ಸಹಾಯ ಮಾಡುವ ನೆಪದಲ್ಲಿ ವಂಚನೆ: 8.50 ಲಕ್ಷ ಎಗರಿಸಿ ಎಟಿಎಂ ಕಾರ್ಡ್ನೊಂದಿಗೆ ಎಸ್ಕೇಪ್
ನಗರದಲ್ಲಿ ಮತ್ತೊಂದು ಹಣ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಹಣ ಡಬಲ್ ಮಾಡಿಕೊಡುವುದಾಗಿ ಹೇಳಿ ವಂಚಿಸಿದವನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಎಟಿಎಂಗಳಲ್ಲಿ ಸಹಾಯ ಮಾಡುವ ನೆಪದಲ್ಲಿ ವಂಚಿಸುತ್ತಿದ್ದ (Fraud) ವ್ಯಕ್ತಿಯ ಬಂಧನ ಮಾಡಲಾಗಿದೆ. ಈಶಾನ್ಯ ವಿಭಾಗ ಸಿಇಎನ್ ಠಾಣೆ ಪೊಲೀಸರಿಂದ ಮಲ್ಲಿನಾಥ್ ಅಂಗಡಿ ಎಂಬಾತನ ಬಂಧನವಾಗಿದ್ದು, ನಿವೃತ್ತ ಸರ್ಕಾರಿ ನೌಕರ ರಾಮಕೃಷ್ಣೆಗೌಡ ಎಂಬುವರಿಗೆ ಆರೋಪಿ ವಂಚಿಸಿದ್ದ. ಕಳೆದ ತಿಂಗಳು ಹೊಸ ಎಟಿಎಂ (ATM) ಕಾರ್ಡ್ ಪಡೆದಿದ್ದ ದೂರುದಾರ ರಾಮಕೃಷ್ಣೆಗೌಡ, ಎಟಿಎಂ ಕಾರ್ಡ್ಗೆ ಪಿನ್ ಜನರೇಟ್ ಮಾಡಲು ಎಟಿಎಂಗೆ ತೆರಳಿದ್ದರು. ಈ ವೇಳೆ ಪಿನ್ ಜನರೇಟ್ ಮಾಡಲು ಗೊಂದಲವಾಗಿ ಅಲ್ಲೆ ಇದ್ದ ವ್ಯಕ್ತಿಯ ಸಹಾಯ ಕೇಳಿದ್ದರು. ಪಿನ್ ಜನರೇಟ್ ಮಾಡುವ ವೇಳೆ ಆರೋಪಿ ಎಟಿಎಂ ಕಾರ್ಡ್ ಬದಲಿಸಿದ್ದಾನೆ. ಸ್ಥಳದಲ್ಲಿ 40 ಸಾವಿರ ಡ್ರಾ ಮಾಡಿ ಕೊಟ್ಟು, ಕಾರ್ಡ್ನೊಂದಿಗೆ ಎಸ್ಕೇಪ್ ಆಗಿದ್ದಾನೆ. ಪುನಃ ಎಟಿಎಂಗೆ ಹೋಗಿದ್ದ ವೇಳೆ ಕಾರ್ಡ್ ಬದಲಾವಣೆ ಬೆಳಕಿಗೆ ಬಂದಿದೆ. ಅಲ್ಲದೇ ರಾಮಕೃಷ್ಣೆಗೌಡ ಖಾತೆಯಲ್ಲಿದ್ದ 8.50 ಲಕ್ಷ ಹಣವನ್ನು ಆರೋಪಿ ಎಗರಿಸಿದ್ದಾನೆ. ಈ ಬಗ್ಗೆ ಈಶಾನ್ಯ ವಿಭಾಗ ಸಿಇನ್ ಠಾಣೆಯಲ್ಲಿ ರಾಮಕೃಷ್ಣೆಗೌಡ ದೂರು ನೀಡಿದ್ದರು.
ಇದನ್ನೂ ಓದಿ: DERBY vs INDS: T20 ಅಭ್ಯಾಸ ಪಂದ್ಯದಲ್ಲೂ ಹೂಡ ಸ್ಫೋಟಕ ಆಟ: ಕಾರ್ತಿಕ್ ಪಡೆಗೆ 7 ವಿಕೆಟ್ಗಳ ಜಯ
ದೂರು ದಾಖಲಿಸಿ ಯಲಹಂಕ ನಿವಾಸಿ ಮಲ್ಲಿನಾಥ್ ಅಂಗಡಿ ಎಂಬಾತನನ್ನ ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಎಟಿಎಂಗೆ ಬರುವ ಗ್ರಾಹಕರಿಗೆ ವಂಚಿಸೋದನ್ನೆ ಕಾಯಕ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ. ಪ್ರತಿದಿನ ಎಟಿಎಂಗಳ ಬಳಿಯೇ ಆರೋಪಿ ಸುತ್ತಾಡುತ್ತಿದ್ದ. ಯಾರಾದರೂ ಸಹಾಯಕ್ಕೆ ಕರೆದಾಗ ಎಟಿಎಂ ಕಾರ್ಡ್ ಬದಲಾಯಿಸಿ ವಂಚಿಸುತ್ತಿದ್ದ. ಅಲ್ಲದೇ ರಾಮಕೃಷ್ಣೆಗೌಡರ ಕಾರ್ಡ್ನಿಂದ ಹಣ ಪಡೆದು ಚಿನ್ನಾಭರಣ ಖರೀದಿಸಿದ್ದ. ಆರೋಪಿ ಬಳಿ ನಾಲ್ಕು ಚಿನ್ನದ ಸರ, ಮೂರು ಚಿನ್ನದ ಉಂಗುರ ಒಂದು ಮೊಬೈಲ್ ಪೋನ್ ವಶಕ್ಕೆ ಪಡೆಯಲಾಗಿದೆ. ಈಶಾನ್ಯ ಸಿಇಎನ್ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಹಣ ಡಬಲ್ ಮಾಡಿಕೊಡುವುದಾಗಿ ಹೇಳಿ ವಂಚಿಸಿದ್ದವ ಅರೆಸ್ಟ್
ಬೆಳಗಾವಿ: ನಗರದಲ್ಲಿ ಮತ್ತೊಂದು ಹಣ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಹಣ ಡಬಲ್ ಮಾಡಿಕೊಡುವುದಾಗಿ ಹೇಳಿ ವಂಚಿಸಿದವನನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಇಚಲಕರಂಜಿ ನಿವಾಸಿ ಶಿವಾನಂದ ದಾದು ಸೆರೆಯಾದ ವ್ಯಕ್ತಿ. ಹಣ ಡಬಲ್ ಮಾಡಿಕೊಡುವುದಾಗಿ ನಂಬಿಸಿ ಉದ್ಯಮಿಗಳು, ವ್ಯಾಪಾರಿಗಳಿಂದ ಲಕ್ಷಾಂತರ ಹಣ ಪಡೆದು ಖದೀಮ ಎಸ್ಕೇಪ್ ಆಗಿದ್ದ. ಕುಟುಂಬ ಸಮೇತ ಮಾಲ್ಡೀವ್ಸ್, ಈಜಿಪ್ಟ್, ದುಬೈನಲ್ಲಿ ಸುತ್ತಾಡಿ ವಂಚಕ ಶಿವಾನಂದ ದಾದು ನೇಪಾಳಕ್ಕೆ ಬಂದು ಉಳಿದುಕೊಂಡಿದ್ದ. ಮಾಹಿತಿ ಮೇರೆಗೆ ವಂಚಕನನ್ನು ನೇಪಾಳ ಪೊಲೀಸರು ಬಂಧಿಸಿ, ವಂಚಕ ಶಿವಾನಂದನನ್ನು ನೇಪಾಳ ಪೊಲೀಸರು ಹಸ್ತಾಂತರಿಸಿದ್ದು, ಆರೋಪಿಯನ್ನ ಬಂಧಿಸಿ ಪೊಲೀಸರು ಬೆಳಗಾವಿಗೆ ಕರೆತಂದಿದ್ದಾರೆ. ಬಂಧಿತನಿಂದ 20 ಲಕ್ಷ ಹಣ ಜಪ್ತಿ, 7 ಬ್ಯಾಂಕ್ ಖಾತೆಗಳು ಪ್ರೀಜ್ ಮಾಡಿದ್ದು, ಬೆಳಗಾವಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: Maharashtra Crisis: ಏಕನಾಥ್ ಶಿಂದೆಯನ್ನು ಶಿವಸೇನಾ ನಾಯಕ ಸ್ಥಾನದಿಂದ ಕಿತ್ತೊಗೆದ ಉದ್ಧವ್ ಠಾಕ್ರೆ