ನಕಲಿ ಔಷಧ ದಂಧೆ ಪ್ರಕರಣ: ಪೊಲೀಸರ ಜೊತೆಗೇ ಕಿಂಗ್​ಪಿನ್​​ ಕಣ್ಣಾಮುಚ್ಚಾಲೆ?, ಲುಕ್‌ಔಟ್‌ ನೋಟಿಸ್ ಜಾರಿ

ಬೆಂಗಳೂರು ದಕ್ಷಿಣ ಜಿಲ್ಲೆಯ ದೊಡ್ಡೇರಿ ಫಾರ್ಮ್​ಹೌಸ್​ನಲ್ಲಿ ಪತ್ತೆಯಾದ ನಕಲಿ ಔಷಧ ದಂಧೆ ಪ್ರಕರಣ ಸಂಬಂಧ ಕಿಂಗ್‌ಪಿನ್ ಪ್ರಶಾಂತ್‌ಗಾಗಿ ಪೊಲೀಸರು ಶೋಧ ತೀವ್ರಗೊಳಿಸಿದ್ದು, ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಆತ ವಿದೇಶದಲ್ಲಿರುವ ಬಗ್ಗೆ ಕುಟುಂಬ ಮಾಹಿತಿ ನೀಡಿದ್ದರೂ, ಆರೋಪಿ ಭಾರತದಲ್ಲಿಯೇ ಇರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಪ್ರಕರಣದ ಸಮಗ್ರ ತನಿಖೆಗೆ ಐಪಿಎಸ್ ಅಧಿಕಾರಿ ವಂಶಿಕೃಷ್ಣ ನೇತೃತ್ವದ ಎಸ್​ಐಟಿ ಕಣಕ್ಕಿಳಿದಿದೆ.

ನಕಲಿ ಔಷಧ ದಂಧೆ ಪ್ರಕರಣ: ಪೊಲೀಸರ ಜೊತೆಗೇ ಕಿಂಗ್​ಪಿನ್​​ ಕಣ್ಣಾಮುಚ್ಚಾಲೆ?, ಲುಕ್‌ಔಟ್‌ ನೋಟಿಸ್ ಜಾರಿ
ನಕಲಿ ಔಷಧ
Image Credit source: Tv9 Kannada
Edited By:

Updated on: Aug 21, 2026 | 7:47 PM

ಮುಖ್ಯಾಂಶಗಳು

  • ದೊಡ್ಡೇರಿ ಫಾರ್ಮ್​ಹೌಸ್​ನಲ್ಲಿ ನಕಲಿ ಔಷಧ ಜಾಲ ಪತ್ತೆ ಪ್ರಕರಣ
  • ಪೊಲೀಸರ ಜೊತೆಗೇ ಪ್ರಮುಖ ಆರೋಪಿ​​ ಕಣ್ಣಾಮುಚ್ಚಾಲೆ?
  • ಕೇಸ್​​ ಸಂಬಂಧ ಬಗೆದಷ್ಟೂ ಸ್ಫೋಟಕ ವಿಚಾರ ಬಹಿರಂಗ

ಬೆಂಗಳೂರು, ಆಗಸ್ಟ್​​ 21: ಕರ್ನಾಟಕದಲ್ಲಿ ನಕಲಿ ಔಷಧ ದಂಧೆ ಪ್ರಕರಣ ಸಂಬಂಧ ಬಗೆದಷ್ಟೂ ಸ್ಫೋಟಕ ವಿಚಾರಗಳು ಬಯಲಾಗುತ್ತಿವೆ. ದಂಧೆಯಲ್ಲಿ ಮುಖ್ಯವಾಗಿ ಕಿಂಗ್ ಫಿನ್ ಪ್ರಶಾಂತ್, ಆತನ ಸಂಬಂಧಿಕರು ಹಾಗೂ ಸ್ನೇಹಿತರು ಭಾಗಿಯಾಗಿದ್ದಾರೆ. ಕ್ಯಾನ್ಸರ್‌ ಸಂಬಂಧ ಸುಮಾರು 40 ಸಾವಿರ ಬಾಟಲ್ ನಕಲಿ ಔಷಧವನ್ನು ಇವರು ಮಾರಿದ್ದರು. ಅಮೆರಿಕಾ ಮೂಲದ ಔಷಧಿಯ ಹೆಸರನ್ನು ನಕಲಿ ಮಾಡಿ ವ್ಯಾಪಾರ ನಡೆಸಿದ್ದರು. ಅತ್ಯಂತ ಬೆಲೆ ಬಾಳುವ ಔಷಧಗಳೇ ಇವರ ಟಾರ್ಗೆಟ್​​ ಆಗಿತ್ತು. ಇದಕ್ಕಾಗಿ ಅಮೆರಿಕನ್ ಕಂಪನಿಯ ಔಷಧಗಳ ಬಾಟಲ್ ಮತ್ತು ಸ್ಟಿಕರ್ ಬಳಕೆ ಮಾಡುತ್ತಿದ್ದರು. ರಾಮನಗರದ ತೋಟದಲ್ಲಿಯೇ ಇವನ್ನು ತಯಾರಿಸುತ್ತಿದ್ದ ಆರೋಪಿಗಳು, ಒಂದೂವರೆ ವರ್ಷದಿಂದ ನಕಲಿ ಔಷಧ ಮಾರುತ್ತಿದ್ದರು ಎಂಬುದು ತಿಳಿದುಬಂದಿದೆ.

ಪೊಲೀಸರ ಜೊತೆಗೇ ಕಣ್ಣಾಮುಚ್ಚಾಲೆ?

ಇನ್ನು ಕಿಂಗ್‌ಫಿನ್‌ ಪ್ರಶಾಂತ್‌ಗಾಗಿ ಪೊಲೀಸರು ಹುಡಕಾಟ ನಡೆಸುತ್ತಿದ್ದು, ಆತನ ಹೆಂಡತಿ ಮತ್ತು ಸಂಬಂಧಿಕರನ್ನ ವಿಚಾರಣೆ ನಡೆಸುತ್ತಿದ್ದಾರೆ. ಪ್ರಶಾಂತ್​​ ವಿದೇಶದಲ್ಲಿರುವ ಬಗ್ಗೆ ಪತ್ನಿ ಮಾಹಿತಿ ನೀಡಿದ್ದಾರೆಯಾದರೂ, ಆತ ಭಾರತದಲ್ಲೇ ಇರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಫಾರಿನ್ ರಿಜಿನಲ್‌ ಆಫೀಸ್‌ನಿಂದ ದೊರೆತಿರುವ ಮಾಹಿತಿಯ ಪ್ರಕಾರ ಪ್ರಶಾಂತ್​​ ವಿದೇಶಕ್ಕೆ ಹೋಗಿರುವ ಬಗ್ಗೆ ಮಾಹಿತಿ ಇಲ್ಲ ಎನ್ನಲಾಗಿದೆ. ಹೀಗಾಗಿ ಪೊಲೀಸರು ಲುಕ್‌ಔಟ್‌ ನೋಟಿಸ್ ಜಾರಿ ಮಾಡಿದ್ದಾರೆ.

ಇದನ್ನೂ ಓದಿ: ನಕಲಿ ಔಷಧ ಜಾಲ ಪತ್ತೆ ಪ್ರಕರಣವನ್ನು ಎಸ್​​ಐಟಿಗೆ ನೀಡಿ ರಾಜ್ಯ ಸರ್ಕಾರ ಆದೇಶ

ಪ್ರಕರಣ ಸಂಬಂಧ ಎಸ್​ಐಟಿ ತನಿಖೆ

ದೊಡ್ಡೇರಿ ಫಾರ್ಮ್​ಹೌಸ್​ನಲ್ಲಿ ನಕಲಿ ಔಷಧ ಜಾಲ ಪತ್ತೆ ಪ್ರಕರಣ ಸಂಬಂಧ ತನಿಖೆಗೆ ರಾಜ್ಯ ಸರ್ಕಾರ ಎಸ್​ಐಟಿ ರಚಿಸಿ ಆದೇಶಿಸಿರುವ ಹಿನ್ನೆಲೆ, ತಾವರೆಕೆರೆ ಪೊಲೀಸರಿಂದ ಎಸ್​​ಐಟಿಗೆ ಕೇಸ್​ ಫೈಲ್​ಗಳ ಹಸ್ತಾಂತರ ನಡೆದಿದೆ. ಐಪಿಎಸ್ ಅಧಿಕಾರಿ ವಂಶಿಕೃಷ್ಣ ನೇತೃತ್ವದಲ್ಲಿ ತನಿಖೆ ಇಂದಿನಿಂದಲೇ ಆರಂಭವಾಗಿದ್ದು, ಆ.19ರಂದು ದೊಡ್ಡೇರಿ ‌ಫಾರ್ಮ್​ನಲ್ಲಿ ಮೇಲೆ ದಾಳಿ ನಡೆಸಿದ್ದ ಪೊಲೀಸರು ಈ ಬೃಹತ್​​ ನಕಲಿ ಔಷಧ ಜಾಲವನ್ನು ಬಯಲಿಗೆಳೆದಿದ್ದರು. ಘಟನೆ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಈಗಾಗಲೇ ಪೊಲೀಸರು ಬಂಧಿಸಿರುವ ನಾಲ್ವರು ಆರೋಪಿಗಳನ್ನು ಎಸ್​ಐಟಿ ವಶಕ್ಕೆ ಪಡೆದು ಮುಂದಿನ ತನಿಖೆ ನಡೆಸಲಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 3:06 pm, Fri, 21 August 26

Loading...
Unable to load recommendations.
Follow Us