ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ಮುಂದೆ ಔಷಧಿ ಕೊರತೆ ಇಲ್ಲ! ಆರೋಗ್ಯ ಇಲಾಖೆಯಿಂದ 6 ಅಂಶಗಳ ಆ್ಯಕ್ಷನ್ ಪ್ಲ್ಯಾನ್

ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಔಷಧಿ ಕೊರತೆ ಆಗದಂತೆ ತಡೆಯಲು ರಾಜ್ಯ ಆರೋಗ್ಯ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಔಷಧಿ ಪೂರೈಕೆಗೆ 6 ಅಂಶಗಳ ಆ್ಯಕ್ಷನ್ ಪ್ಲ್ಯಾನ್ ರೂಪಿಸಲಾಗಿದ್ದು, ಡಿಜಿಟಲ್ ಟ್ರ್ಯಾಕಿಂಗ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಆಸ್ಪತ್ರೆಯಲ್ಲಿ ಔಷಧಿ ಲಭ್ಯವಿಲ್ಲದಿದ್ದರೆ ಸಾರ್ವಜನಿಕರು 14555 ಸಹಾಯವಾಣಿಗೆ ದೂರು ನೀಡಬಹುದು. ಕರ್ತವ್ಯ ಲೋಪ ಎಸಗುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಲಾಗಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ಮುಂದೆ ಔಷಧಿ ಕೊರತೆ ಇಲ್ಲ! ಆರೋಗ್ಯ ಇಲಾಖೆಯಿಂದ 6 ಅಂಶಗಳ ಆ್ಯಕ್ಷನ್ ಪ್ಲ್ಯಾನ್
ಸಾಂದರ್ಭಿಕ ಚಿತ್ರ
Image Credit source: WHO
Edited By:

Updated on: Nov 03, 2026 | 8:29 AM

ಮುಖ್ಯಾಂಶಗಳು

  • ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ತಡೆಯಲು ಆರೋಗ್ಯ ಇಲಾಖೆಯಿಂದ ಕಟ್ಟುನಿಟ್ಟಿನ ಸೂಚನೆ.
  • ಔಷಧಿ ಸಿಗದಿದ್ದರೆ 14555 ಸಹಾಯವಾಣಿಗೆ ದೂರು ನೀಡಲು ಸಾರ್ವಜನಿಕರಿಗೆ ಅವಕಾಶ.
  • 6 ಅಂಶಗಳ ಆ್ಯಕ್ಷನ್ ಪ್ಲ್ಯಾನ್; ಡಿಜಿಟಲ್ ನಿಗಾ ಹಾಗೂ ಗುಣಮಟ್ಟ ಪರೀಕ್ಷೆ.

ಬೆಂಗಳೂರು, ನವೆಂಬರ್ 03: ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಇನ್ಮುಂದೆ ಔಷಧಿ ಇಲ್ಲ ಎಂಬ ಉತ್ತರ ನೀಡುವಂತಿಲ್ಲ. ಔಷಧಿ ಕೊರತೆಯಿಂದಾಗಿ ರೋಗಿಗಳು ಹೊರಗಿನ ಮೆಡಿಕಲ್ ಶಾಪ್‌ಗಳಿಗೆ ಅಲೆಯುವ ಪರಿಸ್ಥಿತಿಗೆ ಕಡಿವಾಣ ಹಾಕಲು ರಾಜ್ಯ ಆರೋಗ್ಯ ಇಲಾಖೆ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳ ಲಭ್ಯತೆ ಖಚಿತಪಡಿಸಿಕೊಳ್ಳಲು ಔಷಧಿ ಖರೀದಿ, ದಾಸ್ತಾನು ಮತ್ತು ಸರಬರಾಜು ಪ್ರಕ್ರಿಯೆಗೆ ನಿಗದಿತ ಕಾಲಮಿತಿ ವಿಧಿಸಲಾಗಿದೆ. ಅಲ್ಲದೆ, ಔಷಧಿಗಳ ಗುಣಮಟ್ಟ ಪರೀಕ್ಷೆ ಹಾಗೂ ಡಿಜಿಟಲ್ ಟ್ರ್ಯಾಕಿಂಗ್ ವ್ಯವಸ್ಥೆ ಜಾರಿಗೊಳಿಸಲು ಸೂಚನೆ ನೀಡಲಾಗಿದೆ.

ಔಷಧಿ ಕೊರತೆಯಾದರೆ ಅಧಿಕಾರಿಗಳೇ ಹೊಣೆ!

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಸಿಗದೆ ಬಡ ಮತ್ತು ಮಧ್ಯಮ ವರ್ಗದ ರೋಗಿಗಳು ಪರದಾಡುತ್ತಿರುವ ದೂರುಗಳು ಕೇಳಿಬರುತ್ತಿವೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದರೂ ವೈದ್ಯರು ಬರೆದ ಔಷಧಿಗಳನ್ನು ಹೊರಗಿನ ಮೆಡಿಕಲ್ ಶಾಪ್‌ಗಳಲ್ಲಿ ಖರೀದಿಸುವ ಅನಿವಾರ್ಯತೆ ಎದುರಾಗುತ್ತಿದೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಸಚಿವ ಯು.ಟಿ. ಖಾದರ್, ಕರ್ನಾಟಕ ಸ್ಟೇಟ್ ಮೆಡಿಕಲ್ ಸಪ್ಲೈಸ್ ಕಾರ್ಪೊರೇಷನ್ (KSMCL) ಕಾರ್ಯವೈಖರಿಯನ್ನು ಪರಿಶೀಲಿಸಿ ಮಹತ್ವದ ಸೂಚನೆ ನೀಡಿದ್ದಾರೆ.

ಔಷಧಿಗಳ ಖರೀದಿ ಪ್ರಕ್ರಿಯೆ ವಿಳಂಬವಾಗದಂತೆ ನೋಡಿಕೊಳ್ಳಬೇಕು. ಔಷಧಿ ಕೊರತೆ ಎದುರಾದ ನಂತರ ಕ್ರಮ ಕೈಗೊಳ್ಳುವ ಬದಲು ಮುಂಚಿತವಾಗಿಯೇ ಅಗತ್ಯ ಔಷಧಿಗಳ ದಾಸ್ತಾನು ಮಾಡಿಕೊಳ್ಳಬೇಕು. ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಿಗೆ ಬೇಡಿಕೆಗೆ ಅನುಗುಣವಾಗಿ ಔಷಧಿ ಪೂರೈಕೆಯಾಗಬೇಕು ಎಂದು ಸೂಚಿಸಲಾಗಿದೆ. ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಕಂಡುಬಂದರೆ ಸಾರ್ವಜನಿಕರು 14555 ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಬಹುದಾಗಿದೆ. ದೂರುಗಳ ಬಗ್ಗೆ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಲಾಗಿದೆ.

ಔಷಧಿ ಖರೀದಿಯಿಂದ ಸರಬರಾಜಿನವರೆಗೆ ಡಿಜಿಟಲ್ ನಿಗಾ!

ಇನ್ನು ಆರೋಗ್ಯ ಇಲಾಖೆಯು ಔಷಧಿ ಕೊರತೆ ತಡೆಯಲು ಆರು ಅಂಶಗಳ ಆ್ಯಕ್ಷನ್ ಪ್ಲ್ಯಾನ್ ರೂಪಿಸಿದೆ. ನಿಗದಿತ ಸಮಯದಲ್ಲಿ ಔಷಧಿ ಖರೀದಿ, ಮುಂಚಿತ ದಾಸ್ತಾನು, ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಿಗೆ ಸಮರ್ಪಕ ಪೂರೈಕೆ, ಬೇಡಿಕೆಯ ಎಲ್ಲ ಔಷಧಿಗಳ ಲಭ್ಯತೆ, ಪ್ರತಿಯೊಂದು ಔಷಧಿಯ ಗುಣಮಟ್ಟ ಪರೀಕ್ಷೆ ಹಾಗೂ ಡಿಜಿಟಲ್ ಟ್ರ್ಯಾಕಿಂಗ್ ವ್ಯವಸ್ಥೆ ಜಾರಿಗೆ ಸೂಚಿಸಲಾಗಿದೆ.

ಔಷಧಿ ಖರೀದಿಯಿಂದ ಹಿಡಿದು ಆಸ್ಪತ್ರೆಗಳಿಗೆ ತಲುಪುವವರೆಗಿನ ಪ್ರತಿಯೊಂದು ಹಂತದ ಮೇಲೂ ನಿಗಾ ಇರಲಿದೆ. ಒಟ್ಟಿನಲ್ಲಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ತಪ್ಪಿಸಿ ಬಡ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
Loading...
Unable to load recommendations.
Follow Us