ಬಿಎಂಟಿಸಿ ಸಾರಿಗೆ ನಿಗಮ ನೌಕರರಿಂದ ಸಮವಸ್ತ್ರ ನೀತಿ ಉಲ್ಲಂಘನೆ! ಟೋಪಿ ಧರಿಸಿ ಬಂದ ಮುಸ್ಲಿಂ ನೌಕರರು, ಕೇಸರಿ ಶಾಲು ಧರಿಸಿ ಬಂದ ಹಿಂದೂ ನೌಕರರು
ಬಿಎಂಟಿಸಿ ಸಾರಿಗೆ ನಿಗಮ ನೌಕರರು ಸಮವಸ್ತ್ರ ನೀತಿ ಉಲ್ಲಂಘನೆ ಮಾಡಿದ್ದು, ಮುಸ್ಲಿಂ ನೌಕರರು ಟೋಪಿ, ಹಿಂದೂ ನೌಕರರಿಂದ ಕೇಸರಿ ಶಾಲು ಧರಿಸಿ ಕೆಲಸಕ್ಕೆ ಹಾಜರಾಗಿದ್ದಾರೆ.
ಬೆಂಗಳೂರು: ಹಿಜಾಬ್ನಿಂದ (Hijab) ಆರಂಭವಾದ ಧರ್ಮ ಸಂಘರ್ಷ ರಾಜ್ಯದಲ್ಲಿ ಮುಂದುವರೆಯುತ್ತಲೇ ಇದೆ. ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿದ್ದರು. ಇದನ್ನು ವಿರೋಧಿಸಿದ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿ ಪ್ರತಿಭಟಿಸಿದ್ದರು. ಹಿಜಾಬ್ ಧರಿಸುವವರೆಗೆ ಕೇಸರಿ ಶಾಲು ಧರಿಸುತ್ತೇವೆಂದು ಪಟ್ಟು ಹಿಡಿದಿದ್ದರು. ಈ ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಬಳಿಕ ಹಿಜಾಬ್ ಧರಿಸಿ ಶಾಲಾ- ಕಾಲೇಜಿಗೆ ಹೋಗುವಂತಿಲ್ಲವೆಂದು ತೀರ್ಪು ನೀಡಿದೆ. ಈ ನಡುವೆ ಇದೀಗ ಸರ್ಕಾರಿ ನಿಗಮದಲ್ಲೂ ಧರ್ಮ ದಂಗಲ್ ಆರಂಭವಾಗಿದೆ. ಬಿಎಂಟಿಸಿ (BMTC) ಸಾರಿಗೆ ನಿಗಮ ನೌಕರರು ಸಮವಸ್ತ್ರ ನೀತಿ ಉಲ್ಲಂಘನೆ ಮಾಡಿದ್ದು, ಮುಸ್ಲಿಂ ನೌಕರರು ಟೋಪಿ, ಹಿಂದೂ ನೌಕರರಿಂದ ಕೇಸರಿ ಶಾಲು ಧರಿಸಿ ಕೆಲಸಕ್ಕೆ ಹಾಜರಾಗಿದ್ದಾರೆ.
ಬಿಎಂಟಿಸಿ ನೌಕರರು ಕಳೆದ 1 ತಿಂಗಳಿಂದ ಕೇಸರಿ ಶಾಲು ಮತ್ತು ಟೋಪಿ ಹಾಕಿಕೊಂಡು ಕೆಲಸಕ್ಕೆ ಹಾಜರಾಗುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಟೋಪಿ ಕಳಚಲು ಕೇಸರಿ ಕಾರ್ಮಿಕರ ಸಂಘ ಎಂದು ನೌಕರರು ಸಂಘ ಮಾಡಿಕೊಂಡಿದ್ದಾರೆ. 1,500 ಸಿಬ್ಬಂದಿ ಕೇಸರಿ ಕಾರ್ಮಿಕರ ಸಂಘದ ಸದಸ್ಯತ್ವ ಹೊಂದಿದ್ದಾರೆ. ಟೋಪಿ ಕಳಚುವವರೆಗೂ ಕೇಸರಿ ಶಾಲು ಹಾಕುತ್ತೇವೆಂದು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ: ಮೊಡವೆ ಕಲೆಗಳಿಗೆ ನಿಮ್ಮ ಮನೆಯಲ್ಲೇ ಇದೆ ಪರಿಹಾರ
ಈ ಬಗ್ಗೆ ಬಿಎಂಟಿಸಿ ಉಪಾಧ್ಯಕ್ಷ ಎಂಆರ್ ವೆಂಕಟೇಶ್ ಮಾತನಾಡಿ, ಬಿಎಂಟಿಸಿಯಲ್ಲಿ ಶಿಸ್ತು ಪಾಲನೆ ಕಡ್ಡಾಯ. ಅತಿರೇಕದ ವರ್ತನೆ ಕಂಡುಬಂದರೆ ಕ್ರಮ ಕೈಗೊಳ್ಳುತ್ತೇವೆ. ವಸ್ತ್ರ ಸಂಹಿತೆ ಪಾಲನೆ ಕಡ್ಡಾಯವಾಗಿ ಆಗಬೇಕು. ಈ ಹಿಂದೆ ಯಾವುದೇ ಈ ರೀತಿ ಘಟನೆ ನಡೆದಿರಲಿಲ್ಲ. ಒಂದು ವೇಳೆ ನಿಯಮ ಉಲ್ಲಂಘನೆಯಾದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬಾರಾವ್ ಮಾತನಾಡಿ, ಇದು ಕೊರೊನಾಗಿಂತ ದೊಡ್ಡ ವೈರಸ್. ಇದರ ಬಗ್ಗೆ ನೌಕರರು ಎಚ್ಚರಿಕೆಯಿಂದ ಇರಬೇಕು. ಸಾರಿಗೆ ನಿಗಮಗಳಲ್ಲಿ ಯಾವಾಗಲೂ ಧರ್ಮದ ವಿಚಾರ ಬಂದಿರಲಿಲ್ಲ. ಎಲ್ಲರೂ ಶಿಸ್ತು ಪಾಲನೆ ಮಾಡಬೇಕು. ನೌಕರರು ಎಲ್ಲಿಯೂ ಇಂಥಾ ವಿಚಾರಗಳಿಗೆ ಕಿವಿಗೊಡಬಾರದು. ಸರ್ಕಾರ ಸಂಘ ಪರಿವಾರದ ಈ ರೀತಿಯ ವರ್ತನೆಗಳಿಗೆ ಬ್ರೇಕ್ ಹಾಕಬೇಕು. ಇದು ನಿಗಮಗಳನ್ನೇ ಮುಚ್ಚಿಸುವ ಹುನ್ನಾರ ಎಂದು ಅಭಿಪ್ರಾಯಪಟ್ಟರು.
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:53 am, Sat, 11 June 22