RCB vs GT Final: ಬಿಸಿಸಿಐ ಬ್ಯಾನ್ ಮಾಡಿದ್ದ ಕಾಶ್ಮೀರಿ ಹುಡುಗ ಆರ್ಸಿಬಿಗೆ ಕಪ್ ಗೆಲ್ಲಿಸಿಕೊಟ್ಟ
Rasikh Salam Dar's Inspiring Comeback: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 2026ರ ಐಪಿಎಲ್ ಪ್ರಶಸ್ತಿಯನ್ನು ಸತತ ಎರಡನೇ ಬಾರಿಗೆ ಗೆದ್ದು ಇತಿಹಾಸ ಸೃಷ್ಟಿಸಿದೆ. ಅಹಮದಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿ ಕಪ್ ಗೆದ್ದ ಆರ್ಸಿಬಿಯ ಈ ಸಾಧನೆಯಲ್ಲಿ ಯುವ ವೇಗಿ ರಸಿಕ್ ಸಲಾಂ ಧರ್ ಪ್ರಮುಖ ಪಾತ್ರ ವಹಿಸಿದರು. ನಿಷೇಧದ ನಂತರ ಫೀನಿಕ್ಸ್‌ನಂತೆ ಎದ್ದು ಬಂದ ರಸಿಕ್, ಫೈನಲ್‌ನಲ್ಲಿ 3 ವಿಕೆಟ್ ಕಬಳಿಸಿ ತಂಡದ ಗೆಲುವಿಗೆ ಆಧಾರವಾದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 2026 ರ ಐಪಿಎಲ್ (IPL 2026) ಟ್ರೋಫಿಯನ್ನು ತನ್ನದಾಗಿಸಿಕೊಳ್ಳುವ ಮೂಲಕ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ. ಮೇ 31 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆತಿಥೇಯ ಗುಜರಾತ್ ಟೈಟಾನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಆರ್‌ಸಿಬಿ ಇತಿಹಾಸ ಸೃಷ್ಟಿಸಿತು. ತಂಡದ ಈ ಅಮೋಘ ಗೆಲುವಿಗೆ ಸಂಘಟಿತ ಪ್ರದರ್ಶನವೇ ಪ್ರಮುಖ ಕಾರಣವಾಗಿತ್ತು. ಅದರಲ್ಲೂ ತಂಡದ ಪರ ಬೌಲಿಂಗ್ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಯುವ ವೇಗಿ ರಸಿಕ್ ಸಲಾಂ ಧರ್ (Rasikh Salam Dar) ಫೈನಲ್ ಪಂದ್ಯದಲ್ಲಿ ಪ್ರಮುಖ 3 ವಿಕೆಟ್‌ಗಳನ್ನು ಉರುಳಿಸುವ ಮೂಲಕ ಗುಜರಾತ್ ದೊಡ್ಡ ಮೊತ್ತ ಕಲೆಹಾಕದಂತೆ ತಡೆದರು. ಈ ಪಂದ್ಯದಲ್ಲಿ ಮಾತ್ರವಲ್ಲ ಈ ಸೀಸನ್ನಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲೂ ರಸಿಕ್ ಅವರ ಬೌಲಿಂಗ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ನಿಷೇಧಕ್ಕೊಳಗಾಗಿದ್ದ ರಸಿಕ್
ಪ್ರಸ್ತುತ ಆರ್‌ಸಿಬಿ ಬೌಲಿಂಗ್ ವಿಭಾಗದಲ್ಲಿ ಖಾಯಂ ಸ್ಥಾನವನ್ನು ಪಡೆದುಕೊಂಡಿರುವ ರಸಿಕ್ ಈ ಹಂತಕ್ಕೆ ಬರಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ವಯಸ್ಸಿನ ವಂಚನೆಯಲ್ಲಿ ಸಿಕ್ಕಿಬಿದ್ದಿದ್ದ ರಸಿಕ್ ಬಿಸಿಸಿಐನಿಂದ ನಿಷೇಧಕ್ಕೊಳಗಾಗಬೇಕಾಯಿತು. ಇದರಿಂದಾಗಿ ಅವರು ಎರಡು ವರ್ಷಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಯಿತು. ಆದರೆ ನಿಷೇಧದ ಅವದಿ ಮುಗಿದ ಬಳಿಕ ಮತ್ತೆ ಫಿನಿಕ್ಸ್ ಪಕ್ಷಿಯಂತೆ ಎದ್ದು ಬಂದಿದ್ದ ರಸಿಕ್ ದೇಶಿ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆದರು. ಅಂತಿಮವಾಗಿ ಆರ್‌ಸಿಬಿ ಸೇರಿದ ರಸಿಕ್ ಇದೀಗ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.
ಮುಂಬೈ ತಂಡದ ಪರ ಪಾದಾರ್ಪಣೆ
ವಾಸ್ತವವಾಗಿ ಐಪಿಎಲ್‌ನಲ್ಲಿ ರಸಿಕ್ ಅವರ ಮೊದಲ ತಂಡ ಆರ್‌ಸಿಬಿ ಅಲ್ಲ. ಜಮ್ಮು ಮತ್ತು ಕಾಶ್ಮೀರದ ರಸಿಕ್ 2019 ರ ಐಪಿಎಲ್‌ನಲ್ಲಿಯೇ ಮುಂಬೈ ಇಂಡಿಯನ್ಸ್ ಪರ ಆಡುವ ಮೂಲಕ ಎಲ್ಲರ ಗಮನ ಸೆಳೆದರು. ಅದೇ ವರ್ಷ ಅವರನ್ನು ಭಾರತ ಅಂಡರ್ -19 ತಂಡಕ್ಕೆ ಆಯ್ಕೆ ಮಾಡಿ ಇಂಗ್ಲೆಂಡ್ ಪ್ರವಾಸಕ್ಕೆ ಕಳುಹಿಸಲು ಸಿದ್ಧತೆ ನಡೆಸಲಾಗಿತ್ತು. ಆದರೆ, ಅವರ ನಿಜವಾದ ವಯಸ್ಸಿಗೂ, ಜನನ ಪ್ರಮಾಣಪತ್ರದಲ್ಲಿ ನಮೂದಿಸಲಾಗಿದ್ದ ವಯಸ್ಸಿಗೂ ವ್ಯತ್ಯಾಸಗಳಿದ್ದ ಕಾರಣಗಳಿಂದಾಗಿ ಬಿಸಿಸಿಐ, ಅವರಿಗೆ ಎರಡು ವರ್ಷಗಳ ನಿಷೇಧದ ಶಿಕ್ಷೆ ವಿಧಿಸಿತು. ಎರಡು ವರ್ಷಗಳ ಕಾಲ ಕ್ರಿಕೆಟ್‌ನಿಂದ ದೂರವಿದ್ದ ರಸಿಕ್ ಮತ್ತೆ ಮೈದಾನಕ್ಕೆ ಕಾಲಿಡಲು ಸಾಧ್ಯವಾಗುತ್ತದೆಯೇ ಎಂಬ ಅನುಮಾನ ಹುಟ್ಟಿಕೊಂಡಿತ್ತು. ಆದರೆ ತಮ್ಮ ಛಲ ಬಿಡದ ರಸಿಕ್ ಸ್ಥಳೀಯ ಮೈದಾನಗಳಲ್ಲಿ ಕಠಿಣ ತರಬೇತಿಯನ್ನು ಮುಂದುವರೆಸಿದರು. ಈ ಕಷ್ಟದ ಸಮಯದಲ್ಲಿ ಮುಂಬೈ ಇಂಡಿಯನ್ಸ್ ಆಡಳಿತ ಮಂಡಳಿ ಅವರ ಬೆಂಬಲಕ್ಕೆ ನಿಂತಿತು.
6 ಕೋಟಿಗೆ ಆರ್‌ಸಿಬಿ ಸೇರಿದ ರಸಿಕ್
ನಿಷೇಧ ಮುಗಿದ ನಂತರ, 2021-22 ರ ದೇಶೀಯ ಆವೃತ್ತಿಯಲ್ಲಿ ಮಿಂಚಿದ ರಸಿಕ್, ಇದಾದ ಬಳಿಕ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳನ್ನು ಪ್ರತಿನಿಧಿಸುವ ಮೂಲಕ ತಮ್ಮ ಸಾಮರ್ಥ್ಯ ಕಡಿಮೆಯಾಗಿಲ್ಲ ಎಂಬುದನ್ನು ಸಾಬೀತುಪಡಿಸಿದರು. ಇದಾದ ಬಳಿಕ 2025 ರ ಹರಾಜಿನಲ್ಲಿ ಆರ್‌ಸಿಬಿ, ರಸಿಕ್ ಅವರನ್ನು ಆರು ಕೋಟಿ ನೀಡಿ ಖರೀದಿಸಿತು. ಹೀಗೆ ಆರ್‌ಸಿಬಿ ಸೇರಿದ ರಸಿಕ್ಗೆ ಪಂದ್ಯಾವಳಿಯ ಮೊದಲ ನಾಲ್ಕು ಪಂದ್ಯಗಳಲ್ಲಿ ಆಡುವ ಅವಕಾಶ ಸಿಗಲಿಲ್ಲ. ಆದರೆ ಆ ಬಳಿಕ ಸಿಕ್ಕ ಅವಕಾಶವನ್ನು ಅವರು ಎರಡೂ ಕೈಗಳಿಂದ ಬಾಚಿಕೊಂಡರು.
IPL 2026 Final: ಈ ಸಲನೂ ಕಪ್ ನಮ್ದು..! ಸತತ 2ನೇ ಬಾರಿಗೆ ಆರ್‌ಸಿಬಿ ಮುಡಿಗೇರಿದ ಐಪಿಎಲ್ ಕಿರೀಟ
ಫೈನಲ್ ಪಂದ್ಯದಲ್ಲಿ 3 ವಿಕೆಟ್
ಈ ಆವೃತ್ತಿಯಲ್ಲಿ ರಸಿಕ್ ಒಟ್ಟು 19 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅತ್ಯಂತ ನಿರ್ಣಾಯಕ ಓವರ್‌ಗಳಲ್ಲಿ ಸರಾಸರಿ 21.31 ಮತ್ತು 9.45 ರ ಎಕಾನಮಿ ದರದಲ್ಲಿ ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇನ್ನು ಫೈನಲ್ ಪಂದ್ಯದಲ್ಲಿ ಮಾರಕ ದಾಳಿ ಸಂಘಟಿಸಿದ ರಸಿಕ್ ಕೇವಲ 27 ರನ್ ನೀಡಿ 3 ವಿಕೆಟ್‌ಗಳನ್ನು ಕಬಳಿಸಿದರು. ಕೆಲವೇ ವರ್ಷಗಳ ಹಿಂದೆ ನಿಷೇಧಕ್ಕೊಳಗಾಗಿದ್ದ ಸಾಮಾನ್ಯ ಬೌಲರ್, ಇಂದು, ಐಪಿಎಲ್ ಫೈನಲ್‌ನಂತಹ ಪ್ರತಿಷ್ಠಿತ ಪಂದ್ಯದಲ್ಲಿ ಸ್ಮರಣೀಯ ಪ್ರದರ್ಶನ ನೀಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:35 pm, Mon, 1 June 26




