
ಬೆಂಗಳೂರು, ಆಗಸ್ಟ್ 23: ಮೇಖ್ರಿ ವೃತ್ತದಿಂದ ಹೆಬ್ಬಾಳ ಜಂಕ್ಷನ್‌ವರೆಗೆ ನಿರ್ಮಿಸಲು ಉದ್ದೇಶಿಸಿರುವ ಅಂದಾಜು 2.2 ಕಿ.ಮೀ ಉದ್ದದ ಸುರಂಗ ರಸ್ತೆ ಯೋಜನೆಯ ಅಗತ್ಯವಿಲ್ಲ ಎಂದು ಬೆಂಗಳೂರು ಎನ್ವಿರಾನ್‌ಮೆಂಟ್ ಫೋರಂ ಹಾಗೂ ಹೆಬ್ಬಾಳ ನೇಚರ್ ಸೊಸೈಟಿ ಅಭಿಪ್ರಾಯಪಟ್ಟಿದೆ. ‘ನೋ ಮೋರ್ ಟನಲ್ ವಿಷನ್’ ಶೀರ್ಷಿಕೆಯಡಿ ನಡೆದ ದುಂಡುಮೇಜಿನ ಸಭೆಯಲ್ಲಿ ಈ ಯೋಜನೆಯು ಬೆಂಗಳೂರಿನ ತೀವ್ರ ಸಂಚಾರ ದಟ್ಟಣೆ ಸಮಸ್ಯೆಗೆ ನಿಜವಾಗಿಯೂ ಪರಿಹಾರವಾಗುತ್ತದೆಯೇ ಎಂಬ ಬಗ್ಗೆ ತಜ್ಞರು ಮತ್ತು ಪರಿಸರ ಹೋರಾಟಗಾರರು ಚರ್ಚಿಸಿದ್ದಾರೆ. ಸರ್ಕಾರವು ಸುರಂಗ ರಸ್ತೆಗಿಂತ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಆದ್ಯತೆ ನೀಡಬೇಕು ಎಂಬ ಆಗ್ರಹ ಸಭೆಯಲ್ಲಿ ಕೇಳಿಬಂದಿದೆ.
ಸಭೆಯಲ್ಲಿ ಸುರಂಗ ರಸ್ತೆ ಯೋಜನೆಯ ಪರಿಸರದ ಮೇಲಿನ ಪರಿಣಾಮಗಳ ಕುರಿತೂ ವಿಸ್ತೃತ ಚರ್ಚೆ ನಡೆಯಿತು. ವಿಶೇಷವಾಗಿ ಭೂಗರ್ಭ ಜಲ ಹಾಗೂ ಹಸಿರು ಸಂಪತ್ತಿನ ಮೇಲೆ ಉಂಟಾಗುವ ಹಾನಿಯ ಬಗ್ಗೆ ಆತಂಕ ವ್ಯಕ್ತವಾಯಿತು. ಇನ್ನು, ಸುರಂಗ ರಸ್ತೆ ಯೋಜನೆಗಳ ನಿಜವಾದ ಅಗತ್ಯವಿಲ್ಲ. ಪ್ರಸ್ತುತ ನಾಲ್ಕು ಮೆಟ್ರೋ ಹಾಗೂ ಎರಡು ಉಪನಗರ ರೈಲು ಸೇರಿದಂತೆ ಒಟ್ಟು ಆರು ಸಾರ್ವಜನಿಕ ಸಾರಿಗೆ ಯೋಜನೆಗಳು ಪ್ರಗತಿಯಲ್ಲಿವೆ. ಇವು ಮೆಖ್ರಿ ವೃತ್ತದಿಂದ ಹೆಬ್ಬಾಳದವರೆಗಿನ ಸಂಚಾರ ದಟ್ಟಣೆಯನ್ನು ನೇರವಾಗಿ ಕಡಿಮೆ ಮಾಡಲಿವೆ. ಸುರಂಗ ರಸ್ತೆ ಪೂರ್ಣಗೊಳ್ಳುವ ಮುನ್ನವೇ ಈ ಯೋಜನೆಗಳಲ್ಲಿ ಕನಿಷ್ಠ ಮೂರು ಪೂರ್ಣಗೊಳ್ಳಲಿವೆ ಎಂದು ಹೋರಾಟಗಾರು ತಿಳಿಸಿದ್ದಾರೆ.
ಇದನ್ನೂ ಓದಿ: ಹಳ್ಳ ಹಿಡಿದ ಬಿ-ಖಾತೆಯಿಂದ ಎ-ಖಾತೆ ನೀಡುವ ಯೋಜನೆ: ಆಗಿದ್ದೇನು?
ಈ ಯೋಜನೆಗಳು ಗಂಭೀರ ಪರಿಸರ ಪರಿಣಾಮ ಉಂಟುಮಾಡಲಿವೆ. ಇಂದಿರಾನಗರ 100 ಅಡಿ ರಸ್ತೆಯ ಫ್ಲೈಓವರ್ ಯೋಜನೆಯ ಉದಾಹರಣೆಯನ್ನೇ ತೆಗೆದುಕೊಂಡರೆ, ನಾಗರಿಕರ ಸಮೀಕ್ಷೆಯ ಪ್ರಕಾರ ಸುಮಾರು 1,000 ಮರಗಳು ಹಾನಿಗೊಳಗಾಗಲಿವೆ. ಹೆಬ್ಬಾಳದ ಸಣ್ಣ ಸುರಂಗ ರಸ್ತೆ ಯೋಜನೆಯು ತೆರೆದ ಮೈದಾನಗಳು, ಪಶುವೈದ್ಯಕೀಯ ಕಾಲೇಜು ಸುತ್ತಮುತ್ತಲಿನ ನೂರಾರು ಮರಗಳು ಹಾಗೂ ಹೆಬ್ಬಾಳ ಕೆರೆಯ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಬೆಂಗಳೂರು ಎನ್ವಿರಾನ್‌ಮೆಂಟ್ ಟ್ರಸ್ಟ್‌ನ ಟ್ರಸ್ಟಿ ದತ್ತಾತ್ರೇಯ ಟಿ. ದೇವರೆ ತಿಳಿಸಿರೋದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:44 am, Sun, 23 August 26