ಹೊಸ ವರ್ಷಾಚರಣೆಯಿಂದ ಅಬಕಾರಿ ಇಲಾಖೆಗೆ ಭರ್ಜರಿ ಆದಾಯ: ಅರ್ಧ ದಿನದಲ್ಲೇ 308 ಕೋಟಿ ರೂ. ಮದ್ಯ ಮಾರಾಟ
ಹೊಸ ವರ್ಷ ಆಚರಣೆಯ ಸಂಭ್ರಮ ಅಬಕಾರಿ ಇಲಾಖೆಗಂತೂ ಭರ್ಜರಿ ಆದಾಯ ತಂದುಕೊಟ್ಟಿದೆ. ಡಿಸೆಂಬರ್ 31ರಂದು ಕೇವಲ ಅರ್ಧ ದಿನದಲ್ಲಿ 300 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಮದ್ಯ ಮಾರಾಟವಾಗಿದ್ದು, ಕಳೆದ ವರ್ಷ ಇದೇ ದಿನ ಗಳಿಸಿದ ಆದಾಯಕ್ಕಿಂತಲೂ ಹೆಚ್ಚಿನ ಆದಾಯ ಗಳಿಸಿದೆ. ವಿವರಗಳು ಇಲ್ಲಿವೆ.
ಬೆಂಗಳೂರು, ಡಿಸೆಂಬರ್ 1: ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಗೆ ನೂರಾರು ಕೋಟಿ ರುಪಾಯಿ ಆದಾಯ ಹರಿದು ಬಂದಿದೆ. ಡಿಸೆಂಬರ್ 31 ರ ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅರ್ಧ ದಿನದ ಅವಧಿಯಲ್ಲಿ ಕೆಎಸ್ಬಿಸಿಎಲ್ನಿಂದ ಬರೋಬ್ಬರಿ 308 ಕೋಟಿ ರುಪಾಯಿ ಮದ್ಯ ಮಾರಾಟವಾಗಿದೆ. ಅಬಕಾರಿ ಇಲಾಖೆಯ ನಿರೀಕ್ಷೆಗೂ ಮೀರಿ ಮಾರಾಟವಾಗಿದೆ.
ಅಬಕಾರಿ ಇಲಾಖೆ 250 ಕೋಟಿ ರೂ. ಮೌಲ್ಯದ ಮದ್ಯ ಮಾರಾಟದ ಗುರಿ ಇಟ್ಟುಕೊಂಡಿತ್ತು. ಆದರೆ, ಅದನ್ನೂ ಮೀರಿ ಮಾರಾಟವಾಗಿದೆ. ಕಳೆದ ವರ್ಷ 2023 ರ ಡಿಸೆಂಬರ್ 31 ರಂದು 193 ಕೋಟಿ ರುಪಾಯಿ ಮದ್ಯ ಮಾರಾಟ ಆಗಿತ್ತು. 2024 ಡಿಸೆಂಬರ್ 31 ರಂದು 7,305 ಮದ್ಯ ಮಾರಾಟಗಾರರು ಕೆಎಸ್ಬಿಸಿಎಲ್ನಿಂದ ಮದ್ಯ ಖರೀದಿ ಮಾಡಿದ್ದಾರೆ.
ಐಎಂಎಲ್ 4,83,715 ಲಕ್ಷ ಬಾಕ್ಸ್ ಮಾರಾಟದಿಂದ 250.25 ಕೋಟಿ ಆದಾಯ ಸಂಗ್ರಹವಾಗಿದೆ. ಬಿಯರ್- 2,92,339 ಲಕ್ಷ ಬಾಕ್ಸ್ ಮಾರಾಟದಿಂದ 57,75 ಕೋಟಿ ಆದಾಯ ಸಂಗ್ರಹವಾಗಿದೆ. ಒಟ್ಟು 7,76,042 ಲಕ್ಷ ಬಾಕ್ಸ್ ಮದ್ಯ ಮಾರಾಟದಿಂದ ಒಟ್ಟು 308 ಕೋಟಿ ರುಪಾಯಿ ಆದಾಯ ಸಂಗ್ರಹವಾಗಿದೆ.
ಎರಡು ದಿನ ಹಿಂದಿನಿಂದಲೇ ಹೆಚ್ಚಿದ್ದ ಮದ್ಯ ಮಾರಾಟ
27-12-2024 ರ ಶುಕ್ರವಾರದಂದು ಕೂಡ ಬರೋಬ್ಬರಿ 408.58 ಕೋಟಿ ರುಪಾಯಿ ಮದ್ಯ ಮಾರಾಟವಾಗಿತ್ತು. ಐಎಂಎಲ್ 6,22,062 ಲಕ್ಷ ಬಾಕ್ಸ್ ಮಾರಾಟದಿಂದ 327,50 ಕೋಟಿ ರುಪಾಯಿ ಆದಾಯ ಸಂಗ್ರಹವಾಗಿತ್ತು. ಬಿಯರ್ 4,04,998 ಲಕ್ಷ ಬಾಕ್ಸ್ ಮಾರಾಟದಿಂದ 80,58 ಕೋಟಿ ರುಪಾಯಿ ಆದಾಯ ಗಳಿಕೆಯಾಗಿತ್ತು. ಐಎಂಎಲ್, ಬಿಯರ್ ಸೇರಿ ಒಟ್ಟು- 10,27,060 ಲಕ್ಷ ಬಾಕ್ಸ್ ಮದ್ಯ ಮಾರಾಟದಿಂದ 408.50 ಕೋಟಿ ರುಪಾಯಿ ಆದಾಯ ಹರಿದುಬಂದಿತ್ತು.
ಇದನ್ನೂ ಓದಿ: ಬೆಂಗಳೂರು: 2024 ರ ಕೊನೆಯ ದಿನ 2.5 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ
ಏತನ್ಮಧ್ಯೆ, ಬೆಂಗಳೂರಿನಲ್ಲಿ ಹೊಸ ವರ್ಷ ಆಚರಣೆ ಸಂಭ್ರಮದಿಂದ ನಡೆದಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ಲಕ್ಷಾಂತರ ಮಂದಿ ಸಂಭ್ರಮದಿಂದ ಕುಣಿದು ಕುಪ್ಪಳಿಸಿದ್ದಾರೆ. ಕೆಲವೆಡೆ ಸಣ್ಣಪುಟ್ಟ ಅಹಿತಕರ ಘಟನೆಗಳು ನಡೆದಿದ್ದು ಬಿಟ್ಟರೆ, ಒಟ್ಟಾರೆಯಾಗಿ ಹೊಸ ವರ್ಷದ ಸ್ವಾಗತ, ಸಂಭ್ರಮಾಚರಣೆ ಶಾಂತಿಯುತವಾಗಿ ನೆರವೇರಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:11 am, Wed, 1 January 25