ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಮಂಡನೆ: ಕನ್ನಡ ಭಾಷೆ ಕಾಯ್ದೆ ಅನುಷ್ಠಾನ ಮಾಡದಿದ್ದರೆ ದಂಡ

ಕನ್ನಡ ಭಾಷೆ ಕಾಯ್ದೆ ಅನುಷ್ಠಾನಕ್ಕೆ ಓರ್ವ ಮೇಲ್ವಿಚಾರಣಾ ಅಧಿಕಾರಿಯನ್ನು ನೇಮಿಸಲಾಗುವುದು. ಕನ್ನಡ ಭಾಷೆ ಕಾಯ್ದೆ ಉಲ್ಲಂಘನೆ ಮಾಡಿದ ಸಂಘ ಸಂಸ್ಥೆಗಳಿಗೆ ದಂಡ ವಿಧಿಸಲು ಅವಕಾಶವಿದೆ.

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಮಂಡನೆ: ಕನ್ನಡ ಭಾಷೆ ಕಾಯ್ದೆ ಅನುಷ್ಠಾನ ಮಾಡದಿದ್ದರೆ ದಂಡ
ಕನ್ನಡ ವರ್ಣಮಾಲೆ (ಪ್ರಾತಿನಿಧಿಕ ಚಿತ್ರ)
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Sep 22, 2022 | 4:46 PM

ಬೆಂಗಳೂರು: ವಿಧಾನಸಭೆಯಲ್ಲಿ ಹಲವು ವಿಧೇಯಕಗಳ ಮಂಡನೆ ಮಾಡಿದ್ದು, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ, ಪ್ರೌಢ ಶಿಕ್ಷಣ ಮಂಡಳಿ ತಿದ್ದುಪಡಿ ವಿಧೇಯಕ ಮಂಡನೆ ಮಾಡಲಾಗಿದೆ. ಉನ್ನತ ಶಿಕ್ಷಣ, ತಾಂತ್ರಿಕ ವೃತ್ತಿ ಶಿಕ್ಷಣದಲ್ಲಿ ಕನ್ನಡ ಒಂದು ಭಾಷೆಯಾಗಿ ಪರಿಚಯಿಸಲಾಗಿದೆ. ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದವರಿಗೆ ಉನ್ನತ ತಾಂತ್ರಿಕ ಮತ್ತು ವೃತ್ತಿ ಶಿಕ್ಷಣದಲ್ಲಿ ಮೀಸಲಾತಿಗೆ ಅವಕಾಶ ನೀಡಲಾಗುವುದು. ಅಧೀನ ನ್ಯಾಯಾಲಯ, ನ್ಯಾಯಾಧಿಕರಣ ಮತ್ತು ಇತರೆ ಹಣಕಾಸು ಸಂಸ್ಥೆಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಲಾಗುವುದು. ಕನ್ನಡಿಗರಿಗೆ ಮೀಸಲಾತಿ ಒದಗಿಸುವ ಕೈಗಾರಿಕಾ ಸಂಸ್ಥೆಗಳಿಗೆ ತೆರಿಗೆ ರಿಯಾಯಿತಿ, ಕನ್ನಡ ಅನುಷ್ಠಾನದ ಮೇಲ್ವಿಚಾರಣೆಗೆ ಸಮಿತಿ ಸ್ಥಾಪನೆಗೆ ಅವಕಾಶ ಕೊಡುವ ವಿಧೇಯಕವಾಗಿದೆ.

ದಂಡ ವಿಧಿಸಲು ಅವಕಾಶ:

ಕನ್ನಡ ಭಾಷೆ ಕಾಯ್ದೆ ಅನುಷ್ಠಾನ ಮಾಡದಿದ್ದರೆ ಮೇಲ್ವಿಚಾರಣೆಗೆ ಅಧಿಕಾರ ನೀಡಲಾಗುವುದು. ಉಲ್ಲಂಘನೆಗಾಗಿ ದಂಡ ವಿಧಿಸಲು ಅವಕಾಶವಿದೆ.  ಮೊದಲನೇ ಸಲ ತಪ್ಪು ಮಾಡಿದ್ರೆ 5 ಸಾವಿರ ರೂ, ಎರಡನೇ ಸಲ ತಪ್ಪು ಮಾಡಿದ್ರೆ 10 ಸಾವಿರ ರೂ. ಮೂರನೇ ಸಲ ತಪ್ಪು ಮಾಡಿದ್ರೆ 20 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಕನ್ನಡದಲ್ಲೂ ಉದ್ಯೋಗ ಪೋರ್ಟಲ್ ತೆರೆಯಲು, ಕನ್ನಡ ಭಾಷೆ ಬರದವರಿಗೆ ಕನ್ನಡ ಕಲಿಕಾ ಘಟಕ ಸ್ಥಾಪಸಿ ಕನ್ನಡ ಭಾಷೆ ಪರಿಚಯಿಸಲು ಅವಕಾಶ ನೀಡಲಾಗಿದೆ.

ಕನ್ನಡ ಭಾಷೆ ಉಳಿವಿಗಾಗಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಅವಶ್ಯ:

ನ್ಯಾಯಮೂರ್ತಿ ಎಸ್‌.ಆರ್.‌ ಬನ್ನೂರಮಠ ಅವರ ನೇತೃತ್ವದಲ್ಲಿ ಕರ್ನಾಟಕ ಕಾನೂನು ಆಯೋಗವು ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯ ಕರಡು ಪ್ರತಿಯನ್ನು ಸಿದ್ಧಪಡಿಸಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಈ ಹಿಂದೆ ಸಲ್ಲಿಸಲಾಗಿದೆ. ಆಳವಾಗಿ ಅಧ್ಯಯನ ನಡೆಸಿ, ಚರ್ಚಿಸಿ ಈ ವಿಧೇಯಕ ಕರಡನ್ನು ಸಿದ್ಧಪಡಿಸಿದ್ದು, ಸರಕಾರಕ್ಕೆ ಜಾರಿ ಮಾಡುವ ಅನಿವಾರ್ಯತೆ ಇದೆ. ಕನ್ನಡ ಭಾಷೆ ಅಭಿವೃದ್ಧಿಗಾಗಿ ಕಾನೂನು ಆಯೋಗ ಹಮ್ಮಿಕೊಂಡಿರುವ ಈ ಕಾರ್ಯ ಶ್ರೇಷ್ಠ ಹಾಗೂ ಸಮಯೋಚಿತವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಕೂಡ ಹೇಳಿದ್ದಾರೆ. ನಾಡಿನಲ್ಲಿ ಕನ್ನಡ ಭಾಷೆ ಉಳಿಸಿ ಬೆಳೆಸುವುದರ ಜೊತೆಗೆ ಅನ್ಯ ಭಾಷೆಗಳ ದಬ್ಬಾಳಿಕೆ ತಪ್ಪಿಸಲು ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕದಿಂದ ರಾಜ್ಯದಲ್ಲಿ ಕನ್ನಡವನ್ನು ಬಲಪಡಿಸಲು ಅನುಕೂಲವಾಗಲಿದೆ.

ಇನ್ನೂ ವಿಧಾನಸಭೆಯಲ್ಲಿ ಪ್ರೌಢ ಶಿಕ್ಷಣ ಮಂಡಳಿ ತಿದ್ದುಪಡಿ ವಿಧೇಯಕ ಮಂಡನೆ ಮಾಡಿದ್ದು, ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮತ್ತು ಪದವಿ ಪೂರ್ವ ಪರೀಕ್ಷಾ ಮಂಡಳಿ ವಿಲೀನಕ್ಕೆ ಅವಕಾಶ ಕೊಡುವ ವಿಧೇಯಕವಾಗಿದೆ. ಸಿವಿಲ್ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ವಿಧೇಯಕ ಮಂಡನೆ. ಒಂದೇ ವಿಷಯದ ಶಿಕ್ಷಕರು ಪರಸ್ಪರ ವರ್ಗಾವಣೆಗೆ ಅವಕಾಶ ಕೊಡುವ ವಿಧೇಯಕವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada