
ಬೆಂಗಳೂರು, ಅಕ್ಟೋಬರ್ 12: ರಾಮ ಮನೋಹರ ಲೋಹಿಯಾ ಅವರ ಜೀವನಯಾನ ಕುರಿತು ಸಾಹಿತಿ, ವಿಮರ್ಶಕ ಡಾ. ನಟರಾಜ್ ಹುಳಿಯಾರ್ ಅವರು ಬರೆದಿರುವ “ಡಾಕ್ಟರ್ ಸಾಹೇಬ್” ಪುಸ್ತಕವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದರು. ನಗರದ ಕೊಂಡಜ್ಜ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಸಿದ್ದರಾಮಯ್ಯ, ಈ ವೇಳೆ ತಮ್ಮ ಹಳೆಯ ರಾಜಕೀಯ ಜೀವನವನ್ನು ಮೆಲುಕು ಹಾಕಿದರು.
ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಸಿದ್ದರಾಮಯ್ಯ, ‘ನಾನು 77ರವರೆಗೂ ಸೋಷಿಯಲಿಸ್ಟ್ ಪಾರ್ಟಿಯಲ್ಲಿ ಇದ್ದೆ. ಬಳಿಕ ಜನತಾ ಪಾರ್ಟಿ ಸೆಕ್ರೆಟರಿ ಕೂಡ ಆಗಿದ್ದೆ. ನಂತರ 1980ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದೆ. ಅಷ್ಟೊತ್ತಿಗೆ ಜನತಾ ಪಾರ್ಟಿ ಹೋಳಾಯ್ತು. ಡಬಲ್ ಮೆಂಬರ್ ಬಗ್ಗೆ ಪ್ರಶ್ನೆ ಮಾಡಿದ್ದರು. ಜನ ಸಂಘ ಹೋಗಿ ಬಿಜೆಪಿ ಆಯಿತು. ನಾನು ಜನತಾ ಪಾರ್ಟಿಯಲ್ಲೇ ತಾಲೂಕು ಬೋರ್ಡ್ ಮೆಂಬರ್ ಆಗಿದ್ದೆ. ಗೆದ್ದ ಎಂಟು ಜನರಲ್ಲಿ ನನ್ನ ಬಿಟ್ಟು ಎಲ್ಲರೂ ಕಾಂಗ್ರೆಸ್‌ಗೆ ಹೋಗಿದ್ದರು’ ಎಂದು ಹೇಳಿದರು.
ರಾಮ ಮನೋಹರ ಲೋಹಿಯಾ ಅವರ ಜೀವನಯಾನ ಕುರಿತು ಸಾಹಿತಿ, ವಿಮರ್ಶಕ ಡಾ. ನಟರಾಜ್ ಹುಳಿಯಾರ್ ಅವರು ಬರೆದಿರುವ “ಡಾಕ್ಟರ್ ಸಾಹೇಬ್” ಪುಸ್ತಕವನ್ನು ಲೋಕಾರ್ಪಣೆಗೊಳಿಸಿ, ಬಂಡವಾಳಶಾಹಿ ವ್ಯವಸ್ಥೆಯತ್ತ ವಾಲುತ್ತಿರುವ ಭಾರತದಲ್ಲಿ ಲೋಹಿಯಾರವರ ಸಮಾಜವಾದಿ ಚಿಂತನೆಗಳ ಅಗತ್ಯತೆಯ ಕುರಿತು ಮಾತನಾಡಿದೆ.
ಸಾಹಿತಿಗಳಾದ ಅಗ್ರಹಾರ ಕೃಷ್ಣಮೂರ್ತಿ, ಮಂಗಳೂರು ವಿಜಯ, ಪತ್ರಕರ್ತರಾದ ಶೂದ್ರ ಶ್ರೀನಿವಾಸ್, ರವಿ ಬಾಗಿ, ಲೋಹಿಯಾ ಪ್ರಕಾಶನದ ಚನ್ನಬಸವಣ್ಣ, ಪ್ರಕಾಶಕರಾದ ಪಲ್ಲವ ವೆಂಕಟೇಶ ಉಪಸ್ಥಿತರಿದ್ದರು.
— Siddaramaiah (@siddaramaiah) October 12, 2026
‘ನಾನು ಜಾರ್ಜ್ ಫರ್ನಾಂಡಿಸ್ ಫಾಲೋವರ್ಸ್. ನಂಜುಂಡಸ್ವಾಮಿ ಕೂಡ ಫರ್ನಾಂಡಿಸ್ ಫಾಲೋವರ್. ನಾನು ಚುನಾವಣೆಯಲ್ಲಿ ಸೋತೆ. ಒಂದು ವೇಳೆ ಜನತಾ ಹೋಳಾಗದೆ ಹೋಗಿದ್ದರೆ ಕರ್ನಾಟಕದಲ್ಲಿ ಜನತಾ ಪಾರ್ಟಿನೇ ಇರುತ್ತಿತ್ತು. ಲೋಹಿಯಾ ಅವರು ಕಾಂಗ್ರೆಸ್ಸೇತರ ಸರ್ಕಾರ ಬರಬೇಕು ಎಂದು ನಂಬಿಕೆ ಇಟ್ಟುಕೊಂಡವರು. ಇವತ್ತು ಅನೇಕ ಚಿಂತನೆಗಳಿಂದ ಪ್ರಭಾವಿತರಾಗಿರುವ ಸಮಾಜವಾದಿಗಳು ಬಹಳ ಜನರಿದ್ದಾರೆ. ರಾಜಕಾರಣಿಗಳು ಆದವರು, ಆಗದೆ ಇರುವವರಿದ್ದಾರೆ’ ಎಂದು ಹೇಳಿದರು.
‘ಎಂಟು ವರ್ಷಗಳ ಕಾಲ ಸಿಎಂ ಆಗಿದ್ದೆ. 2013-18 ಮತ್ತು 2023ರಲ್ಲಿ ನಾನು ಸಿಎಂ ಆಗಿ ಲೋಹಿಯಾ ಚಿಂತನೆ ಸ್ವಲ್ಪ ಮಟ್ಟಿಗೆ ಜಾರಿ ತರುವ ಪ್ರಯತ್ನ ಮಾಡಿದೆ. ಕಾಂಗ್ರೆಸ್ನಲ್ಲಿ ಇದ್ದರೂ ಲೋಹಿಯಾ ಚಿಂತನೆ ಜಾರಿ ಮಾಡುವ ಪ್ರಯತ್ನ ಮಾಡಿದೆ. ಲೋಹಿಯಾ ಅವರು ಸ್ಪಷ್ಟವಾಗಿ 60% ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಪಕ್ಷದಲ್ಲಿ ಇರಬೇಕು ಎಂದು ಹೇಳಿದ್ದರು. ನಾನು ಅದನ್ನು ಮಾಡಿದೆ’ ಎಂದರು.
‘ಸಾಮಾಜಿಕವಾಗಿ, ಆರ್ಥಿಕ ಶಕ್ತಿ ಬರಬೇಕು ಎಂದು ಬಾಬಾ ಅಂಬೇಡ್ಕರ್ ಹೇಳಿದ್ದರು. ಜಾತಿಯತೆ ಹೋಗಬೇಕಾದರೆ ಆರ್ಥಿಕ, ಸಾಮಾಜಿಕ ಶಕ್ತಿ ಬರಬೇಕು. ಇದನ್ನ ಜಾರಿ ಮಾಡುವ ಪ್ರಯತ್ನ ವಿನಮ್ರವಾಗಿ ಮಾಡಿದೆ. ವರ್ಗಕ್ಕೆ ಚಲನೆಯಿದೆ ಆದರೆ ಅದು ಜಾತಿ ಆಗುತ್ತದೆ. ಚಲನೆ ಇಲ್ಲದೆ ವ್ಯವಸ್ಥೆ ಅಂದರೆ ಜಾತಿ ವ್ಯವಸ್ಥೆ. ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ಬಂದರೆ ಚಲನೆ ಸಿಗುತ್ತೆ. ಯುರೋಪ್ ಕಂಟ್ರಿಗಳಲ್ಲಿ ಯುನಿವರ್ಸಲ್ ಬೇಸಿಕ್ ಇನ್ಕಮ್ ಎಂದಿದೆ. ಅದನ್ನ ಜಾರಿ ಮಾಡುವ ಪ್ರಯತ್ನ ಮಾಡಿದ್ದೇನೆ. ಹಾಗಾಗಿ ನಾನು ಗ್ಯಾರಂಟಿಗಳನ್ನ ಜಾರಿ ಮಾಡಿದೆ’ ಎಂದು ತಿಳಿಸಿದರು.
ಇದನ್ನೂ ಓದಿ: ಸ್ನೇಹದಲ್ಲಿ ಬಿರುಕು: ಸಿದ್ದರಾಮಯ್ಯ ಜೊತೆಗಿನ ಮನಃಸ್ತಾಪ ಬಗ್ಗೆ ಮಹದೇವಪ್ಪ ಹೇಳಿದ್ದಿಷ್ಟು
‘ಇನ್ನು ನಟರಾಜ್ ಹುಳಿಯಾರ್ ಅವರ ಕುರಿತಾಗಿ ಮಾತನಾಡಿದ ಮಾಜಿ ಸಿಎಂ, ‘ನಟರಾಜ್ ಹುಳಿಯಾರ್ ಸಾಹಿತಿ ಮಾತ್ರವಲ್ಲ, ಅವರು ಸಮಾಜ ಅರ್ಥ ಮಾಡಿಕೊಳ್ಳುವ ಚಿಂತಕರು. ಆದ್ದರಿಂದ ಈ ಪುಸ್ತಕ ಬರೆಯಲು ಸಾಧ್ಯವಾಯಿತು. ಸಮಾಜದ ಒಳನೋಟ, ಅಂಬೇಡ್ಕರ್ ಮತ್ತು ಜೆಪಿ ಚಿಂತನೆ ಅರ್ಥ ಮಾಡಿಕೊಳ್ಳದೆ ಹೋದರೆ ಸಮಾಜ ಹಿಂಗೆ ಇರುತ್ತದೆ’ ಎಂದು ಸಿದ್ದರಾಮಯ್ಯ ಹೇಳಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.