ಮತ್ತೆ ಪಠ್ಯಪರಿಷ್ಕರಣೆ ಮಾಡಿದರೆ ಸರ್ಕಾರದ ಬೊಕ್ಕಸಕ್ಕೆ ಬೀಳುತ್ತೆ ಕೋಟಿ ಕೋಟಿ ರೂ. ಬರೆ! ಶಿಕ್ಷಣ ಇಲಾಖೆಯ ಮುಂದಿನ ನಡೆಯೇನು?
ಈಗಾಗಲೇ ರೋಹಿತ್ ಚಕ್ರತೀರ್ಥ ಸಮಿತಿ ಮಾಡಿರುವ ಪಠ್ಯ ಪುಸ್ತಕ ಪರಿಷ್ಕರಣೆಗೆ ಸುಮಾರು 158 ಕೋಟಿ ರೂ. ಖರ್ಚಾಗಿದೆ. ಪುಸ್ತಕಗಳು ಮತ್ತೆ ಮರು ಮುದ್ರಣ ಮಾಡುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡರೆ ಅಷ್ಟೇ ಹಣ ಖರ್ಚಾಗುತ್ತದೆ.
ಬೆಂಗಳೂರು: ರಾಜ್ಯದಲ್ಲಿ ಪಠ್ಯಪರಿಷ್ಕರಣೆಯಿಂದ (Text Revision) ವಿದ್ಯಾರ್ಥಿಗಳು, ಶಿಕ್ಷಕರಿಗೆ ಬಾರಿ ಗೊಂದಲ ಮೂಡಿದೆ. ಯಾವ ಪಾಠವನ್ನು ಕಲಿಸಬೇಕು, ಯಾವ ಪಾಠವನ್ನು ಬಿಡಬೇಕು ಎನ್ನುವ ಬಗ್ಗೆ ಶಿಕ್ಷಕರಿಗೆ ಇನ್ನೂ ಗೊಂದಲ ಇದೆ. ಈ ನಡುವೆ ಕರ್ನಾಟಕ ಸರ್ಕಾರ (Karnataka Government) ಮತ್ತೆ ಪಠ್ಯ ಪರಿಷ್ಕರಣೆ ಮಾಡುತ್ತಾ ಎಂಬ ಅನುಮಾನ ಮೂಡಿದ್ದು, ಹಾಗೇನಾದರು ಮತ್ತೆ ಪಠ್ಯ ಪರಿಷ್ಕರಣೆ ಮಾಡಿದರೆ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ರೂಪಾಯಿ ಹೊರೆ ಬೀಳುತ್ತದೆ. ಈಗಾಗಲೇ ರೋಹಿತ್ ಚಕ್ರತೀರ್ಥ ಸಮಿತಿ ಮಾಡಿರುವ ಪಠ್ಯ ಪುಸ್ತಕ ಪರಿಷ್ಕರಣೆಗೆ ಸುಮಾರು 158 ಕೋಟಿ ರೂ. ಖರ್ಚಾಗಿದೆ. ಪುಸ್ತಕಗಳು ಮತ್ತೆ ಮರು ಮುದ್ರಣ ಮಾಡುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡರೆ ಅಷ್ಟೇ ಹಣ ಖರ್ಚಾಗುತ್ತದೆ.
ಪಠ್ಯಪರಿಷ್ಕರಣೆಯ ವಿಚಾರಕ್ಕೆ ಸಂಬಂಧಿಸಿ ಸದ್ಯ ಶಿಕ್ಷಣ ಇಲಾಖೆಯೂ ಗೊಂದಲದಲ್ಲಿದೆ. ಈಗಾಗಲೇ ರಾಜ್ಯದಲ್ಲಿ ಶಾಲೆಗಳು ಶುರುವಾಗಿದ್ದು, ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ ಮಾಡಲಾಗಿದೆ. ಈ ನಡುವೆ ಮತ್ತೆ ಮರು ಮುದ್ರಣ ಮಾಡಿದರೆ ಕೆಲ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಸರ್ಕಾರ ಗೊಂದಲದಲ್ಲಿದೆ.
ಇದನ್ನೂ ಓದಿ; Kulgam Encounter: ಕಾಶ್ಮೀರದ ಕುಲ್ಗಾಂನಲ್ಲಿ ಎನ್ಕೌಂಟರ್; ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರನ ಹತ್ಯೆ
ಜನಾಭಿಪ್ರಾಯದ ಮೊರೆ ಹೋಗಿರುವ ಶಿಕ್ಷಣ ಇಲಾಖೆ, ಪಠ್ಯವನ್ನು ಮರು ಮುದ್ರಿಸದೇ ಸರಿಪಡಿಸುವ ಪ್ರಯತ್ನಕ್ಕೆ ಕೈ ಹಾಕಿದೆ. ಲೋಪವಾದ ಪಾಠಗಳನ್ನಷ್ಟೇ ಪ್ರತ್ಯೇಕವಾಗಿ ಮಕ್ಕಳಿಗೆ ನೀಡುವ ಯೋಜನೆ ರೂಪಿಸಿದೆ. ಆದರೆ ಹೆಚ್ಚಿನ ಭಾಗ ತಪ್ಪು ಕಂಡುಬಂದಿರುವುದರಿಂದ ಹೇಗೆ ಪಾಠಗಳನ್ನ ಮಾರ್ಪಡಿಸುವುದು. ಪರ್ಯಾಯ ಪಠ್ಯ ಮುದ್ರಿಸಿ ನೀಡುವುದು ಹೇಗೆ ಎನ್ನುವ ಗೊಂದಲ ಎದುರಾಗಿದೆ.
ಶಿಕ್ಷಣ ಇಲಾಖೆಯ ವಿರುದ್ಧ ಶಿಕ್ಷಣ ತಜ್ಞರು ಗರಂ: ಪಠ್ಯಪರಿಷ್ಕರಣೆ ಗೊಂದಲದಿಂದ ಮತ್ತೆ ಎರಡು ತಿಂಗಳ ಕಾಲ ಪಠ್ಯಪುಸ್ತಕ ಬೊಧನೆ ಸಾಧ್ಯವಾಗುತ್ತಿಲ್ಲ ಎಂದು ಶಿಕ್ಷಣ ಇಲಾಖೆಯ ವಿರುದ್ಧ ಶಿಕ್ಷಣ ತಜ್ಞರು ಗರಂ ಆಗಿದ್ದಾರೆ. ಪಠ್ಯ ಬೋಧನೆ ತಡವಾದರೆ ಮಕ್ಕಳ ಕಲಿಕೆಗೆ ಹಿನ್ನೆಡೆಯಾಗುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ. ವರ್ಷವಿಡಿ ಕಲಿಕಾ ಚೇತರಿಕೆಯೊಂದಿಗೆ ಪಠ್ಯ ಬೋಧನೆ ಅಂತಾ ಆರಂಭದಲ್ಲಿ ಪ್ಲಾನ್ ಮಾಡಲಾಗಿತ್ತು. ಆದರೆ ಪಠ್ಯ ಪರಿಷ್ಕರಣಾ ಜಟಾಪಟಿ ಮುಂದುವರೆದಿದ್ದು, ಮಕ್ಕಳಿಗೆ ಇನ್ನು ಪಠ್ಯ ಕೈತಲುಪಿಲ್ಲ.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪ್ರತಿಕ್ರಿಯೆ: ಪಠ್ಯ ಪರಿಷ್ಕರಣೆ ವೇಳೆ ಮಹನೀಯರಿಗೆ ಅವಮಾನ ನಡೆದಿದೆ ಎಂದು ಆರೋಪಿಸಿ ಸಚಿವ ನಾಗೇಶ್ ಮತ್ತು ರೋಹಿತ್ ಚಕ್ರತೀರ್ಥ ವಿರುದ್ಧ ಹೋರಾಟ ನಡೆಸಲಾಗುತ್ತದೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿಕೆ ನೀಡಿದ್ದಾರೆ. ಜೂನ್ 15ರಂದು ಕುಪ್ಪಳ್ಳಿಯಿಂದ ತೀರ್ಥಹಳ್ಳಿವರೆಗೆ ಪಾದಯಾತ್ರೆ ಮಾಡಲಾಗುತ್ತದೆ ಎಂದು ತಿಳಿಸಿದ ಕಿಮ್ಮನೆ, ಪಠ್ಯ ಪರಿಷ್ಕರಣೆ ಕೈಬಿಟ್ಟು ಹಿಂದಿನ ಪಠ್ಯ ಮುಂದುವರಿಸಬೇಕು ಎಂದರು.
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:39 am, Sat, 11 June 22