ಶಿಕ್ಷಣ ಸಚಿವ ಮಧು ಬಂಗಾರಪ್ಪರಿಂದ ನನಗೆ ಜೀವ ಬೆದರಿಕೆ ಇದೆ: ಪ್ರಣವಾನಂದ ಸ್ವಾಮೀಜಿ ಗಂಭೀರ ಆರೋಪ

ಸಚಿವ ಮಧು ಬಂಗಾರಪ್ಪರಿಂದ ನನಗೆ ಜೀವ ಬೆದರಿಕೆ ಇದೆ. ಅವರ ಬೆಂಬಲಿಗರು ಕರೆ ‌ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಪೊಲೀಸ್ ‌ಕಮಿಷನರ್ ಭೇಟಿ ಮಾಡುತ್ತಿದ್ದು, ಮಧು ಬಂಗಾರಪ್ಪ ವಿರುದ್ಧ ದೂರು ನೀಡುತ್ತಿದ್ದೇನೆ ಎಂದು ಪ್ರಣವಾನಂದ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪರಿಂದ ನನಗೆ ಜೀವ ಬೆದರಿಕೆ ಇದೆ: ಪ್ರಣವಾನಂದ ಸ್ವಾಮೀಜಿ ಗಂಭೀರ ಆರೋಪ
ಸಚಿವ ಮಧು ಬಂಗಾರಪ್ಪ, ಈಡಿದ ಸಮುದಾಯದ ಪ್ರಣವಾನಂದಶ್ರೀ
Follow us
ಪ್ರಸನ್ನ ಗಾಂವ್ಕರ್​
| Updated By: ಗಂಗಾಧರ​ ಬ. ಸಾಬೋಜಿ

Updated on:Sep 16, 2023 | 3:43 PM

ಬೆಂಗಳೂರು, ಸೆಪ್ಟೆಂಬರ್​ 16: ಶಿಕ್ಷಣ ಸಚಿವ ಸಚಿವ ಮಧು ಬಂಗಾರಪ್ಪರಿಂದ ನನಗೆ ಜೀವ ಬೆದರಿಕೆ ಇದೆ ಎಂದು ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ (Pranavananda Swamiji) ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಮಧು ಬಂಗಾರಪ್ಪ ಬೆಂಬಲಿಗರು ಕರೆ ‌ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ನನಗೆ ಜೀವ ಬೆದರಿಕೆ ಇದೆ. ಇವತ್ತು ಪೊಲೀಸ್ ‌ಕಮಿಷನರ್ ಭೇಟಿ ಮಾಡುತ್ತಿದ್ದು, ಮಧು ಬಂಗಾರಪ್ಪ ವಿರುದ್ಧ ದೂರು ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಹರಿಪ್ರಸಾದ್ ಅವರು ಹಿಂದುಳಿದ ವರ್ಗದವರು. ಅವರಿಗೆ ಸ್ಥಾನಮಾನ ಕೇಳುವುದರಲ್ಲಿ ಏನು ತಪ್ಪಿದೆ. ಬೇರೆ ಸಮುದಾಯದವರು ಹೋರಾಟ ‌ಮಾಡಿದ್ದರಲ್ಲಾ. ಸಮುದಾಯಕ್ಕೆ ಮಧು ಬಂಗಾರಪ್ಪ ಕೊಡುಗೆ ಏನು ಎಂದು ಪ್ರಶ್ನಿಸಿದರು. ನಾರಾಯಣ ಗುರು ರಥ ಬಂದಾಗ ಒಂದು ಹಾರ ಹಾಕಿದರಾ. ನಾನು ಸಮುದಾಯದ ಭೂಮಿ ಕೊಳ್ಳೆ ಹೊಡೆದಿಲ್ಲ. ಸೈಟ್ ಮಾಡಿ ಮಾರಾಟ ಮಾಡಿಲ್ಲ. ಬಿ.ಕೆ ಹರಿಪಸ್ರಾದ್ ಭೂಮಿ ಕಳ್ಳತನ ಮಾಡಿದವರಲ್ಲ. ಈಡಿಗ ಸಮುದಾಯವನ್ನು ಸರ್ಕಾರವೇ ಒಡೆಯುತ್ತಿದೆ. ಸ್ವಾಮೀಗಳ ವಿರುದ್ಧ ಎತ್ತಿ ಕಟ್ಟುವ ಕೆಲಸ ಆಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: Madhu Bangarappa: ಅಧಿಕಾರ ಸ್ವೀಕರಿಸಿದ ಬಳಿಕ ಮೊದಲು ಸಹಿ ಮಾಡಿದ್ದೇ ಪಠ್ಯ ಪರಿಷ್ಕರಣೆಗೆ; ಮಧು ಬಂಗಾರಪ್ಪ

ನನ್ನ ಡಿಎನ್ಎ ಬಗ್ಗೆ ನಿಮಗೆ ಏಕೆ ಬೇಕು. ನಾನು ಸ್ವಾಮೀಜಿ ಅಲ್ಲ ಅಂತ ಹೇಳಲು ಹಕ್ಕು ಕೊಟ್ಟವರು ಯಾರು. ಸಮುದಾಯಕ್ಕೆ ಅನ್ಯಾಯವಾದರೆ ಅದಕ್ಕೆ ನೀವೇ ಹೊಣೆ. ನಿಮ್ಮ ಹಿನ್ನೆಲೆ ಏನು ಅಂತ ನಿಮಗೆ ಗೊತ್ತಿದ್ದೇಯಾ. ಸಮುದಾಯಕ್ಕೆ ನಿಮ್ಮ ಸಾಧನೆ ಏನು, ಈಗ ಜೆಡಿಎಸ್​ನಿಂದ ಕಾಂಗ್ರೆಸ್ಸಿಗೆ ಬಂದಿದ್ದೀರಾ. ಮುಂದೆ ಯಾವ ಪಕ್ಷಕ್ಕೆ ಹೋಗುತ್ತೀರಾ ಅಂತ ಗೊತ್ತಿಲ್ಲ. ಸಿದ್ದರಾಮಯ್ಯನವರು ಮಧು ಬಂಗಾರಪ್ಪ ಮಾತಿಗೆ ಕಡಿವಾಣ ಹಾಕಬೇಕು. ಸ್ಪೀಕರ್ ಭೇಟಿ ಮಾಡಿ ಮಧು ಬಂಗಾರಪ್ಪಗೆ ದೂರು ಕೊಡುತ್ತೇವೆ. ಕಾನೂನು ಹೋರಾಟ ಕೂಡ ಮಾಡುತ್ತೇವೆ ಎಂದು ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.

ಸಚಿವ ಮಧು ಬಂಗಾರಪ್ಪ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ ಮಂಚೇಗೌಡ 

ರಾಷ್ಟ್ರೀಯ ಈಡಿಗ ಮಹಾಮಂಡಳಿ ಕಾರ್ಯದರ್ಶಿ ಮಂಚೇಗೌಡ ಮಾತನಾಡಿ, ಸಚಿವರಾಗಿ ಮಧು ಬಂಗಾರಪ್ಪ ಹಾಸ್ಯಾಸ್ಪದ ಹೇಳಿಕೆ ನೀಡಿದ್ದಾರೆ. ಯಾರನ್ನೋ ಓಲೈಸಲು, ನಿಮ್ಮ ತೆವಲಿಗೆ ಹೀಗೆ ಮಾತಾಡಬೇಡಿ. ಅದೇ ಮಾತನ್ನು ನಿಮಗೆ ಹೇಳಿದರೆ ಅವಮಾನ ಆಗಲ್ಲವಾ ಎಂದು ಕಿಡಿಕಾರಿದ್ದಾರೆ. ನಮ್ಮ ಸ್ವಾಮೀಜಿ ಅಂತ ಸಮುದಾಯದವರು ಒಪ್ಪಿಕೊಂಡಿದ್ದಾರೆ. ನಿಮಗೆ ಒಪ್ಪಿಗೆ ಇಲ್ಲದಿದ್ದರೆ ಬಿಟ್ಟು ಬಿಡಿ ಎಂದಿದ್ದಾರೆ.

ಇದನ್ನೂ ಓದಿ: ಈಡಿಗ ಸಮುದಾಯದ ನಾಯಕರ ಕಡೆಗಣನೆ: ಹೊಸ ಪಕ್ಷ ಸ್ಥಾಪನೆ ಎಚ್ಚರಿಕೆ ನೀಡಿದ ಪ್ರಣವಾನಂದ ಶ್ರೀ

ಸ್ವಾಮೀಜಿ ತಮ್ಮ ಜೀವನದ ಬಗ್ಗೆ ಎಲ್ಲ ಹೇಳಿದ್ದಾರೆ. ಮದುವೆಯಾಗಿದ್ದು, ವಿಎಚ್​ಪಿಯಲ್ಲಿ ಇದದ್ದು, ಎಲ್ಲವನ್ನೂ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಮೊದಲು ಸ್ವಾಮೀಜಿ ವಿರುದ್ಧ ಮಾತನಾಡಿದ್ದಕ್ಕೆ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ರಾಜ್ಯ ವ್ಯಾಪಿ ಹೋರಾಟ ಮಾಡುತ್ತೇವೆ ಎಂದು ಸಚಿವ ಮಧು ಬಂಗಾರಪ್ಪಗೆ ಎಚ್ಚರಿಕೆ ನೀಡಿದ್ದಾರೆ.

ಯಾರಿಗೆ ಬೇಕಾದರೂ ದೂರು‌ ಕೊಡಲಿ: ಸಚಿವ ಮಧು ಬಂಗಾರಪ್ಪ

ಶಿವಮೊಗ್ಗದಲ್ಲಿ ಸಚಿವ ಮಧು ಬಂಗಾರಪ್ಪ ಹೇಳಿಕೆ ನೀಡಿದ್ದು, ಪ್ರಣವಾನಂದಶ್ರೀ ಯಾಕೆ ಕಣ್ಣೀರು ಹಾಕಿದ್ದಾರೆ, ತಪ್ಪು ಮಾಡಿದ್ದಾರಾ? ಪ್ರಣವಾನಂದಶ್ರೀ ಇಂತಹ ಬುರುಡೆಗಳನ್ನ ಬಿಟ್ಟುಕೊಂಡೇ ಬಂದಿದ್ದಾರೆ. ಪ್ರಣವಾನಂದಶ್ರೀ ನಮ್ಮ ಸಮಾಜದವರೇ ಅಲ್ಲ. ಅವರೇನು ಈಡಿಗ ಸಮಾಜದವರಾ, ಅವರ ಹಿನ್ನೆಲೆ ಕೆದಕಿ ನಿಮಗೆ ಗೊತ್ತಾಗುತ್ತದೆ. ನನ್ನ ವಿರುದ್ಧ ಬೆಂಗಳೂರು ನಗರ ಪೊಲೀಸ್ ಕಮಿಷನರ್, ಸ್ಪೀಕರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಸೇರಿ ಯಾರಿಗೆ ಬೇಕಾದರೂ ದೂರು‌ ಕೊಡಲಿ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:36 pm, Sat, 16 September 23