AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ದರಕ್ಕಿಂತ ಹೆಚ್ಚು ಶುಲ್ಕ ವಸೂಲಿ ಆರೋಪ: ಓಲಾ, ಊಬರ್​​, ರ‍್ಯಾಪಿಡೋಗೆ ಶೋಕಾಸ್ ನೋಟಿಸ್

ಸರ್ಕಾರಿ ನಿಗದಿಪಡಿಸಿರುವ ದರ ನಿಯಮಗಳನ್ನು ಉಲ್ಲಂಘಿಸಿ ಪ್ರಯಾಣಿಕರಿಂದ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ, ಕರ್ನಾಟಕ ಸಾರಿಗೆ ಇಲಾಖೆಯು ಓಲಾ, ಊಬರ್ , ರ‍್ಯಾಪಿಡೋ ಮತ್ತು ನಮ್ಮ ಯಾತ್ರಿ ಆ್ಯಪ್ ಅಗ್ರಿಗೇಟರ್‌ಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ನೋಟಿಸ್ ಸ್ವೀಕರಿಸಿದ ಏಳು ದಿನಗಳೊಳಗೆ ಲಿಖಿತ ವಿವರಣೆ ಸಲ್ಲಿಸುವಂತೆ ಅಗ್ರಿಗೇಟರ್‌ಗಳಿಗೆ ಕಾಲಾವಕಾಶ ನೀಡಲಾಗಿದೆ. ನಿಗದಿತ ಅವಧಿಯಲ್ಲಿ ಪ್ರತಿಕ್ರಿಯೆ ನೀಡದಿದ್ದರೆ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ಎಚ್ಚರಿಸಿದೆ.

ಸರ್ಕಾರಿ ದರಕ್ಕಿಂತ ಹೆಚ್ಚು ಶುಲ್ಕ ವಸೂಲಿ ಆರೋಪ: ಓಲಾ, ಊಬರ್​​, ರ‍್ಯಾಪಿಡೋಗೆ ಶೋಕಾಸ್ ನೋಟಿಸ್
ಸಾಂದರ್ಭಿಕ ಚಿತ್ರImage Credit source: Getty Images
ಪ್ರಸನ್ನ ಹೆಗಡೆ
|

Updated on:Aug 13, 2026 | 7:41 AM

Share

ಮುಖ್ಯಾಂಶಗಳು

  • ಸರ್ಕಾರಿ ದರಕ್ಕಿಂತ ಹೆಚ್ಚು ಶುಲ್ಕ ವಸೂಲಿ ಆರೋಪ
  • ಓಲಾ, ಊಬರ್​​ ಮತ್ತು ರ‍್ಯಾಪಿಡೋಗೆ ನೋಟಿಸ್​
  • ಶೋಕಾಸ್​​ ನೋಟಿಸ್​​ ನೀಡಿರುವ ಸಾರಿಗೆ ಇಲಾಖೆ

ಬೆಂಗಳೂರು, ಆಗಸ್ಟ್​​ 13: ಸರ್ಕಾರಿ ನಿಗದಿಪಡಿಸಿರುವ ದರ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಪ್ರಮುಖ ರೈಡ್‌ ಹೈಲಿಂಗ್‌ ಅಗ್ರಿಗೇಟರ್‌ಗಳಾದ ಓಲಾ, ಊಬರ್​​, ರ‍್ಯಾಪಿಡೋ ಮತ್ತು ನಮ್ಮ ಯಾತ್ರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. 2024ರ ಫೆಬ್ರವರಿ 3ರಂದು ಸರ್ಕಾರ ಅಧಿಸೂಚನೆ ಮೂಲಕ ನಿಗದಿಪಡಿಸಿದ್ದ ದರಕ್ಕಿಂತ ಹೆಚ್ಚಿನ ಶುಲ್ಕವನ್ನು ಪ್ರಯಾಣಿಕರಿಂದ ವಸೂಲಿ ಮಾಡಲಾಗುತ್ತಿದೆ ಎಂದು ಹಲವು ಟ್ಯಾಕ್ಸಿ ಮತ್ತು ಚಾಲಕರ ಸಂಘಟನೆಗಳು ದೂರು ನೀಡಿದ್ದವು. ಕೆಲವು ಅಗ್ರಿಗೇಟರ್‌ಗಳು ಸರ್ಕಾರ ನಿಗದಿಪಡಿಸಿರುವ ದರವನ್ನು ಪಾಲಿಸುವ ಬದಲು ಪ್ರಯಾಣದ ಅವಧಿ ಸೇರಿದಂತೆ ವಿವಿಧ ಅಂಶಗಳ ಆಧಾರದ ಮೇಲೆ ಶುಲ್ಕ ಲೆಕ್ಕ ಹಾಕುತ್ತಿವೆ ಎಂದು ಸಂಘಟನೆಗಳು ಆರೋಪಿಸಿದ್ದ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ.

ಕ್ರಮಕ್ಕೆ ಆಗ್ರಹಿಸಿದ್ದ ವಾಹನ ಚಾಲಕರ ಸಂಘಟನೆಗಳು

ಆಗಸ್ಟ್ 4ರಂದು ನಡೆದ ಸಭೆಯಲ್ಲಿ ವಾಹನ ಚಾಲಕರ ಸಂಘಟನೆಗಳು ಅಗ್ರಿಗೇಟರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆಯನ್ನು ಒತ್ತಾಯಿಸಿದ್ದವು. ಸರ್ಕಾರದ ಅಧಿಸೂಚನೆಯಂತೆ ನಿಗದಿಪಡಿಸಿದ ದರವನ್ನೇ ಪ್ರಯಾಣಿಕರಿಂದ ವಸೂಲಿ ಮಾಡುವಂತೆ ಅಗ್ರಿಗೇಟರ್‌ಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದವು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರ ಕಲ್ಯಾಣ ಸಂಘವು ಓಲಾ, ಊಬರ್​​ ಸೇರಿದಂತೆ ಇತರ ಅಗ್ರಿಗೇಟರ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತ್ತು. ಕಂಪನಿಗಳು ಅಧಿಸೂಚಿತ ದರ ವ್ಯವಸ್ಥೆಯನ್ನು ಪಾಲಿಸುತ್ತಿಲ್ಲ ಹಾಗೂ ಸಮಯದ ಆಧಾರದ ಮೇಲೆ ಶುಲ್ಕ ನಿಗದಿಪಡಿಸುತ್ತಿವೆ ಎಂದು ಸಂಘ ಆರೋಪಿಸಿತ್ತು.

ಇದನ್ನೂ ಓದಿ: ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಯಾಕಿಲ್ಲ ಅನುಮತಿ? ಸರ್ಕಾರ ಹೇಳೋದೇನು?

ನೋಟಿಸ್ ಸ್ವೀಕರಿಸಿದ ಏಳು ದಿನಗಳೊಳಗೆ ಲಿಖಿತ ವಿವರಣೆ ಸಲ್ಲಿಕೆಗೆ ಸೂಚನೆ

ಇದೇ ವಿಚಾರವಾಗಿ ಮಾರ್ಚ್ 16ರಂದು ಕರ್ನಾಟಕ ಡ್ರೈವರ್ಸ್ ಫೆಡರೇಷನ್ ರಾಜ್ಯಾಧ್ಯಕ್ಷ ನಾರಾಯಣಸ್ವಾಮಿ ಸರ್ಕಾರಕ್ಕೆ ಮನವಿ ಕೂಡ ಸಲ್ಲಿಸಿದ್ದರು. ಓಲಾ, ಊಬರ್​​, ರ‍್ಯಾಪಿಡೋ ಸೇರಿದಂತೆ ಇತರ ಅಗ್ರಿಗೇಟರ್‌ಗಳು ಸರ್ಕಾರ ನಿಗದಿಪಡಿಸಿರುವ ದರದಂತೆ ಚಾಲಕರಿಗೆ ಆದಾಯ ದೊರೆಯುವುದನ್ನು ಖಚಿತಪಡಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದರು. ಸಾರಿಗೆ ಇಲಾಖೆ ಜಾರಿ ಮಾಡಿರುವ ನೋಟಿಸ್‌ನಲ್ಲಿ ಸರ್ಕಾರ ನಿಗದಿಪಡಿಸಿರುವ ದರಗಳನ್ನು ಹಾಗೂ ಕರ್ನಾಟಕ ಆನ್-ಡಿಮ್ಯಾಂಡ್ ಟ್ರಾನ್ಸ್‌ಪೋರ್ಟೇಶನ್ ಟೆಕ್ನಾಲಜಿ ಅಗ್ರಿಗೇಟರ್ ನಿಯಮಗಳು, 2016ರ ನಿಯಮ 9ರ ನಿಬಂಧನೆಗಳನ್ನು ಪಾಲಿಸುವಂತೆ ಕಂಪನಿಗಳಿಗೆ ಸೂಚಿಸಲಾಗಿದೆ.

ನೋಟಿಸ್ ಸ್ವೀಕರಿಸಿದ ಏಳು ದಿನಗಳೊಳಗೆ ಲಿಖಿತ ವಿವರಣೆ ಸಲ್ಲಿಸುವಂತೆ ಅಗ್ರಿಗೇಟರ್‌ಗಳಿಗೆ ಕಾಲಾವಕಾಶ ನೀಡಲಾಗಿದೆ. ನಿಗದಿತ ಅವಧಿಯಲ್ಲಿ ಪ್ರತಿಕ್ರಿಯೆ ನೀಡದಿದ್ದರೆ, ಯಾವುದೇ ವಿವರಣೆ ಇಲ್ಲ ಎಂದು ಪರಿಗಣಿಸಲಾಗುವುದು. ಬಳಿಕ 2016ರ ನಿಯಮಗಳ ನಿಯಮ 11ರ ಅಡಿಯಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಆದರೆ, ನೋಟಿಸ್ ಜಾರಿಯಾದ ಬಳಿಕವೂ ಅಗ್ರಿಗೇಟರ್‌ಗಳಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ ಎಂದು ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 7:03 am, Thu, 13 August 26

Follow Us