ಕೃತಜ್ಞತೆ ಎನ್ನುವುದು ಬಿಜೆಪಿಯವರಿಗೆ ಆಗಿಬಾರದ ಪದ; ‘ಹಿಂದುತ್ವ ವಿನಾಶಕ ಬಿಜೆಪಿ’ ಎಂದು ಟ್ವೀಟ್ ಮೂಲಕ ಜೆಡಿಎಸ್ ತಿರುಗೇಟು
ಸ್ವಯಂಘೋಷಿತ ದೇಶಭಕ್ತ ಕರ್ನಾಟಕ ಬಿಜೆಪಿಯವರೇ. ಕುರ್ಚಿಗಾಗಿ ಹೆಚ್ಡಿ ಕುಮಾರಸ್ವಾಮಿ ನಿಮ್ಮ ನಾಯಕರ ಮನೆ ಬಾಗಿಲಿಗೆ ಬರಲಿಲ್ಲ. ಅಧಿಕಾರಕ್ಕಾಗಿ ಹೆಚ್ಡಿ ಕುಮಾರಸ್ವಾಮಿ ಮನೆ ಬಾಗಿಲಿಗೆ ಬಂದವರು ನಿಮ್ಮವರು. ‘ಹಿಂದುತ್ವ ವಿನಾಶಕ ಬಿಜೆಪಿ’ ಎಂದು ಟ್ವೀಟ್ ಮೂಲಕ ಜೆಡಿಎಸ್ ತಿರುಗೇಟು ನೀಡಿದೆ.
ಬೆಂಗಳೂರು: ರಾಜ್ಯ ಬಿಜೆಪಿ ಘಟಕ(BJP Karnataka) ಸರಣಿ ಟ್ವೀಟ್ ಮಾಡುವ ಮೂಲಕ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ(HD Kumaraswamy) ವಿರುದ್ಧ ವಾಗ್ದಾಳಿ ನಡೆಸಿತ್ತು. ಉಪಸಭಾಪತಿಯ ಕುರ್ಚಿಗೆ ಗಂಟುಬಿದ್ದು ಅದು ಸಿಗದಿದ್ದಾಗ ಕಾಂಗ್ರೆಸ್ ತ್ಯಜಿಸಿ ಜೆಡಿಎಸ್ ಸೇರಿರುವ ವ್ಯಕ್ತಿಯ ಸಮುದಾಯವನ್ನು ಮೆಚ್ಚಿಸಲು ಹೆಚ್‌ಡಿಕೆ ಸರ್ಕಸ್ ಮಾಡುತ್ತಿದ್ದಾರೆ. ಇಂತಹ ಸದಾರಮೆ ನಾಟಕ ಕುಮಾರಸ್ವಾಮಿಗೆ ಹೊಸತಲ್ಲ ಎಂದು ಟೀಕೆ ಮಾಡಿತ್ತು. ಸದ್ಯ ಬಿಜೆಪಿ ಸರಣಿ ಟ್ವೀಟ್ಗೆ ಈಗ ಜೆಡಿಎಸ್ ತಿರುಗೇಟು ನೀಡಿದೆ.
ಸ್ವಯಂಘೋಷಿತ ದೇಶಭಕ್ತ ಕರ್ನಾಟಕ ಬಿಜೆಪಿಯವರೇ. ಕುರ್ಚಿಗಾಗಿ ಹೆಚ್ಡಿ ಕುಮಾರಸ್ವಾಮಿ ನಿಮ್ಮ ನಾಯಕರ ಮನೆ ಬಾಗಿಲಿಗೆ ಬರಲಿಲ್ಲ. ಅಧಿಕಾರಕ್ಕಾಗಿ ಹೆಚ್ಡಿ ಕುಮಾರಸ್ವಾಮಿ ಮನೆ ಬಾಗಿಲಿಗೆ ಬಂದವರು ನಿಮ್ಮವರು. ‘ಹಿಂದುತ್ವ ವಿನಾಶಕ ಬಿಜೆಪಿ’ ಎಂದು ಟ್ವೀಟ್ ಮೂಲಕ ಜೆಡಿಎಸ್ ತಿರುಗೇಟು ನೀಡಿದೆ. ಜೆಡಿಎಸ್, ಹೆಚ್ಡಿಕೆ ವಿರುದ್ಧ ಸರಣಿ ಟ್ವೀಟ್ ಮಾಡಿದ್ದ ಬಿಜೆಪಿಗೆ ಟ್ವೀಟ್ ಮೂಲಕವೇ ಜೆಡಿಎಸ್ ಆಕ್ರೋಶ ಹೊರ ಹಾಕಿದೆ.
#ಹಿಂದುತ್ವ_ವಿನಾಶಕ_ಬಿಜೆಪಿ#ಕರ್ನಾಟಕ_ಸರ್ವ_ಜನಾಂಗದ_ಶಾಂತಿಯ_ತೋಟ
— Janata Dal Secular (@JanataDal_S) April 2, 2022
ಅಧಿಕಾರಕ್ಕಾಗಿ ಯಡಿಯೂರಪ್ಪ ಬಿಜೆಪಿ ಬಿಡಲು ಸಿದ್ಧರಾಗಿದ್ದರು. ಸಚಿವನಾದರೆ ಸಾಕಪ್ಪಾ ಎಂದು HDK ಮನೆ ಬಾಗಿಲು ತಟ್ಟಿದ್ದರು. ತಾಯಿಯಂತಹ ಪಕ್ಷ ಬಿಡಬೇಡಿ ಎಂದು ಯಡಿಯೂರಪ್ಪಗೆ ಹೆಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದ್ದರು. ಯಡಿಯೂರಪ್ಪ ಪಕ್ಷ ಬಿಡಿ ಅಂದಿದ್ದರೆ ಕರ್ನಾಟಕದಲ್ಲಿ ಅಂದೇ ಬಿಜೆಪಿ ಸಮಾಧಿ ಆಗುತ್ತಿತ್ತು. ಕರ್ನಾಟಕದಲ್ಲಿ ಬಿಜೆಪಿಯನ್ನು ಉಳಿಸಿದವರೇ ಕುಮಾರಸ್ವಾಮಿ.
9 ದಿನ ಸಿಎಂ ಆಗಿದ್ದ ಯಡಿಯೂರಪ್ಪಗೆ ಬೆಂಬಲ ಕೊಟ್ಟಿದ್ದು ಇದೇ ಕುಮಾರಸ್ವಾಮಿ. ಆಗ ನಿಮ್ಮ ಹೈಕಮಾಂಡ್, ʼಅಗ್ರಿಮೆಂಟ್ ಹೈ ಡ್ರಾಮಾʼ ಆಡಿ ಯಡಿಯೂರಪ್ಪ ಬೆನ್ನಿಗೆ ತಿವಿದದ್ದು ಗೊತ್ತಿಲ್ಲವಾ? ಕೊನೆಗೆ ಅಗ್ರಿಮೆಂಟನ್ನೇ ಹೈಜಾಕ್ ಮಾಡಿ ವಚನಭ್ರಷ್ಟರಾಗಿದ್ದು ನೀವು. ಅದನ್ನು ಕುಮಾರಸ್ವಾಮಿ ತಲೆಗೆ ಕಟ್ಟಿದಿರಿ. ಸತ್ಯ ಮರೆತರೆ ಹೇಗೆ? ಎಂದು ಸರಣಿ ಟ್ವೀಟ್ ಮೂಲಕ ಜೆಡಿಎಸ್ ಪ್ರಶ್ನಿಸಿದೆ.
ಕೃತಜ್ಞತೆ ಎನ್ನುವುದು ನಿಮಗೆ ಆಗದ ಪದ. ಯಾರು ಶಕ್ತಿ ತುಂಬುತ್ತಾರೋ ಅವರ ಕತ್ತು ಕುಯ್ಯುವುದು ನಿಮ್ಮ ಜಾಯಮಾನ. 2006ರಲ್ಲಿ ಸರಕಾರ ರಚನೆಯಾದ ಎರಡೇ ತಿಂಗಳಿಗೆ ಕುಮಾರಸ್ವಾಮಿ ವಿರುದ್ಧ ಸಲ್ಲದ ಸುಳ್ಳು ಆರೋಪ ಮಾಡಿ ಬೆನ್ನಿಗಿರಿದದ್ದು ಯಾರು? ಬಿಜೆಪಿಯ ʼಬ್ರೂಟಸ್ ಪಾಲಿಟಿಕ್ಸ್ʼ ಅಲ್ಲವೇ ಅದು? ಉಪ ಸಭಾಪತಿ ವಿಷಯಕ್ಕೆ ಬಂದರೆ, ಈ ಸ್ಥಾನಕ್ಕೂ ಕುಮಾರಣ್ಣಗೂ ಸಂಬಂಧವೇ ಇಲ್ಲ. ಆ ಪದವಿ ಆಕಾಂಕ್ಷಿ ಆಗಿದ್ದವರು ಮೂಲತಃ ಜನತಾ ಪರಿವಾರದವರು. ಅವರನ್ನು ಕಾಂಗ್ರೆಸ್ ನಂಬಿಸಿ, ವಂಚಿಸಿತ್ತು. ಅವರಿಗೆ ಜೆಡಿಎಸ್ ಪಕ್ಷ ಆಶ್ರಯ ಕೊಟ್ಟು ಶಕ್ತಿ ತುಂಬಿತು. ಇದರಲ್ಲಿ ಸರ್ಕಸ್ ಪ್ರಶ್ನೆ ಎಲ್ಲಿಂದ ಬಂತು?
ನಿಮ್ಮ ಬಾಲಂಗೋಚಿಗಳ ಗುತ್ತಿಗೆಯಲ್ಲ ಹಿಂದುತ್ವ. ಮುಗ್ಧ ಜನರಿಗೆ ಧರ್ಮದ ಹೆಸರಿನಲ್ಲಿ ವಿಷವುಣಿಸುತ್ತಿರುವ ನಿಮ್ಮದು ಹಿಂದುತ್ವವೇ? ಮಾನವ ವಿಕಾಸವನ್ನೇ ಮರೆತು ಮನುಜಕುಲಕ್ಕೇ ʼಮರಣಶಾಸನʼ ಬರೆಯುತ್ತಿರುವ ರಾಜಕಾರಣ ನಿಮ್ಮದು. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದರೆ ಇದೇನಾ? ಅದು, ಸಬ್ ಕಾ ವಿನಾಶ್ & ಸಬ್ ಕಾ ಸರ್ವ ನಾಶ್. 13/14
— Janata Dal Secular (@JanataDal_S) April 2, 2022
ಕನ್ನಡದ ನೆಲ-ಜಲ, ನಾಡು-ನುಡಿಗಾಗಿ ಕುಮಾರಸ್ವಾಮಿ ಸರ್ಕಸ್ ಮಾಡುತ್ತಾರೆ, ಸರಿ. ಆದರೆ; ಅನ್ನ-ಆಹಾರ, ಧರ್ಮದ ವಿಚಾರದಲ್ಲೂ ʼಶಕಲಕ ಸರ್ಕಸ್ʼ ಮಾಡುವ ಬಿಜೆಪಿಗೆ ನೈತಿಕತೆ ಎಂಬುದು ಇದೆಯಾ? ಮತಕ್ಕಾಗಿ, ಕುರ್ಚಿಗಾಗಿ ನಿಮ್ಮ ʼಸದಾರಮೆ ನಾಟಕʼ ಜಗಜ್ಜಾಹೀರು. ಕ್ಷಣಕ್ಕೊಂದು ಬಣ್ಣ ಬದಲಿಸುವ ಬಿಜೆಪಿ ಒಂದು ʼರಾಜಕೀಯ ಊಸರವಳ್ಳಿ.ʼ
ಕುಮಾರಸ್ವಾಮಿ ಜೀವನ ತೆರೆದ ಪುಸ್ತಕ. ಇದ್ದದ್ದನ್ನು ಕಡ್ಡಿತುಂಡು ಮಾಡಿದಂತೆ ಹೇಳುವ ಎದೆಗಾರಿಕೆ ಅವರಿಗಷ್ಟೇ ಇದೆ ಎಂಬುದು 6.5 ಕೋಟಿ ಜನರಿಗೆ ಗೊತ್ತು. ಅಧಿಕಾರಕ್ಕೆ ಅಂಟಿಕೊಂಡ ಕುಟುಂಬ ಅವರದ್ದಲ್ಲ. ಬೆಂಬಲ ಕೊಡುತ್ತೇವೆ ಎಂದು ವಾಜಪೇಯಿ ನೀಡಿದ ಆಫರನ್ನೇ ತಿರಸ್ಕರಿಸಿ, ಪ್ರಧಾನಿ ಪದವಿ ತೊರೆದ ನಾಯಕರು ದೇವೇಗೌಡರು ಎಂಬುದು ಗೊತ್ತಿಲ್ಲವೇ? ಕುಮಾರಸ್ವಾಮಿ ಅವರೇನೋ ಲಕ್ಕಿಡಿಪ್ ಸಿಎಮ್ಮು ಎಂಬುದೇನೋ ಸರಿ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬೇಕಾದರೆ ಎಲ್ಲಿದ್ದಿರಿ ನೀವು? ಕುರ್ಚಿ ಹಿಡಿಯಲು ಈ ಲಕ್ಕಿಡಿಪ್ ಸಿಎಂ ಕಾಲೇ ಹಿಡಿಯಬೇಕಾಯಿತು. ಅದನ್ನು ಮರೆತರೆ ಹೇಗೆ? ಸತ್ಯಕ್ಕೆ ಸಮಾಧಿ ಕಟ್ಟುವುದು ಎಂದರೆ ಬಿಜೆಪಿಗೆ ಸುಲಭದ ಕೆಲಸ ಎಂದು ಟ್ವೀಟ್ ಮಾಡಿದೆ.
ಅಧಿಕಾರವಿದ್ದಾಗ ಗೌಡರ ಕುಟುಂಬ ಬೊಕ್ಕಸ ಲೂಟಿ ಮಾಡಲಿಲ್ಲ ಅಧಿಕಾರವಿದ್ದಾಗ ಗೌಡರ ಕುಟುಂಬ ಬೊಕ್ಕಸ ಲೂಟಿ ಮಾಡಲಿಲ್ಲ. 2 ಅವಧಿಯಲ್ಲಿ ಬಿಜೆಪಿ ಸರ್ಕಾರದ ಭ್ರಷ್ಟಲೀಲೆಗಳು ಅನೇಕ? ಭ್ರಷ್ಟಸುಳಿಗೆ ಸಿಲುಕಿ ಸಿಎಂ ಜೈಲಿಗೆ ಹೋದ ಇತಿಹಾಸ ನಿಮ್ಮದು. ಸಾಲುಸಾಲು ಜೈಲುಪಕ್ಷಿಗಳು ನಿಮ್ಮವರೇ ಎಂದು JDS ಕುಟುಕಿದೆ. ನಿಮ್ಮ ಶಾಸಕರೇ ಸಿಎಂ ವಿರುದ್ಧ ಭ್ರಷ್ಟ ಆರೋಪ ಮಾಡಿದಾಗ. ಅವರನ್ನು ಮನೆಗೆ ಕಳುಹಿಸಿದ ‘ಹೀನ ಚರಿತ್ರೆʼ ನಿಮ್ಮದು ಎಂದು ರಾಜ್ಯ ಬಿಜೆಪಿ ವಿರುದ್ಧ ರಾಜ್ಯ ಜೆಡಿಎಸ್ ಘಟಕ ಆಕ್ರೋಶ ವ್ಯಕ್ತಪಡಿಸಿದೆ.
2 ಸಲ ರಚಿಸಿದ ಸರಕಾರಕ್ಕೆ ಹಣ ಎಲ್ಲಿನದು? ಜನರತೆರಿಗೆ ಹಣವನ್ನು ಕೊಳ್ಳೆ ಹೊಡೆದದ್ದು ಅಲ್ಲವೇ? ಶಾಸಕರನ್ನು ಬಜಾರಿನಲ್ಲಿ ಬಿಕರಿ ವಸ್ತುಗಳಂತೆ ಖರೀದಿ ಮಾಡಿದ ಬಿಜೆಪಿಯ ʼಅಪರೇಷನ್ ಕಮಲʼ ನಿಮ್ಮ ಅನೈತಿಕತೆಯ ಪರಾಕಾಷ್ಠೆ. ದೆಹಲಿಯಲ್ಲಿ ಸಂಸತ್ ಭವನಕ್ಕೆ ನಮಸ್ಕಾರ, ಬೆಂಗಳೂರಿನಲ್ಲಿ ಶಾಸಕರ ವ್ಯಾಪಾರ!! ಇದಾ ಹಿಂದುತ್ವ? ಇದಾ ಪ್ರಜಾಪ್ರಭುತ್ವ? 11/14
— Janata Dal Secular (@JanataDal_S) April 2, 2022
ಇದನ್ನೂ ಓದಿ: ಪೆಟ್ರೋಲ್ ಬೆಲೆ ತುಟ್ಟಿಯಾಯ್ತು ಅಂತಾ ವಿದ್ಯುತ್ ಇಲಾಖೆಯ ಈ ನೌಕರ ತನ್ನ ಕರ್ತವ್ಯ ನಿಭಾಯಿಸಲು ಏನು ಮಾಡಿದ್ದಾರೆ ನೋಡಿ!
ಕುಮಾರಸ್ವಾಮಿ ರಾಜಕೀಯ ಜೀವನವೇ ಒಂದು ಡ್ರಾಮ; ಸದಾರಮೆ ನಾಟಕ ಕುಮಾರಸ್ವಾಮಿಗೆ ಹೊಸತಲ್ಲ, ಟ್ವೀಟ್ ಮೂಲಕ ಬಿಜೆಪಿ ವಾಗ್ದಾಳಿ