ಗೃಹಲಕ್ಷ್ಮಿ ಹಣ ಬಾಕಿ: ಮಹಿಳೆಯರ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್ ಮಹತ್ವದ ಆದೇಶ

ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಬಾಕಿ ಹಣ ಬಿಡುಗಡೆಗೆ ನಿರ್ದೇಶನ ನೀಡುವಂತೆ ಕೋರಿ ಮಹಿಳೆಯರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ತಾಂತ್ರಿಕ ಗೊಂದಲದಿಂದ ಫೆಬ್ರವರಿ-ಮಾರ್ಚ್ ತಿಂಗಳ ಕಂತುಗಳು ಬಾಕಿಯಿದ್ದು, ಕೂಡಲೇ ಪಾವತಿಸಲು ಅರ್ಜಿದಾರರು ಮನವಿ ಮಾಡಿದ್ದರು.

ಗೃಹಲಕ್ಷ್ಮಿ ಹಣ ಬಾಕಿ: ಮಹಿಳೆಯರ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್ ಮಹತ್ವದ ಆದೇಶ
ಗೃಹಲಕ್ಷ್ಮಿ, ಹೈಕೋರ್ಟ್
Image Credit source: google
Edited By:

Updated on: May 21, 2026 | 7:06 PM

ಬೆಂಗಳೂರು, ಮೇ 21: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ (Gruhalakshmi) ಯೋಜನೆಯ ಎರಡು ತಿಂಗಳ ಬಾಕಿ ಹಣ ಬಿಡುಗಡೆಗೆ ನಿರ್ದೇಶನ ನೀಡುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಕೆಯಾಗಿದ್ದು, ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಗುರುವಾರ ನೋಟಿಸ್ ಜಾರಿ ಮಾಡಿದೆ.

ಮುಖ್ಯಾಂಶಗಳು

  • ಗೃಹಲಕ್ಷ್ಮಿ ಬಾಕಿ ಹಣ ಬಿಡುಗಡೆಗೆ ನಿರ್ದೇಶನ ಕೋರಿ ಪಿಐಎಲ್​
  • 2 ತಿಂಗಳ ಬಾಕಿ ಗೃಹಲಕ್ಷ್ಮಿ ಹಣ ಪಾವತಿಗೆ ನಿರ್ದೇಶನ ಕೋರಿಕೆ
  • ಪಿಐಎಲ್ ಸಂಬಂಧ ನೋಟಿಸ್ ಜಾರಿಗೆ ಹೈಕೋರ್ಟ್ ಆದೇಶ

ಅರ್ಜಿದಾರರು ಯಾರು?

ಗೃಹಲಕ್ಷ್ಮಿ ಬಾಕಿ ಹಣ ಬಿಡುಗಡೆಗೆ ಸರ್ಕಾರಕ್ಕೆ ನಿರ್ದೇಶನ ಕೋರುವಂತೆ ಬೆಂಗಳೂರಿನ ಕಮಲಾನಗರದ ನಿವಾಸಿ ಆರ್. ಗಂಗಾ ಹಾಗೂ ನಂದಿನಿ ಲೇಔಟ್‌ನ ಜಿ.ಡಿ. ಪವಿತ್ರಾ ಎಂಬುವರು ಹೈಕೋರ್ಟ್‌ ಮೊರೆಹೋಗಿದ್ದು, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ.

ಅರ್ಜಿಯಲ್ಲಿ ಏನಿದೆ?

ಕಳೆದ ಎರಡು ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ. ಈ ಬಾಕಿ ಇರುವ ಎರಡು ತಿಂಗಳ ಗೃಹಲಕ್ಷ್ಮಿ ಹಣವನ್ನು ತಕ್ಷಣವೇ ಪಾವತಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಹಣಕಾಸು, ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಗೆ ನೋಟಿಸ್

ಇನ್ನು ನ್ಯಾಯಮೂರ್ತಿಗಳಾದ ಡಾ. ಕೆ ಮನ್ಮಥ ರಾವ್‌ ಮತ್ತು ಸೂರಜ್ ಗೋವಿಂದರಾಜ್​​ ಅವರಿದ್ದ ವಿಭಾಗೀಯ ಪೀಠ ಅರ್ಜಿ ವಿಚಾರಣೆ ಮಾಡಿದ್ದು, ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಹಣಕಾಸು ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ತುರ್ತು ನೋಟಿಸ್ ಜಾರಿ ಮಾಡಿ ಆದೇಶ ಹೊರಡಿಸಿದ್ದು ವಿಚಾರಣೆಯನ್ನು ಮುಂದೂಡಿದೆ. ಅರ್ಜಿದಾರರ ಪರ ಹಿರಿಯ ವಕೀಲ ವಿಕ್ರಮ್‌ ಹುಯಿಲಗೋಳ ವಾದ ಮಂಡಿಸಿದರು.

ಇದನ್ನೂ ಓದಿ: ಗೃಹಲಕ್ಷ್ಮಿ ಬೇಡಯ್ಯ ಗೃಹವನ್ನ ನೀಡಯ್ಯ: ಹಾಡಿನ ಮೂಲಕ ಸಿಎಂಗೆ ಮುಸ್ಲಿಂ ಮಹಿಳೆ ಮನವಿ

2024ರ ಏಪ್ರಿಲ್‌ನಿಂದ 2025ರ ಜನವರಿವರೆಗೆ ಯಾವುದೇ ಅಡೆತಡೆಯಿಲ್ಲದೆ ಸಾಗುತ್ತಿದ್ದ ಗೃಹಲಕ್ಷ್ಮಿ ಯೋಜನೆಯ ಧನಸಹಾಯ ವಿತರಣೆ, ಫೆಬ್ರವರಿಯಲ್ಲಿ ದಿಢೀರ್ ಹಳಿ ತಪ್ಪಿತ್ತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಸ್ತುವಾರಿಯಲ್ಲಿದ್ದ ಈ ಪ್ರಕ್ರಿಯೆಯನ್ನು, ತಾಲೂಕು ಪಂಚಾಯಿತಿಗಳ ಮೂಲಕ ನಿರ್ವಹಿಸಲು ಸರ್ಕಾರ ಹೊಸ ನೀತಿ ರೂಪಿಸಿತ್ತು. ಆದರೆ, ಈ ತಾಂತ್ರಿಕ ಹಸ್ತಾಂತರದ ಗೊಂದಲದಿಂದಾಗಿ 2025ರ ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಕಂತುಗಳ ಹಣ ಫಲಾನುಭವಿಗಳ ಕೈಸೇರದೆ ಬಾಕಿ ಉಳಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Ramesha M
Follow Us