‘ನಾನು ಸಾಗುವ ಮಾರ್ಗ ಮಧ್ಯೆ 300 ಗುಂಡಿಗಳಿವೆ’: ಬಿಬಿಎಂಪಿಗೆ ನೋಟಿಸ್ ನೀಡಿದ ಮಾಜಿ ಪ್ರಾಧ್ಯಾಪಕ, ಜನರಿಂದ ಬೆಂಬಲ
ಬೆಂಗಳೂರಿನ ಕೆಟ್ಟ ರಸ್ತೆಗಳಿಂದಾಗಿ ತಮ್ಮ ಆರೋಗ್ಯದ ಮೇಲೆ ಬೀರಿದ ಪರಿಣಾಮಕ್ಕೆ ಪ್ರಾಧ್ಯಾಪಕರೊಬ್ಬರು ಬಿಬಿಎಂಪಿ ವಿರುದ್ಧ 50 ಲಕ್ಷ ರೂ. ಪರಿಹಾರಕ್ಕಾಗಿ ನೋಟಿಸ್ ನೀಡಿದ್ದಾರೆ. ರಾಮಮೂರ್ತಿ ನಗರ ಮತ್ತು ರಿಚ್ಮಂಡ್ ಟೌನ್ ರಸ್ತೆಗಳಲ್ಲಿನ ಗುಂಡಿಗಳು ಪ್ರಮುಖ ಕಾರಣವೆಂದಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ ಮತ್ತು ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಮೇ 22: ರಾಜ್ಯ ರಾಜಧಾನಿ ಬೆಂಗಳೂರಲ್ಲಿ ರಸ್ತೆಗಿಂತ ಗುಂಡಿಗಳು (Potholes) ಜಾಸ್ತಿ ಎಂಬುವುದು ಎಲ್ಲರಿಗೂ ತಿಳಿದಿರುವ ವಿಷಯ. ನಗರದ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳಿದ್ದರೂ ಕೂಡ ಈ ಡೆಡ್ಲಿ ಗುಂಡಿಗಳನ್ನ ಮುಚ್ಚದೇ ನಿರ್ಲಕ್ಷ ವಹಿಸುತ್ತಿರುವ ಪಾಲಿಕೆಯ ನಡೆ ಜನರು ಆಕ್ರೋಶಕ್ಕೂ ಕಾರಣವಾಗಿದೆ. ಹೀಗಿರುವಾಗ ಹದಗೆಟ್ಟ ರಸ್ತೆಗಳಿಂದ ತಮ್ಮ ಆರೋಗ್ಯದ ಮೇಲೆ ಬೀರಿದ ಪರಿಣಾಮಕ್ಕೆ 50 ಲಕ್ಷ ರೂ. ಪರಿಹಾರ ಕೋರಿ ಬಿಬಿಎಂಪಿಗೆ (bbmp) ನಗರದ ಪ್ರಾಧ್ಯಾಪಕರೊಬ್ಬರು ನೋಟಿಸ್ ನೀಡಿದ್ದಾರೆ. ಜನಸಾಮಾನ್ಯರು ತಪ್ಪು ಮಾಡಿದಾಗ ದಂಡ ವಿಧಿಸುವ ಬಿಬಿಎಂಪಿಗೆ ಇದೀಗ ಪ್ರಾಧ್ಯಾಪಕರೊಬ್ಬರು ನೋಟಿಸ್ ನೀಡುವ ಮೂಲಕ ಶಾಕ್ ನೀಡಿದ್ದಾರೆ. ಸದ್ಯ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಜನರು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ.
ನಾನು ಸಾಗುವ ಮಾರ್ಗ ಮಧ್ಯೆ 300 ಗುಂಡಿಗಳಿವೆ
ಸೇಂಟ್ ಜೋಸೆಫ್‌ನ ಮಾಜಿ ಪ್ರಾಧ್ಯಾಪಕ ದಿವ್ಯ ಕಿರಣ್ ಜೀವನ್ ಎಂಬುವವರು ರಿಚ್ಮಂಡ್ ಟೌನ್, ಸೇವಾನಗರ ಮತ್ತು ರಾಮಮೂರ್ತಿ ನಗರದ ರಸ್ತೆಗಳಲ್ಲಿನ ಗುಂಡಿಗಳ ಬಗ್ಗೆ ಮಾತನಾಡಿದ್ದಾರೆ. ‘ನಾನು ಈ ರಸ್ತೆಗಳ ಮೂಲಕ ಯಾವಾಗಲು ಪ್ರಯಾಣಿಸುತ್ತೇನೆ. ಇತ್ತೀಚೆಗೆ, ರಾಮಮೂರ್ತಿ ನಗರದಿಂದ ರಿಚ್ಮಂಡ್ ಟೌನ್‌ನಲ್ಲಿರುವ ನನ್ನ ಮನೆಗೆ ಹೋಗುವ ಮಾರ್ಗ ಮಧ್ಯೆ ಸುಮಾರು 300 ಗುಂಡಿಗಳಿದ್ದು, ಎಣಿಕೆ ಮಾಡಿದ್ದೇನೆ’ ಎಂದಿದ್ದಾರೆ.
ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರೇ ಗಮನಿಸಿ: ಶುಕ್ರವಾರ ಸಂಚಾರ ಸಮಯದಲ್ಲಿಲ್ಲ ಬದಲಾವಣೆ
ಇನ್ನು ನಗರದಲ್ಲಿ ಮಳೆ ಆರ್ಭಟ ಜೋರಾಗಿದೆ. ಸಾಕಷ್ಟು ಅವಾಂತರಗಳು ಸೃಷ್ಟಿಯಾಗುತ್ತಿವೆ. ಮಳೆಯಿಂದ ರಸ್ತೆಗಳು ಹಾನಿಗೊಳಗಾಗುತ್ತಿವೆ. ಈ ಎಲ್ಲಾ ಭಯ ತಮ್ಮನ್ನು ಕಾನೂನು ಕ್ರಮ ಕೈಗೊಳ್ಳಲು ಮತ್ತಷ್ಟು ಪ್ರೇರೇಪಿಸಿತು ಎಂದು ಹೇಳಿದ್ದು ಇತ್ತೀಚೆಗೆ, ಅದೇ ರಸ್ತೆಯಲ್ಲಿ ಪ್ರಯಾಣಿಸುವಾಗ ಅವರು ಅನುಭವಿಸಿದ ನೋವಿನ ಬಗ್ಗೆ ಹೇಳಿಕೊಂಡಿದ್ದಾರೆ.
ನಗರದ ಕಳಪೆ ರಸ್ತೆಗಳಿಗೆ ಬಿಬಿಎಂಪಿಯೇ ಹೊಣೆಗಾರಿಕೆ ಎಂದು ತಿಳಿದು ಈ ಕುರಿತಾಗಿ ಚರ್ಚಿಸಲು ಬಿಬಿಎಂಪಿ ಮುಖ್ಯಸ್ಥರನ್ನು ಸಂಪರ್ಕಿಸಲು ನಿರ್ಧರಿಸಿದರು. ‘ಬೆಂಗಳೂರು ಸಾಮಾನ್ಯ ನಗರವಲ್ಲ. ಐಟಿ ಕೇಂದ್ರವಾಗಿದ್ದರೂ, ನಮ್ಮ ರಸ್ತೆಗಳ ಸ್ಥಿತಿ ಮಾತ್ರ ನಾಚಿಕೆಗೇಡಿನ ಸಂಗತಿಯಾಗಿದೆ. ಕನಿಷ್ಠ ಪಕ್ಷ ನಾವು ಮೂಲಭೂತ ಮೂಲಸೌಕರ್ಯಕ್ಕೆ ಅರ್ಹರು’ ಎಂದು ಅವರು ಹೇಳಿದ್ದಾರೆ.
ಹದಗೆಟ್ಟ ರಸ್ತೆಗಳೇ ಆರೋಗ್ಯ ಹಾನಿಗೆ ಕಾರಣ
43 ವಯಸ್ಸಿಯ ಮಾಜಿ ಪ್ರಾಧ್ಯಾಪಕ ದಿವ್ಯ ಕಿರಣ್ ಜೀವನ್, ಕಳೆದ ನಾಲ್ಕು ವರ್ಷಗಳಿಂದ ತೀವ್ರ ಕುತ್ತಿಗೆ ಮತ್ತು ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ‘ನಾನು ಬೆಂಗಳೂರಿನ ಹಲವಾರು ಮೂಳೆಚಿಕಿತ್ಸಾ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದೇನೆ ಮತ್ತು ಎಲ್ಲರೂ ಈ ನೋವಿಗೆ ಹದಗೆಟ್ಟ ರಸ್ತೆಗಳಲ್ಲಿ ಪ್ರಯಾಣಿಸುವುದೇ ಇದಕ್ಕೆ ಕಾರಣವೆಂದು ಹೇಳಿದ್ದಾರೆ’ ಎಂದರು.
ವಕೀಲ ಇಂದ್ರ ಧನುಷ್ ಹೇಳಿದ್ದಿಷ್ಟು
ಬಿಬಿಎಂಪಿ ಒಂದು ಕಾರ್ಪೊರೇಟ್ ಸಂಸ್ಥೆಯಾಗಿದ್ದು, ಬಿಬಿಎಂಪಿ ಕಾಯ್ದೆ 2020 ರ ಅಧ್ಯಾಯ III, ಸೆಕ್ಷನ್ 4(6) ರ ಅಡಿಯಲ್ಲಿ ಮೊಕದ್ದಮೆ ಹೂಡಬಹುದಾಗಿದೆ ಎಂದು ವಕೀಲ ಇಂದ್ರ ಧನುಷ್ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿಯ ಇಬ್ಬರು ಇಂಜಿನಿಯರ್ಗಳು
‘ನಾಗರಿಕ ಸಂಸ್ಥೆಗಳು ನಿಯಮಗಳನ್ನು ಪಾಲಿಸಲು ವಿಫಲವಾದರೆ, ಕಾನೂನು ನೋಟಿಸ್ ಜಾರಿ ಮಾಡಬಹುದು ಮತ್ತು ಅದರ ವಿರುದ್ಧ ಮೊದಲ ಕ್ರಮವೆಂದು ಪರಿಗಣಿಸಬಹುದು. ಬಿಬಿಎಂಪಿ ಸಮಸ್ಯೆಯನ್ನು ಪರಿಹರಿಸಲು ತ್ವರಿತವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಪರಿಹಾರ ನೀಡುವುದು ಎಂದು ಅನುಮಾನ’ ಎಂದು ಅವರು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:00 am, Thu, 22 May 25








