AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ರಕ್ತ ಸಿಗದೆ ಮಕ್ಕಳು, ರೋಗಿಗಳ ಪರದಾಟ; ಬೇಸಿಗೆಯೇ ಕಾರಣ!

ಬಿಸಿಲಿನ ಶಾಖ ಹೆಚ್ಚಾಗಿರುವ ಸಂದರ್ಭದಲ್ಲಿ ರಕ್ತದಾನ ಮಾಡಿದರೆ ಸುಸ್ತು ಹಾಗೂ ಇತರ ಸಮಸ್ಯೆಗಳು ಉಂಟಾಗುತ್ತವೆ ಎಂಬ ಸುಳ್ಳು ಸುದ್ದಿಯಿಂದ ಹೆದರಿ ಜನರ ರಕ್ತದಾನ ಮಾಡದಿರುವುದೇ ರಕ್ತದ ಕೊರತೆಗೆ ಕಾರಣ ಎಂದು ಬೆಂಗಳೂರಿನ ಕೆಲವು ಬ್ಲಡ್ ಬ್ಯಾಂಕುಗಳು ತಿಳಿಸಿವೆ. ಮತ್ತೊಂದಡೆ ಚುನಾವಣೆ ನಿಂತಿ ಸಂಹಿತೆ ಕೂಡ ರಕ್ತದಾನ ಪ್ರಮಾಣ ಕಡಿಮೆಯಾಗಲು ಕಾರಣವಾಗಿದೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ರಕ್ತ ಸಿಗದೆ ಮಕ್ಕಳು, ರೋಗಿಗಳ ಪರದಾಟ; ಬೇಸಿಗೆಯೇ ಕಾರಣ!
ಸಾಂದರ್ಭಿಕ ಚಿತ್ರ
Kiran Surya
| Updated By: Ganapathi Sharma|

Updated on: May 02, 2024 | 6:57 AM

Share

ಬೆಂಗಳೂರು, ಮೇ 2: ಕಳೆದ ಎರಡ್ಮೂರು ತಿಂಗಳುಗಳಿಂದ ಬೆಂಗಳೂರಿನಲ್ಲಿ (Bengaluru) ಮಕ್ಕಳಿಗೆ ಮತ್ತು ರೋಗಿಗಳಿಗೆ ಸರಿಯಾಗಿ ರಕ್ತ (Blood) ಸಿಗುತ್ತಿಲ್ಲ ಎಂದು ವರದಿಯಾಗಿದೆ. ಬೇಸಿಗೆಯಲ್ಲಿ (Summer) ರಕ್ತ ಕೊಟ್ಟರೆ ಆರೋಗ್ಯ ಸಮಸ್ಯೆ ಎದುರಾಗುತ್ತದೆ, ಸುಸ್ತಾಗುತ್ತದೆ, ಆಯಾಸ ಆಗುತ್ತದೆ ಎಂಬ ವದಂತಿಯೇ ಇದಕ್ಕೆ ಕಾರಣ ಎನ್ನಲಾಗಿದೆ. ಪರಿಣಾಮವಾಗಿ ರಕ್ತದಾನಿಗಳ (Blood Doners) ಸಂಖ್ಯೆಯು ತುಂಬಾ ಕಡಿಮೆ ಆಗಿದೆ ಎಂದು ಮೂಲಗಳು ಹೇಳಿವೆ.

ಚುನಾವಣಾ ನೀತಿ ಸಂಹಿತೆಯೂ ಕಾರಣ

ಲೋಕಸಭಾ ಚುನಾವಣೆ ಪ್ರಯುಕ್ತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ರಾಜಕೀಯ ನಾಯಕರ ಹುಟ್ಟುಹಬ್ಬ ಇತ್ಯಾದಿಗಳ ಹೆಸರಿನಲ್ಲಿ ಬ್ಲಡ್‌ ಕ್ಯಾಂಪ್​​ಗಳ ಆಯೋಜನೆ ಆಗ್ತಿಲ್ಲ. ಈಗಾಗಲೇ ಕಾಲೇಜುಗಳಿಗೆ ರಜೆ ನೀಡಿರುವ ಕಾರಣ ಕಾಲೇಜಿನಲ್ಲಿ ಬ್ಲಡ್ ಕ್ಯಾಂಪ್​​ಗಳ ಆಯೋಜನೆ ಆಗ್ತಿಲ್ಲ. ಐಟಿ ಬಿಟಿ ಕಂಪನಿಗಳ ಟೆಕ್ಕಿಗಳು ಫೈನಾನ್ಸಿಯಲ್ ಇಯರ್ ಎಂಡ್ ಅನ್ನೋ ಕಾರಣಕ್ಕಾಗಿ ಕ್ಯಾಂಪ್​​​ಗಳನ್ನು ನಡೆಸುತ್ತಿಲ್ಲ. ಇದರಿಂದ ಸಿಲಿಕಾನ್ ಸಿಟಿಯ ರೋಗಿಗಳಿಗೂ ಮತ್ತು ಮಕ್ಕಳಿಗೂ ಸರಿಯಾಗಿ ರಕ್ತ ಸಿಗ್ತಿಲ್ಲ.

ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕ್​​ನಲ್ಲಿ ಈ ಹಿಂದೆ 2500 ರಿಂದ 3 ಸಾವಿರ ಯೂನಿಟ್​​ಗಳು ಸಂಗ್ರಹಣೆ ಆಗ್ತಿತ್ತು. ಈಗ ಎರಡು ಸಾವಿರ ಯೂನಿಟ್ ಕೂಡ ಆಗ್ತಿಲ್ಲ. ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕ್​​ನಲ್ಲಿ ರಿಜಿಸ್ಟರ್ ಆಗಿರುವ ತಲಸೇಮಿಯಾ ರೋಗದಿಂದ ಬಳಲುತ್ತಿರುವ 416 ಬಡ ಮಕ್ಕಳಿಗೆ ಪ್ರತಿದಿನ 40 ಯೂನಿಟ್ ರಕ್ತ ಬೇಕು. ಪ್ರತಿ 20 ದಿನಕ್ಕೊಮ್ಮೆ ಒಂದು ಮಗುವಿಗೆ ಎರಡು ಬಾಟಲ್ ರಕ್ತ ಬದಲಾವಣೆ ಮಾಡಬೇಕು. ಆದರೆ ಈಗ 1500 ಯೂನಿಟ್ ಮಾತ್ರ ಸಂಗ್ರಹಣೆ ಆಗ್ತಿದೆ. ಇದರಿಂದ ಬಡ ಮಕ್ಕಳಿಗೆ ರಕ್ತ ನೀಡಲು ಸಾಧ್ಯವಾಗುತ್ತಿಲ್ಲ.

ಈ ಹಿಂದೆ ತಿಂಗಳಿಗೆ 25 ರಿಂದ 30 ಬ್ಲಡ್ ಕ್ಯಾಂಪ್ ಗಳನ್ನು ಆಯೋಜನೆ ಮಾಡಲಾಗ್ತಿತ್ತು. ಸದ್ಯ ನಾಲ್ಕೈದು ಬ್ಲಡ್ ಕ್ಯಾಂಪ್ ಮಾತ್ರ ಆಯೋಜನೆ ಆಗ್ತಿದೆ. ಇದರಿಂದ ತುಂಬಾ ರಕ್ತದ ಸಮಸ್ಯೆ ಆಗಿದೆ. ದಯವಿಟ್ಟು ಜನರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಿ ಎಂದು ರಾಷ್ಟ್ರೋತ್ಥಾನ ಬ್ಲಡ್‌ ಬ್ಯಾಂಕ್ ಅಡ್ಮಿನಿಸ್ಟ್ರೇಟರ್ ಅನುರಾಧ. ಜೆ ಮನವಿ ಮಾಡಿದ್ದಾರೆ.

ಈ ಹಿಂದೆ ರೆಡ್ ಕ್ರಾಸ್ ಬ್ಲಡ್‌ ಬ್ಯಾಂಕ್ ನಲ್ಲಿ ಪ್ರತಿ ತಿಂಗಳು 2800 ರಿಂದ 3000 ಸಾವಿರ ಯೂನಿಟ್ ಬ್ಲಡ್ ಸಂಗ್ರಹಣೆ ಆಗ್ತಿತ್ತು. ಆದರೆ ಈಗ 1500 ಯೂನಿಟ್ ಮಾತ್ರ ಕೆಲೆಕ್ಷನ್ ಆಗ್ತಿದೆ. ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ವಾಹನದಲ್ಲಿ ದಿನಕ್ಕೆ 45 ರಿಂದ 50 ಜನ ದಾನಿಗಳು ರಕ್ತದಾನ ಮಾಡ್ತಿದ್ರು. ಈಗ ಪ್ರತಿದಿನ 4 ರಿಂದ 5 ಜನರು ಮಾತ್ರ ರಕ್ತದಾನ ಮಾಡ್ತಿದ್ದಾರಂತೆ. ಮಕ್ಕಳಿಗೆ ಸಮಸ್ಯೆ ಆಗಬಾರದೆಂದು ಪ್ರತಿ ಮೂರು ತಿಂಗಳಿಗೊಮ್ಮೆ ನಾನು ರಕ್ತದಾನ ಮಾಡುತ್ತೇನೆ. ಎಲ್ಲರೂ ತಪ್ಪದೆ ರಕ್ತದಾನ ಮಾಡಿ ಎಂದು ರಕ್ತದಾನಿ ಸಂದೀಪ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಬಿಸಿಲಿನ ಶಾಖಕ್ಕೆ ಕುಸಿದು ಬಿದ್ದು ಉಡುಪಿಯಲ್ಲಿ ವ್ಯಕ್ತಿ ಮೃತ್ಯು

ಒಟ್ಟಿನಲ್ಲಿ ಸುಳ್ಳು ಸುದ್ದಿಗಳನ್ನು ನಂಬಿ ಕೆಲವರು ರಕ್ತದಾನ ಮಾಡಲು ಮುಂದೆ ಬರ್ತಿಲ್ಲ. ಆದರೆ ಬೇಸಿಗೆಯಲ್ಲಿ ರಕ್ತದಾನ ಮಾಡಿದರೆ ಸಮಸ್ಯೆಯಾಗುತ್ತದೆ ಎಂಬುದು ಸತ್ಯಕ್ಕೆ ದೂರವಾಗಿದ್ದು, ಬೇಸಿಗೆಯಲ್ಲಿ ರಕ್ತದಾನ ಮಾಡಿದರೆ ಯಾವುದೇ ಆರೋಗ್ಯ ಸಮಸ್ಯೆ ಕೂಡ ಕಾಡುವುದಿಲ್ಲ. ದಯವಿಟ್ಟು ರಕ್ತದಾನ ಮಾಡಿ ಎಂದು ಬ್ಲಡ್‌ ಬ್ಯಾಂಕ್​ನವರು ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ