ಬೆಂಗಳೂರು: ಬೆಳಿಗ್ಗೆಯೇ ರಾಜಧಾನಿ ಬೆಂಗಳೂರಿನ ಮೇಲೆ ಕಾರ್ಮೋಡ ಛಾಯೆ ಆವರಿಸಿದ್ದು, ಇಡೀ ನಗರ ಕತ್ತಲೆಯಾಗಿದೆ. ಮಳೆ ಯಾವುದೇ ಕ್ಷಣ ಧೋ ಅಂತಾ ಸುರಿಯಲಿದೆ. ನಗರದಲ್ಲಿ ನಿರಂತರ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು, ಸುಧಾಮನಗರ, ಬಾಣಸವಾಡಿ, ಬೇಗೂರು, ನಾಗವಾರ, ಜಕ್ಕೂರು, ಹೊರಮಾವು ರೋಡ್, ಜಯನಗರ ಸೇರಿದಂತೆ ಬೆಂಗಳೂರಿನ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ.
ಪುಟ್ಟೇನಹಳ್ಳಿ, ಕೊಡಿಗೆಹಳ್ಳಿ, ಕಾಡುಗೋಡಿ, ಗೊಟ್ಟಿಗೆರೆ, ವಸಂತನಗರ, ಸುಬೇದಾರ್ ಪಾಳ್ಯ, ಹೆಬ್ಬಾಳ, ಚೊಕ್ಕಸಂದ್ರ, ಹೆಚ್ಎಸ್ಆರ್ ಲೇಔಟ್, ಟಿ.ದಾಸರಹಳ್ಳಿ, ಸಿಂಗಸಂದ್ರ, ಹೆಚ್ಬಿಆರ್ ಲೇಔಟ್, ಕೆ.ಆರ್.ಮಾರ್ಕೆಟ್, ಹೊಸಕೆರೆಹಳ್ಳಿ ಸೇರಿ ಹಲವೆಡೆ ರಸ್ತೆಗಳು ಜಲಮಯವಾಗಿದೆ. ಇನ್ನು ಬಸವನಗುಡಿ, ಅಟ್ಟೂರ್ ವಾರ್ಡ್, ಬಾಗಲಗುಂಟೆ ದೀಪಾಂಜಲಿನಗರ, ಜೆ.ಪಿ.ನಗರದಲ್ಲಿ ಮರಗಳು ಧರೆಗುರುಳಿವೆ. ನಾಗವಾರದ ಹಲವು ಮನೆಗಳಿಗೆ ಚರಂಡಿ ನೀರು ನುಗ್ಗಿದ್ದರಿಂದ ಬಾಣಂತಿ ಪರದಾಟ ಪಟ್ಟಿದ್ದಾರೆ. ಮನೆಯಲ್ಲಿದ್ದ ದಿನಸಿ ವಸ್ತು, ಫ್ರಿಡ್ಜ್, ವಾಷಿಂಗ್ ಮಷೀನ್, ಅಕ್ಕಿ, ಧಾನ್ಯ ಸೇರಿದಂತೆ ಹಲವು ವಸ್ತುಗಳು ನೀರುಪಾಲಾಗಿವೆ.
ಭಾರಿ ಮಳೆ ಹಿನ್ನೆಲೆ ತುಮಕೂರು ತಾಲೂಕಿನ ದೇವರಾಯನದುರ್ಗ ಬೆಟ್ಟ ಬಂಡೆಗಳು ರಸ್ತೆ ಮೇಲೆ ಉರುಳಿಬಿದ್ದಿವೆ. ವೀವ್ ಪಾಯಿಂಟ್ ಬಳಿ ಬಂಡೆಗಳು ರಸ್ತೆಗುರುಳಿವೆ.
ಧಾರಾಕಾರ ಮಳೆಗೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ದಡ್ಡಿಹಳ್ಳಿ ಕೆರೆ ತುಂಬಿದೆ. ಕೆರೆ ಕೋಡಿ ನೀರು ಹರಿದು ಗದ್ದೆ, ತೋಟ ಮತ್ತು ರಸ್ತೆ ಜಲಾವೃತವಾಗಿವೆ. ರಸ್ತೆ ಮೇಲೆ ನೀರು ಹರಿಯುತ್ತಿರುವುದರಿಂದ ಗ್ರಾಮದ ಸಂಪರ್ಕಕ್ಕೆ ತೊಂದರೆಯಾಗಿದೆ. ಅಲ್ಲದೇ ನಿನ್ನೆ ರಾತ್ರಿ ಸುರಿದ ಮಳೆಯಿಂದ ಅಪಾರ ಪ್ರಮಾಣದ ಹಾನಿಯಾಗಿದೆ. ಸುಮಾರು 60 ವರ್ಷದ ನಂತರ ಇದೇ ಮೊದಲ ಬಾರಿಗೆ ಕೆರೆ ತುಂಬಿದೆ.
ಮೈದುಂಬಿ ಹರಿಯುತ್ತಿರುವ ಜಯಮಂಗಲಿ ನದಿ ತುಮಕೂರು ಜಿಲ್ಲೆಯಾದ್ಯಂತ ರಾತ್ರಿ ಇಡಿ ಭಾರಿ ಮಳೆಯಿಂದ ಜಯಮಂಗಲಿ ನದಿ ಮೈದುಂಬಿ ಹರಿಯುತ್ತಿದೆ. ದೇವರಾಯನದುರ್ಗ ಬೆಟ್ಟದ ತಪ್ಪಲಿನಲ್ಲಿ ಹುಟ್ಟುವ ನದಿ ಮಧುಗಿರಿ, ಕೊರಟಗೆರೆ ತಾಲೂಕಿನಲ್ಲಿ ಹರಿಯುತ್ತದೆ.
ಕೆಸರು ಗದ್ದೆಯಂತಾದ ಶಾಲಾ ರಸ್ತೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಳವಾಯಿಕೋಡಿಹಳ್ಳಿ ಶಾಲಾ ರಸ್ತೆ ಕೆಸರು ಗದ್ದೆಯಂತಾಗಿದೆ. ಹದಗೆಟ್ಟ ರಸ್ತೆಯಲ್ಲಿ ಶಾಲೆಗೆ ತೆರಳಲು ಮಕ್ಕಳ ಪರದಾಡುತ್ತಿದ್ದಾರೆ. ಚಪ್ಪಲಿಯನ್ನ ಕೈಯಲ್ಲಿ ಹಿಡಿದು ಮಕ್ಕಳು ಸಂಚಾರ ಮಾಡುತ್ತಿದ್ದಾರೆ. 25 ವರ್ಷದಿಂದ ಸರ್ಕಾರಿ ಶಾಲೆಯ ರಸ್ತೆ ಅಭಿವೃದ್ಧಿಯಾಗಿಲ್ಲ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ರಸ್ತೆ ಕೆಸರು ಗದ್ದೆಯಂತಾಗಿದೆ. ತಕ್ಷಣವೇ ಶಾಲೆಯ ರಸ್ತೆ ಅಭಿವೃದ್ಧಿ ಪಡಿಸಿ ಅಂತ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಇದನ್ನೂ ಓದಿ
ಕೊರೊನಾ ಆತಂಕದಿಂದ ಮುಖ್ಯ ಪರೀಕ್ಷಾ ಮಾದರಿಯಲ್ಲಿಯೇ ದ್ವಿತೀಯ ಪಿಯುಸಿ ಪರೀಕ್ಷೆಗೆ ಮುಂದಾದ ಪಿಯು ಬೋರ್ಡ್
Karnataka Dams Water Level: ಡ್ಯಾಂಗಳಲ್ಲಿ ತಗ್ಗಿದ ನೀರು; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ