ಸಭಾಪತಿ ಹೊರಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಕಾಂಗ್ರೆಸ್​​ ಸಿದ್ಧತೆ: ಇಂದೇ ನಿಲುವಳಿ ನೋಟಿಸ್​​?

ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜಕೀಯ ಗೊಂದಲ ಮತ್ತಷ್ಟು ತೀವ್ರಗೊಂಡಿದ್ದು, ಕಾಂಗ್ರೆಸ್ ಸರ್ಕಾರ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸಿದ್ಧತೆ ನಡೆಸಿದೆ. ಈ ನಡುವೆ ಸಿಎಂ ಡಿಕೆಶಿಯನ್ನು ಹೊರಟ್ಟಿ ಭೇಟಿಯಾಗಿದ್ದು, ಅವರು ಅವಿಶ್ವಾಸ ನಿರ್ಣಯ ಮಂಡಿಸಿದ್ರೆ ಮಂಡಿಸಲಿ. ಕಾನೂನು ಪ್ರಕಾರ ಏನು ಬೇಕಾದರೂ ಮಾಡಲಿ ಎಂದಿದ್ದಾರೆ.

ಸಭಾಪತಿ ಹೊರಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಕಾಂಗ್ರೆಸ್​​ ಸಿದ್ಧತೆ: ಇಂದೇ ನಿಲುವಳಿ ನೋಟಿಸ್​​?
ಸಭಾಪತಿ ಹೊರಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಕಾಂಗ್ರೆಸ್​​ ಸಿದ್ಧತೆ
Image Credit source: IamMGoudar X Account
Edited By:

Updated on: Aug 07, 2026 | 11:58 AM

ಮುಖ್ಯಾಂಶಗಳು

  • ಪರಿಷತ್​​ ಸಭಾಪತಿ ವಿಚಾರದಲ್ಲಿ ರಾಜಕೀಯ ಹೈಡ್ರಾಮಾ
  • ರಾಜೀನಾಮೆ ಬಗ್ಗೆ ಅಡ್ಡಗೋಡೆ ಮೇಲೆ ದೀಪವಿಟ್ಟ ಹೊರಟ್ಟಿ
  • ಅವಿಶ್ವಾಸ ನಿರ್ಣಯ ಮಂಡನೆಗೆ ಕಾಂಗ್ರೆಸ್​​ನಿಂದ ಸಿದ್ಧತೆ

ಬೆಂಗಳೂರು, ಆಗಸ್ಟ್​​ 07: ಕರ್ನಾಟಕ ವಿಧಾನ ಪರಿಷತ್​​ ಸಭಾಪತಿ ವಿಚಾರದಲ್ಲಿ ರಾಜಕೀಯ ಹೈಡ್ರಾಮಾಗಳು ಮುಂದುವರಿದಿವೆ. ಇಂದು ಕಾಂಗ್ರೆಸ್​​ ಅವಿಶ್ವಾಸ ನಿರ್ಣಯ ನಿಲುವಳಿ ನೋಟಿಸ್ ನೀಡುವ ಸಾಧ್ಯತೆ ಹಿನ್ನೆಲೆ ಸಿಎಂ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಭೇಟಿ ನೀಡಿದ್ದಾರೆ. ತಮ್ಮ ಸ್ಥಾನಕ್ಕೆ ಆಗಸ್ಟ್​​ 14ರಂದು ರಾಜೀನಾಮೆ ನೀಡೋದಾಗಿ ಹೇಳಿದ್ದ ಹೊರಟ್ಟಿ, ಇದೀಗ ರಾಜೀನಾಮೆಗೆ ಸಮಯಾವಕಾಶ ಬೇಕು ಎಂದಿದ್ದಾರೆ ಎನ್ನಲಾಗಿದೆ. ಇನ್ನು ಡಿಕೆಶಿ ಭೇಟಿ ಬಳಿಕ ಅಸಮಾಧಾನದಿಂದಲೇ ಸಿಎಂ ನಿವಾಸದಿಂದ ಹೊರಟ್ಟಿ ಹೊರ ಬಂದ ದೃಶ್ಯಗಳು ಕೂಡ ಕಂಡುಬಂದಿವೆ.

‘ಏನು ಹೇಳಿದ್ದೇನೋ ಅದಕ್ಕೆ ಬದ್ಧನಿದ್ದೇನೆ’

ಇನ್ನು ಸಿಎಂ ಡಿಕೆಶಿ ಭೇಟಿ ವಿಚಾರ ಸಂಬಂಧ ಬಸವರಾಜ ಹೊರಟ್ಟಿ ಪ್ರತಿಕ್ರಿಯಿಸಿದ್ದು, ಮೊನ್ನೆ ನಾನು ಏನು ಹೇಳಿದ್ದೇನೋ ಅದಕ್ಕೆ ಬದ್ಧನಿದ್ದೇನೆ. ಅವರು ಅವಿಶ್ವಾಸ ನಿರ್ಣಯ ಮಂಡಿಸಿದ್ರೆ ಮಂಡಿಸಲಿ. ಕಾನೂನು ಪ್ರಕಾರ ಏನು ಬೇಕಾದರೂ ಮಾಡಲಿ ಎಂದು ಬೆಂಗಳೂರಿನ ಸದಾಶಿವನಗರದ ಸಿಎಂ ಡಿಕೆಶಿ ನಿವಾಸದ ಬಳಿ ಹೇಳಿದ್ದಾರೆ.

ಇದನ್ನೂ ಓದಿ: ಸಭಾಪತಿ ಹುದ್ದೆ ತೊರೆಯಲು ಮುಂದಾದ ಬಸವರಾಜ ಹೊರಟ್ಟಿ: ಆಗಸ್ಟ್ 14ರಂದು ರಾಜೀನಾಮೆಗೆ ನಿರ್ಧಾರ

ಕಾಂಗ್ರೆಸ್​​ ಮುಂದಿನ ನಡೆ ಏನು?

ರಾಜೀನಾಮೆ ಬಗ್ಗೆ ಹೊರಟ್ಟಿ ಅಡ್ಡಗೋಡೆ ಮೇಲೆ ದೀಪವಿಟ್ಟಿರುವ ಕಾರಣ, ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ. ಬಸವರಾಜ ಹೊರಟ್ಟಿ ಪಕ್ಷಪಾತಿ ಧೋರಣೆ ಅನುಸರಿಸುತ್ತಿದ್ದು, ಬಿಜೆಪಿ ನಾಯಕರ ಜೊತೆಗೆ ಚರ್ಚಿಸಿ ಎಲ್ಲವನ್ನೂ ನಿರ್ಣಯಿಸುತ್ತಿದ್ದಾರೆ. ಅಲ್ಲದೆ ಸಭಾಪತಿ ಹೊರಟ್ಟಿ ಅವಧಿಯಲ್ಲಿ ಅಕ್ರಮ ನೇಮಕಾತಿ ಆಗಿದ್ದು, ಪರಿಷತ್​ನ 8 ಸಿಬ್ಬಂದಿ ನೇಮಕದ ಅಕ್ರಮದಲ್ಲಿ ಹೊರಟ್ಟಿ ಪಾತ್ರವಿದೆ ಎಂಬ 2 ಪ್ರಮುಖ ವಿಷಯಗಳನ್ನು ಮುಂದಿಟ್ಟುಕೊಂಡು ಅವಿಶ್ವಾಸ ನಿರ್ಣಯ ಮಂಡನೆಗೆ ಆಡಳಿತ ಪಕ್ಷ ಸಿದ್ಧತೆ ನಡೆಸಿದೆ. ಅವಿಶ್ವಾಸ ನಿರ್ಣಯ ನಿಲುವಳಿ ನೋಟಿಸ್​ಗೆ ಅದಾಯಲೇ ಐವನ್ ಡಿಸೋಜಾ ತಯಾರಿ ಕೂಡ ನಡೆಸಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

 

ಪ್ರಸನ್ನ ಗಾಂವ್ಕರ್​

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Loading...
Unable to load recommendations.
Follow Us