AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೃಹ ಜ್ಯೋತಿ ಯೋಜನೆಯಿಂದ 16 ಲಕ್ಷ ಫಲಾನುಭವಿಗಳು ಹೊರಗುಳಿಯುವ ಸಾಧ್ಯತೆ!

ರಾಜ್ಯ ಸರ್ಕಾರದ ಗೃಹ ಜ್ಯೋತಿ ಯೋಜನೆಯಡಿ ಮರು ಪರಿಶೀಲನೆ ನಡೆಯುತ್ತಿದ್ದು, ಬೆಸ್ಕಾಂ ವ್ಯಾಪ್ತಿಯ ಸುಮಾರು 16 ಲಕ್ಷ ಫಲಾನುಭವಿಗಳು ಯೋಜನೆಯಿಂದ ಹೊರಬೀಳುವ ಭೀತಿಯಲ್ಲಿದ್ದಾರೆ. ಮನೆ ಬೀಗ ಹಾಕಿರುವುದು ಹಾಗೂ ಮಾಹಿತಿ ನೀಡಲು ಗ್ರಾಹಕರು ಹಿಂದೇಟು ಹಾಕುತ್ತಿರುವುದು ಇದಕ್ಕೆ ಕಾರಣ. ಅಕ್ಟೋಬರ್ 31ರೊಳಗೆ ಬೆಸ್ಕಾಂ ಉಪವಿಭಾಗ ಕಚೇರಿಗೆ ದಾಖಲೆ ಸಲ್ಲಿಸದಿದ್ದರೆ ಉಚಿತ ವಿದ್ಯುತ್ ಸೌಲಭ್ಯ ರದ್ದಾಗಲಿದೆ.

ಗೃಹ ಜ್ಯೋತಿ ಯೋಜನೆಯಿಂದ 16 ಲಕ್ಷ ಫಲಾನುಭವಿಗಳು ಹೊರಗುಳಿಯುವ ಸಾಧ್ಯತೆ!
ಗೃಹ ಜ್ಯೋತಿ ಯೋಜನೆಯಿಂದ 16 ಲಕ್ಷ ಫಲಾನುಭವಿಗಳು ಹೊರಗುಳಿಯುವ ಸಾಧ್ಯತೆ!
ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.
| Edited By: |

Updated on: Oct 17, 2026 | 1:07 PM

Share

ಮುಖ್ಯಾಂಶಗಳು

  • ಗೃಹ ಜ್ಯೋತಿ ಯೋಜನೆಯಿಂದ 16 ಲಕ್ಷ ಫಲಾನುಭವಿಗಳು ಹೊರಬೀಳುವ ಸಾಧ್ಯತೆಯಿದೆ.
  • ಪರಿಶೀಲನೆಗೆ ಮನೆಗೆ ತೆರಳಿದ ಬೆಸ್ಕಾಂ ಸಿಬ್ಬಂದಿಗೆ ಸಿಗದ ಗ್ರಾಹಕರ ಮಾಹಿತಿ.
  • ಅಕ್ಟೋಬರ್ 31ರೊಳಗೆ ಬೆಸ್ಕಾಂ ಕಚೇರಿಗೆ ದಾಖಲೆ ಸಲ್ಲಿಸಲು ಕೊನೆಯ ಅವಕಾಶ.

ಬೆಂಗಳೂರು, ಅಕ್ಟೋಬರ್ 17: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹ ಜ್ಯೋತಿ’ ಉಚಿತ ವಿದ್ಯುತ್ ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವ ಲಕ್ಷಾಂತರ ಗ್ರಾಹಕರಿಗೆ ಇದೀಗ ಬೆಸ್ಕಾಂ ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ. ಅರ್ಹ ಫಲಾನುಭವಿಗಳನ್ನು ಮರು ಪರಿಶೀಲಿಸುವ ಕಟ್ಟುನಿಟ್ಟಿನ ಪ್ರಕ್ರಿಯೆ ಆರಂಭವಾಗಿದ್ದು, ಸುಮಾರು 16 ಲಕ್ಷ ಫಲಾನುಭವಿಗಳು ಈ ಯೋಜನೆಯಿಂದ ಬಹುತೇಕ ಹೊರಗುಳಿಯುವ ಭೀತಿ ಎದುರಾಗಿದೆ.

ಬೆಸ್ಕಾಂ ಸಿಬ್ಬಂದಿಗೆ ಸಿಗದ ಫಲಾನುಭವಿಗಳು

ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯಡಿ ತಿಂಗಳಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಆದರೆ, ಈ ಯೋಜನೆಯ ದುರುಪಯೋಗ ತಡೆಯಲು ಮತ್ತು ಅರ್ಹರಿಗೆ ಮಾತ್ರ ಸೌಲಭ್ಯ ತಲುಪಿಸಲು ಇಂಧನ ಇಲಾಖೆಯು ಮರು ಪರಿಶೀಲನಾ ಕಾರ್ಯವನ್ನು ಕೈಗೆತ್ತಿಕೊಂಡಿದೆ.

ಬೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 69 ಲಕ್ಷ ಫಲಾನುಭವಿಗಳಿದ್ದು, ಈ ಪೈಕಿ 16 ಲಕ್ಷ ಮಂದಿಯ ನಿಖರ ಮಾಹಿತಿ ಹಾಗೂ ದಾಖಲೆಗಳು ಇನ್ನು ಬೆಸ್ಕಾಂ ಕೈಸೇರಿಲ್ಲ. ಮೀಟರ್ ರೀಡರ್‌ಗಳು ಹಾಗೂ ಸಿಬ್ಬಂದಿಗಳು ಮೂರಕ್ಕೂ ಹೆಚ್ಚು ಬಾರಿ ಮನೆಗಳಿಗೆ ಭೇಟಿ ನೀಡಿದರೂ ಫಲಾನುಭವಿಗಳು ಸಿಗದಿರುವುದು ಪ್ರಮುಖ ಸಮಸ್ಯೆಯಾಗಿದೆ. ಬಹುತೇಕ ಮನೆಗಳಿಗೆ ಬೀಗ ಹಾಕಿರುವುದು ಅಥವಾ ಬಾಡಿಗೆದಾರರು ಮನೆ ಖಾಲಿ ಮಾಡಿ ಬೇರೆಡೆ ತೆರಳಿರುವುದು ಕಂಡುಬಂದಿದೆ.

ಮಾಹಿತಿ ನೀಡಲು ಹಿಂದೇಟು!

ಮತ್ತೊಂದೆಡೆ, ಕೆಲ ಫಲಾನುಭವಿಗಳು ಸ್ವತಃ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಪ್ರಮುಖವಾಗಿ ಆದಾಯ ತೆರಿಗೆ (IT) ಪಾವತಿದಾರರು ಹಾಗೂ ಹೊರರಾಜ್ಯದ ಮತದಾರರ ಪಟ್ಟಿಯಲ್ಲಿರುವವರು ದಾಖಲೆ ನೀಡಲು ಮುಂಜಾಗ್ರತಾ ಕ್ರಮವಾಗಿ ಮುಂದೆ ಬರುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಅಕ್ಟೋಬರ್ 31 ಕೊನೆಯ ಅವಕಾಶ

ತಮ್ಮ ದಾಖಲೆಗಳನ್ನು ಸಲ್ಲಿಸದ ಗ್ರಾಹಕರಿಗೆ ಬೆಸ್ಕಾಂ ಕೊನೆಯ ಅವಕಾಶವನ್ನು ನೀಡಿದೆ. ಅಕ್ಟೋಬರ್ 31ರ ಒಳಗಾಗಿ ಹತ್ತಿರದ ಬೆಸ್ಕಾಂ ಉಪ ವಿಭಾಗೀಯ ಕಚೇರಿಗೆ ಭೇಟಿ ನೀಡಿ, ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿಯನ್ನು ಭರ್ತಿ ಮಾಡಬೇಕಿದೆ. ಒಂದು ವೇಳೆ ಈ ಅಂತಿಮ ಗಡುವಿನ ಒಳಗೂ ಮಾಹಿತಿ ನೀಡದಿದ್ದರೆ, ಅಂತಹವರ ಪ್ರತ್ಯೇಕ ಪಟ್ಟಿಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಪರಿಶೀಲನೆಯಲ್ಲಿ ಭಾಗಿಯಾಗದ ಗ್ರಾಹಕರನ್ನು ಗೃಹ ಜ್ಯೋತಿ ಯೋಜನೆಯಿಂದ ಶಾಶ್ವತವಾಗಿ ಹೊರಗಿಡಲು ಇಲಾಖೆ ತೀರ್ಮಾನಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.
ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.

ಲಕ್ಷ್ಮಿ ನರಸಿಂಹ ಸ್ವಾಮಿ. ಎಲ್ ಆದ ನಾನು ಮೂಲತಃ ಬೆಂಗಳೂರಿನವಾಗಿದ್ದು, ಪೂರ್ವ ತಾಲೂಕಿನ ದೊಡ್ಡಗುಬ್ಬಿ ಎಂಬ ಗ್ರಾಮದಲ್ಲಿ ವಾಸವಿದ್ದೇನೆ. ಕಳೆದ 6 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಬೆಂಗಳೂರು ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಐತಿಹಾಸಿಕ ಸರ್ಕಾರಿ ಕಲಾ ಕಾಲೇಜಿನಲ್ಲಿ ಸ್ನಾತಕ ಪದವಿ ಪೂರೈಸಿದ ಬಳಿಕ ಬೆಂಗಳೂರು ವಿಶ್ವವಿದ್ಯಾಲಯ (ಜ್ಞಾನಭಾರತಿ) ದಲ್ಲಿ M.A (ಪತ್ರಿಕೋದ್ಯಮ ಮತ್ತು ಸಂವಹನ) ಸ್ನಾತಕೋತ್ತರ ಪದವಿ ಪೂರೈಸಿದ್ದೇನೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಡಿಯ ನಗರ ಪಾಲಿಕೆಗಳು, ಬೆಸ್ಕಾಂ, ಜಲಮಂಡಳಿ, ಆಹಾರ, ಆರೋಗ್ಯ, ಶಿಕ್ಷಣ ಸೇರಿ ವಿವಿಧ ಕ್ಷೇತ್ರಗಳಲ್ಲಿ ನಾಗರಿಕರಿಗೆ ಎದುರಾಗುವ ಸಮಸ್ಯೆಗಳಿಗೆ, ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈವರೆಗೂ ಶ್ರಮವಹಿಸಿದ್ದು, ಮುಂದಿನ ದಿನಗಳಲ್ಲೂ ನಾಗರಿಕರ ಸೇವೆಯನ್ನೂ ಮುಂದುವರೆಸುವ ಗುರಿಯೊಂದಿಗೆ ಉತ್ತಮ ಸಮಾಜಕ್ಕಾಗಿ ಬದ್ಧನಾಗಿದ್ದೇನೆ..

Read More