುವಿಕೆಗೆ ಆರೋಗ್ಯ ಇಲಾಖೆ ಸೂಚಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:45 pm, Tue, 26 May 26