ಪ್ರಜಾಪ್ರಭುತ್ವದ ಬೆನ್ನಿಗೆ ಇರಿದ ರಾಷ್ಟ್ರೀಯ ಪಕ್ಷಗಳು: ಸಿದ್ದರಾಮಯ್ಯ ವಿರುದ್ಧ ಎಚ್ಡಿ ಕುಮಾರಸ್ವಾಮಿ ಆಕ್ರೋಶ
ಬಿಜೆಪಿಯ ಬಿ ಟೀಮ್ ಯಾವುದು? ಬಿಜೆಪಿಯ ಬಾಲಂಗೋಚಿ ಯಾರು ಎನ್ನುವುದು ಜಗಜ್ಜಾಹೀರು ಆಗಿದೆ ಎಂದು ಕಾಂಗ್ರೆಸ್ ವಿರುದ್ದ ಎಚ್.ಡಿ.ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

ಬೆಂಗಳೂರು: ರಾಷ್ಟ್ರೀಯ ಪಕ್ಷಗಳು ತಮ್ಮ ರಾಜಕೀಯ ಸ್ವಾರ್ಥ ಸಾಧನೆಗೆ ಪ್ರಾದೇಶಿಕ ಪಕ್ಷವನ್ನು ಹತ್ತಿಕ್ಕುವ ಕೆಲಸ ಮಾಡಿವೆ. ಪ್ರಜಾಪ್ರಭುತ್ವದ ಬೆನ್ನಿಗೆ ಇರಿದಿವೆ. ಚುನಾವಣಾ ವ್ಯವಸ್ಥೆಯನ್ನೇ ಅಣಕ ಮಾಡಿವೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಮಾಧ್ಯಮ ಹೇಳಿಕೆಯಲ್ಲಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಕಿಡಿ ಕಾರಿದರು. ರಾಜ್ಯಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಬಿಜೆಪಿಯ ಬಿ ಟೀಮ್ ಯಾವುದು? ಬಿಜೆಪಿಯ ಬಾಲಂಗೋಚಿ ಯಾರು ಎನ್ನುವುದು ಜಗಜ್ಜಾಹೀರು ಆಗಿದೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ (Siddaramaiah) ಅವರ ವಿರುದ್ಧ ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಅವರು ಬಿಜೆಪಿ ಜತೆ ಒಳಒಪ್ಪಂದ ಮಾಡಿಕೊಂಡು ತಮ್ಮ ಪಕ್ಷದ ಅಲ್ಪಸಂಖ್ಯಾತ ಅಭ್ಯರ್ಥಿ ಮನ್ಸೂರ್ ಖಾನ್ ಅವರ ಸೋಲಿಗೂ ಕಾರಣರಾಗಿದ್ದಾರೆ. ಜತೆಗೆ, ಮನಸಿನಲ್ಲಿ ನಂಜು ತುಂಬಿಕೊಂಡು ಜೆಡಿಎಸ್ ಅಭ್ಯರ್ಥಿಯ ಪರಾಜಯಕ್ಕೂ ಕಾರಣರಾಗಿದ್ದಾರೆ. ಜಾತ್ಯತೀತ ಶಕ್ತಿಗಳನ್ನು ಹತ್ತಿಕ್ಕಿ ಬಿಜೆಪಿಯ ಮೂರನೇ ಅಭ್ಯರ್ಥಿ ಗೆಲುವಿಗೆ ನೇರ ಕಾರಣರಾದವರು ಸಿದ್ದರಾಮಯ್ಯ. ಅವರ ಢೋಂಗಿ ಸೈದ್ದಾಂತಿಕ ಮುಖವಾಡ ಈ ಚುನಾವಣೆ ಮೂಲಕ ಕಳಚಿ ಬಿದ್ದಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇಷ್ಟು ದಿನ ಬಿಜೆಪಿಯ ಬಿ ಟೀಂ ಎಂದು ಜೆಡಿಎಸ್ ಬಗ್ಗೆ ಸಿದ್ದರಾಮಯ್ಯ ಅಪಪ್ರಚಾರ ಮಾಡುತ್ತಿದ್ದರು. ಈಗ ಬಿಜೆಪಿಯ ಅಸಲಿ ಬಿ ಟೀಮ್ ಯಾವುದು ಮತ್ತು ಯಾರು ಎನ್ನುವುದು ದೇಶಕ್ಕೆ ಗೊತ್ತಾಗಿದೆ. ಇನ್ನು ಯಾವ ಮುಖ ಇಟ್ಟುಕೊಂಡು ಸಿದ್ದರಾಮಯ್ಯ ತಾವು ಜಾತ್ಯತೀತ ನಾಯಕ ಎಂದು ಹೇಳುತ್ತಾರೆ? ಅಲ್ಪಸಂಖ್ಯಾತರ ಬಗ್ಗೆ ಸಿದ್ದರಾಮಯ್ಯ ಅವರದ್ದು ಮೊಸಳೆ ಮರುಕ. ಸೋಲು ಗ್ಯಾರಂಟಿ ಎಂದು ಗೊತ್ತಿದ್ದೇ ಮನ್ಸೂರ್ ಖಾನ್ ಅವರನ್ನು ಎರಡನೇ ಅಭ್ಯರ್ಥಿ ಮಾಡಿದರು. ಅವರಿಗೆ ಅಲ್ಪಸಂಖ್ಯಾತರ ಮೇಲೆ ಅಕ್ಕರೆ ಇದ್ದಿದ್ದರೆ ಮನ್ಸೂರ್ ಖಾನ್ ಅವರನ್ನೇ ಮೊದಲ ಅಭ್ಯರ್ಥಿ ಮಾಡುತ್ತಿದ್ದರು ಎಂದು ವ್ಯಂಗ್ಯವಾಡಿದ್ದಾರೆ.
ನಮ್ಮ ಪಕ್ಷದ ಶಾಸಕರನ್ನು ಹೈಜಾಕ್ ಮಾಡಲು ಅವರು ಹರಸಾಹಸ ಮಾಡಿದರು. ಆ ಷಡ್ಯಂತ್ರ ವಿಫಲವಾಗಿದೆ. ನಮ್ಮ ಪಕ್ಷವು ಬಲಿಷ್ಠವಾಗಿದೆ ಎನ್ನುವುದನ್ನು ಈ ಚುನಾವಣೆಯು ತೋರಿಸಿದೆ. ಸಿದ್ದರಾಮಯ್ಯ ಅವರಿಗೆ ಕಪಾಳಮೋಕ್ಷ ಆಗಿದೆ. ಓರ್ವ ಮಾಜಿ ಮುಖ್ಯಮಂತ್ರಿ, ಹಾಲಿ ಪ್ರತಿಪಕ್ಷ ನಾಯಕರಾಗಿ ಅಡ್ಡ ಮತದಾನ ಮಾಡಿ ಎಂದು ಜೆಡಿಎಸ್ ಪಕ್ಷದ ಶಾಸಕರಿಗೆ ನೇರವಾಗಿ ಪತ್ರ ಬರೆದ ಸಿದ್ದರಾಮಯ್ಯ ಅವರು ನೈತಿಕತೆ ಕಳೆದುಕೊಂಡಿದ್ದಾರೆ. ನೇರವಾಗಿ ಅವರು ನಮ್ಮ ಶಾಸಕರಿಗೆ ಅಡ್ಡ ಮತದಾನಕ್ಕೆ ಪ್ರೇರಣೆ ನೀಡಿದ್ದಾರೆ. ಮತ ಹಾಕಿ ಎಂದು ಶಾಸಕರಿಗೆ ಸಿದ್ದರಾಮಯ್ಯ ಪತ್ರ ಮೂಲಕ ಮನವಿ ಮಾಡಿರುವುದು ನಾಚಿಕೆಗೇಡಿನ ಸಂಗತಿ. ಮುಂದಿನ ದಿನಗಳಲ್ಲಿ ಅವರು ಇದಕ್ಕೆ ಪ್ರತಿಯಾಗಿ ತಕ್ಕ ಶಾಸ್ತಿ ಅನುಭವಿಸಲಿದ್ದಾರೆ ಎಂದು ಹೇಳಿದ್ದಾರೆ.
ಅಲ್ಪಸಂಖ್ಯಾತರ ಅಭ್ಯರ್ಥಿಯ ಹೆಸರಿನಲ್ಲಿ ಅನುಕಂಪ ಗಿಟ್ಟಿಸಲು ಹೋಗಿ ಅವರೇ ಖೆಡ್ಡಾಗೆ ಬಿದ್ದಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ನಮಗೆ ಎರಡನೆ ಪ್ರಾಶಸ್ತ್ಯದ ಮತ ಕೂಡ ಹಾಕಬೇಡಿ ಎಂದು ಕಾಂಗ್ರೆಸ್ ಶಾಸಕರಿಗೆ ಹೇಳಿದ್ದಾರೆ. ಬಿಜೆಪಿಯನ್ನು ಗೆಲ್ಲಿಸಿ ಸಿದ್ದರಾಮಯ್ಯ ತಾವೊಬ್ಬ ನಕಲಿ ಜಾತ್ಯಾತೀತ ನಾಯಕ ಎಂದು ನಾಡಿಗೆ ಸಾರಿ ಹೇಳಿದ್ದಾರೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮನ್ನು ಗೆಲ್ಲಿಸುತ್ತಾರೆ ಎಂದು ಹೇಳಿದ್ದರು. ಅದನ್ನೇ ಸಿದ್ದರಾಮಯ್ಯ ಮಾಡಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರ ಬಣ್ಣ ಬಯಲಾಗಿದೆ ಎಂದು ತಿಳಿಸಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಜೊತೆ ಮಾತಾಡಿದ್ದರು. ಕಾಂಗ್ರೆಸ್ಗೆ, ಅದರಲ್ಲೂ ಸಿದ್ದರಾಮಯ್ಯ ಅವರಿಗೆ ಜಾತ್ಯತೀತ ಪಕ್ಷಗಳು ಉಳಿಯುವುದು ಇಷ್ಟ ಇಲ್ಲ. ಇದರಿಂದ ಸಿದ್ದರಾಮಯ್ಯ ಅವರ ಜತೆಯಲ್ಲೇ ಕಾಂಗ್ರೆಸ್ ಪಕ್ಷದ ನಿಜವಾದ ಬಣ್ಣ ಬಯಲಾಗಿದೆ. ಆದರೆ ಜೆಡಿಎಸ್ ಪಕ್ಷ ಮತ್ತೆ ಪುಟಿದೇಳುತ್ತದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:25 pm, Fri, 10 June 22




