ಲಾಲ್‌ಬಾಗ್‌ ಶಿಲಾ ರಚನೆ ಕುರಿತ ವರದಿ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ: ಹೆಬ್ಬಾಳ ಕೆರೆಗೂ ಟನಲ್‌ ರೋಡ್‌ ಟೆನ್ಷನ್

ಲಾಲ್‌ಬಾಗ್‌ನ ಶಿಲಾ ರಚನೆ ಕುರಿತು ಜಿಎಸ್​ಐ ನಡೆಸಿರುವ ಅಧ್ಯಯನದ ವರದಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಇದೇ ವೇಳೆ, ಟನಲ್‌ ರೋಡ್‌ನಿಂದ ಹೆಬ್ಬಾಳ ಕೆರೆಯ ಒಳಹರಿವು, ಹೊರಹರಿವಿಗೆ ತೊಂದರೆಯಾಗುವುದಿಲ್ಲವೆಂದು ಪ್ರಾತ್ಯಕ್ಷಿಕೆ ನೀಡುವಂತೆ ನಿರ್ದೇಶಿಸಿದೆ. ಸಂಸದ ತೇಜಸ್ವಿ ಸೂರ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ಈ ನಿರ್ದೇಶನ ನೀಡಿದೆ.

ಲಾಲ್‌ಬಾಗ್‌ ಶಿಲಾ ರಚನೆ ಕುರಿತ ವರದಿ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ: ಹೆಬ್ಬಾಳ ಕೆರೆಗೂ ಟನಲ್‌ ರೋಡ್‌ ಟೆನ್ಷನ್
ಲಾಲ್‌ಬಾಗ್‌ ಶಿಲಾ ರಚನೆ ಕುರಿತ ವರದಿ ಸಲ್ಲಿಸಲು ಹೈಕೋರ್ಟ್ ಸೂಚನೆ
Image Credit source: tv9

Updated on: Sep 04, 2026 | 9:51 AM

ಮುಖ್ಯಾಂಶಗಳು

  • ಜಿಎಸ್​ಐ ವರದಿ ಸಲ್ಲಿಸಲು ಹೈಕೋರ್ಟ್‌ ಮಹತ್ವದ ಸೂಚನೆ
  • ಹೆಬ್ಬಾಳ ಕೆರೆ ಕುರಿತು ಪ್ರಾತ್ಯಕ್ಷಿಕೆಗೆ ನಿರ್ದೇಶನ
  • ಟನಲ್‌ ಯೋಜನೆ ಕುರಿತ ಮುಂದಿನ ವಿಚಾರಣೆ ಸೆಪ್ಟೆಂಬರ್ 10ಕ್ಕೆ

ಬೆಂಗಳೂರು, ಸೆಪ್ಟೆಂಬರ್ 4: ಲಾಲ್‌ಬಾಗ್‌ ಬೊಟಾನಿಕಲ್‌ ಗಾರ್ಡನ್‌ನಲ್ಲಿರುವ ಪೆನಿನ್ಸುಲರ್‌ ಗ್ನೈಸಿಕ್‌ ಕಾಂಪ್ಲೆಕ್ಸ್‌ (ಶಿಲಾ ರಚನೆ) ಕುರಿತು ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (GSI) ನಡೆಸಿರುವ ಅಧ್ಯಯನದ ವರದಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಪ್ರಸ್ತಾವಿತ ಟನಲ್‌ ರೋಡ್‌ನಿಂದ ಲಾಲ್‌ಬಾಗ್‌ನ ಶಿಲಾ ರಚನೆಗೆ ಹಾನಿಯಾಗುವ ಸಾಧ್ಯತೆ ಇದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಈ ಅಧ್ಯಯನ ನಡೆಸಲಾಗಿತ್ತು. ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರನ್ನೊಳಗೊಂಡ ವಿಭಾಗೀಯ ಪೀಠ ಗುರುವಾರ ಈ ನಿರ್ದೇಶನ ನೀಡಿದೆ. ಅರ್ಜಿದಾರರ ಪರ ವಕೀಲರೂ ಆಗಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಜಿಎಸ್​ಐ ವರದಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಮನವಿ ಮಾಡಿದ್ದರು.

ಪ್ರಸ್ತಾವಿತ ಟನಲ್‌ ರೋಡ್‌ಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಎಲ್ಲಾ ಅರ್ಜಿಗಳ ವಿಚಾರಣೆಯನ್ನು ಸೆಪ್ಟೆಂಬರ್ 10ಕ್ಕೆ ಮುಂದೂಡಲಾಗಿದೆ.

ಬೆಂಗಳೂರು ಟನ್​ ರೋಡ್​ನಿಂದ ಹೆಬ್ಬಾಳ ಕೆರೆ ಒಳಹರಿವು, ಹೊರಹರಿವಿಗೆ ತೊಂದರೆಯಾಗುತ್ತಾ?

ಇದೇ ವೇಳೆ, ಹೆಬ್ಬಾಳ ಫ್ಲೈಓವರ್‌ ಜಂಕ್ಷನ್‌ನಿಂದ ಜಿಕೆವಿಕೆ ಆವರಣದ ಮೂಲಕ ಪಶುವೈದ್ಯಕೀಯ ಕಾಲೇಜಿನವರೆಗೆ ಸಂಪರ್ಕ ಕಲ್ಪಿಸುವ ಉದ್ದೇಶದ ಪ್ರಸ್ತಾವಿತ ‘ಶಾರ್ಟ್ ಲೆಂಗ್ತ್ ಟ್ರಾನ್ಸಿಟರಿ 3-ಲೇನ್ ಬೈಡೈರೆಕ್ಷನಲ್ ವೆಹಿಕ್ಯುಲರ್ ಅಂಡರ್‌ಪಾಸ್‌’ ವಿಚಾರದಲ್ಲೂ ಹೈಕೋರ್ಟ್‌ ಮಹತ್ವದ ನಿರ್ದೇಶನ ನೀಡಿದೆ. ಗುರುಪ್ರಸಾದ್ ಆರ್‌ಕೆ, ರಿಷ್ವಂಜಸ್ ರಾಘವನ್ ಹಾಗೂ ಎಲಿಜಬೆತ್ ಸೌಮ್ಯ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ, ಪ್ರಸ್ತಾವಿತ ಯೋಜನೆಯಿಂದ ಹೆಬ್ಬಾಳ ಕೆರೆಯ ಒಳಹರಿವು ಮತ್ತು ಹೊರಹರಿವಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂಬುದನ್ನು ವಿವರಿಸುವ ಪ್ರಾತ್ಯಕ್ಷಿಕೆಯನ್ನು ನ್ಯಾಯಾಲಯದ ಮುಂದೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ.

ನ್ಯಾಯಾಲಯ ಹಾಗೂ ಅರ್ಜಿದಾರರಿಗೆ ಯೋಜನೆಯ ಕುರಿತು ಪ್ರಸ್ತುತಪಡಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ. ಟನಲ್‌ ನಿರ್ಮಾಣದಿಂದ ಕೆರೆಯ ನೀರಿನ ಒಳಹರಿವು ಮತ್ತು ಹೊರಹರಿವಿನ ವ್ಯವಸ್ಥೆಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂಬುದನ್ನು ಈ ಪ್ರಾತ್ಯಕ್ಷಿಕೆಯ ಮೂಲಕ ಸ್ಪಷ್ಟಪಡಿಸಬೇಕಿದೆ.

ಟನಲ್ ರೋಡ್​ಗೆ ಕೆರೆಯ 3.45 ಎಕರೆ ಜಾಗ ಬಳಕೆಗೆ ಆಕ್ಷೇಪ

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಹೆಬ್ಬಾಳ ಕೆರೆಯ ಒಟ್ಟು 136 ಎಕರೆ ಪ್ರದೇಶದಲ್ಲಿ 3.45 ಎಕರೆ ಜಾಗವನ್ನು ಯೋಜನೆಗಾಗಿ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ವಾದಿಸಿದರು. ಟ್ಯಾಂಕ್‌ ಕನ್ಸರ್ವೇಷನ್‌ ಕಾಯ್ದೆಯಡಿ ಈ ರೀತಿಯ ಬಳಕೆಗೆ ಯಾವುದೇ ಅವಕಾಶವಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

ಇದಲ್ಲದೆ, ಟನಲ್‌ನ ಆಳವನ್ನು ಪರಿಗಣಿಸಿದರೆ ಕೆರೆಯ ಒಳಹರಿವು ಹಾಗೂ ಹೊರಹರಿವಿಗೆ ತೊಂದರೆಯಾಗಲಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

ಆದರೆ ಸರ್ಕಾರದ ಪರ ವಾದಿಸಿದ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಇದನ್ನು ನಿರಾಕರಿಸಿದರು. ಟನಲ್‌ ನಿರ್ಮಾಣದಿಂದ ಹೆಬ್ಬಾಳ ಕೆರೆಯ ಒಳಹರಿವು ಅಥವಾ ಹೊರಹರಿವಿಗೆ ಯಾವುದೇ ರೀತಿಯ ಅಡ್ಡಿಯಾಗುವುದಿಲ್ಲ. ಅಲ್ಲದೆ, ಟನಲ್‌ ಬಫರ್‌ ವಲಯಕ್ಕಿಂತ ಕೆಳಭಾಗದಲ್ಲಿ ಹಾದುಹೋಗಲಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಇದನ್ನೂ ಓದಿ: ಟನಲ್ ರಸ್ತೆ ಯೋಜನೆಗೆ ಐಐಎಸ್​ಸಿ ಆಕ್ಷೇಪ, ರಾಜ್ಯಪಾಲರಿಗೆ ವರದಿ ಸಲ್ಲಿಕೆ: ಮೆಟ್ರೋವೇ ಟ್ರಾಫಿಕ್‌ಗೆ ಪರಿಣಾಮಕಾರಿ ಎಂದ ತಜ್ಞರು

ಎರಡೂ ಕಡೆಯ ವಾದಗಳನ್ನು ಆಲಿಸಿದ ಬಳಿಕ, ಯೋಜನೆಯಿಂದ ಹೆಬ್ಬಾಳ ಕೆರೆಯ ಒಳಹರಿವು ಮತ್ತು ಹೊರಹರಿವಿಗೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದನ್ನು ತೋರಿಸುವ ಪ್ರಾತ್ಯಕ್ಷಿಕೆ ಆಯೋಜಿಸುವಂತೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us