ರಾಜ್ಯ ಸರ್ಕಾರದಿಂದಲೇ ಸ್ವಂತ ಏರ್ಲೈನ್ಸ್ ಆರಂಭಿಸುವ ಬಗ್ಗೆ ಚಿಂತನೆ: ಸಚಿವ ಎಂಬಿ ಪಾಟೀಲ್
ವಿಜಯಪುರ, ಕಾರವಾರ, ಬೀದರ್ ಸೇರಿ ಮುಂದಿನ ದಿನಗಳಲ್ಲಿ ನಿರ್ಮಾಣವಾಗುವ ಎಲ್ಲ ವಿಮಾನ ನಿಲ್ದಾಣಗಳನ್ನು ನಾವೇ ನಿರ್ವಹಣೆ ಮಾಡುತ್ತೇವೆ. ಉತ್ತರ ಕನ್ನಡ ಜಿಲ್ಲೆಯ ತದಡಿ ಸೂಕ್ಷ್ಮ ವಲಯ ಆಗಿದ್ದರಿಂದ ಬಂದರು ನಿರ್ಮಾಣ ಆಗಿರಲಿಲ್ಲ. ಇದೀಗ ತದಡಿಯಲ್ಲಿ ಶೀಘ್ರದಲ್ಲೇ ಇಕೋ ಟೂರಿಸಂ ಪಾರ್ಕ್ ಮಾಡಲು ನಿರ್ಧರಿಸಿದ್ದೇವೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದರು.
ಬೆಂಗಳೂರು: ಕರ್ನಾಟಕದ ವಿಮಾನ ನಿಲ್ದಾಣಗಳನ್ನು (Karnataka Airport) ನಾವು ಈ ಹಿಂದೆ ಏರ್ಪೋರ್ಟ್ ಅಥಾರಿಟಿಗೆ ನೀಡುತ್ತಿದ್ದೇವು. ವಿಮಾನ ನಿಲ್ದಾಣಗಳ ಭೂಮಿ ಕೂಡ ಅಥಾರಿಟಿ ಹೆಸರಿಗೆ ವರ್ಗಾವಣೆಯಾಗುತ್ತಿತ್ತು. ಇದರಿಂದ ವಿಮಾನ ನಿಲ್ದಾಣಗಳ ಮೇಲೆ ನಮ್ಮ ಹಿಡಿತ ಇರುತ್ತಿರಲಿಲ್ಲ. ಇನ್ನು ಶಿವಮೊಗ್ಗ ವಿಮಾನ ನಿಲ್ದಾಣವನ್ನು (Shivmogga Airport) ರಾಜ್ಯ ಸರ್ಕಾರವೇ ನಿರ್ವಹಣೆ ಮಾಡುತ್ತದೆ. ಇನ್ಮುಂದೆ ಹೊಸದಾಗಿ ತಯಾರಾಗುವ ಎಲ್ಲ ವಿಮಾನ ನಿಲ್ದಾಣಗಳನ್ನು ರಾಜ್ಯ ಸರ್ಕಾರವೇ ನಿರ್ವಹಣ ಮಾಡುತ್ತದೆ. ಅಲ್ಲದೇ ಸರ್ಕಾರದಿಂದ ಏರ್ ಲೈನ್ಸ್ (Air Alliance) ಮಾಡುವ ಬಗ್ಗೆಯೂ ಚಿಂತನೆ ನಡೆಸಿದ್ದೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ಸರ್ಕಾರ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ಸಚಿವ ಎಂಬಿ ಪಾಟೀಲ್ ಬೆಂಗಳೂರಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯ ಸಾಧನೆಗಳ ಕಿರು ಹೊತ್ತಿಗೆ ಬಿಡುಗಡೆ ಮಾಡಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ವಿಜಯಪುರ, ಕಾರವಾರ, ಬೀದರ್ ಸೇರಿ ಮುಂದೆ ಎಲ್ಲ ವಿಮಾನ ನಿಲ್ದಾಣಗಳನ್ನು ನಾವೇ ನಿರ್ವಹಣೆ ಮಾಡುತ್ತೇವೆ. ಉತ್ತರ ಕನ್ನಡ ಜಿಲ್ಲೆಯ ತದಡಿ ಸೂಕ್ಷ್ಮ ವಲಯ ಆಗಿದ್ದರಿಂದ ಬಂದರು ನಿರ್ಮಾಣ ಆಗಿರಲಿಲ್ಲ. ಇದೀಗ ತದಡಿಯಲ್ಲಿ ಶೀಘ್ರದಲ್ಲೇ ಇಕೋ ಟೂರಿಸಂ ಪಾರ್ಕ್ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ಸರ್ಕಾರ ನೂರು ದಿನಗಳ ಪೂರೈಸಿದ ಸಂದರ್ಭ ಇದು. ನೂರು ದಿನಗಳ ನಮ್ಮ ಹೆಜ್ಜೆ ಬಗ್ಗೆ ಹೇಳಲೇಬೇಕು. ನಾವು ಇನ್ನೂ ಬಹುದೂರ ಸಾಗಬೇಕಾಗಿದೆ. ನಾಲ್ಕು ವರ್ಷ ಎಂಟು ತಿಂಗಳಿಗಿಂತ ಹೆಚ್ಚು ಸಾಗುವುದು ಬಾಕಿ ಇದೆ. ನಾವು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ನೂರು ದಿನಗಳ ಸಂಭ್ರಮ ಆಚರಣೆ ಮಾಡುತ್ತಿದ್ದೇವೆ. ಹೊಸ ಕೈಗಾರಿಕೆ ನೀತಿ ತರಲು ಸಿಎಂ ಸೂಚನೆ ನೀಡಿದ್ದಾರೆ. ರಫ್ತು ಉತ್ಪಾದನೆ ಹೆಚ್ಚಳ ಮಾಡುವುದಕ್ಕೆ ಹೆಚ್ಚು ಒತ್ತು ನೀಡಲು ತಿಳಿಸಿದ್ದಾರೆ. ಶೀಘ್ರದಲ್ಲೇ ತಜ್ಞರ ಸಮಿತಿ ಮಾಡಿ ಹೊಸ ಕೈಗಾರಿಕಾ ನೀತಿ ಮಾಡುತ್ತೇ ಎಂದರು.
ಇದನ್ನೂ ಓದಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಸಿದ್ಧವಾಗಿದೆ ನೂತನ ‘ಎಲಿವೇಟೆಡ್ ವಾಕ್‌ವೇ’
ಒಟ್ಟು 2000 ಎಕರೆ ಪ್ರದೇಶದಲ್ಲಿ ಬೆಂಗಳೂರಿಗೆ ಹತ್ತಿರದಲ್ಲಿ ಮೊದಲ ಹಂತದಲ್ಲಿ 1000 ಎಕರೆ ವಿಸ್ತೀರ್ಣದಲ್ಲಿ ನಾಲೆಜ್ ಹೆಲ್ತ್ ಇನ್ನೋವೇಷನ್ ರಿಸರ್ಚ್ ಸಿಟಿ ಪಾರ್ಕ್ (Knowledge Health Innovation Research City Park) ನಿರ್ಮಾಣ ಮಾಡುತ್ತೇವೆ. ಶೀಘ್ರದಲ್ಲೇ ಇದನ್ನು ನಿರ್ಮಾಣ ಮಾಡುವ ದೃಷ್ಟಿಯಿಂದ ಕೆಲಸ ಪ್ರಾರಂಭ ಮಾಡಿದ್ದೇವೆ. ವಿಶ್ವ ದರ್ಜೆಯ ಸಂಸ್ಥೆಗಳಿಗೆ ಅಲ್ಲಿ ಅವಕಾಶ ನೀಡಲು ಪ್ಲ್ಯಾನ್ ಮಾಡಲಾಗುತ್ತಿದೆ. ಇದು ಮಹತ್ವಾಕಾಂಕ್ಷೆ ಹೆಜ್ಜೆಯಾಗಲಿದೆ ಎಂದು ಹೇಳಿದರು.
ಬೆಂಗಳೂರಿನ ಹೊರ ವಲಯಗಳಲ್ಲಿ ಇರುವ ಇಂಡಸ್ಟ್ರಿಯಲ್ ಏರಿಯಾಗಳ ಅಭಿವೃದ್ಧಿ ಆಗಬೇಕಿದೆ. 190 ಇಂಡಸ್ಟ್ರಿಯಲ್ ಏರಿಯಾಗಳು ರಾಜ್ಯದಲ್ಲಿ ಇವೆ. ಇಂಡಸ್ಟ್ರಿಯಲ್ ಏರಿಯಾಗಳಿಗೆ ಮೂರು ಹಂತಗಳಲ್ಲಿ ಮೂಲಸೌಕರ್ಯ ಒದಗಿಸುವ ಕೆಲಸ ಮಾಡುತ್ತೇವೆ. ಇಂಡಸ್ಟ್ರಿಯಲ್ ಏರಿಯಾಗಳ ನಿರ್ವಹಣೆಗೆ ಅಸೋಸಿಯೇಷನ್ ಸೇರ್ಪಡೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಒಂದು ಮಾದರಿ ತಯಾರಿ ಮಾಡುತ್ತಿದ್ದೇವೆ. ಸುಮಾರು 300 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಅಭಿವೃದ್ಧಿ ಆಗುತ್ತದೆ. ಡ್ರೋನ್ ಸರ್ವೆ ಮೂಲಕ ಇಂಡಸ್ಟ್ರಿಯಲ್ ಏರಿಯಾಗಳ ಕೊರತೆ ಪತ್ತೆ ಹಚ್ಚುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಏಕಗವಾಕ್ಷಿ ಯೋಜನೆ ಏಕಗವಾಕ್ಷಿಯಾಗಿ ಉಳಿದಿಲ್ಲ. ಪಂಜಾಬ್, ತೆಲಂಗಾಣದ ಸಿಂಗಲ್ ವಿಂಡೋ ಮಾಡೆಲ್ ಅಧ್ಯಯನ ಮಾಡುತ್ತಿದ್ದೇವೆ. ನಮ್ಮದೇ ವಿಶಿಷ್ಟ ಮಾದರಿಯ ಸಿಂಗಲ್ ವಿಂಡೋ ಮಾಡೆಲ್ ತಯಾರು ಮಾಡುತ್ತೇವೆ. ವಿಷನ್ ಗ್ರೂಪ್ ಸಮಿತಿ ರಚನೆ ಮಾಡಿ ಸಿಎಂ ಅನುಮತಿ ಪಡೆದುಕೊಳ್ಳುತ್ತೇವೆ. 9 ಆದ್ಯತಾ ವಲಯಗಳ ವಿಷನ್ ಗ್ರೂಪ್ ಅಥವಾ ತಜ್ಞರ ಸಮಿತಿ ಮಾಡಲು ನಿರ್ಧರಿಸಿದ್ದೇವೆ. ಹೂಡಿಕೆದಾರರ ನೆಚ್ಚಿನ ತಾಣ ಕರ್ನಾಟಕ ಎನ್ನುವುದರದಲ್ಲಿ ಎರಡು ಮಾತಿಲ್ಲ. ಈ ನೂರು ದಿನಗಳಲ್ಲಿ ಸುಮಾರು ೬೦ ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.
ಫಾಕ್ಸಕಾನ್, ಟಾಟಾ ಟೆಕ್ನಾಲಜಿ, ಜೆಎಸ್ಡಬ್ಲ್ಯೂ ಎನರ್ಜಿ, ಸೆಮಿ ಕಂಡಕ್ಟರ್ ಉಪಕರಣ ತಯಾರಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಆಗಿದೆ. ಈ ವರ್ಷ 1 ಲಕ್ಷ ಕೋಟಿ ಬಂಡವಾಳ ಹೂಡಿಕೆ ಸಾಧ್ಯವಾಗುವಂತೆ ಮಾತುಕತೆಗಳು ನಡೆಯುತ್ತಿವೆ. ಉದ್ಯೋಗ ಪೂರಕ ಶಿಕ್ಷಣ ನೀಡುವಂತೆ ಇದರ ಅಂತರ ನೀಗಿಸುವ ಗುರಿ ನಮ್ಮದು ಎಂದು ಆಶಯ ವ್ಯಕ್ತಪಡಿಸಿದರು.
ಇನ್ನು ಮುರುಗೇಶ್ ನಿರಾಣಿ ವಿರುದ್ಧ ಲೋಕಾಯುಕ್ತ ಕೇಸ್ ಇರುವುದು ಗೊತ್ತಿಲ್ಲ. ಹಿಂದಿನ ಸಚಿವರ ತಪ್ಪು ಮಾಡಿದರೂ ತನಿಖೆ ಮಾಡುತ್ತೇವೆ. ಯಾರೇ ತಪ್ಪು ಮಾಡಿದರೂ ಲೀಗಲ್ ಕೇಸ್ ಲಿಸ್ಟ್ ಮಾಡುತ್ತೇವೆ. ಅದನ್ನೆಲ್ಲಾ ಹೊರಗೆ ತರುತ್ತೇವೆ. ಲೀಗಲ್ ಕೇಸ್ಗಳನ್ನೆಲ್ಲಾ ಸ್ಟಡಿ ಮಾಡಿದ್ದೀನಿ. ಎಲ್ಲೇ ತಪ್ಪು ಅವ್ಯವಹಾರ ಆಗಿದ್ದರೂ ಹೊರಗೆ ತರುತ್ತೇವೆ. ಕೆಲವು ಕೇಸ್ಗಳ ಬಗ್ಗೆ ಎಜಿ ಜೊತೆಯೂ ಚರ್ಚೆ ಮಾಡಿದ್ದೇನೆ ಎಂದು ಮಾಜಿ ಕೈಗಾರಿಕಾ ಸಚಿವ ಮುರಗೇಶ್ ನೀರಾಣಿ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:40 pm, Fri, 1 September 23